ಉಪ ಚುನಾವಣೆ ಮತದಾನಕ್ಕೆ ಕೇವಲ ಎರಡು ದಿನ ಮೊದಲು ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡಿದ ಕಾಂಗ್ರೆಸ್ : ಸಂಸದ ಬ್ರಿಜೇಶ್ ಚೌಟ ಆರೋಪ

10:04 PM, Wednesday, November 13th, 2024
Share
1 Star2 Stars3 Stars4 Stars5 Stars
(5 rating, 1 votes)
Loading...

ಮಂಗಳೂರು: ಮತಕ್ಕಾಗಿ ಜನರನ್ನು ಓಲೈಕೆ ಮಾಡುವುದೇ ಕಾಂಗ್ರೆಸ್‌ನ ಏಕೈಕ ಅಜೆಂಡಾ. ಹೀಗಾಗಿ, ಉಪ ಚುನಾವಣೆ ಮತದಾನಕ್ಕೆ ಕೇವಲ ಎರಡು ದಿನ ಬಾಕಿಯಿದ್ದಾಗ ಸಿದ್ದರಾಮಯ್ಯ ಸರ್ಕಾರ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡಿ ಮತದಾರರನ್ನು ಸೆಳೆಯಲು ಯತ್ನಿಸಿರುವುದಾಗಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಆರೋಪಿಸಿದ್ದಾರೆ.

ಶಿಗ್ಗಾಂವಿ ಸಹಿತ ಉಪ ಚುನಾವಣೆ ನಡೆಯುವ ವಿಧಾನಸಭಾ ಕ್ಷೇತ್ರಗಳಲ್ಲಿ ಕೆಲವು ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆ ಕಂತಿನ ಹಣ ಖಾತೆಗೆ ಬಿಡುಗಡೆ ಮಾಡಿರುವುದಕ್ಕೆ ಪ್ರತಿಕ್ರಿಯಿಸಿರುವ ಕ್ಯಾ. ಚೌಟ ಅವರು, ಇದು ಕಾಂಗ್ರೆಸ್‌ ಸರ್ಕಾರವು ಮತದಾರರಿಗೆ ನೀಡಿರುವ ದೊಡ್ಡಮಟ್ಟದ ಆಮಿಷವಾಗಿದೆ. ಗೃಹಲಕ್ಷ್ಮಿ ಯೋಜನೆ ಕಂತು ಪಾವತಿ ವಿಳಂಬಗೊಳಿಸಿ ಅದನ್ನು ಮತದಾನಕ್ಕೆ ಗಂಟೆಗಳಷ್ಟೇ ಬಾಕಿಯಿರುವಾಗ ಬಿಡುಗಡೆ ಮಾಡುವುದು ಕಾಂಗ್ರೆಸ್ ಸರ್ಕಾರದ ಚಾಳಿಯಾಗಿದೆ. ಕಾಂಗ್ರೆಸ್ ಚುನಾವಣೆಗಳನ್ನು ಗೆಲ್ಲಲು ಕಪಟ ದಾರಿ ಹಿಡಿಯುವುದು ಹೊಸದಲ್ಲ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಪ್ರತಿ ಬಾರಿಯೂ ಚುನಾವಣೆಗೆ ಮುನ್ನ ಸರ್ಕಾರದ ಹಣದಲ್ಲಿ ಬೇಳೆ ಬೇಯಿಸಿಕೊಳ್ಳಲು ನೋಡುತ್ತಿದೆ” ಎಂದು ಆರೋಪಿಸಿದ್ದಾರೆ.

ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲೂ ಕಾಂಗ್ರೆಸ್ ಸರ್ಕಾರ ಚುನಾವಣೆಗೆ ಎರಡು ದಿನದ ಮುನ್ನ ಫಲಾನುಭವಿಗಳ ಖಾತೆಗೆ ಬಾಕಿ ಮೊತ್ತ ಜಮಾ ಮಾಡಿತ್ತು. ಬಳಿಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿಲ್ಲ ಎಂಬ ಸಮಜಾಯಿಷಿ ಕೊಡುವ ಯತ್ನ ನಡೆಸಿತ್ತು. ಚುನಾವಣೆಗಳಿಲ್ಲದ ಕಾರಣ ದೀರ್ಘ ನಿದ್ದೆಯಲ್ಲಿದ್ದ ಸರ್ಕಾರ ಉಪಚುನಾವಣೆ ಬಂದಾಗ ಎಚ್ಚೆತ್ತುಕೊಂಡಿದೆ. ಮತದಾನದ ಮುನ್ನಾದಿನ ಗೃಹಲಕ್ಷ್ಮಿ ಬಾಕಿ ಹಣ ಬಿಡುಗಡೆಗೊಳಿಸುವ ಮೂಲಕ ಮತದಾರರನ್ನು ಓಲೈಸಲು ಅಗ್ಗದ ರಾಜಕೀಯ ಅನೈತಿಕತೆಯ ಮೊರೆಹೋಗಿದೆ. ಹೀಗಾಗಿ, ನೀತಿ ಸಂಹಿತೆ ಉಲ್ಲಂಘಿಸಿರುವ ರಾಜ್ಯ ಸರ್ಕಾರದ ವಿರುದ್ಧ ಈ ಕೂಡಲೇ ಚುನಾವಣಾ ಆಯೋಗ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಸದರು ಒತ್ತಾಯಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English