ಧರ್ಮಸ್ಥಳ ಲಕ್ಷದೀಪೋತ್ಸವ : ಸಾಹಿತ್ಯ ಸಮ್ಮೇಳನದ 92ನೇ ಅಧಿವೇಶನ

12:34 AM, Sunday, December 1st, 2024
Share
1 Star2 Stars3 Stars4 Stars5 Stars
(No Ratings Yet)
Loading...

ಉಜಿರೆ: ಭಾರತ ಜನನನಿಯ ತನುಜಾತೆಯಾದ ಕರ್ನಾಟಕದಲ್ಲಿ ಶ್ರಮಸಂಸ್ಕೃತಿಯ ಲೋಪದಿಂದಾಗಿ ಕನ್ನಡ ಸೊರಗುತ್ತಿದೆ. ಯಾವುದೇ ಭಾಷೆಗೆ ವಿಚಾರಗಳನ್ನು ಭಾವನೆಗಳನ್ನು ಮತ್ತು ವ್ಯವಹಾರವನ್ನು ಸ್ಪಷ್ಟವಾಗಿ ಅಭಿವ್ಯಕ್ತಿಗೊಳಿಸುವ ಶಕ್ತಿ, ಸಾಮರ್ಥ್ಯ ಮತ್ತು ಪ್ರಭುತ್ವ ಇರಬೇಕು. ಈ ದಿಸೆಯಲ್ಲಿ ಪ್ರಾದೇಶಿಕ ವೈವಿಧ್ಯತೆಯ ಸೊಗಡು ಇದ್ದರೂ ಕನ್ನಡ ಸಮೃದ್ಧ ಭಾಷೆಯಾಗಿದೆ. ಪದಸಂಪತ್ತಿಗೆ ಕೊರತೆ ಇಲ್ಲ. ಯಾವುದೇ ಏರಿಳಿತ, ಅಡೆ-ತಡೆ ಎದುರಿಸುವ ಸಾಮರ್ಥ್ಯ ಕನ್ನಡಕ್ಕಿದೆ ಎಂದು ಶತಾವಧಾನಿ ಆರ್. ಗಣೇಶ ಹೇಳಿದರು.

ಅವರು ಶನಿವಾರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಸಾಹಿತ್ಯ ಸಮ್ಮೇಳನದ 92ನೆ ಅಧಿವೇಶನ ಉದ್ಘಾಟಿಸಿ ಮಾತನಾಡಿದರು.

ಯಾವುದೇ ವ್ಯಕ್ತಿ ಕೂಡಾ ಕನ್ನಡವನ್ನು ಸುಲಭದಲ್ಲಿ ಕಲಿಯಬಹುದು. ಇಂದು ಕನ್ನಡದ ಬಗ್ಗೆ ಆಸಕ್ತಿಯಿಂದ ಆಳವಾದ ಅಧ್ಯಯನ ಮತ್ತು ಸಂಶೋಧನೆ ಮಾಡುವವರಿಲ್ಲ. ವಿಮರ್ಶಕರಿಲ್ಲ. ದಾಕ್ಷಿಣ್ಯ ಮತ್ತು ಭಯದಿಂದ ಯಾವುದೇ ಹೊಸ ಪುಸ್ತಕ ಕಾದಂಬರಿ ಪ್ರಕಟವಾದರೂ ಯಾರೂ ವಿಮರ್ಶೆ ಮಾಡುವ ಗೋಜಿಗೆ ಹೋಗುವುದಿಲ್ಲ.

ಎಲ್ಲಾ ಕಲೆಗಳ ಜೀವಾಳ ರಸ. ಆನಂದದ ಮೂಲ ಕಲೆ ಮತ್ತು ಸಾಹಿತ್ಯದಲ್ಲಿದೆ. ಯುವಜನತೆ ಹೆಚ್ಚು ಓದುವ ಮತ್ತು ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಇಂದು ಗಮಕಿಗಳು ಕೂಡಾ ಉಪೇಕ್ಷಿತರಾಗಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಸಾಹಿತ್ಯ ಸಮಾಜದ ಪ್ರತಿಬಿಂಬ: ಎರಡು ಸಾವಿರ ವರ್ಷಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಮ್ಮ ಕನ್ನಡ ಭಾಷೆ ಮತ್ತು ಸಾಹಿತ್ಯ ಕನ್ನಡಿಗರ ಶ್ರೀಮಂತ ಸಂಸ್ಕೃತಿಯ ಸಂಕೇತವಾಗಿದೆ. ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಧರ್ಮದ ನಡುವೆ ಅವಿನಾಭಾವ ಸಂಬAಧವಿದ್ದು ಸಾಹಿತ್ಯ ಸಮಾಜದ ಪ್ರತಿಬಿಂಬವಾಗಿದೆ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಸ್ವಾಗತ ಭಾಷಣದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಸಾಹಿತ್ಯವು ಸರ್ವರಿಗೆ ಹಿತವನ್ನುಂಟುಮಾಡುತ್ತದೆ. ಬುದ್ಧಿ-ಭಾವವನ್ನು ಪರಿಶುದ್ಧಗೊಳಿಸಿ ಬದುಕಿಗೆ ಉತ್ತಮ ಸಂಸ್ಕಾರ ನೀಡುತ್ತದೆ. ವಚನಕಾರರು, ಕೀರ್ತನಕಾರರು, ತ್ರಿಪದಿಕಾರರು ತಮ್ಮ ನಡೆ-ನುಡಿಯ ಮೂಲಕ ಜನರಿಗೆ ಜೀವನತತ್ವವನ್ನು ಸರಳವಾಗಿ ಬೋಧಿಸಿದರು.

ಸರಳಜೀವನದೊಂದಿಗೆ ಲೋಕವನ್ನು ಪ್ರೀತಿಯಿಂದ ಕಾಣಬೇಕೆಂದು ಪ್ರತಿಪಾದಿಸಿದರು.

ಪುರಾಣಪ್ರವಚನ, ಹಳೆಗನ್ನಡ ಕಾವ್ಯಗಳ ಓದು, ನಾಟಕಪ್ರದರ್ಶನಗಳು ಮನೋರಂಜನೆಯ ಜೊತೆಗೆ ಅಪಾರ ತಿಳುವಳಿಕೆ, ಜೀವನಾನುಭವವನ್ನು ನೀಡುತ್ತವೆ. ಜನಪದ ಸಾಹಿತ್ಯ ರಚನೆ ಮಾಡುವವರು. ಅಕ್ಷರಜ್ಞಾನವಿಲ್ಲದಿದ್ದರೂ ಅಪಾರ ಜೀವನಾನುಭವ ಹೊಂದಿದ ಆಶುಕವಿಗಳಾಗಿದ್ದರು.

ಇಂದು ಅಂತರ್ಜಾಲದಲ್ಲಿ ಸಾಹಿತ್ಯ, ಕಲೆ, ಸಂಗೀತದ ಬಗ್ಯೆ ಚರ್ಚೆಗಳು ನಡೆಯುತ್ತಿವೆ. ತಂತ್ರಜ್ಞಾನದ ಬಳಕೆ ಹೊಸ ಮನ್ವಂತರವನ್ನೇ ಸೃಷ್ಟಿಸಿದೆ. ಸಾಹಿತ್ಯದ ಗುರಿ ಮಾನವೀಯತೆ, ಶಾಂತಿ ಮತ್ತು ಸೌಹಾರ್ದತೆ ಮೂಡಿಸುವುದೇ ಆಗಿದೆ ಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟರು.

ಧರ್ಮಸ್ಥಳದಿಂದ ಸಾಹಿತ್ಯ ಕ್ಷೇತ್ರಕ್ಕೆ ಕಾಯಕಲ್ಪ: ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸಲು ಧರ್ಮಸ್ಥಳ ಕ್ಷೇತ್ರದ ವತಿಯಿಂದ ನಿರಂತರ ಪ್ರೋತ್ಸಾಹ, ಮಾರ್ಗದರ್ಶನ ನೀಡಲಾಗುತ್ತದೆ.

ಧರ್ಮಸ್ಥಳದಲ್ಲಿ ಆಷಾಢ ಮತ್ತು ಶ್ರಾವಣ ಮಾಸಗಳಲ್ಲಿ ನಡೆಯುವ ಪುರಾಣ ವಾಚನ-ಪ್ರವಚನ, ಶಾಲಾ-ಕಾಲೇಜುಗಳಲ್ಲಿ ಕನ್ನಡಪರ ವಿಚಾರಸಂಕಿರಣ, ಸಭೆ, ಸಮಾರಂಭಗಳು ಇತ್ಯಾದಿಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ.

ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದಲ್ಲಿ ಏಳು ಸಾವಿರ ಪ್ರಾಚೀನ ಹಸ್ತಪ್ರತಿಗಳನ್ನು ಸಂರಕ್ಷಿಸಲಾಗಿದೆ.

“ಮಂಜುವಾಣಿ” ಮತ್ತು “ನಿರಂತರ” ಎಂಬ ಎರಡು ಮಾಸಪತ್ರಿಕೆಗಳನ್ನು ಪ್ರಕಟಿಸಲಾಗುತ್ತದೆ.

ಯಕ್ಷಗಾನ ಮೇಳದ ಬಯಲಾಟಗಳ ಮೂಲಕ ಕಲೆ, ಸಾಹಿತ್ಯ ಮತ್ತು ಧರ್ಮ ಪ್ರಭಾವನೆಗೆ ಪ್ರೋತ್ಸಾಹ ನೀಡಲಾಗುತ್ತದೆ.

ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ನೈತಿಕ ಮತ್ತು ಮಾನವೀಯಮೌಲ್ಯಗಳನ್ನು ಪ್ರಕಟಿಸಿ ಶಾಲೆಗಳಿಗೆ ವಿತರಿಸಲಾಗುತ್ತದೆ.

ಗ್ರಾಮೀಣ ಪ್ರದೇಶಗಳಲ್ಲಿ ಗ್ರಂಥಾಲಯಗಳನ್ನು ತೆರೆದು ಪುಸ್ತಕ ಓದುವ ಹವ್ಯಾಸ ಬೆಳೆಸಲಾಗುತ್ತದೆ. ಸಾಹಿತ್ಯವನ್ನು ಓದುವ, ಬರೆಯುವ ಮತ್ತು ಸಾಹಿತ್ಯದ ಬಗ್ಯೆ ಚಿಂತನ-ಮಥನ ನಿತ್ಯವೂ ನಡೆಯಬೇಕು ಎಂದು ಹೆಗ್ಗಡೆಯವರು. ಕಿವಿಮಾತು ಹೇಳಿದರು.

ಇತಿಹಾಸ ಕಾದಂಬರಿಗಳ ಬಗ್ಗೆಯೂ ಪ್ರಾಮಾಣಿಕ ಮೌಲ್ಯಮಾಪನ ಮತ್ತು ವಿಮರ್ಶೆ ಮಾಡಬೇಕು ಎಂದು ಎಂದು ಅಧ್ಯಕ್ಷತೆ ವಹಿಸಿದ ನಿವೃತ್ತ ಪ್ರಾಂಶುಪಾಲ ಉಡುಪಿ ಪಾದೇಕಲ್ಲು ವಿಷ್ಣುಭಟ್ ಹೇಳಿದರು. ಇಂದು ಸಾಹಿತ್ಯದ ವ್ಯಾಪ್ತಿ ತುಂಬಾ ಬೆಳೆಯುತ್ತಿದೆ. ಸಾಹಿತ್ಯದ ಎಲ್ಲಾ ಪ್ರಕಾರಗಳ ವಿಮರ್ಶೆ ಮತ್ತು ಮೌಲ್ಯಮಾಪನ ಅನಿವಾರ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಾಚೀನ ಗ್ರಂಥಗಳ ಮುದ್ರಣ, ಸಂಪಾದನೆ ಮತ್ತು ಪ್ರಕಾಶನ ಆಗಬೇಕು. ಕನ್ನಡ ಭಾಷೆಯನ್ನು ಸಮರ್ಪಕವಾಗಿ ನಿರ್ವಹಿಸಿ ಮುಂದಿನ ಜನಾಂಗಕ್ಕೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮದಾಗಿದೆ ಎಂದರು.

ಕನ್ನಡ ಬಲಿಷ್ಠವಾಗಿ ಬೆಳೆಯಲು ವ್ಯಾಕರಣ, ಛಂದಸ್ಸು, ಅಲಂಕಾರಶಾಸ್ತç, ಕಾವ್ಯ ಮೀಮಾಂಸೆ, ಭಾಷಾ ಶಾಸ್ತç, ನಿಘಂಟು ಶಾಸ್ತç ಮತ್ತು ಹಸ್ತ ಪ್ರತಿ ಶಾಸ್ತçದ ಬಗ್ಗೆ ಆಳವಾದ ಅಧ್ಯಯನ ಮತ್ತು ಸಂಶೋಧನೆ ನಡೆಸಬೇಕು ಎಂದು ಅವರು ಸಲಹೆ ನೀಡಿದರು.

ಸಾಹಿತ್ಯ ಧರ್ಮವನ್ನು ನಿರ್ದೇಶಿಸುತ್ತದೆ ಹಾಗೂ ಪೋಷಿಸುತ್ತದೆ. ಧರ್ಮ ಮತ್ತು ಸಾಹಿತ್ಯ ಪರಸ್ಪರ ಪೂರಕವಾಗಿದ್ದಾಗ ಮಾತ್ರ ಸುಖ-ಶಾಂತಿ, ನೆಮ್ಮದಿಯ ಜೀವನದ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು .

ಡಾ. ಪ್ರಮೀಳಾ ಮಾಧವ್ “ಸ್ತಿçÃಯರ ಸ್ವಂತ ಸುಖಕ್ಕೆ ಸಾಹಿತ್ಯದ ಅರಿವಿನ ಅವಶ್ಯಕತೆ” ಬಗ್ಯೆ, ಡಾ. ಬಿ.ವಿ. ವಸಂತ ಕುಮಾರ್ “ಜನಪದ ಸಾಹಿತ್ಯವನ್ನು ಉಳಿಸಿ, ಬೆಳೆಸುವ ಮಾರ್ಗೋಪಾಯಗಳು” ಎಂಬ ವಿಷಯದ ಬಗ್ಯೆ ಹಾಗೂ ಪ್ರೊ. ಮೊರಬದ ಮಲ್ಲಿಕಾರ್ಜುನ “ಇಂದಿನ ತಾಂತ್ರಿಕ ಯುಗದಲ್ಲಿ ಸಾಹಿತ್ಯದ ಅವಶ್ಯಕತೆ ಮತ್ತು ಸಾಹಿತ್ಯವನ್ನು ಜನಪ್ರಿಯಗೊಳಿಸುವ ಮಾರ್ಗೋಪಾಯಗಳು” ವಿಷಯದ ಬಗ್ಯೆ ಉಪನ್ಯಾಸ ನೀಡಿದರು.

ಎಸ್.ಡಿ.ಎಂ. ಎಂಜಿನಿಯರಿAಗ್ ಕಾಲೇಜಿನ ಪ್ರಾಂಶುಪಾಲ ಅಶೋಕ್‌ಕುಮಾರ್ ಧನ್ಯವಾದವಿತ್ತರು. ಎಸ್.ಡಿ.ಎಂ. ಕಾಲೇಜಿನ ಉಪನ್ಯಾಸಕ ದಿವಾ ಕೊಕ್ಕಡ ಕಾರ್ಯಕ್ರಮ ನಿರ್ವಹಿಸಿದರು.

ಮುಖ್ಯಾಂಶಗಳು:

  • ಭಕ್ತರ ಬಹುಮುಖಿ ಸೇವೆ: ಬೆಂಗಳೂರಿನ ೨೨ ಮಂದಿ ದಾನಿಗಳು ಸೇರಿ ೨೭ ಕೌಂಟರ್‌ಗಳಲ್ಲಿ ಶನಿವಾರ ರಾತ್ರಿ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದರು.
  • ಕಲಾ ಸೇವೆ : ಬ್ಯಾಂಡ್, ವಾಲಗ, ಡೊಳ್ಳು, ಕೋಲಾಟ, ಶಂಖ, ಕೊಂಬು, ಕಹಳೆ, ಜಾಗಟೆ ಮೊದಲಾದ ೪೩೩೦ ಜಾನಪದ ಕಲಾವಿದರು ೧೦೦೨ ತಂಡಗಳಲ್ಲಿ ಆಹೋರಾತ್ರಿ ಕಲಾ ಸೇವೆ ಮಾಡಿದರು.
  • ಡಿ. ವೀರೇಂದ್ರ ಹೆಗ್ಗಡೆಯವರ ಬಗ್ಗೆ ಉಜಿರೆಯ ಸೋನಿಯಾವರ್ಮ ರಚಿಸಿದ “ಗುಣಗಣಿ-ಗುಣರತ್ನಗಳ ಧಣಿ” ಕೃತಿ ಮತ್ತು ಮಂಜೂಷಾ ವಸ್ತುಸಂಗ್ರಹಾಲಯದ ಕ್ಯುರೇಟರ್ ಪುಷ್ಪದಂತ ರಚಿಸಿದ “ಉಪರತ್ನಗಳು ಮತ್ತು ನವರತ್ನಗಳು” ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
  • ->

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English