ಮಂಗಳೂರು : ರಘು ಇಡ್ಕಿದು ರವರು ಸಾಹಿತ್ಯ ರಚಿಸಿ, ಸಂಗೀತ ನಿರ್ದೇಶಕ ಎಲ್ಲೂರು ಶ್ರೀನಿವಾಸರಾವ್ ಸಂಗೀತ ನೀಡಿದ, ವಿದ್ಯಾ.ಯು ನಿರ್ಮಾಣ, ನಿರ್ದೇಶನ, ಸಂಕಲನ ಮಾಡಿದ ಮಕ್ಕಳ ತುಳು ಹಾಡುಗಳ ಬಿಡುಗಡೆ ಸಮಾರಂಭ ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯ ಶ್ರೀ ಕೃಷ್ಣ ಸಭಾಭವನದಲ್ಲಿ ಅಕ್ಟೊಬರ್ 17 ರಂದು ನಡೆಯಿತು.
ಥಂಡರ್ ಕಿಡ್ಸ್ ಮಂಗಳೂರು ಮತ್ತು ವಿದ್ಯಾ ಪ್ರಕಾಶನ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಮಕ್ಕಳಿಂದಲೇ ಹಾಡುಗಳನ್ನು ಹಾಡಿಸಿ, ದೃಶ್ಯೀಕರಿಸಿದ ಈ ಮಕ್ಕಳ ತುಳು ಹಾಡುಗಳನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಬಿಡುಗಡೆಗೊಳಿಸಿದರು.
ಸಮಾರಂಭದಲ್ಲಿ ಅವರು ಮಾತನಾಡಿ “ ಮಕ್ಕಳಿಗಾಗಿ ತುಳುವನ್ನು ಈ ರೀತಿ ಡಿಜಿಟಲ್ ಸ್ವರೂಪಗಳಲ್ಲಿ ತಂದರೆ, ಇಂದಿನ ಮಕ್ಕಳಿಗೆ ಅದು ಬಹಳ ಆಪ್ತವಾಗುತ್ತದೆ ಮತ್ತು ಜಗದಗಲದ ಜನರಿಗೆ ತಲುಪುತ್ತದೆ. ಮಕ್ಕಳಿಗೆ ದೊಡ್ಡ ದೊಡ್ಡ ಗ್ರಂಥಗಳನ್ನು ನೀಡಿದರೆ ತುಳುವಿನ ಬಗೆಗೆ ಆಸಕ್ತಿ ಬರದು. ಮಕ್ಕಳಿಗೆ ಅವರ ವಯಸ್ಸಿಗೆ ಸಂಬಂಧಪಟ್ಟ ರೀತಿಯಲ್ಲಿ ಸಾಹಿತ್ಯವನ್ನು ನೀಡಿ ಭಾಷೆಯ ಬಗ್ಗೆ ಜಾಗೃತಿಗೊಳಿಸಬೇಕಾಗಿದೆ. ನಮಗೆ ಬಂದ ಅನುಭವಗಳನ್ನು ಮಕ್ಕಳಿಗೆ ಹೀಗೆ ದೃಶ್ಯಗಳಲ್ಲಿ ಕಟ್ಟಿಕೊಟ್ಟಾಗ ಅದು ಮಕ್ಕಳ ಮನಸ್ಸಿನಲ್ಲಿ ಅಚ್ಚೊತ್ತಿ ನಿಲ್ಲುತ್ತದೆ. ತುಳುನಾಡಿನ ಗುಡ್ಡ, ಬೆಟ್ಟ, ನದಿ,ಬಯಲು,ಗದ್ದೆ, ತೋಡು, ತೋಟ ಇವುಗಳೆಲ್ಲ ದೊಡ್ಡವರ ಗಮನಕ್ಕೆ ಬಂದಿರುತ್ತದೆ. ಆದರೆ ಇಂದಿನ ಮಕ್ಕಳ ಗಮನಕ್ಕೆ ಬರಬೇಕಾದ ಅಗತ್ಯವಿದೆ. ಹಾಗಾಗಿ ಮಕ್ಕಳನ್ನು ಬಳಸಿಕೊಂಡು ಆ ದೃಶ್ಯಗಳನ್ನು ದೃಶ್ಯೀಕರಿಸಿ ಮಕ್ಕಳಿಗೆ ನೀಡಿದಾಗ ಆಪ್ತವಾಗುತ್ತದೆ. ಇದರಿಂದ ನಾಡಿನ ಬಗೆಗೆ ಭಾಷೆಯ ಬಗೆಗೆ ಮಕ್ಕಳಲ್ಲಿ ಕಿಂಚಿತ್ತಾದರೂ ಜಾಗೃತಿ ಮೂಡುವ ಸಾಧ್ಯತೆ ಇದೆ” ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಹಿರಿಯ ಕವಿ ಸಾಹಿತಿ ರಾಧಾಕೃಷ್ಣ.ಕೆ.ಉಳಿಯತ್ತಡ್ಕ ರವರು ಮಾತನಾಡಿ “ ತುಳುವಿನಲ್ಲಿ ಈ ರೀತಿಯ ಮಕ್ಕಳ ಹಾಡುಗಳು ಇದುವರೆಗೆ ಬಂದಿಲ್ಲ. ಇದೊಂದು ಐತಿಹಾಸಿಕ ದಾಖಲೆ. ತುಳುವನ್ನು ಈ ರೀತಿ ಮಕ್ಕಳಿಗೆ ದಾಟಿಸಬೇಕಾದ ತುರ್ತು ಅಗತ್ಯ ಇಂದಿನ ದಿನಗಳಲ್ಲಿ ಇದೆ” ಎಂದು ನುಡಿದರು.
ಸಮಾರಂಭದಲ್ಲಿ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಿ ಕೃಷ್ಣಮೂರ್ತಿಯವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು “ ತುಳುವನ್ನು ಶಿಕ್ಷಣದ ಮೂಲಕ ಕಟ್ಟುವ ಅಗತ್ಯ ಇಂದು ಬಹಳ ಇದೆ ಎಂದು ನುಡಿದರು .
ಸಂಗೀತ ನಿರ್ದೇಶಕರಾದ ಎಲ್ಲೂರು ಶ್ರೀನಿವಾಸರಾವ್ ಉಪಸ್ಥಿತರಿದ್ದರು. ಹಾಡುಗಳ ನಿರ್ಮಾಣ ನಿರ್ದೇಶನ ಮತ್ತು ಸಂಕಲನ ಮಾಡಿದ ಶ್ರೀಮತಿ ವಿದ್ಯಾ.ಯು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಾಡುಗಳನ್ನು ಹಾಡಿದ ಮಕ್ಕಳು, ಹಾಡುಗಳಲ್ಲಿ ಅಭಿನಯಿಸಿದ ಮಕ್ಕಳು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಮಕ್ಕಳು ದೀಪ ಪ್ರಜ್ವಲನ್ನುಗೊಳಿಸಿದರು. ವಿನಮ್ರ ಇಡ್ಕಿದು ಪ್ರಾರ್ಥಿಸಿದರು.ರಘು ಇಡ್ಕಿದು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಪೂರ್ತಿ ವಿಡಿಯೋ ವೀಕ್ಷಿಸಿ
Click this button or press Ctrl+G to toggle between Kannada and English