ಮಂಗಳೂರು : ತಂದೆ ಎಐಸಿಸಿ ಅಧ್ಯಕ್ಷರಾಗಿರುವಾಗ ಮಗ ರಾಜಿನಾಮೆ ಕೊಡುತ್ತಾರೆಂಬ ನಿರೀಕ್ಷೆ ನಮಗಿಲ್ಲ. ಆದರೆ ಪ್ರಿಯಾಂಕ ಖರ್ಗೆ ಕೆಳಗಿಳಿಸಬೇಕೆಂದು ಹೋರಾಟವನ್ನು ಮಾತ್ರ ಮುಂದುವರಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ರಾಹುಲ್ ಗಾಂಧಿಯವರು ಮೊಹಬ್ಬತ್ ಕೀ ದೂಕಾನ್ ಎಂದು ಹೇಳುತ್ತಿದ್ದರು. ಕಾಂಗ್ರೆಸ್ ಸರ್ಕಾರ ಇರುವಲ್ಲೆಲ್ಲ ಇದಕ್ಕೆ ತದ್ವಿರುದ್ಧವಾಗಿ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಹತ್ಯಾ ಔರ್ ಆತ್ಮಹತ್ಯಾ ಕಾ ದೂಕಾನ್ ಅನ್ನೋ ರೀತಿ ಮಾಡಿದ್ದಾರೆ. ಕಟಾ ಕಟಾ ಎಂದು ಬಡವರ ಹಣವನ್ನು ತಿಂದು ಹಾಕುತ್ತಿದ್ದಾರೆ. ಎಸ್ಸಿ- ಎಸ್ಟಿಗೆ ಮೀಸಲಾಗಿದ್ದ ವಾಲ್ಮೀಕಿ ನಿಗಮದ ಹಣವನ್ನು ಯಾರಿಗೂ ತಿಳಿಯದಂತೆ ತೆಗೆದು ಚುನಾವಣೆಗೆ ಬಳಸಿದ್ದಾರೆ.
ಈಶ್ವರಪ್ಪ ಪ್ರಕರಣದಲ್ಲಿ ಇವರು ನೀಡಿದ್ದ ಹೇಳಿಕೆಯನ್ನು ಈಗ ಮರೆತಿದ್ದಾರೆ. ಬಿಜೆಪಿಯವರು ಬಟ್ಟೆ ಹರಿದುಕೊಂಡರೂ ರಾಜಿನಾಮೆ ನೀಡಲ್ಲ ಎಂದು ಪ್ರಿಯಾಂಕ ಖರ್ಗೆ ಹೇಳುತ್ತಿದ್ದಾರೆ. ಸಾರ್ವಜನಿಕ ಬದುಕಿನಲ್ಲಿದ್ದವರು ಇಷ್ಟು ದುರಹಂಕಾರದಿಂದ ವರ್ತಿಸಿದ್ದು ಇಲ್ಲ. ಖರ್ಗೆಯವರ ಇಂಥ ಸ್ಥಿತಿಯೇ ಅವರನ್ನು ಸೋಲಿಸಿತ್ತು ಎಂಬುದನ್ನು ನೆನಪಿಟ್ಟುಕೊಳ್ಳಲಿ ಎಂದು ಹೇಳಿದ ಜೋಷಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಬಂದ ಬಳಿಕ ಗುತ್ತಿಗೆದಾರರು, ಅಧಿಕಾರಿ ವರ್ಗದವರು ಸಚಿವರು, ಶಾಸಕರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬೆಳಗಾವಿ, ಯಾದಗಿರಿ, ದಾವಣಗೆರೆ, ಬೀದರ್, ಗುಲ್ಬರ್ಗ ಎಲ್ಲ ಜಿಲ್ಲೆಗಳಲ್ಲೂ ಆತ್ಮಹತ್ಯೆ ಸರಣಿ ನಡೆದಿದೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ತಮ್ಮ ಸ್ಥಾನ ಬಿಟ್ಟು ಕೊಡಬೇಕೆಂದು ಹೈಕೋರ್ಟ್ ಹೇಳಿತ್ತು. ಆದರೆ ಸ್ಥಾನ ಬಿಡದೆ ತನ್ನ ಪತ್ನಿಯನ್ನು ಹಗರಣದಿಂದ ರಕ್ಷಣೆ ಮಾಡಿದ್ದಾರೆ. ಇವರು ಅಧಿಕಾರದಲ್ಲಿ ಇಲ್ಲದೇ ಇರುತ್ತಿದ್ದರೆ ಇಷ್ಟು ಬೇಗ ತನಿಖೆ ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.
ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಆಗುತ್ತಾ ಎಂದು ಕೇಳಿದ ಪ್ರಶ್ನೆಗೆ, ಅದನ್ನು ಕೇಂದ್ರ ನಾಯಕರು ನಿರ್ಧರಿಸುತ್ತಾರೆ, ನಮ್ಮ ಪಕ್ಷದಲ್ಲಿ ಪ್ರತಿ ವರ್ಷವೂ ಆಂತರಿಕ ಚುನಾವಣೆ ನಡೆಯುತ್ತದೆ. ದೇಶಾದ್ಯಂತ ಬೂತ್ ಮಟ್ಟದಿಂದ ಹಿಡಿದು ಮಂಡಲ, ಜಿಲ್ಲೆ, ರಾಜ್ಯ ಪದಾಧಿಕಾರಿ ಸ್ಥಾನಕ್ಕೆ ಚುನಾವಣೆ ಆಗುತ್ತದೆ. ಅಗತ್ಯ ಎಂದು ಕಂಡುಬಂದರೆ ಪದಾಧಿಕಾರಿಗಳನ್ನು ಬದಲಾವಣೆ ಮಾಡುತ್ತಾರೆ. ಎಲ್ಲ ಕಡೆಯೂ ಈ ಪ್ರಕ್ರಿಯೆ ನಡೆಯುತ್ತದೆ, ಹಾಲಿ ಇದ್ದವರನ್ನೂ ಮತ್ತೊಮ್ಮೆ ಆಯ್ಕೆ ಮಾಡುವ ಸಂದರ್ಭವೂ ಇರುತ್ತದೆ. ನಾಲ್ಕೈದು ತಿಂಗಳ ಹಿಂದೆ ಕೆಲವು ರಾಜ್ಯಗಳಲ್ಲಿ ರಾಜ್ಯಾಧ್ಯಕ್ಷರ ಆಯ್ಕೆ ಆಗಿತ್ತು. ಅಲ್ಲಿಯೂ ಮತ್ತೆ ಆಂತರಿಕ ಚುನಾವಣೆ ನಡೆಯುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಎಂಎಲ್ಸಿ ರವಿಕುಮಾರ್, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರೇಮಾನಂದ ಶೆಟ್ಟಿ ಮತ್ತಿತರರಿದ್ದರು.
Click this button or press Ctrl+G to toggle between Kannada and English