‘ಉಳಿಯ’ ದ್ವೀಪವನ್ನೇ ನುಂಗುತ್ತಿರುವ ಮರಳು ಮಾಫಿಯಾಕ್ಕೆ ಅಧಿಕಾರಿಗಳ ಸಾಥ್?

11:30 PM, Monday, September 30th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ತಾಂಡವವಾಡುತ್ತಿರುವ ಮರಳು ಮಾಫಿಯಾ ವಿರುದ್ಧ ರಣಕಹಳೆ ಮೊಳಗಿದೆ. ಮಂಗಳೂರು ಹೊರವಲಯದ ‘ಉಳಿಯ’ ದ್ವೀಪದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಲ್ಲಿಸಲು ಸ್ಥಳೀಯರು ನಡೆಸುತ್ತಿರುವ ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ ನೀಡುತ್ತಿರುವಂತೆಯೇ, ಮರಳು ಮಾಫಿಯಾ ಜೊತೆ ಜಿಲ್ಲೆಯ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ರಾಜ್ಯ ಸರ್ಕಾರಕ್ಕೆ ದೂರು ಸಲ್ಲಿಕೆಯಾಗಿದೆ. ಹಿರಿಯ ಪತ್ರಕರ್ತರೂ ಆದ ಪರಿಸರ ಹೋರಾಟಗಾರ ಆಲ್ವಿನ್ ಮೆಂಡೋನ್ಸಾ ಅವರು ಈ ದೂರನ್ನು ಸಲ್ಲಿಸಿದ್ದು, ಅಧಿಕಾರಿಗಳ ವಿರುದ್ಧವೇ ಆದ್ಯ ಕ್ರಮವಾಗಬೇಕಿದೆ ಎಂದು ಗಮನಸೆಳೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯು ನದಿಯನ್ನು ಆವರಿಸಿಕೊಂಡಿರುವ ಪ್ರದೇಶವಾಗಿದೆ. ಕುಮಾರಧಾರ, ನೇತ್ರಾವತಿ, ಫಲ್ಗುಣಿ, ನಂದಿನಿ ಸಹಿತ ಹಲವಾರು ನದಿಗಳು ಕರಾವಳಿ ಜನರ ಜೀವನಾಡಿಯಾಗಿದ್ದು, ಇದೀಗ ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜಲಮೂಲಕ್ಕೆ ಸಂಚಕಾರ ಎದುರಾಗಿದೆ. ಕರ್ನಾಟಕ ಕರಾವಳಿಯ ದೊಡ್ಡ ನದಿಗಳಲ್ಲಿ ಒಂದಾಗಿರುವ ನೇತ್ರಾವತಿ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಈ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಮಾಧ್ಯಮಗಳೂ ಸರಣಿ ವರದಿಗಳನ್ನು ಪ್ರಕಟಿಸುತ್ತಿದ್ದರೂ ಅಧಿಕಾರಿಗಳು ಈ ಸಮಸ್ಯೆಯನ್ನು ಕಡೆಗಣುತ್ತಿರುವುದು ವ್ಯವಸ್ಥೆಗೆ ಹಿಡಿದಿರುವ ಕನ್ನಡಿಯಾಗಿದೆ. ಆದರೆ ಇದೀಗ ಮರಳು ಮಾಫಿಯಾದ ದಂಧೆಯಿಂದಾಗಿ ನೇತ್ರಾವತಿ ನದಿಯ ನಡುಗಡ್ಡೆಯಾಗಿರುವ ಉಳ್ಳಾಲ ತಾಲೂಕಿನ ಪಾವೂರು ಸಮೀಪದ ‘ಉಳಿಯ ದ್ವೀಪ’ ಅವನತಿಯ ಅಂಚಿನಲ್ಲಿದೆ. ಈ ಬಗ್ಗೆ ಪೊಲೀಸರು, ಗಣಿ ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ತಮಗೇನೂ ಗೊತ್ತಿಲ್ಲ ಎಂಬಂತಿದ್ದಾರೆ. ಈ ಕುರಿತಂತೆ, ಜಿಲ್ಲಾ ಉಸ್ತುವಾರಿ ಸಚಿವರಿಗೂ ದೂರು ಸಲ್ಲಿಕೆಯಾಗಿದೆ. ಆದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕುರಿತ ಸಮಗ್ರ ವರದಿಯೊಂದಿಗೆ ಪರಿಸರ ಹೋರಾಟಗಾರ ಆಲ್ವಿನ್ ಮೆಂಡೋನ್ಸಾ, ಸರ್ಕಾರದ ಸಿಎಸ್’ಗೆ ಸಲ್ಲಿಸಿರುವ ದೂರು ಸಂಚಲನ ಸೃಷ್ಟಿಸಿದೆ.

ಅಧಿಕಾರಿಗಳ ಹಾಗೂ ಸ್ಥಳೀಯ ರಾಜಕಾರಣಿಗಳ ಕುಮ್ಮಕ್ಕಿನಿಂದಾಗಿ ಮರಳು ಮಾಫಿಯಾ ದಂಧೆಕೋರರು ಉಳಿಯ ದ್ವೀಪದಲ್ಲಿ ನಿರಂತರವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದು, ನಡುಗಡ್ಡೆಯ ಬಹುಪಾಲು ನೆಲ ನದಿಯಪಾಲಾಗಿದೆ. ಇದರಿಂದಾಗಿ ಉಳಿಯ ದ್ವೀಪದಲ್ಲಿನ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. ಈ ಬಗ್ಗೆ ದ್ವೀಪದ ನಿವಾಸಿಗಳು ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಪೊಲೀಸರಿಗೆ ದೂರು ನೀಡಿದರೂ ಪೊಲೀಸರು ಅಕ್ರಮವನ್ನು ತಡೆಯುವ ಬದಲು, ದೂರು ನೀಡಿದವರ ಬಗ್ಗೆ ದಂಧೆಕೋರರಿಗೆ ಮಾಹಿತಿ ನೀಡಿ ಬೆದರಿಕೆ ಒಡ್ಡಲು ಕಾರಣರಾಗುತ್ತಿದ್ದಾರೆ. ಬಹುತೇಕ ಮರಳು ದಂಧೆಕೋರರು ಸ್ಥಳೀಯ ಶಾಸಕರೇ ತಮಗೆ ಬೆಂಗಾವಲಾಗಿ ನಿಂತಿದ್ದಾರೆ ಎಂದು ಹೇಳಿ ಸ್ಥಳೀಯರನ್ನು ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಆಲ್ವಿನ್ ಮೆಂಡೋನ್ಸಾ ಅವರು ಈ ದೂರಿನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಕೆಲವು ದಿನಗಳಿಂದ ಉಳಿಯ ದ್ವೀಪದ ನಿವಾಸಿಗಳು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ದ್ವೀಪ ಪ್ರದೇಶದ ನಿವಾಸಿಗಳು ಮಂಗಳೂರಿನಲ್ಲೂ ಬೃಹತ್ ಪ್ರತಿಭಟನೆ ನಡೆಸಿ, ಉಳಿಯ ದ್ವೀಪದ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ನಿಲ್ಲಿಸುವಂತೆ ಆಗ್ರಹಿಸಿದ್ದರು. ಮಂಗಳೂರಿನ ಮಿನಿ ವಿಧಾನಸೌಧದ ಎದುರು ಪ್ರತಿಭಟನಾ ಸಮಾವೇಶ ನಡೆಸಿ ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಲವು ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪಾವೂರು ಉಳಿಯ, ರಾಣಿಪುರ, ಉಳ್ಳಾಲ ಹೊಯಿಗೆ ದ್ವೀಪದಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿದ್ದು, ರಾಣಿಪುರ ಉಳಿಯದಲ್ಲಿ ಮನೆಗಳು ಅಪಾಯದಲ್ಲಿವೆ. ಜಿಲ್ಲಾಡಳಿತ ಮರಳುಗಾರಿಕೆ ನಿಷೇಧಿಸಬೇಕೆಂದು ಆಗ್ರಹಿಸಿದ್ದಾರೆ. ಉಳ್ಳಾಲ, ಕೋಣಾಜೆ, ವಾಮಂಜೂರು ಠಾಣೆಗಳ ವ್ಯಾಪ್ತಿಯ ಪೊಲೀಸರು ಅಕ್ರಮ ಮರಳುಗಾರರ ಜತೆ ಶಾಮೀಲಾಗಿರುವ ಕಾರಣ ದ್ವೀಪ ನಾಶವಾಗುತ್ತಿದೆ. ರಾತ್ರೋರಾತ್ರಿ ಸಾಲುಗಟ್ಟಲೆ ಟಿಪ್ಪರ್‌ಗಳು ಪೊಲೀಸರೆದುರೇ ಸಾಗುತ್ತಿದ್ದರೂ ಕ್ರಮ ಆಗುತ್ತಿಲ್ಲ ಎಂದು ಮುಖಂಡರು ಆರೋಪಿಸಿದ್ದಾರೆ ಎಂದು ಸರ್ಕಾರದ ಗಮನಸೆಳೆದಿದ್ದಾರೆ.

ಈ ಮರಳು ಮಾಫಿಯಾದ ಕರಾಳ ಬಾಹು ನೇತ್ರಾವತಿ ನದಿಯನ್ನಷ್ಟೇ ಅಲ್ಲ, ದಕ್ಷಿಣ ಕನ್ನಡ ಜಿಲ್ಲೆಯ ಫಲ್ಗುಣಿ, ನಂದಿನಿ, ಕುಮಾರಧಾರ, ಗುಂಡ್ಯಹೊಳೆ ಸಹಿತ ಇತರ ನದಿಗಳನ್ನೂ ಆವರಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳೂ ತಮಗೇನೂ ಸಂಬಂಧವೇ ಇಲ್ಲ ಎಂಬಂತಿದ್ದಾರೆ. ಹಿಂದಿನ ಜಿಲ್ಲಾಧಿಕಾರಿಗಳು ಆಗಾಗ್ಗೆ ದಾಳಿ ನಡೆಸಿ ಅಕ್ರಮ ಮರಳು ದಂಧೆಕೋರರನ್ನು ಎಚ್ಚರಿಸುವ ಪ್ರಯತ್ನ ಮಾಡುತ್ತಿದ್ದರಾದರೂ, ಹಾಲಿ ಅಧಿಕಾರಿಗಳು ಈ ಬಗ್ಗೆ ಗಮನಕೊಡದಿರುವುದು ವಿಷಾದದ ಸಂಗತಿ ಎಂದು ಆಲ್ವಿನ್ ಮೆಂಡೋನ್ಸಾ ಅವರು ದೂರಿನಲ್ಲಿ ವಿಷದ ವ್ಯಕ್ತಪಡಿಸಿದ್ದಾರೆ.

ಹಳೆಯ ಪರ್ಮಿಟ್, ಹೊಸ ದಂಧೆ?

ದಕ್ಷಿಣಕನ್ನಡ ಜಿಲ್ಲೆಯ ವಿವಿಧೆಡೆ ಮೀನುಗಾರಿಕೆಗೆ ಅಡ್ಡಿಯಾಗುವ ಮರಳಿನ ದಿಬ್ಬಗಳನ್ನು ಹಾಗೂ ಬೃಹತ್ ದೋಣಿಗಳ ಸಂಚಾರಕ್ಕೆ ಅಡ್ಡಿಯಾಗುವ ದಿಬ್ಬಗಳನ್ನು ತೆರವು ಮಾಡಲು ಅವಕಾಶ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಸಮುಜಾಯಿಷಿ ನೀಡುತ್ತಿದ್ದಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ನದಿಗಳಲ್ಲಿ ಆ ರೀತಿಯ ದಿಬ್ಬಗಳೇ ಇಲ್ಲ. ಆದಾಗಿಯೂ, 2023ರಿಂದ 2025ರ ವರೆಗೆ ಫಲ್ಗುಣಿ, ಕುಮಾರಧಾರ, ನೇತ್ರಾವತಿ, ಗುಂಡ್ಯಹೊಳೆ ಸಹಿತ NON CRZ ಪ್ರದೇಶದ ಸುಮಾರು 27 ಕಡೆ 6,55,376 ಮೆಟ್ರಿಕ್ ಟನ್ ಮರಳು ಬ್ಲಾಕ್’ಗಳಿಗೆ ಟೆಂಡರ್ ಮೂಲಕ ಮರಳುಗಾರಿಕೆಗೆ ಅವಕಾಶ ನೀಡಲಾಗಿದೆ. ಆದರೆ ಈ ಪರವಾನಗಿಯ ಹೊರತಾಗಿಯೂ ನೂರಾರು ಕಡೆ ಅಕ್ರಮ ಮರಳು ಗಣಿಗಾರಿಕೆ ನಡೆಯ್ತುತ್ತಿವೆ. 2023ಕ್ಕೆ ಮೊದಲು ಪಡೆದ ಪರವಾನಗಿಯನ್ನೇ ನೆಪವಾಗಿಟ್ಟು ಮಾಫಿಯಾಗಳು ಈ ಅಕ್ರಮಗಳನ್ನು ನಡೆಸುತ್ತಿವೆ. ಇದನ್ನು ಹೊರತು ಪಡಿಸಿ ಹಲವೆಡೆ 167 ಮಂದಿಗೆ CRZ ವ್ಯಾಪ್ತಿಯಲ್ಲಿ ತಲಾ 1000 ಮೆಟ್ರಿಕ್ ಟನ್ ಮರಳು ಗಣಿಗಾರಿಕೆಗೆ 2022-23 ರವರೆಗೆ ಅನುಮತಿ ನೀಡಲಾಗಿತ್ತು. ಈ ಪರವಾನಗಿ ನವೀಕರಣಗೊಳ್ಳದಿದ್ದರೂ ಕೂಡಾ ದಂಧೆ ನಡೆಯುತ್ತಿದೆ ಎಂದರೆ, ಅದಕ್ಕೆ ಅಧಿಕಾರಿಗಳ ಕೃಪೆ ಇರದೇ ನಡೆಯಲು ಸಾಧ್ಯವೇ? ಎಂದು ಆಲ್ವಿನ್ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ನದಿ ತಿರುವು ಯೋಜನೆಯಿಂದಾಗಿ ನೇತ್ರಾವತಿ ನದಿಯಲ್ಲಿ ಮೀನು ಹಾಗೂ ಜಲಚರಗಳು ಅವನತಿಯ ಅಂಚಿನಲ್ಲಿವೆ. ಮರಳು ಅಕ್ರಮಗಳಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಹಲವಾರು ಸೇತುವೆಗಳಿಗೂ ಹಾನಿಯಾಗಿವೆ. ಅಕ್ರಮ ದಂಧೆಕೋರರಿಂದಾಗಿ ಸರ್ಕಾರದ ಬೊಕ್ಕಸಕ್ಕೂ ಸಾವಿರಾರು ಕೋಟಿ ರಾಜಸ್ವವೂ ವಂಚನೆಯಾಗಿರುವ ಅನುಮಾನ ಇದೆ ಎಂದಿರುವ ದೂರುದಾರರು, ಮರಳು ಗಣಿಗಾರಿಕೆ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಿರುವ ನಿಯಮಗಳು ಹಾಗೂ ಮಾನದಂಡಗಳನ್ನು (OFFICIAL MEMORANDUM, Ministry of Environment & Forests, No.11-83/2005-IA-III(Pt.III) Dated, 9 JUNE 2011 ಹಾಗೂ ಕರ್ನಾಟಕ ಉಪ ಖನಿಜಗಳ ರಿಯಾಯಿತಿ ನಿಯಮಗಳು,1994) ಪಾಲಿಸಲಾಗುತ್ತಿಲ್ಲ ಎಂಬ ಆರೋಪಗಳೂ ಕೇಳಿಬರುತ್ತಿವೆ. ಅಷ್ಟೇ ಅಲ್ಲ, ಮರಳು ಗಣಿಗಾರಿಕೆಯ ನಿರ್ವಹಣೆಗಾಗಿ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ಪೊಲೀಸ್ ಅಧಿಕಾರಿಗಳು, ತಹಸೀಲ್ದಾರರು ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ‘ಮೇಲ್ವಿಚಾರಣಾ ಸಮಿತಿಗಳು’ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಪರಿಶೀಲನೆ ನಡೆಸಬೇಕು, ಎರಡು ತಿಂಗಳಿಗೊಮ್ಮೆ ಸಭೆ ನಡೆಸಿ ಪರಾಮರ್ಶೆ ನಡೆಸಬೇಕೆಂಬ ನಿಯಮವಿದ್ದರೂ ಅಧಿಕಾರಿಗಳು ಈ ವಿಚಾರದಲ್ಲಿ ಆಸಕ್ತಿ ವಹಿಸದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಸರ್ಕಾರದ ಗಮನಸೆಳೆದಿದ್ದಾರೆ.

ಇದೇ ವೇಳೆ, ದಕ್ಷಿಣಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಈ ದಂಧೆಗೆ ನೇರ, ಪರೋಕ್ಷ ಅವಕಾಶ ನೀಡುವ, ಅಕ್ರಮ ಮರಳು ಸಾಗಾಟಕ್ಕೆ ಅವಕಾಶ ಮಾಡಿಕೊಡುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English