ಯತ್ನ, ಪ್ರಾರ್ಥನೆ ಮತ್ತು ಪ್ರಾಮಾಣಿಕತೆಯಿಂದ ದೇಶದ ಪ್ರಗತಿ ಸಾಧ್ಯ : ಸರಸ್ವತಿಶಂಕರಾಚಾರ್ಯ ಸ್ವಾಮೀಜಿ

12:43 AM, Friday, November 15th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಉಜಿರೆ: ಪ್ರಯತ್ನ, ಪ್ರಾರ್ಥನೆ ಮತ್ತು ಪ್ರಾಮಾಣಿಕತೆಯಿಂದ ದೇಶದ ಸರ್ವತೋಮುಖ ಪ್ರಗತಿ ಸಾಧ್ಯ ಎಂದು ಕಂಚಿಕಾಮಕೋಟಿ ಪೀಠಾಧಿಪತಿ ಪೂಜ್ಯ ಶಂಕರವಿಜಯೇಂದ್ರ ಸರಸ್ವತಿಶಂಕರಾಚಾರ್ಯ ಸ್ವಾಮೀಜಿ ಹೇಳಿದರು.

ಅವರು ಗುರುವಾರ ಧರ್ಮಸ್ಥಳದಲ್ಲಿ ಅನ್ನಪೂರ್ಣ ಭೋಜನಾಲಯದ ಮೇಲಂತಸ್ತಿನಲ್ಲಿ ಸುಸಜ್ಜಿತ ಆಸನ ಸೌಲಭ್ಯವನ್ನೊಳಗೊಂಡಿರುವ ವಿಸ್ತೃತ ಭೋಜನಾಲಯವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಶುಭ ಹಾರೈಸಿದರು.

ತಾಯಿ-ತಂದೆ, ಗುರುಗಳು ಮತ್ತು ಅತಿಥಿಗಳನ್ನು ನಾವು ದೇವರಂತೆ ಗೌರವಿಸಿ, ಸತ್ಕರಿಸುವುದು ನಮ್ಮ ಸಂಸ್ಕೃತಿ ಮತ್ತು ಪರಂಪರೆ ಆಗಿದೆ. ದೇಶಪ್ರೇಮದೊಂದಿಗೆ ಪ್ರಾಮಾಣಿಕತೆ, ಕಲೆ, ಸೌಂದರ್ಯವನ್ನು ಉಳಿಸಿ, ಬೆಳೆಸಬೇಕು. ಆಲಸ್ಯ, ಆಡಂಬರ, ಕಾಲಹರಣ ಸಲ್ಲದು. ಎಲ್ಲರು ಶ್ರಮಪಟ್ಟು ಕೆಲಸ ಮಾಡಬೇಕು. ಸತ್ಕಾರ್ಯ ಮಾಡುವವರನ್ನು ಪ್ರೋತ್ಸಾಹಿಸಿ ಗೌರವಿಸಬೇಕು. ಪರಸ್ಪರ ಪ್ರೀತಿ, ವಿಶ್ವಾಸ ಗೌರವದಿಂದ ಉದಾರ ಹೃದಯಿಗಳಾಗಿ ಸಾರ್ಥಕ ಜೀವನ ಮಾಡಿದರೆ ಸುಖ-ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಅವರು ಹೇಳಿದರು.

ಧರ್ಮಸ್ಥಳದ ಅನ್ನದಾನ ಮತ್ತು ನ್ಯಾಯದಾನ ಪದ್ಧತಿಯನ್ನು ಶ್ಲಾಘಿಸಿದರು. ಆರ್ಥಿಕ ದಾರಿದ್ರö್ಯ ಮತ್ತು ಮನೋ ದಾರಿದ್ರ್ಯ ನಿರ್ಮೂಲನೆ ಆಗಿ ರಾಜಕೀಯ ರಹಿತವಾದ ಸಾಮಾಜಿಕ ನೇತೃತ್ವದಿಂದ ಲೋಕಕಲ್ಯಾಣವಾಗುತ್ತದೆ. ಎಲ್ಲರೂ ಸತ್ಯ, ಧರ್ಮ ಮತ್ತು ನ್ಯಾಯ ಮಾರ್ಗದಲ್ಲಿ ನಡೆದು ಅಧಿಕಾರ, ಮಂತ್ರಶಕ್ತಿ ಮತ್ತು ಆರ್ಥಿಕ ಶಕ್ತಿಯ ಸದುಪಯೋಗವಾಗಬೇಕು. ಭಕ್ತಿ ಮತ್ತು ಧರ್ಮಕ್ಕಿಂತಲೂ ಪರಸ್ಪರ ಪ್ರೀತಿ ಮತ್ತು ವಿಶ್ವಾಸವೇ ಮುಖ್ಯ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.

ಕೇರಳದಲ್ಲಿ ಅಭಿಮಾನ, ತಮಿಳುನಾಡಿನಲ್ಲಿ ಅಧ್ಯಯನ, ಆಂಧ್ರದಲ್ಲಿ ಆಚಾರ ಮತ್ತು ಕರ್ನಾಟಕದಲ್ಲಿ ಅನ್ನದಾನ ಶ್ರೇಷ್ಠವಾಗಿದೆ ಎಂದು ಸ್ವಾಮೀಜಿ ಹೇಳಿದರು.

ಧರ್ಮಸ್ಥಳದ ಧರ್ಮಾಧಿಕಾರಿಯೂ, ದಾನಾಧಿಕಾರಿಯೂ ಆದ ವೀರೇಂದ್ರ ಹೆಗ್ಗಡೆಯವರನ್ನು “ಮಲೆನಾಡು ರತ್ನ” ಬಿರುದು ನೀಡಿ ಸ್ವಾಮೀಜಿ ಗೌರವಿಸಿದರು.

ನ.25 ರಂದು ನಡೆಯಲಿರುವ ಹೆಗ್ಗಡೆಯವರ ಜನ್ಮದಿನಾಚರಣೆಗೆ ಸ್ವಾಮೀಜಿ ಶುಭಾಶೀರ್ವಾದ ಮಾಡಿದರು.

ಅನ್ನಛತ್ರದ ಮೇಲಂತಸ್ತಿನಲ್ಲಿ ಸುಸಜ್ಜಿತ ಆಸನಗಳನ್ನೊಳಗೊಂಡ ವಿಸ್ತೃತ ಭೋಜನಾಲಯವನ್ನು ಕಾರ್ತಿಕ ಮಾಸದ ಅಶ್ವಿನಿ ನಕ್ಷತ್ರದಲ್ಲಿ ಉದ್ಘಾಟಿಸುವ ಸಂದರ್ಭ ವರುಣ ಕೃಪೆಯೂ ಆಗಿರುವುದಕ್ಕೆ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದರು.

ಕಾಸರಗೋಡು ಎಡನೀರು ಮಠದ ಪೂಜ್ಯ ಸಚ್ಚಿದಾನಂದ ಸ್ವಾಮೀಜಿ ಆಶೀವರ್ಚನ ನೀಡಿ, ಧರ್ಮಸ್ಥಳದಲ್ಲಿ ನಿತ್ಯ, ನಿರಂತರ ನಡೆಯುತ್ತಿರುವ ಅನ್ನದಾನ, ವಿದ್ಯಾದಾನ, ಔಷಧಿ ದಾನ ಮತ್ತು ಅಭಯ ದಾನ ಎಂಬ ಚತುರ್ವಿಧ ದಾನಗಳಲ್ಲಿ ಅನ್ನದಾನ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರ ದಾನವಾಗಿದ್ದು ಇಲ್ಲಿಗೆ ಬರುವ ಭಕ್ತರು ಅದನ್ನು ದೇವರ ಪ್ರಸಾದವೆಂದೇ ಸ್ವೀಕರಿಸುತ್ತಾರೆ. ಇತರ ಎಲ್ಲಾ ಕ್ಷೇತ್ರಗಳಿಗೂ ಧರ್ಮಸ್ಥಳದ ವ್ಯವಸ್ಥಿತವಾದ ಮತ್ತು ಶಿಸ್ತುಬದ್ಧವಾದ ಅನ್ನದಾನ ಮಾದರಿಯಾಗಿದೆ ಎಂದು ಸ್ವಾಮೀಜಿ ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಧರ್ಮಸ್ಥಳಕ್ಕೆ ಬರುವ ಭಕ್ತಾದಿಗಳು ಪ್ರಸಾದ ರೂಪದಲ್ಲಿ ಸ್ವೀಕರಿಸುವ ಅನ್ನದಾನವನ್ನು ತೃಪ್ತಿಕರವಾಗಿ, ಶಾಂತಿ ಮತ್ತು ನೆಮ್ಮದಿಯಿಂದ ಸ್ವೀಕರಿಸುವಂತೆ ಮಾಡಲು ಅನ್ನಛತ್ರದಲ್ಲಿ ಆಧುನಿಕ ಸೌಲಭ್ಯಗಳನ್ನು ಬಳಸಲಾಗಿದೆ.

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಅನ್ನದಾನಕ್ಕೆ ಭಕ್ತಾದಿಗಳು ಶ್ರದ್ಧಾ-ಭಕ್ತಿಯಿಂದ ಅಕ್ಕಿ, ತರಕಾರಿ, ದವಸ-ಧಾನ್ಯಗಳನ್ನು ಉದಾರ ಕೊಡುಗೆಯಾಗಿ ಅರ್ಪಿಸುತ್ತಿದ್ದಾರ ಎಂದು ಹೆಗ್ಗಡೆಯವರು ಸಂತಸ ವ್ಯಕ್ತಪಡಿಸಿದರು.

ಪೂಜ್ಯ ಕಂಚಿಶ್ರೀಗಳು ನಮ್ಮ ಸನಾತನ ಧರ್ಮ, ಸಂಸ್ಕೃತಿ ಮತ್ತು ಪರಂಪರೆ ಉಳಿಸಿ ಬೆಳೆಸಲು ಮಾಡುತ್ತಿರುವ ನಿಸ್ವಾರ್ಥ ಸೇವೆ ಬಗ್ಗೆ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ದಕ್ಷಿಣ ಕನ್ನಡ ಜಿಲ್ಲಾ ಕೆ.ಪಿ.ಸಿ.ಸಿ. ಅಧ್ಯಕ್ಷ ಕೆ. ಹರೀಶ್ ಕುಮಾರ್ ಮತ್ತು ಡಿ. ಸುರೇಂದ್ರ ಕುಮಾರ್ ಉಪಸ್ಥಿತರಿದ್ದರು.

ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಅನ್ನಪೂರ್ಣ ಭೋಜನಾಲಯದ ಪ್ರಬಂಧಕ ಸುಬ್ರಹ್ಮಣ್ಯ ಪ್ರಸಾದ್ ಧನ್ಯವಾದವಿತ್ತರು.

ಡಾ. ಶ್ರೀಧರ ಭಟ್ ಮತ್ತು ಸುನಿಲ್ ಪಂಡಿತ್ ಕಾರ್ಯಕ್ರಮ ನಿರ್ವಹಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English