ಕೋರ್ಟ್ ಆದೇಶ ಉದ್ದೇಶಪೂರ್ವಕ ಉಲ್ಲಂಘನೆ: ನ್ಯಾಯಾಂಗ ನಿಂದನಾ ಅರ್ಜಿ ದಾಖಲಿಸಿಕೊಂಡ ನ್ಯಾಯಾಲಯ!

11:57 PM, Monday, November 11th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ಈ ಪ್ರತಿಷ್ಠಿತ ಸಂಸ್ಥೆಯ ಚುನಾವಣೆಯ ಜವಾಬ್ದಾರಿ ಹೊತ್ತ ಚುನಾವಣಾಧಿಕಾರಿಯ ನಿರ್ಧಾರ ಈಗ ಕುತೂಹಲದ ಕೇಂದ್ರ ಬಿಂದುವಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಪ್ರಕಾಶ್ ನಾಯಕ್ ಅವರಿಗೆ ಮತದಾನದ ಹಕ್ಕು ಮತ್ತು ಸ್ಪರ್ಧಿಸುವ ಹಕ್ಕನ್ನು ನಿರಾಕರಿಸಲಾಗಿತ್ತು. ಈ ಷರಾ ಕಾನೂನುಬಾಹಿರವಾಗಿದ್ದು, ಈ ಷರಾವನ್ನು ತೆಗೆದುಹಾಕುವಂತೆ ಕೋರಿ ಪ್ರಕಾಶ್ ನಾಯಕ್, ಸಂಘದ ಜವಾಬ್ದಾರಿಯುತ ಪ್ರತಿನಿಧಿಗೆ ಮತ್ತು ಚುನಾವಣಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದರು.

ಆದರೆ, ಅವರಿಂದ ಯಾವುದೇ ಸ್ಪಂದನೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಮಂಗಳೂರಿನ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು. ಸಿವಿಲ್ ದಾವೆಯನ್ನು ವಿಚಾರಣೆಗೆ ಎತ್ತಿಕೊಂಡ ಮಾನ್ಯ ನ್ಯಾಯಾಲಯ, ವಾದಿಯವರ ವಾದವನ್ನು ಆಲಿಸಿದ್ದಲ್ಲದೆ ಕೇವಿಯಟ್ ಅರ್ಜಿ ಸಲ್ಲಿಸಿದ ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ವಾದವನ್ನು ಆಲಿಸಿತು.

ವಾದಿಯು ಸಲ್ಲಿಸಿರುವ ದಾವೆ ಮೇಲ್ನೋಟಕ್ಕೆ ಸಮ್ಮತವಾಗಿದ್ದು, ಅನುಕೂಲತೆಯ ಒಲವು ವಾದಿಯ ಪರ ಇದೆ. ಒಂದು ವೇಳೆ ಮಧ್ಯಂತರ ಆಜ್ಞೆ ಹೊರಡಿಸದೇ ಇದ್ದರೆ ವಾದಿಗೆ ತುಂಬಲಾರದ ನಷ್ಟ ಉಂಟಾಗುತ್ತದೆ. ವಾದಿಯವರ ಮತದಾನದ ಸಂವಿಧಾನಾತ್ಮಕ ಹಕ್ಕನ್ನು ನಿರಾಕರಿಸಿದಂತಾಗುತ್ತದೆ ಎಂಬ ಅಭಿಪ್ರಾಯವನ್ನು ನ್ಯಾಯಪೀಠ ವ್ಯಕ್ತಪಡಿಸಿತು.

ಮಾನ್ಯ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ ರಾಮಲಿಂಗಪ್ಪ ಅವರು ದಿನಾಂಕ 16.11.2024 ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಮತದಾನ ಮಾಡಲು ವಾದಿ ಪ್ರಕಾಶ್ ನಾಯಕ್ ಅವರಿಗೆ ಅವಕಾಶ ನೀಡುವಂತೆ 1ನೇ ಪ್ರತಿವಾದಿ ದ.ಕ. ಜಿಲ್ಲಾ ಸಂಘ ಹಾಗೂ 2ನೇ ಪ್ರತಿವಾದಿ ದ.ಕ. ಜಿಲ್ಲಾ ಚುನಾವಣಾಧಿಕಾರಿಯವರಿಗೆ ಆಜ್ಞಾಪಕ ನಿರ್ಬಂಧಕಾಜ್ಞೆಯ ಆದೇಶ ಹೊರಡಿಸಿದರು.

ಈ ಆದೇಶವನ್ನು ಸ್ವತಃ ವಾದಿಯವರು ನೀಡಿದಾಗ ಸ್ವೀಕರಿಸಲು ನಿರಾಕರಿಸಿದ ಚುನಾವಣಾಧಿಕಾರಿ, ಬಳಿಕ ಕೋರ್ಟ್‌ನ ಅಧಿಕೃತ ಪ್ರತಿನಿಧಿಯಿಂದ ಆದೇಶವನ್ನು ಸ್ವೀಕರಿಸಿದರು. ಆದರೆ, ಈ ಆದೇಶವನ್ನು ಉದ್ದೇಶಪೂರ್ವಕವಾಗಿ ಜಾರಿಗೊಳಿಸದೆ ಉಡಾಫೆಯಿಂದ ವರ್ತಿಸಿದ್ದಲ್ಲದೆ, ಪ್ರಕಾಶ್ ನಾಯಕ್ ಅವರು ಸಲ್ಲಿಸಿದ್ದ ನಾಮಪತ್ರವನ್ನು ಕ್ರಮಬದ್ಧ ಎಂದು ಷರಾ ಹಾಕಿದರೂ ತಿರಸ್ಕರಿಸಿದರು.

ಇದರಿಂದ ಬಾಧಿತರಾದ ಶ್ರೀ ಪ್ರಕಾಶ್ ನಾಯಕ್ ಅವರು ಮಂಗಳೂರು ಪೊಲೀಸ್ ಠಾಣೆಗೆ ದೂರು ನೀಡಿದರು. ಹಾಗೂ ಕೋರ್ಟ್ ಆದೇಶವನ್ನು ಉದ್ದೇಶಪೂರ್ವಕಾಗಿ ಉಲ್ಲಂಘನೆ ಮಾಡಿದ ಚುನಾವಣಾಧಿಕಾರಿ ಶಿವಾನಂದ ಅವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ದಾಖಲಿಸಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿಯಮದ ಪ್ರಕಾರ, ಸ್ವಯಂ ನಿವೃತ್ತಿ, ವಯೋ ನಿವೃತ್ತಿ, ರಾಜೀನಾಮೆ, ಕಡ್ಡಾಯ ನಿವೃತ್ತಿ, ಮರಣ ಅಥವಾ ಇನ್ನಿತರ ಕಾರಣಗಳಿಂದ ಸರ್ಕಾರಿ ಸೇವೆ ಅಂತ್ಯಗೊಂಡಾಗ ಅಥವಾ ವಾರ್ಷಿಕ ಸದಸ್ಯತ್ವ ಶುಲ್ಕ ಸಕಾಲದಲ್ಲಿ ಸಂದಾಯ ಮಾಡದೇ ಇದ್ದಲ್ಲಿ ಅಂತಹ ಸದಸ್ಯನ ಸದಸ್ಯತ್ವ ತಾನಾಗಿಯೇ ಅಂತ್ಯಗೊಳ್ಳತಕ್ಕದ್ದು.

ಪರಂತು, ಸಂಘದ ಸದಸ್ಯನು ಸಂಘ ವಿರೋಧಿ ಚಟುವಟಿಕೆ ಹಾಗೂ ಇನ್ನಿತರ ಕಾರಣಗಳಿಂದ ರಾಜ್ಯ ಸಂಘವು ಕೈಗೊಳ್ಳಬಹುದಾದ ಶಿಸ್ತು ಕ್ರಮದ ಪರಿಣಾಮದಿಂದ ಸಹ ಸಂಘದ ಸದಸ್ಯತ್ವ ಅಂತ್ಯಗೊಳ್ಳತಕ್ಕದ್ದು ಎಂಬ ಉಲ್ಲೇಖ ಇರುತ್ತದೆ.

ಸದರಿ ನಿಯಮಗಳಿಗೆ ಸಂಬಂಧಪಟ್ಟ ಕಾರಣಗಳನ್ನು ಈಗಾಗಲೇ ನ್ಯಾಯಾಲಯವು ಮಧ್ಯಂತರ ಆದೇಶದಲ್ಲಿ ಚರ್ಚಿಸಿ ಅರ್ಜಿದಾರರ ಸದಸ್ಯತ್ವವನ್ನು ಅಮಾನತುಗೊಳಿಸಿರುವ ಆದೇಶ ನಿರಂಕುಶವಾದ ಆದೇಶವಾಗಿರುತ್ತದೆ ಎಂದು ನ್ಯಾಯಾಲಯ ಈಗಾಗಲೇ ಅವಲೋಕವನ್ನು ಮಾಡಿದೆ.

ಪುನಃ ಅದೇ ನಿಯಮದಡಿ ಅರ್ಜಿದಾರರ ನಾಮಪತ್ರವನ್ನು ತಿರಸ್ಕರಿಸಲು ಆಗದು. ಆದರೆ, ಚುನಾವಣಾಧಿಕಾರಿಯು ಸಾರ್ವಜನಿಕ ಅಧಿಕಾರಿಯಾಗಿದ್ದು, ಒಂದು ಜವಾಬ್ದಾರಿಯುತ ವ್ಯಕ್ತಿಯಾಗಿದ್ದಾರೆ. ಅವರು ನ್ಯಾಯಾಲಯದ ಆದೇಶವನ್ನು ಪಾಲಿಸದೇ ಇದ್ದರೆ, ಇನ್ನು ಸಾರ್ವಜನಿಕ ಸೇವೆಯನ್ನು ಹೇಗೆ ಮಾಡುತ್ತಾರೆ ಎಂದು ನ್ಯಾಯಾಲಯ ಆಕ್ರೋಶ ವ್ಯಕ್ತಪಡಿಸಿದೆ.

ನ್ಯಾಯಾಲಯದ ನಿರ್ದೇಶನವನ್ನು ಉದ್ದೇಶಪೂರ್ವಕವಾಗಿ ಗಾಳಿಗೆ ತೂರಿ ಅರ್ಜಿದಾರರ ನಾಮಪತ್ರವನ್ನು ತಿರಸ್ಕರಿಸಿರುವುದು ಸ್ಪಷ್ಟವಾಗಿ ವ್ಯವಸ್ಥೆಯ ವಿರುದ್ಧವಾದ ನಡವಳಿಕೆಯಾಗಿದೆ ಎಂದು ಚುನಾವಣಾಧಿಕಾರಿಯ ಕ್ರಮಕ್ಕೆ ನ್ಯಾಯಾಲಯ ತಪರಾಕಿ ಹಾಕಿದೆ.

ಅರ್ಜಿದಾರರ ನಾಮಪತ್ರವನ್ನು ಪರಿಗಣಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಆದೇಶ ಹೊರಡಿಸಿರುವ ನ್ಯಾಯಾಲಯ, ಈ ಆದೇಶಕ್ಕೆ ತಪ್ಪಿದ್ದಲ್ಲಿ ಚುನಾವಣಾಧಿಕಾರಿಯು ಗಂಭೀರವಾದ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English