ಬೆಂಗಳೂರು : ಸವಿತಾ ಸಮಾಜದವರು ಅಮಂಗಲ, ಅವರನ್ನು ನೋಡುವುದು ದುರದೃಷ್ಟ ಎಂಬ ಸಮಾಜದ ಮಾತುಗಳು ಅನುಚಿತ ಮತ್ತು ಶುದ್ಧ ಅಸಂಗತವಾದದ್ದು. ಮಂಗಳಕಾರ್ಯಗಳಲ್ಲಿ ಮಂಗಳವಾದ್ಯ ನುಡಿಸುವವರನ್ನ ನೋಡಿದರೆ ಎಲ್ಲಾ ಮಂಗಳವಾಗುತ್ತದೆ. ಪ್ರತಿಯೊಬ್ಬರೂ ಎಲ್ಲಾ ಸಮಾಜದವರನ್ನು ಗೌರವದಿಂದ ಕಾಣಬೇಕು ಎಂದು ಶೃಂಗೇರಿ ಶಾರದಾ ಮಠದ ಪೀಠಾಧೀಶರಾದ ವಿಧುರಶೇಖರಭಾರತಿ ಸ್ವಾಮೀಜಿ ಕರೆ ನೀಡಿದರು .
ನಗರದ ಚಾಮರಾಜಪೇಟೆಯ ಶಂಕರಪುರದ ಶೃಂಗೇರಿ ಮಠದಲ್ಲಿ ಕೆ.ಆರ್. ನಗರದ ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠಾಧೀಶರಾದ ಶಂಕರಭಾರತಿ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ, ಶೃಂಗೇರಿ ಸ್ವಾಮೀಜಿಯವರು ಇತಿಹಾಸದಲ್ಲಿ ಮೊದಲ ಬಾರಿಗೆ ಸವಿತಾ ಸಮಾಜಕ್ಕೆ ವಿಶೇಷವಾಗಿ ಆಶೀರ್ವಚನ ನೀಡಿದರು. ಉಪಸ್ಥಿತರಿದ್ದ ಸವಿತಾ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಎಸ್. ನರೇಶ್ ಕುಮಾರ್, ಸವಿತಾ ಸಮಾಜದ ಮುಖಂಡರಾದ ಕಿರಣ್ ಸಂಪತ್‌ಕುಮಾರ್, ಎಸಿಪಿ ನಾರಾಯಣಸ್ವಾಮಿ, ವಕೀಲರಾದ ನರಸಿಂಹರಾಜು, ಇನ್ಸ್‌ಪೆಕ್ಟರ್ ವಿಶ್ವನಾಥ್ ಮತ್ತು ಸವಿತಾ ಸಮುದಾಯದವರಿಗೆ ಆಶೀರ್ವಚನ ನೀಡಿದ ಸ್ವಾಮೀಜಿ, ಸನಾತನ ಧರ್ಮದಲ್ಲಿ ಮನುಷ್ಯ ಹೇಗಿರಬೇಕು ಎಂಬ ಬಗ್ಗೆ ಸ್ಪಷ್ಟವಾದ ನಿಯಮವಿದೆ. ಮನುಷ್ಯ ಎಲ್ಲರನ್ನೂ ಗೌರವದಿಂದ ಕಾಣಬೇಕು. ಯಾವುದೇ ಸಮಾಜದ ಮೇಲಿರುವ ಕೇವಲ ದೃಷ್ಟಿ ಹೋಗಿ ಗೌರವದ ದೃಷ್ಟಿ ಹರಿಯಬೇಕು. ಎಲ್ಲಾ ಸಮಾಜಗಳು ಶೈಕ್ಷಣಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.
ಕ್ಷೌರಿಕ ವೃತ್ತಿ ಮಾಡುವ ಮೂಲಕ ಸವಿತಾ ಸಮುದಾಯದವರು ನಮ್ಮೆಲ್ಲರನ್ನೂ ಸುಂದರವಾಗಿ ಕಾಣಿಸುವ ವೃತ್ತಿಯಲ್ಲಿದ್ದಾರೆ. ಅದೇ ರೀತಿ ವಾದ್ಯ ಸೇವೆ ದೇವರ ಸೇವೆಯಾಗಿದ್ದು, ಮಂಗಲವಾದ್ಯ ವಿಶೇಷ ವೃತ್ತಿಯಾಗಬೇಕು. ಮಂಗಳವಾದ್ಯ ನುಡಿಸುವ ಸಮುದಾಯವನ್ನ ಕಂಡರೆ ಎಲ್ಲವೂ ಮಂಗಳವಾಗುತ್ತದೆ. ಈ ವೃತ್ತಿಗೆ ಶಾಶ್ವತವಾದ ನೆಲೆ, ಬೆಲೆ ಗೌರವ ಸಿಗುವಂತಾಗಬೇಕು. ಸರ್ಕಾರದಿಂದಲೂ ಸೂಕ್ತ ಪ್ರೋತ್ಸಾಹ ದೊರೆಯುವಂತಾಗಲಿ. ಈ ಎರಡೂ ವೃತ್ತಿಗಳಲ್ಲಿರುವ ಸವಿತಾ ಸಮಾಜ ಎಲ್ಲಾ ವಲಯಗಳಲ್ಲೂ ಮುಂಚೂಣಿಗೆ ಬರಬೇಕು ಎಂದು ಆಶಿಸಿದರು.
ಕ್ಷೌರಿಕ ವೃತ್ತಿ ಮಾಡುವ ಸವಿತಾ ಸಮಾಜದವರನ್ನು ಕುರಿತು ವಾಹಿನಿಗಳಲ್ಲಿ ಅವಹೇಳನ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಆದರೆ ನಿಜವಾಗಿ ಅಧ್ಯಯನ ಮಾಡಿದವರು ಎಂದೂ ಸಾರ್ವಜನಿಕವಾಗಿ ಮಾತನಾಡುವುದಿಲ್ಲ. ಜನರನ್ನು ದಾರಿ ತಪ್ಪಿಸುವ ಕೆಲಸದಲ್ಲಿ ತೊಡಗುವುದಿಲ್ಲ. ಹೀಗೆ ಮಾಡಿದರೆ ಗುರು ಎನ್ನುವ ಮಾತಿಗೆ ಬೆಲೆ ಇಲ್ಲವಾಗುತ್ತದೆ. ಇಂತಹ ಮಾತುಗಾರರ ಜ್ಞಾನದ ಮಟ್ಟ ಹೇಗಿದೆ ಎಂಬುದು ತಿಳಿಯುತ್ತದೆ. ಅನಗತ್ಯ ಮಾತುಗಳಿಗೆ ಬೆಲೆ ನೀಡಬೇಕಾದ ಅಗತ್ಯವಿಲ್ಲ ಎಂದು ಸ್ವಾಮೀಜಿಗಳು ಅಭಿಪ್ರಾಯಪಟ್ಟರು.
ಸವಿತಾ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಎಸ್. ನರೇಶ್ ಕುಮಾರ್ ಮಾತನಾಡಿ, ನವರಾತ್ರಿ ಶುಭ ಸಂಧರ್ಭದಲ್ಲಿ ಶೃಂಗೇರಿ ಶಾರದೆಯ ಸನ್ನಿಧಿಯಲ್ಲಿ ಸವಿತಾ ಸಮಾಜದವರಿಂದ ಮಂಗಳವಾದ್ಯ ಸೇವೆಗೆ ಅವಕಾಶ ನೀಡುವ ನಿಟ್ಟಿನಲ್ಲಿ ಸ್ವಾಮೀಜಿಗಳು ಒಪ್ಪಿಗೆ ನೀಡಿದ್ದಾರೆ. ಇದೇ ರೀತಿಯಲ್ಲಿ ಮುಂಬರುವ ಚಾತುರ್ಮಾಸದಲ್ಲಿ ಒಂದು ದಿನ ಸವಿತಾ ಸಮಾಜದ ಬಂಧುಗಳಿಗೆ ಆಶೀರ್ವಚನ ನೀಡಲು ಸ್ವಾಮೀಜಿಗಳು ಮುಂದಾಗಿದ್ದಾರೆ. ಚಾತುರ್ಮಾಸದಲ್ಲಿ ಗುರು ದರ್ಶನ ಮಾಡುವುದು ವಿಶೇಷವಾದದ್ದು. ಒಂದು ದಿನ ವಿಶೇಷ ದರ್ಶನ ಮಾಡಿ ಮಂತ್ರಾಕ್ಷತೆ ಪಡೆದುಕೊಂಡು ಹೋದರೆ ಅಭಿಷ್ಟ ಸಿದ್ಧಿಗೆ ನೆರವಾಗುತ್ತದೆ. ಈ ಎಲ್ಲಾ ಕ್ರಮಗಳು ನಮ್ಮ ಸಮುದಾಯಕ್ಕೆ ಬಹಳ ಆಶಾದಾಯಕವಾದ ಬೆಳವಣಿಗೆಗಳಾಗಿವೆ. ಸಮುದಾಯದ ಬಗ್ಗೆ ಸಮಾಜದಲ್ಲಿ ಇರುವಂತಹ ಅಭಿಪ್ರಾಯವನ್ನು ಬದಲಿಸುವುದು, ಒಳ್ಳೆಯ ಅಭಿಪ್ರಾಯ ಬೆಳೆಯುವಂತೆ ಮಾಡುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ ಎಂದ ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಡೆಪ್ಯೂಟಿ ತಹಶೀಲ್ದಾರ್ ನಂದೀಶ್, ಎಸಿಪಿ ನಾರಾಯಣಸ್ವಾಮಿ, ಅಡ್ವೊಕೇಟ್ ನರಸಿಂಹರಾಜು, ಇನ್ಸ್‌ಪೆಕ್ಟರ್ ವಿಶ್ವನಾಥ್, ಸವಿತಾ ಸಮುದಾಯದ ಮುಖಂಡರಾದ ಕಿರಣ್ ಸಂಪತ್ ಕುಮಾರ್, ಕನ್ನಡ ಹೋರಾಟಗಾರ ಸಾಮ್ರಾಟ್ ಮಂಜು, ಸವಿತಾ ಸಮುದಾಯದ ಪ್ರಮುಖ ಮುಖಂಡರುಗಳು ಹಾಗೂ ಕುಟುಂಬ ಸದಸ್ಯರು ಸೇರಿದಂತೆ ಸಾವಿರಾರು ಜನರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English