ಶಕ್ತಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಉಡುಪಿಯಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟನೆ

9:59 PM, Thursday, October 31st, 2024
Share
1 Star2 Stars3 Stars4 Stars5 Stars
(No Ratings Yet)
Loading...

ಉಡುಪಿ: ಇಡೀ ದೇಶಕ್ಕೆ ಮಾದರಿಯಾಗಿರುವ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಗುರುವಾರ ತಮ್ಮ ಗೃಹ ಕಚೇರಿಯಲ್ಲಿ ಮಾತನಾಡಿದ ಅವರು, ಶಕ್ತಿ ಯೋಜನೆಯಿಂದ ಲಕ್ಷಾಂತರ ಮಹಿಳೆಯರಿಗೆ ಅನುಕೂಲ ಆಗಿದೆ. ಯಾರೋ ಒಂದಿಬ್ಬರು ಯೋಜನೆ ನಿಲ್ಲಿಸಿ ಎಂದು ಸರ್ಕಾರಕ್ಕೆ ಹೇಳಿದಾಕ್ಷಣ ಯೋಜನೆಯನ್ನು ನಿಲ್ಲಿಸಲು ಸಾಧ್ಯವೇ ಎಂದರು.

ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಸಾರಿಗೆ ಸಂಸ್ಥೆಯ ನಿಗಮಗಳು ಒಳ್ಳೆಯ ಹೆಸರು ಪಡೆದಿದ್ದು, ಉತ್ತಮ ಲಾಭದಲ್ಲಿವೆ. ಮಹಿಳೆಯರ ಪಾಲಿಗೆ ಶಕ್ತಿ ಯೋಜನೆ ಸಂಜೀವಿನಿಯಾಗಿದೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ರಾಜ್ಯದ ಮಹಿಳೆಯರು ಬೆಲೆ ಏರಿಕೆ ಬಗ್ಗೆ ತಮ್ಮ ಅಳಲು ತೋಡಿಕೊಂಡಿದ್ದರು. ಮಹಿಳೆಯರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಡಿ.ಕೆ.ಶಿವಕುಮಾರ್ ಅವರು ನಾ ನಾಯಕಿ ಎಂಬ ಕಾರ್ಯಕ್ರಮ ರೂಪಿಸಿದರು. ಬೆಲೆ ಏರಿಕೆ ಬರೆಯನ್ನ ಅಳಿಸುವ ಸಲುವಾಗಿ ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನವೇ ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತು. ಚುನಾವಣೆಗೂ ಮುನ್ನ ಪ್ರಿಯಾಂಕಾ ಗಾಂಧಿಯವರು ಶಕ್ತಿ ಯೋಜನೆಯನ್ನು ಘೋಷಿಸಿದ್ದರು. ಅದರಂತೆಯೇ ಶಕ್ತಿ ಯೋಜನೆ ಜಾರಿಗೆ ತರಲಾಗಿದೆ ಎಂದು ಸಚಿವರು ಹೇಳಿದರು.

ಡಿ.ಕೆ.ಶಿವಕುಮಾರ್ ಅವರ ಕಲ್ಪನೆಯ ಯೋಜನೆಯೇ ಶಕ್ತಿ ಯೋಜನೆಯಾಗಿದ್ದು, ಇದನ್ನು ನಿಲ್ಲಿಸಲು ಸಾಧ್ಯವೇ ಇಲ್ಲ. ಯೋಜನೆಯನ್ನು ನಿಲ್ಲಿಸಲಾಗುತ್ತದೆ ಎಂಬುದು ಸತ್ಯಕ್ಕೆ ದೂರವಾದ ವಿಷಯ ಎಂದು ಸಚಿವರು ಸ್ಪಷ್ಟಪಡಿಸಿದರು.

ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು
ಮುಂಬರುವ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿದ್ದು, ಸರ್ವೇ ಜನ ಸುಖಿನೋ ಭವಂತು ಅನ್ನೋ ಹಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೆಲಸ ಮಾಡುತ್ತಿದ್ದು, ಜನರು ನಮ್ಮನ್ನು ಕೈ ಹಿಡಿಯುವ ವಿಶ್ವಾಸವಿದೆ ಎಂದು ಸಚಿವರು ಹೇಳಿದರು.

ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ
ವಕ್ಫ್ ಮಂಡಳಿಗೆ ಜಮೀನು ಬಿಟ್ಟು ಕೊಡುವಂತೆ ರೈತರಿಗೆ ನೋಟೀಸ್ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಸ್ಪಷ್ಟಪಡಿಸಿದ್ದು, ರೈತರ ಒಂದು ಇಂಚೂ ಜಾಗ ಬಿಟ್ಟು ಕೊಡುವುದಿಲ್ಲ ಅಂತ ಹೇಳಿದ್ದಾರೆ.

ನಾವು ಪಕ್ಷಾತೀತ, ಜಾತ್ಯತೀತವಾಗಿ ಸರ್ಕಾರ ನಡೆಸುತ್ತೇವೆ. ಇಂಥ ವಿಚಾರಗಳಿಗೆ ಕಿವಿ ಕೊಡಬೇಡಿ. ರೈತರಿಗೆ ನೀಡಿರುವ ನೋಟೀಸ್ ಅನ್ನು ಹಿಂಪಡೆಯುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ನಾನು ಕೂಡ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಯಾವುದೇ ಸಂಘಟನೆ, ಜಾತಿಯನ್ನು ಓಲೈಸುವ ಕೆಲಸ ಆಗಬಾರದು ಎಂದರು.

ಜಾತಿಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಆಯೋಗಕ್ಕೆ ಸಿಎಂ ಪತ್ರ
ಜಾತಿಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಆಯೋಗಕ್ಕೆ ಪತ್ರ ಬರೆಯುತ್ತೇನೆ ಎಂದಿದ್ದಾರೆ. ಜಾತಿ ಗಣತಿ ಬಗ್ಗೆ ಆದಷ್ಟು ಬೇಗ ಮುಖ್ಯಮಂತ್ರಿಗಳು ಮಾತನಾಡುತ್ತಾರೆ ಎಂದು ಸಚಿವರು ಹೇಳಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English