ಮಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಮಂಗಳೂರು ಸೇರಿದಂತೆ ರಾಜ್ಯಾದ್ಯಂತ ಪಡಿತರ ಚೀಟಿ ತಿದ್ದುಪಡಿ ನಡೆಯುತ್ತಿದ್ದು ಅನೇಕ ಅರ್ಹ ಬಡವರ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಪಡಿಸಲಾಗುತ್ತಿದೆ. ಆ ಕಾರಣಕ್ಕೆ ಅನೇಕರಿಗೆ ಈ ತಿಂಗಳ ಪಡಿತರ ಅಕ್ಕಿಯನ್ನು ತಡೆಹಿಡಿಯಲಾಗಿದ್ದು ಬಡ ವರ್ಗದವರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಏಕಾಏಕಿ ಸಾವಿರಾರು ಅರ್ಹ ಬಿಪಿಎಲ್ ಚೀಟಿಗಳು ರದ್ದಾಗಿರುವ ಬಗ್ಗೆ ನಾಗರಿಕರು ದಿನನಿತ್ಯ ಕರೆ ಮಾಡಿ ಅಳಲು ತೋಡಿಕೊಳ್ಳುತ್ತಿದ್ದು ಇನ್ನೂ ಅನೇಕರು ಬಿಪಿಎಲ್ ರದ್ದುಗೊಳ್ಳಲಿರುವ ಬಗ್ಗೆ ಆತಂಕಗೊಂಡಿದ್ದಾರೆ. ಆರಂಭದಲ್ಲಿ ಎಲ್ಲರಿಗೂ ಉಚಿತ ಎಂದು ಐದು ಗ್ಯಾರಂಟಿಗಳನ್ನು ಘೋಷಿಸಿದ್ದ ಸರ್ಕಾರ, ನಂತರ ಎಲ್ಲಾ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಲು ಹಲವು ನಿಯಮಗಳ ಸಹಿತ ಬಿಪಿಎಲ್ ರೇಷನ್ ಕಾರ್ಡ್ ಕಡ್ಡಾಯಗೊಳಿಸಿತ್ತು. ಇದೀಗ ಸದ್ದಿಲ್ಲದೇ ಅರ್ಹರ ಬಿಪಿಎಲ್ ಕಾರ್ಡ್ ಗಳನ್ನೇ ವ್ಯವ್ಯಸ್ಥಿತವಾಗಿ ರದ್ದುಗೊಳಿಸುವ ಮೂಲಕ ಗ್ಯಾರಂಟಿಗೆ ಬಳಕೆಯಾಗಬೇಕಿದ್ದ ಸಾವಿರಾರು ಕೋಟಿ ರೂಪಾಯಿಗಳನ್ನು ಸರ್ಕಾರದ ಬೊಕ್ಕಸದಲ್ಲಿಯೇ ಉಳಿಸಿಕೊಂಡು ಕೊನೆಗೆ ಅದನ್ನೂ ಸಹ ಭ್ರಷ್ಟಾಚಾರದ ಮೂಲಕ ತಿಂದು ತೇಗುವ ಷಡ್ಯಂತ್ರ ನಡೆಸಲಾಗಿದೆ ಎಂದು ಆರೋಪಿಸಿದರು.
ಬಿಪಿಎಲ್ ಕಾರ್ಡ್ ರದ್ದಾಗಿರುವ ಪರಿಣಾಮ ಕೇಂದ್ರ ಸರ್ಕಾರ ನೀಡುತ್ತಿದ್ದ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ನೀಡಬೇಕಿದ್ದ ಅಕ್ಕಿಯೂ ಸಿಗುವುದಿಲ್ಲ, ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯೂ ಇಲ್ಲ. ಇದು ನಾಡಿನ ಜನತೆಗೆ ರಾಜ್ಯ ಸರ್ಕಾರ ಮಾಡುತ್ತಿರುವ ಮಹಾ ಮೋಸವಾಗಿದ್ದು ಸರ್ಕಾರಕ್ಕೆ ಜನರ ಕಣ್ಣೀರು ಬಹು ದೊಡ್ಡ ಶಾಪವಾಗಿ ಪರಿಣಮಿಸಲಿದೆ. ಕೂಡಲೇ ಈ ಪ್ರಕ್ರಿಯೆಯನ್ನು ನಿಲ್ಲಿಸಿ ಅರ್ಹ ಬಡ ಜನರಿಗೆ ಬಿಪಿಎಲ್ ಕಾರ್ಡ್ ಮರಳಿಸಬೇಕು ಎಂದು ಶಾಸಕರು ಸರ್ಕಾರವನ್ನು ಆಗ್ರಹಿಸಿದರು.
Click this button or press Ctrl+G to toggle between Kannada and English