ಮಂಗಳೂರು: ಮೂಲಗೇಣಿ ಆಸ್ತಿ ಲೀಸಿಗೆ ಪಡೆದ ಭೂಮಿಯನ್ನು ಯಾರೂ ತಮ್ಮ ಸ್ವಂತಕ್ಕೆ ಮಾಡಲು ಅವಕಾಶ ಇರುವುದಿಲ್ಲ. ಶಾಶ್ವತ ರೂಪದಲ್ಲಿ ನೀಡಲ್ಪಡುವ ಗುತ್ತಿಗೆ ಎಂದಾಗಿರುತ್ತದೆ. ಆದರೆ ಮಂಗಳೂರು ಬಂದರಿನ ಕಸಬಾ ಬಜಾರ್ ಸರ್ವೆ ನಂಬರ್ 1448-439/11-8 ಮತ್ತು 1449440/11-8 ಯಲ್ಲಿರುವ ಶ್ರೀ ಮಹಾಲಸಾ ನಾರಾಯಣೀ ಲಕ್ಷ್ಮೀ ವೆಂಕಟೇಶ ದೇವರಿಗೆ ಸೇರಿದ ಆಸ್ತಿಯನ್ನು ಖಾಸಗಿ ವ್ಯಕ್ತಿಗಳು ಪೋರ್ಜರಿ ದಾಖಲೆ ಸೃಷ್ಟಿಸಿ ಸ್ವಾಹಾ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ದಾಮೋದರ್ ಶೆಣೈ ಪಡುಬಿದ್ರಿ ಪತ್ರಿಕಾಗೋಷ್ಟಿಯಲ್ಲಿ ಆರೋಪಿಸಿದರು.
ಮಂಗಳೂರು ನಗರದ ಹೃದಯಭಾಗದಲ್ಲಿರುವ ಎಂಟು ಸೆಂಟ್ಸ್ ಆಸ್ತಿಯು ಕೋಟಿಗಟ್ಟಲೆ ಬೆಲೆಬಾಳುವಂಥದ್ದು. ಈ ಭೂಮಿಯನ್ನು 1932ರಲ್ಲಿ ಮಾರೂರು ಗಣಪತಿ ಅನಂತ ಪೈ ಅವರು ಮ್ಯಾನೇಜಿಂಗ್ ಟ್ರಸ್ಟಿಯಾಗಿರುವ ಶ್ರೀ ಮಹಾಲಸಾ ನಾರಾಯಣೀ ಲಕ್ಷ್ಮೀ ವೆಂಕಟೇಶ ದೇವರ ಭಂಡಾರಕ್ಕೆ ಶಾಶ್ವತ ಲೀಸಿಗೆ ಕೊಡಲಾಗಿತ್ತು. ಗಣಪತಿ ಪೈ ಅವರ ಕಾಲಾನಂತರ ಹಿರಿಯ ಮಗ ರಾಮದಾಸ ಪೈ ಅವರಿಗೆ ಭೂಮಿ ಸ್ವಾಧೀನಕ್ಕೆ ಬಂದಿತ್ತು.
ಅನಂತರ, ಅವರ ಪುತ್ರ ಮಾರೂ ಗಣಪತಿ ಪೈ(2)ಯವರಿಗೆ ಹಕ್ಕು ಬಂದಿತ್ತು. ಆದರೆ ಗಣಪತಿ ಪೈ(2)ಯವರ ಬಳಿಕ ಪತ್ನಿ ಗೀತಾ ಪೈ ಅಥವಾ ಮಕ್ಕಳಿಗೆ ನೀಡಲ್ಪಡುವ ಬದಲು ಅದನ್ನು ಮಂಗಳೂರಿನ ಹಿರಿಯ ವಕೀಲ ಕೆ.ಪಿ ವಾಸುದೇವ ರಾವ್ ಮತ್ತು ಕುಟುಂಬಕ್ಕೆ ಸೇರದ ಕೆಲವು ವ್ಯಕ್ತಿಗಳು ಸೇರಿಕೊಂಡು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಇದರಲ್ಲಿ ಕೋಟ್ಯಂತರ ರೂಪಾಯಿ ಕೈಬದಲಾಗಿದ್ದು, ಪೋರ್ಜರಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ದೇವರಿಗೆ ಸೇರಿದ ಆಸ್ತಿಯನ್ನು ವಕೀಲರ ನೇತೃತ್ವದಲ್ಲಿ ಸ್ವಂತಕ್ಕೆ ಮಾಡಿಕೊಂಡಿದ್ದಾರೆ. ಸದ್ರಿ ಜಾಗದ ಆರ್ ಟಿಸಿ ದಾಖಲೆಯನ್ನು ಭೂಮಿ ತಂತ್ರಾಂಶದಲ್ಲಿ ಪರಿಶೀಲಿಸಿದ ಸಂದರ್ಭದಲ್ಲಿ ಶ್ರೀ ಮಹಾಲಸಾ ನಾರಾಯಣೀ ಲಕ್ಷ್ಮೀ ವೆಂಕಟೇಶ ದೇವರಿಗೆ ಸೇರಿದ ಎಂಬುದಾಗಿದ್ದ ಉಲ್ಲೇಖವನ್ನು ತೆಗೆದು ಹಾಕಿರುವುದು ಪತ್ತೆಯಾಗಿದೆ.
ಆ ಜಾಗದಲ್ಲಿ ಕಮಲಾ ಪಡಿಯಾ, ವಿಮಲಾ ಶೆಣೈ, ಮಂಗಲ್ಪಾಡಿ ಸಂಧ್ಯಾ ಶೆಣೈ ಮತ್ತು ಮಂಗಲ್ಪಾಡಿ ವರದರಾಯ ಶೆಣೈ (ಉಪೇಂದ್ರ ಟ್ರೇಡಿಂಗ್ ಕಂಪೆನಿ, ಪೋರ್ಟ್ ರೋಡ್ ಮಂಗಳೂರು) ಎಂಬವರ ಹೆಸರನ್ನು ಅಕ್ರಮವಾಗಿ ಸೇರ್ಪಡೆ ಮಾಡಲಾಗಿದೆ. ಇದೇ ದಾಖಲೆಯನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಕ್ಕೆ ನೀಡಲಾಗಿದೆ. ದೇವರ ಹೆಸರಿನಲ್ಲಿ ಸೇರಿದ ಆಸ್ತಿಯನ್ನು ಖಾಸಗಿಯವರು ಅಕ್ರಮವಾಗಿ ಪರಭಾರೆ ಮಾಡಿಕೊಂಡಿರುವ ಬಗ್ಗೆ ಮಂಗಳೂರು ಲೋಕಾಯುಕ್ತಕ್ಕೆ ದೂರು ನೀಡಿದ್ದು ಮೊನ್ನೆ ಉಪ ಲೋಕಾಯುಕ್ತ ಜಸ್ಟಿಸ್ ವೀರಪ್ಪ ಅವರಲ್ಲಿ ದೂರು ನೀಡಿದ್ದು, ಪೊಲೀಸರಿಗೆ ದೂರು ನೀಡಲು ಸೂಚಿಸಿದ್ದರು. ಅದರಂತೆ, ಡಿ.1ರಂದು ಬಂದರು ಠಾಣೆಗೆ ದಾಖಲೆ ಸಹಿತ ದೂರು ನೀಡಿದ್ದರೂ, ಆರೋಪಿತರ ವಿರುದ್ಧ ಇಷ್ಟರ ವರೆಗೆ ಎಫ್‌ಐಆರ್ ದಾಖಲು ಮಾಡಿಲ್ಲ. ದೇವರ ಆಸ್ತಿಯನ್ನು ನುಂಗಿ ಹಾಕಿದ ಮೇಲೆ ಕ್ರಮ ಜರುಗಿಸಬೇಕೆಂದು ಈ ಮೂಲಕ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಒತ್ತಾಯಿಸುತ್ತಿದ್ದೇನೆ ಎಂದರು.
ಮಾರೂರು ಗಣಪತಿ ಪೈ(2) ಅವರ ಪತ್ನಿ ಗೀತಾ ಜಿ. ಪೈಯವರು ಇಳಿ ವಯಸ್ಸಿನಲ್ಲಿದ್ದು(72 ವರ್ಷ) ಬೆಂಗಳೂರಿನಲ್ಲಿ ವಾಸವಿದ್ದಾರೆ. ಈ ಜಾಗದ ಬಗ್ಗೆ ದಾವೆ ಹೂಡುವುದು ಸೇರಿದಂತೆ ಸಂಬಂಧಪಟ್ಟ ವ್ಯವಹಾರ ನೋಡಿಕೊಳ್ಳಲು ನನಗೆ ಪವರ್ ಆಫ್ ಅಟಾರ್ನಿ ಕೊಟ್ಟಿದ್ದಾರೆ. ಹಾಗಾಗಿ, ಪೊಲೀಸರಿಗೆ ದೂರು ಕೊಟ್ಟಿದ್ದು, ಪೋರ್ಜರಿ ದಾಖಲೆ ಸೃಷ್ಟಿಸಿ ದೇವರ ಆಸ್ತಿಯನ್ನು ಅಕ್ರಮವಾಗಿ ಸ್ವಂತಕ್ಕೆ ಮಾಡಿಕೊಂಡಿರುವ ಬಗ್ಗೆ ಕ್ರಮ ಜರುಗಿಸಲು ಒತ್ತಾಯಿಸಿದರು.
Click this button or press Ctrl+G to toggle between Kannada and English