ಮಂಗಳೂರು : ಸದಾನಂದ ಗೌಡ ಮೇಲೆ ಶೋಭಾ ಕರಂದ್ಲಾಜೆ ಆಕ್ರೋಶಿತರಾಗಿಯೇ ಇದ್ದಾರೆ. ಯಡಿಯೂರಪ್ಪರೊಂದಿಗೆ ಗುರುತಿಸಿಕೊಂಡ ನೆಪದಲ್ಲಿ ಶೋಭಾ ಕರಂದ್ಲಾಜೆಯ ಮಂತ್ರಿ ಸ್ಥಾನ ಕಿತ್ತುಕೊಳ್ಳಲು ಸದಾನಂದ ಗೌಡರು ಪಿತೂರಿ ನಡೆಸಿದ್ದರು ಎಂದು ಶೋಭಾರ ಹಿಂಬಾಲಕರು ನಂಬಿದ್ದಾರೆ. ಇದೇ ಕೋಪದಲ್ಲಿ ಡಿ.ವಿ. ವಿರುದ್ಧ ಪುತ್ತೂರಿನಲ್ಲಿ ಸ್ಪರ್ಧಿಸುತ್ತೇನೆ ಎಂದು ಶೋಭಾ ಎಚ್ಚರಿಕೆ ಸಂದೇಶವನ್ನೂ ನೀಡಿದ್ದರು. ಡಿ.ವಿ.ವಿರುದ್ಧ ಶೋಭಾ ಸ್ಪರ್ಧಿಸದೇ ಇದ್ದರೂ ಕೂಡ ಡಿ.ವಿ. ಗೆಲವು ತಡೆಯಲು ಹೋರಾಡದೆ ಇರಲಾರರು. ಶೋಭಾ ಪುತ್ತೂರಿನಲ್ಲಿ ಓಡಾಡಿದ್ದೇ ಆದರೆ ಒಕ್ಕಲಿಗ ಮತಗಳು ಒಡೆಯದಿರಲಾರವು ಎಂದು ಸದಾನಂದ ಗೌಡರು ಆತ್ಮೀಯರೂ ಕೂಡ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಒಕ್ಕಲಿಗರ ಮತ ಒಡೆದುದೇ ಆದರೆ ಡಿ.ವಿ. ಹಿನ್ನಡೆಯನ್ನು ತಡೆಯಲು ಸಾಧ್ಯವಾಗದು ಎಂಬ ಲೆಕ್ಕಾಚಾರ ಅವರ ವಿರೋಧಿ ಬಣದ್ದಾಗಿದೆ.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಸ್ಪರ್ಧಿಸುವ ಸಾಧ್ಯತೆ ಇರುವ ಪುತ್ತೂರು ವಿಧಾನ ಸಭಾ ಕ್ಷೇತ್ರವೀಗ ರಾಜ್ಯದ ಗಮನ ಸೆಳೆಯುತ್ತಿದೆ. ಪುತ್ತೂರಿನಿಂದ ಸ್ಪರ್ಧಿಸಿ ಗೆದ್ದು ತೋರಿಸಿ ಎಂದು ಡಿ.ವಿ.ಸದಾನಂದ ಗೌಡರಿಗೆ ಕೆಜೆಪಿಯ ನಾಯಕ ಧನಂಜಯ ಕುಮಾರ್ ಸವಾಲು ಹಾಕಿದ್ದಾರೆ. ಈ ಸವಾಲಿಗಿಂತ ಮೊದಲೇ ಡಿ.ವಿ. ತಾನು ಪುತ್ತೂರು ಕ್ಷೇತ್ರದಲ್ಲಿ ಸ್ಪರ್ಧಿಸುವ ಆಕಾಂಕ್ಷೆಯನ್ನು ವ್ಯಕ್ತಪಡಿಸಿಯಾಗಿದೆ. ಅವರು ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರೆ ಎಂದರೆ ರಾಜಕೀಯ ಪಲಾಯನ ಎಂಬ ಅಪವಾದಕ್ಕೆ ಗುರಿಯಾಗುವ ಸಾಧ್ಯತೆ ಇದೆ.
ಸದಾನಂದ ಗೌಡರು ತನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ನಂಬಿರುವ ಕೆಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮುಂದಿನ ಚುನಾವಣೆಯಲ್ಲಿ ಡಿ.ವಿ. ಎಲ್ಲಿಂದ ಸ್ಪರ್ಧಿಸಿದರೂ ಸೋಲಿಸುವ ಪಣ ತೊಟ್ಟಿದ್ದಾರೆ. ಯಡಿಯೂರಪ್ಪರ ಈ ಮನದಿಂಗಿತವನ್ನೇ ಧನಂಜಯ ಪರೋಕ್ಷವಾಗಿ ಪ್ರಸ್ತಾಪಿಸಿದ್ದು ಡಿ.ವಿ. ಸದಾನಂದ ಗೌಡರು ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಸವಾಲು ಎಸೆದಿದ್ದಾರೆ.
ಡಿ.ವಿ. ಸದಾನಂದ ಗೌಡರ ವಿರುದ್ಧದ ಹೋರಾಟದ ಮೇಲ್ಪಂಕ್ತಿಯಲ್ಲಿರುವ ಇನ್ನೊಂದು ಶಕ್ತಿಯ ಹೆಸರು ಶಕುಂತಳಾ ಶೆಟ್ಟಿ. ಶಕುಂತಳಾ ಬಿಜೆಪಿ ತೊರೆಯುವಂತಾಗಿದ್ದೇ ಡಿ.ವಿ. ಕುತಂತ್ರದ ಕಾರಣದಿಂದಾಗಿ ಎಂದು ಶಕುಂತಳಾ ಶೆಟ್ಟಿ ಸ್ವಾಭಿಮಾನಿ ಬಳಗ ಈಗಲೂ ಹೇಳಿ ಕೊಳ್ಳುತ್ತಿದೆ. ನಾಲ್ಕು ವರ್ಷಗಳ ವನವಾಸದ ಬಳಿಕ ಶಕುಂತಳಾ ಶೆಟ್ಟಿಗೆ ಬಿಜೆಪಿಯ ಭಾಗವಾಗುವ ಮತ್ತೊಂದು ಅವಕಾಶ ತೆರೆದುಕೊಂಡಿತ್ತು. ಅದಕ್ಕೆ ಅಡ್ಡಗಾಲು ಆದವರೂ ಕೂಡ ಸದಾನಂದ ಗೌಡ ಎಂದು ಶಕುಂತಳಾ ಶೆಟ್ಟಿ ಪರ ಇರುವ ಬಿಜೆಪಿಯ ಮಂದಿ ಹೇಳುತ್ತಾರೆ. ಹಾಗಿರುವಾಗ ಶಕುಂತಳಾ ಶೆಟ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರವನ್ನು ತನ್ನ ಪ್ರತಿಷ್ಠೆಯ ಪ್ರತೀಕವಾಗಿಸಿಕೊಳ್ಳದಿರುವರೇ?
ಸದಾನಂದ ಗೌಡರು ಪೂತ್ತೂರು ವಿಧಾನ ಸಭಾಕ್ಷೇತ್ರದಿಂದ ಸ್ಪರ್ಧಿಸಿದ್ದೇ ಆದರೆ ಬಂಟ ಮತದಾರರು ಬಿಜೆಪಿಯಿಂದ ಕಳಚಿಕೊಳ್ಳಲಿದ್ದಾರೆ ಎಂಬ ಆತಂಕ ಕೂಡ ಬಿಜೆಪಿಯ ವಲಯದಲ್ಲಿ ಸುಳಿದಾಡುತ್ತಿದೆ. ಬಂಟ ಸಮುದಾಯದ ಶಕುಂತಳಾ ಶೆಟ್ಟರಿಗೆ ಸದಾನಂದ ಗೌಡರು ಅನ್ಯಾಯ ಮಾಡಿದ್ದಾರೆ ಇದು ಬಂಟರ ಆಕ್ರೋಶಕ್ಕೆ ಕಾರಣವಾಗಿದೆ. ಪುತ್ತೂರು ವಲಯದಲ್ಲಿ ಇದರ ಪರಿ ಣಾಮಗಳನ್ನು ಖಂಡಿತವಾಗಿಯೂ ಅನುಭವಿಸಬೇಕಾಗುತ್ತದೆ ಎನ್ನುತ್ತಾರೆ ಜಾತಿ ಲೆಕ್ಕಾಚಾರದ ಬಿಜೆಪಿ ರಾಜಕಾರಣಿಗಳು. ಇನ್ನು ಬಿಜೆಪಿಯ ಬೆನ್ನೆಲುಬಾಗಿರುವ ಬಿಲ್ಲವರು ಪುತ್ತೂರಿನಲ್ಲಿ ಜಾತಿ ಪ್ರೀತಿ ತೋರಿಸಿದ್ದೇ ಆದರೆ ಕಾಂಗ್ರೆಸ್ ಇದರ ಲಾಭ ಪಡೆಯುವ ಸಾಧ್ಯತೆಗಳೇ ಹೆಚ್ಚು. ಏಕೆಂದರೆ ಈ ಬಾರಿ ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನಯಕುಮಾರ್ ಸೊರಕೆ ಸ್ಪರ್ಧಿಸುವ ಲಕ್ಷಣಗಳು ಗೋಚರಿಸುತ್ತಿವೆ.
ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಮೊದಲ ಬಾರಿ ಸ್ಪರ್ಧಿಸಿ ಡಿ.ವಿ. ವಿಜಯಗಳಿಸಿದಾಗ ಅವರ ಎದುರಾಳಿಯಾಗಿದ್ದು ವಿನಯಕುಮಾರ ಸೊರಕೆ. ಈಗ ಮತ್ತೆ ಡಿ.ವಿ.ಸದಾನಂದ ಗೌಡರು ಸ್ಪರ್ಧೆಗೆ ಅಣಿಯಾಗುತ್ತಿದ್ದರೆ ವಿನಯಕುಮಾರ್ ಸೊರಕೆ ಕೂಡ ಸ್ಪರ್ಧೆಯ ಇಂಗಿತ ವ್ಯಕ್ತಪಡಿಸಿದ್ದಾರೆ. ಇದು ಕಾಕತಾಳಿಯವಾದರೂ ಇತಿಹಾಸ ಮರುಕಳಿಸುವ ಸಾಧ್ಯತೆ ಹೆಚ್ಚಾಗಿದೆ. ಅಂದು ಸದಾನಂದ ಗೌಡರು ವಿನಯಕುಮಾರ್ ಸೊರಕೆಯವರ ವಿರುದ್ಧ ಗೆಲವು ಸಾಧಿಸಿದಾಗ ಸೊರಕೆಯ ಸೋಲಿನ ಮತಗಳ ಅಂತರ ಇದ್ದುದು ಕೇವಲ 400 ಮತಗಳು ಮಾತ್ರ. ಈಗ ಬದಲಾಗಿರುವ ರಾಜಕಿಯ ಸ್ಥಿತಿಗತಿಯಲ್ಲಿ ಸೋಲು ಗೆಲವಿನ ಅಂತರ ಲೆಕ್ಕ ಹಾಕುವವರು ವಿನಯಕುಮಾರ ಸೊರಕೆಯವರಿಗೆ ಪೂರಕವಾಗಿಯೇ ಮಾತನಾಡುತ್ತಿದ್ದಾರೆ.
ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಸದಾನಂದ ಗೌಡರು ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿರುವುದು ಈ ಕ್ಷೇತ್ರ ರಾಜ್ಯದ ಗಮನ ಸೆಳೆಯುವಂತೆ ಮಾಡಿದೆ. ವಿವಿಧ ಆಯಾಮಗಳ ಚರ್ಚೆಗೆ ಆಸ್ಪದ ಒದಗಿಸಿದೆ. ಒಂದು ವೇಳೆ ಸ್ಪರ್ಧಿಸದೇ ಇದ್ದರೆ ಅದೂ ಕೂಡ ಬಿಜೆಪಿಯ ಪಾಲಿನ ಬಹುದೊಡ್ಡ ಹಿನ್ನಡೆ ಎಂದೇ ಲೆಕ್ಕ ಹಾಕಲಾಗುತ್ತಿದೆ.
Click this button or press Ctrl+G to toggle between Kannada and English