ಮಂಗಳೂರು : ಕರಾವಳಿ ಉತ್ಸವದ ಅಂಗವಾಗಿ ಆರಂಭಗೊಂಡಿರುವ ಚಲನಚಿತ್ರೋತ್ಸವವನ್ನು ಮುಂದಿನ ವರ್ಷದಿಂದ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆಗಿ ನಡೆಸಲು ಚಿಂತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಹೇಳಿದರು.
ಅವರು ಗುರುವಾರ ನಗರದ ಭಾರತ್ ಸಿನಿಮಾಸ್ ಚಿತ್ರಮಂದಿರದಲ್ಲಿ ಕರಾವಳಿ ಉತ್ಸವದ ಅಂಗವಾಗಿ ನಡೆದ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದೇ ಮೊದಲ ಬಾರಿಗೆ ಕರಾವಳಿ ಉತ್ಸವದಲ್ಲಿ ಚಲನಚಿತ್ರೋತ್ಸವವನ್ನು ನಡೆಸಲಾಗಿದೆ. ಇದನ್ನು ಇನ್ನಷ್ಟು ವಿಸ್ತರಿಸಿ ಹೆಚ್ಚಿನ ಚಲನಚಿತ್ರಗಳನ್ನು ವೀಕ್ಷಿಸಲು ಅನುವಾಗುವಂತೆ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆಸಬೇಕೆಂಬ ಉದ್ದೇಶವಿದೆ ಎಂದರು.
ಭಾರತದ ಸಿನಿಮಾ ಕ್ಷೇತ್ರದಲ್ಲಿ ಕರಾವಳಿ ಕರ್ನಾಟಕದ ಬಹಳಷ್ಟು ಸಾಧಕರು ಕೊಡುಗೆ ನೀಡಿದ್ದಾರೆ. ಹಿಂದಿ, ಕನ್ನಡದೊಂದಿಗೆ ಸ್ಥಳೀಯ ತುಳು, ಬ್ಯಾರಿ, ಕೊಂಕಣಿ ಭಾಗಗಳಲ್ಲಿ ಚಲನಚಿತ್ರೋತ್ಸವಗಳು ಮೂಡಿ ಬಂದಿರುವುದು ಇಲ್ಲಿನ ಕಲಾ ಶ್ರೀಮಂತಿಕೆಯನ್ನು ತೋರಿಸುತ್ತದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.
ಚಲನಚಿತ್ರೋತ್ಸವವನ್ನು ಉದ್ಘಾಟಿಸಿದ ಸಂಗೀತ ನಿರ್ದೇಶಕ ಗುರುಕಿರಣ್ ಅವರು ಮಾತನಾಡಿ ಸಿನಿಮಾ ಇಲ್ಲಿನ ಸಂಸ್ಕøತಿಯಾಗಿದೆ. ಎಲ್ಲಿ ಕಲೆಗೆ ಪ್ರಾಮುಖ್ಯತೆ ನೀಡಲಾಗುತ್ತದೆಯೋ ಅಲ್ಲಿ ಅಭಿವೃದ್ಧಿಯು ಉತ್ತಮವಾಗಿರುತ್ತದೆ. ರಾಜ ಮಹಾರಾಜರ ಕಾಲದಲ್ಲಿ ಕಲಾ ಚಟುವಟಿಕೆಗಳಿಗೆ ಒತ್ತು ನೀಡಿದ್ದರಿಂದ ಆಯಾ ಪ್ರದೇಶಗಳು ಪ್ರಗತಿ ಹೊಂದಿದೆ ಎಂದರು. ಕಲೆಯನ್ನು ಕಲೆಯಾಗಿ ನೋಡಬೇಕೇ ಹೊರತು ಸಂಕುಚಿತ ಭಾವನೆಯಿಂದ ಕಾಣುವುದು ಸರಿಯಲ್ಲ ಎಂದು ಅವರು ಹೇಳಿದರು.
ಮೇಯರ್ ಮನೋಜ್ ಕುಮಾರ್ ಗುಣಮಟ್ಟದ ಚಿತ್ರಗಳಿಗೆ ಕರಾವಳಿಯಲ್ಲಿ ಸದಾ ಪ್ರೊತ್ಸಾಹ ದೊರಕಿದೆ ಎಂದರು.
ಭಾರತ್ ಸಿನಿಮಾದ ಚಿತ್ರಮಂದಿರದ ಮುಖ್ಯಸ್ಥ ಬಾಲಕೃಷ್ಣ ಶೆಟ್ಟಿ, ಸುಬ್ರಾಯ ಪೈ, ಅಪರ ಜಿಲ್ಲಾಧಿಕಾರಿ, ಜಿ.ಸಂತೋಷ್ ಕುಮಾರ್, ಉಪವಿಭಾಗಾಧಿಕಾರಿ ಹರ್ಷವರ್ಧನ್, ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English