ಮಂಗಳೂರು : ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆಯುವ ಉಪ ಚುನಾವಣೆ ಅಕ್ಟೋಬರ್ 21ರಂದು ನಡೆಯಲಿದ್ದು ಎಲ್ಲ ಸಿದ್ದತೆಗಳು ಪೂರ್ಣಗೊಂಡಿವೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವ್ಯಾಪ್ತಿಯನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಒಟ್ಟು 392 ಮತಗಟ್ಟೆಗಳಿದ್ದು 6,032 ಮತದಾರರಿದ್ದಾರೆ. ಉಭಯ ಜಿಲ್ಲೆಗಳು ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಹಾಗೂ ಶಾಸಕರು ಮತ್ತು ಸಂಸದರು ಈ ಕ್ಷೇತ್ರದ ಮತದಾರರಾಗಿರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 223 ಗ್ರಾಮ ಪಂಚಾಯತ್‍ಗಳ 3,263 ಸದಸ್ಯರು, ಮಂಗಳೂರು ಮಹಾನಗರ ಪಾಲಿಕೆಯಲ್ಲಿ 65, ಎರಡು ನಗರ ಸಭೆಗಳಲ್ಲಿ 64, 3 ಪುರಸಭೆಗಳಲ್ಲಿ 74 ಹಾಗೂ 5 ನಗರ ಪಂಚಾಯತ್ ನಲ್ಲಿ 86 ಮಂದಿ ಮತ ಚಲಾಯಿಸಲು ಅರ್ಹರಾಗಿರುತ್ತಾರೆ.
ಉಡುಪಿ ಜಿಲ್ಲೆಯಲ್ಲಿ 153 ಗ್ರಾಮ ಪಂಚಾಯತ್ ಗಳಲ್ಲಿ 2,355 ಸದಸ್ಯರು, ಉಡುಪಿ ನಗರ ಸಭೆಯಲ್ಲಿ 36, 3 ಪುರಸಭೆಯಲ್ಲಿ 72 ಹಾಗೂ ಒಂದು ನಗರ ಪಂಚಾಯತ್ ನಲ್ಲಿ 17 ಮಂದಿ ಮತ ಚಲಾಯಿಸಲು ಅರ್ಹರಾಗಿರುತ್ತಾರೆ.
ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ 234 ಮತಗಟ್ಟೆಯಲ್ಲಿ 3,552 ( ಪುರುಷರು- 1,710 ಮಹಿಳೆಯರು – 1,842 ) ಮತದಾರರು ಹಾಗೂ ಉಡುಪಿ ಜಿಲ್ಲೆಯ 158 ಮತಗಟ್ಟೆಯಲ್ಲಿ 2,480 ( ಪುರುಷರು – 1,195 , ಮಹಿಳೆಯರು – 1,285 ) ಮತದಾರರಾಗಿರುತ್ತಾರೆ. ಒಟ್ಟಾರೆಯಾಗಿ ಎರಡು ಜಿಲ್ಲೆಗಳ 392 ಮತಗಟ್ಟೆಗಳಲ್ಲಿ 6,032 ಮತದಾರರು ಮತಚಲಾಯಿಸಲಿದ್ದಾರೆ.
ತಾಲೂಕುವಾರು ಬೆಳ್ತಂಗಡಿ ತಾಲೂಕಿನಲ್ಲಿ ಅತ್ಯಧಿಕ 49 ಮತಗಟ್ಟೆಗಳಿವೆ. ಬಂಟ್ವಾಳ ತಾಲೂಕಿನಲ್ಲಿ ಅತ್ಯಧಿಕ 793 ಮತದಾರರಿದ್ದಾರೆ. ಹೆಬ್ರಿ ತಾಲೂಕಿನಲ್ಲಿ ಅತಿ ಕಡಿಮೆ 9 ಮತಗಟ್ಟೆಗಳು ಹಾಗೂ 122 ಮತದಾರರಿದ್ದಾರೆ.
ಅತಿ ಕಡಿಮೆ ಮತದಾರರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಡಪ್ಪಾಡಿ ಪಂಚಾಯತ್ ಹಾಗೂ ಕೊಣಾಜೆ ಪಂಚಾಯತ್ ಮತಗಟ್ಟೆಗಳಲ್ಲಿ (ತಲಾ 5 ಮತದಾರರು) ಹಾಗೂ ಉಡುಪಿ ಜಿಲ್ಲೆಯ ಹಳ್ಳಿಹೊಳೆ ಮತ್ತು ಎಡಮೊಗೆ ಗ್ರಾಮ ಪಂಚಾಯತ್ ಮತಗಟ್ಟೆಗಳಲ್ಲಿ (ತಲಾ 6 ಮತದಾರರು) ಇದ್ದಾರೆ.
ಅತ್ಯಧಿಕ ಮತದಾರರು ಮಂಗಳೂರು ಮಹಾನಗರ ಪಾಲಿಕೆಯ ಮತಗಟ್ಟೆಯಲ್ಲಿ (65) ಹಾಗೂ ಉಡುಪಿ ಜಿಲ್ಲೆಯ ಶಿರೂರು ಗ್ರಾಮ ಪಂಚಾಯತ್ ನಲ್ಲಿ (44) ಮತ ಚಲಾಯಿಸಲಿದ್ದಾರೆ.
ಚುನಾವಣೆ ನಡೆಸಲು 392 ಮತಗಟ್ಟೆಗಳಿಗೆ ತಲಾ 470 ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಮೈಕ್ರೋ ಆಬ್ಸರ್ವರ್ ಗಳನ್ನು ನೇಮಿಸಲಾಗಿದೆ.
ಮತ ಎಣಿಕೆ ಮಂಗಳೂರು ಸಂತ ಅಲೋಷಿಯಸ್ ಪದವಿಪೂರ್ವ ಕಾಲೇಜಿನಲ್ಲಿ ಅಕ್ಟೋಬರ್ 24ರಂದು ನಡೆಯಲಿದೆ.
ಚುನಾವಣಾ ಕಣದಲ್ಲಿ ಕಿಶೋರ್ ಬಿ.ಆರ್ (ಭಾರತೀಯ ಜನತಾ ಪಾರ್ಟಿ), ರಾಜು ಪೂಜಾರಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), ಅನ್ವರ್ ಸಾದತ್.ಎಸ್ (ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ), ಮತ್ತು ದಿನಕರ ಉಳ್ಳಾಲ (ಪಕ್ಷೇತರ) ಸ್ಪರ್ಧಿಸುತ್ತಿದ್ದಾರೆ.
Click this button or press Ctrl+G to toggle between Kannada and English