ಮಂಗಳೂರು : ದಾಸ ಪರಂಪರೆಗೆ ವಿಶೇಷ ಕೊಡುಗೆಯನ್ನು ಕೊಟ್ಟು ಇಂದು ಭಕ್ತಿ ಪಂಥದ ಪರಂಪರೆಯನ್ನು ಬೆಳಗಿಸಲು ಶ್ರಮಿಸಿದ ಧೀಮಂತ ವ್ಯಕ್ತಿ ಕನಕದಾಸರು ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದರು.
ಅವರು ಇಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯೋಜನೆಯಲ್ಲಿ ಮಂಗಳೂರು ಸರಕಾರಿ ನೌಕರರ ಸಂಘದ ನಂದಿನಿ ಸಭಾಭವನದಲ್ಲಿ ನಡೆದ ಕನಕ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದಾಸ ಸಾಹಿತ್ಯ ದಾಸ ಪದಗಳ ಮುಖಿನ ನಮ್ಮಲ್ಲಿ ಭಕ್ತಿ ಜಾಗೃತಿಯನ್ನು ಮೂಡಿಸಿದ ಕನಕದಾಸರ ಆದರ್ಶವನ್ನು ನಮ್ಮ ಜೀವನದಲ್ಲಿ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.
ಉಪನ್ಯಾಸ ನೀಡಿದ ನಿವೃತ್ತ ಪ್ರಾಧ್ಯಾಪಕ ಡಾ.ಶಿವರಾಂ ಶೆಟ್ಟಿ ಮಾತನಾಡಿ 500 ವರ್ಷಗಳ ಹಿಂದಿನ ಕನಕರ ಜೀವನ, ಯೋಧ ಜೀವನವಾಗಿತ್ತು. ಬಳಿಕ ಬದುಕಿನ ಸತ್ಯ ಸತ್ಯತೆಯನ್ನು ತಿಳಿದು ಅಹಂಕಾರವನ್ನು ಬದಿಗೊತ್ತಿ, ಸಾಮರಸ್ಯ ಸಹಬಾಳ್ವೆಯ ಬದುಕನ್ನು ಕಂಡವರು ಕನಕದಾಸರು. ಕಾಗಿನೆಲೆ ಆದಿ ಕೇಶವನನ್ನು ಎನ್ನ ಮನವೇ ದೇಗುಲವೆಂದುಕೊಂಡು ಸಾಕ್ಷಾತ್ಕಾರದ ಬದುಕನ್ನು ಕಂಡವರು ಕನಕದಾಸರು ಎಂದು ಹೇಳಿದರು
ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಡಿಎಸ್ ಗಟ್ಟಿ ಮಾತನಾಡಿ, ಭಕ್ತಿ ಪಂಥದ ನಾದವನ್ನು ಇಡೀ ಮನುಕುಲಕ್ಕೆ ದಾಸ ಚಿಂತನೆಯ ಮೂಲಕ ಸಾರಿದವರು ಕನಕದಾಸರು. ಅವರನ್ನು ನೆನಪಿಸಿಕೊಳ್ಳುವಂತಹ ಇಂತಹ ಕಾರ್ಯಕ್ರಮಗಳು ಮತ್ತಷ್ಟು ಮೂಡಿ ಬರಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಂಗಳೂರು ಕರಾವಳಿ ಕುರುಬರ ಸಂಘ ಅಧ್ಯಕ್ಷ ಕೆ.ಎನ್ ಬಸವರಾಜಪ್ಪ, ಜಿಲ್ಲಾ ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ್ ಎಚ್ ಬೆಂಗ್ರಿ, ಮಂಗಳೂರು ಕರಾವಳಿ ಹಾಲುಮತ ಕುರುಬರ ಸಂಘದ ಅಧ್ಯಕ್ಷ ಚಂದ್ರಪ್ಪ ಬಿ. ಕೆ, ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಜಿಲ್ಲಾಧ್ಯಕ್ಷ ಮಂಜುನಾಥ ಬಿ.ಎ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿದರು, ಬಬಿತಾ ನಿರೂಪಿಸಿದರು.
Click this button or press Ctrl+G to toggle between Kannada and English