ಮಡಿಕೇರಿ : ಸಮ ಸಮಾಜದ ಸೃಷ್ಟಿಗಾಗಿ ಹೋರಾಡಿದ ಸಾಮಾಜಿಕ ಹರಿಕಾರರು, ಸಮಾಜ ಸುಧಾರಕರಾದ ಬಸವಣ್ಣನವರು ಪ್ರತಿಪಾದಿಸಿದ ಆದರ್ಶಗಳು ನಮಗೆ ಸದಾಕಾಲ ವಿಶ್ವಭ್ರಾತೃತ್ವದ ಸನ್ಮಾರ್ಗದಲ್ಲಿ ನಡೆಯುವ ಬೆಳಕನ್ನು ನೀಡುತ್ತಿದೆ. ಮೇಲು-ಕೀಳು ಎಂಬ ಅಸಮಾನತೆಯ ಸಮಾಜವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಹೋರಾಟ ನಡೆಸಿದ್ದ ಸಾಮಾಜಿಕ ಕ್ರಾಂತಿಕಾರಿ ಬಸವಣ್ಣ ಅವರನ್ನು ಓರ್ವ ಹೇಡಿ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವಮಾನಿಸಿರುವುದು ನಿಜಕ್ಕೂ ಖಂಡನೀಯ. ನಿಜಕ್ಕೂ ಬಿಜೆಪಿ ನಾಯಕರು ಬಸವಣ್ಣನವರ ತತ್ವ ಆದರ್ಶಗಳನ್ನು ಪಾಲಿಸುತ್ತಿದ್ದಾರೆ ಎಂದಾದರೆ ತಕ್ಷಣ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ಆಗ್ರಹಿಸಿದ್ದಾರೆ .
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, “ತನ್ನ ಬಣ್ಣಿಸಬೇಡ, ಇದಿರು ಹಳಿಯಬೇಡ” ಎಂದಿದ್ದ ಬಸವಣ್ಣನವರ ಹೆಸರನ್ನು ಯತ್ನಾಳ್ ಅವರು ತಮ್ಮ ದ್ವೇಷ ಭಾಷಣಕ್ಕೆ ಬಳಸಿರುವುದು ತಮ್ಮ ಸ್ಥಾನಕ್ಕೆ ಶೋಭೆ ತರುವಂತದಲ್ಲ. ಬಸವಣ್ಣನವರನ್ನೇ ಹೇಡಿ ಎಂದಿರುವ ಯತ್ನಾಳ್ ವಿವೇಕ, ವಿವೇಚನೆ ಇಲ್ಲದೆ ಯಾರನ್ನೋ ಮೆಚ್ಚಿಸಲು ಅನಾಗರಿಕವಾಗಿ ಮಾತನಾಡುತ್ತಿರುವುದು ದುರಂತ. ಓರ್ವ ಜನಪ್ರತಿನಿಧಿಯಾಗಿ ಯತ್ನಾಳ್ ಬಸವಣ್ಣನವರ ಬಗ್ಗೆ ಅವಮಾನಕಾರಿಯಾಗಿ ಮಾತನಾಡಿರುವುದು ಅಕ್ಷಮ್ಯ ಅಪರಾಧ.
ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ನಮ್ಮ ಕಾಂಗ್ರೆಸ್ ಸರ್ಕಾರ ಯತ್ನಾಳ್ ಅವರ ಹೇಳಿಕೆಯನ್ನು ಖಂಡಿಸುತ್ತದೆ. ಬಿಜೆಪಿಯವರಿಗೆ ಮಾನ-ಮರ್ಯಾದೆ ಎಂಬುದಿದ್ದರೆ ತಕ್ಷಣ ಯತ್ನಾಳ್ ಅವರನ್ನು ಪಕ್ಷದಿಂದ ಕಿತ್ತೊಗೆಯಲಿ. ಇಲ್ಲದಿದ್ದರೆ ನಮ್ಮದು ಬಸವಣ್ಣನವರನ್ನು ಗೌರವಿಸದ ಪಕ್ಷ ಎಂದು ಸಾರ್ವಜನಿಕವಾಗಿ ಹೇಳಿಕೊಳ್ಳಲಿ. ಯತ್ನಾಳ್ ಅವರೇ, ಬಸವಣ್ಣನಿಗೆ ಜನ್ಮ ಕೊಟ್ಟ ಜಿಲ್ಲೆಯಲ್ಲಿಯೇ ಬಸವಣ್ಣನ ಹೆಸರು ಇಟ್ಟುಕೊಂಡು ಬದುಕುತ್ತಿರುವ ನೀವು ಬಸವಣ್ಣನ ಚರಿತ್ರೆ ಅರಿಯುವ ಕೆಲಸ ಮಾಡಿ, ಇನ್ನಾದರೂ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಕೆಲಸ ಮಾಡಿ ಎಂದು ಹೇಳೀದ್ದಾರೆ.
Click this button or press Ctrl+G to toggle between Kannada and English