ಹುಬ್ಬಳ್ಳಿ : ಮುಡಾ ಸೈಟ್ ವಾಪಸ್ ಕೊಡುವ ಮೂಲಕ ಸಿಎಂ ಸಿದ್ದರಾಮಯ್ಯ ಮತ್ತಷ್ಟು ಸಂಕಷ್ಟವನ್ನು ಮೈಮೇಲೆ ಎಳೆದುಕೊಂಡಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಪತ್ನಿ ಮುಡಾ ಸೈಟ್ ವಾಪಸ್ ಕೊಟ್ಟಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಕೆಲಸವನ್ನು ಅವರು ಮೊದಲೇ ಮಾಡಬೇಕಿತ್ತು. ಆಗಲೇ ಹೈಕೋರ್ಟ್ ನ್ಯಾಯಮೂರ್ತಿಗಳ ಮೂಲಕ ತನಿಖೆ ಮಾಡಿಸಿದ್ದರೆ ಮುಗಿದು ಹೋಗುತ್ತಿತ್ತು. ಸಿದ್ದರಾಮಯ್ಯ ಅವರ ಪ್ರಾಮಾಣಿಕತೆ ಬಗ್ಗೆ ಪ್ರಶ್ನೆ ಬರುತ್ತಿರಲಿಲ್ಲ. ಆದರೆ ಆಗ ಸಮರ್ಥನೆ ಮಾಡಿಕೊಂಡರು. ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟು, ಪ್ರಕರಣ ದಾಖಲಾಗಿ, ತನಿಖೆ ನಡೆದಿದೆ ಈಗ ವಾಪಸ್ ಮಾಡಿರುವುದರಿಂದ ಹಲವಾರು ಪ್ರಶ್ನೆಗಳು ಉದ್ಭವಿಸಿವೆ ಸೈಟ್ ವಾಪಸ್ ಮಾಡುವ ಮೂಲಕ ಮತ್ತಷ್ಟು ಜಟಿಲ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಎಫ್ಐಆರ್ ಆದಮೇಲೆ ತನಿಖೆ ಆಗಲೇಬೇಕು. ಒಂದು ಕಡೆ ಲೋಕಾಯುಕ್ತ ತನಿಖೆ ನಡೆದಿದೆ. ಮತ್ತೊಂದು ಕಡೆ ಇಡಿ ಎಫ್ ಐ ಆರ್ ಮಾಡಿಕೊಂಡು ತನಿಖೆ ಮಾಡುತ್ತಿದೆ. ಮೊದಲು ಕಾಂಗ್ರೆಸ್ ನಾಯಕರು ತಪ್ಪೇ ನಡೆದಿಲ್ಲ ಅನ್ನುತ್ತಿದ್ದರು. ಈಗ ಸೈಟ್ ವಾಪಸ್ ಕೊಟ್ಟು ತಪ್ಪಾಗಿದೆ ಅನ್ನುವುದನ್ನು ಒಪ್ಪಿಕೊಂಡಂತಾಗಿದೆ ಎಂದರು.
ಹಿಂದೆ ಯಡಿಯೂರಪ್ಪ ಸೈಟ್ ವಾಪಸ್ ಮಾಡಿದಾಗ ಇದೇ ಸಿದ್ದರಾಮಯ್ಯ ಏನು ಹೇಳಿದ್ದರು ನೆನಪಿಸಿಕೊಳ್ಳಲಿ, ಆಗ ಯಡಿಯೂರಪ್ಪ ಸೈಟ್ ವಾಪಸ್ ಮಾಡುವ ಮೂಲಕ ತಪ್ಪನ್ನು ಒಪ್ಪಿಕೊಂಡಿದ್ದಾರೆ ಅಂತ ಹೇಳಿದ್ದರು. ಈಗ ಇದೇ ಮಾತು ಸಿದ್ದರಾಮಯ್ಯ ಅವರಿಗೂ ಅನ್ವಯ ಆಗುತ್ತದೆ. ಸೈಟ್ ವಾಪಸ್ ನೊಂದಿಗೆ ಅಕ್ರಮ ಆಗಿರುವುದನ್ನು ಒಪ್ಪಿಕೊಂಡಿದ್ದಾರೆ ಸೈಟು ಹಂಚಿಕೆ ಕಾನೂನುಬಾಹಿರವಾಗಿ ಆಗಿದೆ ಅನ್ನುವುದನ್ನು ಅವರೇ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
Click this button or press Ctrl+G to toggle between Kannada and English