ಮಂಗಳೂರು : ಮೂಲ್ಕಿ ತಾಲೂಕು ಎರಡನೆಯ ಸಾಹಿತ್ಯ ಸಮ್ಮೇಳನ ಫೆಬ್ರವರಿ 8ರಂದು ಕಿನ್ನಿಗೋಳಿ ಐಕಳದ ಪಾಂಪೈ ಕಾಲೇಜಿನಲ್ಲಿ ನಡೆಯಲಿದೆ. ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ಶ್ರೀಧರ ಡಿ.ಎಸ್. ಆಯ್ಕೆಯಾಗಿದ್ದಾರೆ.
ಶ್ರೀಧರ ಡಿ.ಎಸ್. ಇವರು ಯಕ್ಷಗಾನ ಅರ್ಥಧಾರಿ, ಪ್ರಸಂಗ ಕರ್ತೃ, ಯಕ್ಷಗಾನ ವಿಮರ್ಶಕ, ಕಥೆಗಾರ, ಕವಿ, ಕಾದಂಬರಿಕಾರರಾದ ಶ್ರೀಧರ ಡಿ.ಎಸ್ ಮೂರು ದಶಕಗಳ ಕಾಲ ಕಿನ್ನಿಗೋಳಿಯ ಪಾಂಪೈ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದರು. 2020ನೇ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿಯ ‘ಪಾರ್ತಿ ಸುಬ್ಬ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಿನ್ನಿಗೋಳಿಯಲ್ಲಿ ಸಮಾನ ಆಸಕ್ತ ಗೆಳೆಯರೊಂದಿಗೆ ಸೇರಿ ತಾಳಮದ್ದಲೆಗಾಗಿ ‘ಯಕ್ಷಲಹರಿ’ ಎಂಬ ಸಂಸ್ಥೆಯನ್ನು ರೂಪಿಸಿದರು. ಶಿವಮೊಗ್ಗದಲ್ಲಿ ನಡೆದ 11ನೇ ಅಖಿಲ ಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. 40ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳ ರಚಯಿತರು. ಬಿಡಿ ಪದ್ಯಗಳನ್ನೂ ಪರಿಗಣಿಸಿದರೆ ಶ್ರೀಧರ ಡಿ.ಎಸ್. ಐದು ಸಾವಿರಕ್ಕೂ ಹೆಚ್ಚಿನ ಯಕ್ಷಗಾನ ಪದ್ಯಗಳನ್ನು ರಚಿಸಿದ್ದಾರೆ. ಮಂಗಳೂರು ಆಕಾಶವಾಣಿ ಇವರ ಪ್ರಸಂಗಗಳ ತಾಳಮದ್ದಲೆಗಳನ್ನು ‘ಶ್ರೀಧರ ಯಕ್ಷಕಾವ್ಯ’ ಎಂಬ ಹೆಸರಿನಲ್ಲಿ 29 ವಾರಗಳ ಕಾಲ ಸತತವಾಗಿ ಪ್ರಸಾರ ಮಾಡಿತ್ತು.
‘ಯಕ್ಷಗಾನ ಪ್ರಸಂಗಕೋಶ’ದ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯುಗಾಂತರ, ಅಸುರಗುರು ಶುಕ್ರಾಚಾರ್ಯ, ಪರಶುರಾಮ ಎಂಬ ಮೂರು ಬೃಹತ್ ಕಾದಂಬರಿಗಳು ಸೇರಿದಂತೆ, ಮಾತಿನಕಲೆ ತಾಳಮದ್ದಲೆ,ಬಸ್ಸು ಜಟಕಾ ಬಂಡಿ, ಜಡಭರತ, ಗೋ-ವಿಪ್ರ ಮೊದಲಾದ ಸಣ್ಣ ಕಾದಂಬರಿಗಳನ್ನ ನಾಡಿನ ಪ್ರಮುಖ ಪ್ರಕಾಶನ ಸಂಸ್ಥೆಗಳು ಪ್ರಕಟಿಸಿವೆ. ನಾನಾ ಪತ್ರಿಕೆಗಳಲ್ಲಿ ಅಂಕಣಗಳು ಪ್ರಕಟವಾಗುತ್ತಿವೆ. ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Click this button or press Ctrl+G to toggle between Kannada and English