ಉಡುಪಿ–ಮಂಗಳೂರು ರಸ್ತೆಗಳಲ್ಲಿ ಇಳಿಯಲಿದೆ 10 ಕೆಎಸ್ಆರ್ ಟಿಸಿ ಯವರ ಎಲೆಕ್ಟ್ರಿಕ್‌ ಬಸ್‌

12:51 AM, Tuesday, December 17th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಕಾರ್ಕಳ– ಮೂಡುಬಿದಿರೆ– ಮಂಗಳೂರು ಮಾರ್ಗದಲ್ಲಿ ಆರಂಭಿಸಲಾದ ಬಸ್‌ ಸೇವೆಗೆ ಸಿಕ್ಕ ಉತ್ತಮ ಪ್ರತಿಕ್ರಿಯೆಯಿಂದ ಉತ್ತೇಜನಗೊಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗವು ಉಡುಪಿ–ಮಂಗಳೂರು ನಡುವೆ 10 ಎಲೆಕ್ಟ್ರಿಕ್‌ ಬಸ್‌ ಸೇವೆ ಆರಂಭಿಸಲು ಸಿದ್ಧತೆ ನಡೆಸಿದೆ.

‘ಉಡುಪಿ– ಮಂಗಳೂರು ಮಾರ್ಗದಲ್ಲಿ ಸದ್ಯಕ್ಕೆ ಎರಡು ಬಸ್‌ಗಳು ಸೇವೆ ಒದಗಿಸುತ್ತಿವೆ. ಇವುಗಳು ಪ್ರಯಾಣಿಕರಿಂದ ತುಂಬಿರುತ್ತವೆ. ಮಂಗಳೂರು ವಿಭಾಗಕ್ಕೆ ಒಟ್ಟು 45 ಎಲೆಕ್ಟ್ರಿಕ್ ಬಸ್‌ಗಳು ಮಂಜೂರಾಗಿವೆ. ಅವುಗಳ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಲು ಕ್ರಮವಹಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಚಾರ್ಜಿಂಗ್ ಕೇಂದ್ರಗಳ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆಯೇ ಈ ಮಾರ್ಗದಲ್ಲಿ ಎಲೆಕ್ಟ್ರಿಕ್‌ ಬಸ್‌ ಸಂಚಾರ ಆರಂಭಿಸಲು ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಹೇಳಿದ್ದಾರೆ.

ಎಲೆಕ್ಟ್ರಿಕ್‌ ಬಸ್‌ ಸಂಪೂರ್ಣ ಚಾರ್ಜ್ ಆಗಲು ಎರಡೂವರೆ ಗಂಟೆ ತಗಲುತ್ತದೆ. ಪೂರ್ಣ ಚಾರ್ಜ್‌ ಮಾಡಲಾದ ಬಸ್‌ 180 ಕಿಲೊ ಮೀಟರ್‌ನಿಂದ 200 ಕಿಲೋ ಮೀಟರ್ ದೂರದವರೆಗೆ ಚಲಿಸಬಲ್ಲುದು. ಒಮ್ಮೆ ಸಂಪೂರ್ಣ ಚಾರ್ಜ್‌ ಮಾಡಿದ ಬಳಿಕ ಬಸ್‌ ಈ ಮಾರ್ಗದಲ್ಲಿ ಮೂರು ಟ್ರಿಪ್‌ ನಡೆಸುತ್ತದೆ. ಬಳಿಕ ಮತ್ತೊಮ್ಮೆ ಪೂರ್ತಿ ಚಾರ್ಜ್‌ ಮಾಡಿ ಮತ್ತೆ ಮೂರು ಟ್ರಿಪ್‌ ನಡೆಸಬಹುದು. ಒಂದು ಬಸ್‌ನಿಂದ ದಿನದಲ್ಲಿ ಐದರಿಂದ ಆರು ಟ್ರಿಪ್‌ ನಡೆಸಲು ಅವಕಾಶವಿದೆ. ಪ್ರತಿ 30 ನಿಮಿಷಕ್ಕೊಂದು ಬಸ್‌ ಸೇವೆ ಒದಗಿಸಬಹುದು. ಮುಂಜಾನೆಯಿಂದ ತಡರಾತ್ರಿವರೆಗೂ ಸೇವೆ ಒದಗಿಸಲು ಸಾಧ್ಯ. ಭವಿಷ್ಯದಲ್ಲಿ ಚಾರ್ಜಿಂಗ್ ಅವಧಿ ಕಡಿಮೆಯಾದರೆ ಇನ್ನೂ ಹೆಚ್ಚು ಟ್ರಿಪ್‌ ನಡೆಸಲು ಅವಕಾಶ ಇದೆ’ .

‘ಎಲೆಕ್ಟ್ರಿಕ್‌ ಬಸ್‌ನಲ್ಲಿ 45 ಆಸನಗಳಿರುತ್ತವೆ. 60ರಿಂದ 70 ಮಂದಿವರೆಗೂ ಪ್ರಯಾಣಿಸಬಹುದು. ಈ ಮಾರ್ಗದ ಪ್ರಮುಖ ಊರುಗಳಲ್ಲಿ ಮಾತ್ರ ನಿಲುಗಡೆ ನೀಡಿದರೆ ಮಂಗಳೂರು–ಉಡುಪಿ ನಡುವಿನ 55 ಕಿ.ಮೀ ದೂರವನ್ನು ಒಂದು ಗಂಟೆಯಲ್ಲಿ ತಲುಪಬಹುದು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಒಂದು ಪಾಳಿ ಹಾಗೂ ಮಧ್ಯಾಹ್ನದ ಬಳಿಕ ಇನ್ನೊಂದು ಪಾಳಿ ವ್ಯವಸ್ಥೆ ಮಾಡಿ ಮುಂಜಾನೆಯಿಂದ ತಡರಾತ್ರಿವರೆಗೂ ಸೇವೆ ಒದಗಿಸುವ ಉದ್ದೇಶವಿದೆ. ಸಿಬ್ಬಂದಿ ಪಾಳಿ ಬದಲಿಸುವಾಗ ಸಿಗುವ ಬಿಡುವಿನ ಅವಧಿಯನ್ನು ಬಸ್‌ ಅನ್ನು ಚಾರ್ಜ್ ಮಾಡಬಹುದು’ ಎಂದು ತಿಳಿಸಿದರು. 

ಬಿಜೈನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಒಳಗೆ, ನಗರದ ಮೂರನೇ ಡಿಪೊದಲ್ಲಿ ಹಾಗೂ ಉಡುಪಿ ಡಿಪೊದಲ್ಲಿ ಚಾರ್ಜಿಂಗ್ ಕೇಂದ್ರ ಅಳವಡಿಸಲು ಸಂಸ್ಥೆಯು ಉದ್ದೇಶಿಸಿದೆ. ‘ಖಾಸಗಿ ಬಸ್‌ಗಳ ನಡುವಿನ ಅತಿಯಾದ ಪೈಪೋಟಿಯಿಂದಾಗಿ ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಉಡುಪಿ– ಮಂಗಳೂರು ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸಂಖ್ಯೆ ಹೆಚ್ಚಿಸಿದರೆ ಪ್ರಯಾಣಿಕರಿಗೆ ಅನುಕೂಲ’ ಆಗಲಿದೆ.

ಎಲೆಕ್ಟ್ರಿಕ್ ಬಸ್‌ನಲ್ಲಿ ಎಸಿ ಎಲೆಕ್ಟ್ರಿಕ್ ಬಸ್ ಹವಾನಿಯಂತ್ರಿತ ವ್ಯವಸ್ಥೆಯನ್ನು ಹೊಂದಿರುತ್ತದೆ. ಈ ಹಿಂದೆ ಮಣಿಪಾಲ– ಮಂಗಳೂರು ನಡುವೆ ಹವಾನಿಯಂತ್ರಿತ ವೋಲ್ವೊ ಬಸ್‌ ಸೇವೆ ಚಾಲ್ತಿಯಲ್ಲಿತ್ತು. ಅದಕ್ಕೆ ಭಾರಿ ಬೇಡಿಕೆ ಇತ್ತು. ಆ ಬಸ್‌ಗಳ ನಿರ್ವಹಣೆ ದುಬಾರಿ ಎಂಬ ಕಾರಣಕ್ಕೆ ಆ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಕರಾವಳಿಯ‌ಲ್ಲಿ ಸೆಖೆ ಜಾಸ್ತಿ. ಹಾಗಾಗಿ ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್‌ ಸೇವೆ ಆರಂಭಿಸಿದರೆ ಖಂಡಿತಾ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಎಂಬ ವಿಶ್ವಾಸವಿದೆ’ ಎಂದು ರಾಜೇಶ್ ಶೆಟ್ಟಿ ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English