ಸುಳ್ಯ : ಪತ್ನಿಯನ್ನು ಕೊಲೆಗೈದು ಗೋಣಿಚೀಲದಲ್ಲಿ ಮೃತದೇಹವನ್ನು ತುಂಬಿಸಿಟ್ಟು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತಿಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳದ ಇಮ್ರಾನ್ ಶೇಖ್ ಬಂಧಿತ ಆರೋಪಿ. ಪಶ್ಚಿಮ ಬಂಗಾಳದ ಪೊಲೀಸರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಿ ಸುಳ್ಯ ಪೊಲೀಸರು ನವೆಂಬರ್ 24ರಂದು ಸಂಜೆ ಸುಳ್ಯಕ್ಕೆ ಕರೆ ತಂದಿದ್ದಾರೆ.
ಸುಳ್ಯದ ಬೀರಮಂಗಳದ ಮನೆಯೊಂದರಲ್ಲಿ ಕಳೆದ ಏಳು ತಿಂಗಳಿಂದ ವಾಸವಾಗಿದ್ದು, ಸ್ಥಳೀಯ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಕೆಲ ದಿನಗಳ ಹಿಂದೆ ಊರಿಗೆ ತೆರಳುವುದಾಗಿ ಹೊಟೇಲ್‌ನವರಲ್ಲಿ ಹೇಳಿ ಹೋಗಿದ್ದ.
ಆರೋಪಿ ಮನೆಯಿಂದ ಹೊರ ಹೋಗುವಾಗ ಒಬ್ಬನೇ ಹೋಗಿದ್ದನ್ನಲ್ಲದೆ, ಆತ ಹೋಗುವುದಕ್ಕೂ ಮುನ್ನ ಆತನ ಮನೆಯಿಂದ ಕಿರುಚಿದ ಶಬ್ದ ಕೇಳಿದ್ದು, ಅಕ್ಕಪಕ್ಕದ ಮನೆಯವರಿಗೆ ಸಂಶಯ ಬಂದಿತ್ತು. ಹೀಗಾಗಿ ಅಕ್ಕಪಕ್ಕದ ಮನೆಯವರು ಆತ ಕೆಲಸ ಮಾಡುತ್ತಿದ್ದ ಹೊಟೇಲ್ ಮಾಲಿಕರಿಗೆ ಮಾಹಿತಿ ನೀಡಿದ್ದರು. ಅದರಂತೆ ಸುಳ್ಯ ಪೊಲೀಸರಿಗೂ ವಿಷಯ ತಿಳಿಸಲಾಗಿತ್ತು. ಬಳಿಕ ಪೊಲೀಸರು ಬಂದು ಬಾಡಿಗೆ ಮನೆಯ ಬಾಗಿಲು ಒಡೆದು ಒಳ ಹೋಗಿ ನೋಡಿದಾಗ ಗೋಣಿಚೀಲದಲ್ಲಿ ಆತನ ಪತ್ನಿಯ ಶವ ಪತ್ತೆಯಾಗಿತ್ತು.
ಆತನೇ ಆಕೆಯನ್ನು ಕೊಲೆಗೈದು ಪರಾರಿಯಾಗಿರುವ ಶಂಕೆಯ ಮೇರೆಗೆ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದರು.
Click this button or press Ctrl+G to toggle between Kannada and English