ಮಂಗಳೂರು: ಬಾಲಕಿಯರು, ಮಹಿಳೆಯರನ್ನು ಗುರಿಯಾಗಿಸಿ ಇಂದು ಹಲವು ದಾಳಿಗಳು ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯರು ಆತ್ಮರಕ್ಷಣೆಯ ತರಬೇತಿ ಪಡೆಯುವ ಅಗತ್ಯವಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಅವರು ನಗರದ ಎಕ್ಕೂರಿನಲ್ಲಿರುವ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ಪಿಎಂ ಶ್ರೀ ಅನುದಾನದಿಂದ ವಿದ್ಯಾರ್ಥಿನಿಯರಿಗೆ ಆಯೋಜಿಸಲಾಗಿದ್ದ ಮೂರು ತಿಂಗಳ ಆತ್ಮರಕ್ಷಣೆ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಆತ್ಮ ರಕ್ಷಣಾ ತರಬೇತಿಯನ್ನು ಕಲಿತುಕೊಂಡರೆ ನಿರ್ಭೀತಿಯ ವಾತಾವರಣದಲ್ಲಿ ಮಹಿಳೆಯರು ಬದುಕಲು ಸಾಧ್ಯ. ವಿದ್ಯಾರ್ಥಿಗಳು ದೇಶದ ಭವಿಷ್ಯದ ಆಸ್ತಿಗಳೆಂದು ಮಣಗಂಡಿರುವ ಪ್ರಧಾನಿ ನರೇಂದ್ರ ಮೋದಿ ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯರ ರಕ್ಷಣೆಯ ಕಾಳಜಿಯನ್ನೂ ವಹಿಸಿದ್ದಾರೆ. ಈ ಕಾರಣಕ್ಕಾಗಿಯೇ ಅವರು ವಿದ್ಯಾರ್ಥಿನಿಯರಿಗೆ ಆತ್ಮ ರಕ್ಷಣಾ ತರಬೇತಿಯಂತಹ ಕಾರ್ಯಕ್ರಮಗಳನ್ನು ತಮ್ಮ ಅನುದಾನದ ಮೂಲಕ ಆಯೋಜಿಸುತ್ತಿದ್ದಾರೆ. ವಿದ್ಯಾರ್ಥಿನಿಯರು ಇದರ ಸದುಪಯೋಗವವನ್ನು ಪಡೆದುಕೊಳ್ಳಬೇಕೆಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ವಿದ್ಯಾಲಯದ ಪ್ರಾಂಶುಪಾಲರಾದ ಜಸ್ವೀಂದರ್ ಲಾಲ್ ಮಾತನಾಡಿ, ನಿಮ್ಮನ್ನು ಗುರಿಯಾಗಿಸಿ ನಡೆಯುವ ಮಾನಸಿಕ, ದೈಹಿಕ ದೌರ್ಜ್ಯನ್ಯಗಳ ಬಗ್ಗೆ ವಿದ್ಯಾರ್ಥಿನಿಯರು ಜಾಗೃತರಾಗಬೇಕು. ಅಗತ್ಯ ಸಂದರ್ಭದಲ್ಲಿ ನೀವು ಕಲಿತಿರುವ ಸ್ವಯಂ ರಕ್ಷಣೆಯನ್ನು ಪ್ರಯೋಗಿಸಬೇಕು. ಆತ್ಮ ರಕ್ಷಣೆಯೊಂದಿಗೆ ಆತ್ಮಸ್ತೈರ್ಯವನ್ನೂ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಧ್ಯಾಪಕರಾದ ಜಸೀರ್ ಕೆ.ಪಿ., ಪ್ರಾಥಮಿಕ ವಿಭಾಗದ ಉಸ್ತುವಾರಿ ಶೀಜಾ ನಂಬಿಯಾರ್, ಶಿಕ್ಷಕಿ ಲಿಜಿನಾ, ತರಬೇತಿದಾರರಾದ ವಿಕಾಸ್ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಿಗೆ ಶಾಸಕರಿಂದ ಐಸ್‌ಕ್ರೀಂ
ತಮ್ಮ ಭಾಷಣದ ಮಧ್ಯೆ ಶಾಸಕ ವೇದವ್ಯಾಸ ಕಾಮತ್ ವಿದ್ಯಾರ್ಥಿನಿಯರ ಬಳಿ ರಸ ಪ್ರಶ್ನೆಯೊಂದನ್ನು ಕೇಳಿದ್ದು, ಇದಕ್ಕೆ ಸರಿ ಉತ್ತರಿಸಿದವರಿಗೆ ಬಹುಮಾನ ನೀಡುವುದಾಗಿ ಹೇಳಿದರು. ಪ್ರಶ್ನೆಗೆ ಉತ್ತರಿಸಿದ ವಿದ್ಯಾರ್ಥಿನಿಯೋರ್ವಳಿಗೆ ಬಹುಮಾನ ವಿತರಿಸಿದ ಶಾಸಕರು ಆತ್ಮ ರಕ್ಷಣೆ ತರಬೇತಿ ಪಡೆಯುತ್ತಿರುವ ಎಲ್ಲಾ ವಿದ್ಯಾರ್ಥಿನಿಯರಿಗೆ ಐಸ್‌ಕ್ರೀಂ ನೀಡುವುದಾಗಿ ಹೇಳಿದರು.
Click this button or press Ctrl+G to toggle between Kannada and English