ಬೆಂಗಳೂರು : ನಾನು ಅತ್ಮಸಾಕ್ಷಿಯಾಗಿ ಕೆಲಸ ಮಾಡುತ್ತೇನೆ ರಾಜಿನಾಮೆ ನೀಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದರು.
ಮುಖ್ಯಮಂತ್ರಿಯವರು ಇಂದು ರವೀಂದ್ರ ಕಲಾ ಕ್ಷೇತ್ರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ನನ್ನ ಪತ್ನಿ ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಂಡಿದ್ದಾರೆ. ಪತ್ರ ಬರೆದಿರುವ ಕುರಿತು ನನಗೆ ಯಾವುದೇ ಮಾಹಿತಿಯಿಲ್ಲ. ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿಯವರು ಜಮೀನಿನ ಮಾಲೀಕರಾಗಿದ್ದರು. ಉಡುಗೊರೆ ರೂಪದಲ್ಲಿ ನನ್ನ ಪತ್ನಿಗೆ 3 ಎಕರೆ 16 ಗುಂಟೆ ಜಮೀನು ನೀಡಿದ್ದರು. ಅದನ್ನು ಮುಡಾದವರು ಒತ್ತುವರಿ ಮಾಡಿಕೊಂಡು ನಿವೇಶನಗಳನ್ನು ರಚಿಸಿ ಮಾರಿಕೊಂಡಿದ್ದರು. ಅದಕ್ಕೆ ಬದಲಿ ನಿವೇಶನ ಕೋರಿದ್ದು, ವಿಜಯನಗರದ 3 ಮತ್ತು 4 ನೇ ಹಂತದಲ್ಲಿ ನಿವೇಶನ ಮಂಜೂರು ಮಾಡಿತ್ತು. ನನ್ನ ಪತ್ನಿಯವರು ವಿಜಯನಗರದಲ್ಲೇ ನೀಡುವಂತೆ ಕೇಳಿರಲಿಲ್ಲ. ಈಗ ಅದು ದೊಡ್ಡ ವಿವಾದವಾಗಿದೆ. ಇದರಿಂದ ನನ್ನ ಪತಿಯ ತೇಜೋವಧೆಯಾಗುತ್ತಿರುವುದು ಹಾಗೂ ರಾಜಕೀಯ ದ್ವೇಷ ಹಾಗೂ ಸೇಡನ್ನು ತೀರಿಸಿಕೊಳ್ಳತ್ತಿರುವ ಕೆಲಸವನ್ನು ವಿರೋಧಿಗಳು ಮತ್ತು ವಿರೋಧ ಪಕ್ಷಗಳು ಮಾಡುತ್ತಿರುವುದರಿಂದ ಮನನೊಂದು ನಿವೇಶನಗಳನ್ನು ಮರಳಿ ನೀಡಲು ತೀರ್ಮಾನಿಸಿದ್ದಾರೆ ಎಂದು ತಿಳಿಸಿದರು.
ನಿನ್ನೆ ಇಡಿಯವರು ಇಸಿಐಆರ್ ಫೈಲ್ ಮಾಡಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಮುಖ್ಯಮಂತ್ರಿಯವರು ಕಾನೂನು ರೀತಿ ಯಾವೆಲ್ಲಾ ಕ್ರಮವಿದೆ ತೆಗೆದುಕೊಳ್ಳಲಿ ಎಂದರು.
ಜಮೀನಿನ ಬದಲಿಗೆ ನಿವೇಶನಗಳನ್ನು ಹಂಚಿಕೆ ಮಾಡಿರುವುದು ನನ್ನ ಪ್ರಕಾರ Money Laundering ಆಗುವುದಿಲ್ಲ ಈ ಪ್ರಕರಣದಲ್ಲಿ ನನ್ನ ಪಾತ್ರವೇನು? ವಿರೋಧ ಪಕ್ಷದವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ರಾಜಿನಾಮೆ ನೀಡುವುದರಿಂದ ಎಲ್ಲವೂ ಮುಗಿಯುತ್ತದೆಯೇ? ಅನಗತ್ಯವಾಗಿ ರಾಜಿನಾಮೆ ಕೇಳುತ್ತಿದ್ದಾರೆ ನನ್ನ ತಪ್ಪಿಲ್ಲ ಎಂದ ಮೇಲೆ ರಾಜಿನಾಮೆ ಯಾಕೆ ನೀಡಬೇಕು ಎಂದು ಮಾಧ್ಯಮದವರಿಗೆ ಉತ್ತರಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನವರ ಪ್ರಕರಣಕ್ಕೂ ಹಾಗೂ ನನ್ನ ಪ್ರಕರಣಕ್ಕೂ ವ್ಯತ್ಯಾಸವಿದೆ. ಇದರಲ್ಲಿ ನನ್ನ ಪಾತ್ರವಿಲ್ಲ ಯಡಿಯೂರಪ್ಪ ಡಿನೊಟಿಫೈ ಮಾಡಿದ್ದರು ನಾನು ಡಿನೋಟಿಫೈ ಮಾಡಿಲ್ಲ; Money Laundering ಮಾಡಿಲ್ಲ ನಾನು ಅತ್ಮಸಾಕ್ಷಿಯಾಗಿ ಕೆಲಸ ಮಾಡುತ್ತೇನೆ ರಾಜಿನಾಮೆ ನೀಡುವ ಅಗತ್ಯವಿಲ್ಲ ಎಂದು ಹೇಳಿದರು.
Click this button or press Ctrl+G to toggle between Kannada and English