ಅಧ್ಯಾಪಿಕೆ ಕೆ. ಎ. ರೋಹಿಣಿಯವರಿಗೆ “ಬೈಕಾಡಿ ಜನಾರ್ದನ್ ಆಚಾರ್ ಪ್ರಶಸ್ತಿ 2025” ಪ್ರದಾನ

12:13 AM, Tuesday, January 7th, 2025
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ‘ಬೈಕಾಡಿ ಪ್ರತಿಷ್ಠಾನ ಮಂಗಳೂರು’ ಇದರ ವತಿಯಿಂದ ಬೈಕಾಡಿ ಜನಾರ್ದನ ಆಚಾರ್ ಅವರ ಹುಟ್ಟುಹಬ್ಬದಂದು ನೀಡುವ 5ನೇ ವರ್ಷದ ‘ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿ ಪ್ರದಾನ’ ಸಮಾರಂಭವು ನಗರದ ಉರ್ವಸ್ಟೋರ್ ನ ತುಳು ಭವನದ ಪ್ರೊಫೆಸರ್ ಅಮೃತ ಸೋಮೇಶ್ವರ ಸಭಾಂಗಣದಲ್ಲಿ ಭಾನುವಾರ ದಿನಾಂಕ 5 ರಂದು ಸಂಪನ್ನಗೊಂಡಿದೆ.

ಶ್ರೀ ಜಗದ್ಗುರು ದುರುದುಂಡೀಶ್ವರ ಸಿದ್ಧಸಂಸ್ಥಾನ ಮಠ, ಬೆಳಗಾವಿಯ ನಿಡಸೋಸಿಯ ಉತ್ತರಾಧಿಕಾರಿಗಳಾದ ಶ್ರೀ ನಿಜಲಿಂಗೇಶ್ವರ ಸ್ವಾಮಿಗಳ ಸಾನಿಧ್ಯದಲ್ಲಿ ಈ ಕಾರ್ಯಕ್ರಮವು ನಡೆಯಿತು. ಸ್ವಾಮಿಗಳು ಆಶೀರ್ವಚನ ನೀಡುತ್ತಾ, “ಬೈಕಾಡಿ ಜನಾರ್ದನ ಆಚಾರ್ ಇವರೊಬ್ಬ ಕಲೆಯ ಆರಾಧಕರಾಗಿದ್ದು, ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರ ತತ್ವಗಳನ್ನು ಆಳವಾಗಿ ಅಧ್ಯಯನ ಮಾಡಿ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಕಲೆ ಸಂಸ್ಕೃತಿಯ ಬಗ್ಗೆ ಅವರಿಗೆ ಅಪಾರ ಆಸಕ್ತಿ ಇತ್ತು. ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಿದವರನ್ನು ಗುರುತಿಸುವ ಕೆಲಸ ಈ ಪ್ರತಿಷ್ಠಾನದಿಂದ ಆಗುತ್ತಿದೆ” ಎಂದು ಪ್ರೋತ್ಸಾಹದ ಮಾತುಗಳನ್ನಾಡಿದರು.

ಮಾಜಿ ಸೈನಿಕರು ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಶಾಸಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ ಮಾತನಾಡಿ “ಮಕ್ಕಳಲ್ಲಿ ಮಕ್ಕಳಾಗಿ ಬೆರೆಯುವ ಪ್ರವೃತ್ತಿ ಬೈಕಾಡಿ ಜನಾರ್ದನ ಆಚಾರ್ ಅವರಲ್ಲಿತ್ತು. ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಒಳ್ಳೆಯ ವಿಚಾರವನ್ನು ಸಮಾಜಕ್ಕೆ ಕೊಟ್ಟವರು. ಅವರ ಹೆಜ್ಜೆ ಗುರುತು ನಮ್ಮ ಬದುಕಿನಲ್ಲಿ ಅನುಕರಣೀಯ. ಆ ಮೂಲಕ ಪ್ರತಿನಿತ್ಯ ಅವರ ಸಂಸ್ಮರಣೆಯಾಗುತ್ತದೆ.”ಎಂದರು.

ಸಾಹಿತಿಯಾಗಿ, ಸಮಾಜ ಸೇವಕಿಯಾಗಿ, ಸಾವಿರಾರು ಸತ್ಪ್ರಜೆಗಳನ್ನು ಸಮಾಜಕ್ಕೆ ನೀಡಿದ ಶಿಕ್ಷಕಿಯಾಗಿ, ಈಗ ನಿವೃತ್ತಿ ಹೊಂದಿರುವ ಅಧ್ಯಾಪಿಕೆ ಶ್ರೀಮತಿ ಕೆ. ಎ. ರೋಹಿಣಿಯವರಿಗೆ “ಬೈಕಾಡಿ ಜನಾರ್ದನ್ ಆಚಾರ್ ಪ್ರಶಸ್ತಿ 2025″ನ್ನು ಪ್ರದಾನಿಸಲಾಯಿತು.

ರಾಜ್ಯಮಟ್ಟದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಡಾ. ಎಸ್. ಆರ್. ಹರೀಶ ಆಚಾರ್ಯ, ಪ್ರಶಸ್ತಿ ಪುರಸ್ಕೃತ ಹಾಸನದ ಶ್ರೀ ರಾಜಾರಾಮ ತೊಗಲು ಬೊಂಬೆ ಮೇಳದ ಗುಂಡುರಾಜು, ಧ್ವನಿ ಫೌಂಡೇಶನ್ ಮೈಸೂರು ಇದರ ಸಂಸ್ಥಾಪಕಿ ಶ್ರೀಮತಿ ಶ್ವೇತ ಮಡಪ್ಪಾಡಿ, ಇವರೆಲ್ಲರೂ ಅಭ್ಯಾಗತರಾಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದು ಶುಭ ಹಾರೈಸಿದರು. ಉದಯೋನ್ಮುಖ ಗಾಯಕಿ ಕುಮಾರಿ ನಿರೀಕ್ಷಾ ಯು. ಕೆ. ಮತ್ತು ಗಾಯಕ ಮಾ. ಆಯುಷ್ ಪ್ರೇಮ್ ಇವರ ಸುಮಧುರ ಭಾವಗಾನ ಸಮಾರಂಭಕ್ಕೆ ಅಪೂರ್ವ ಕಳೆ ನೀಡಿ ಸಂಗೀತಾಸಕ್ತರನ್ನು ಮುದಗೊಳಿಸಿತು.

ಪ್ರತಿಷ್ಠಾನದ ಶ್ರೀ ಭರತ್ ರಾಜ್ ಬೈಕಾಡಿ ಸ್ವಾಗತಿಸಿ, ಅಕ್ಷತಾ ಬೈಕಾಡಿ ಸನ್ಮಾನಿತರನ್ನು ಪರಿಚಯಿಸಿ, ರತ್ನಾವತಿ ಜೆ. ಬೈಕಾಡಿ ವಂದಿಸಿದರು. ಶ್ರೀಮತಿ ಮಾಧುರಿ ಶ್ರೀರಾಮ್ ಸಮರ್ಥವಾಗಿ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ಪ್ರಶಸ್ತಿ ಪುರಸ್ಕೃತಗುಂಡುರಾಜು ಮತ್ತು ತಂಡದಿಂದ “ಸುಪ್ರಭಾ ವಿಲಾಸ” ತೊಗಲು ಬೊಂಬೆಯಾಟದ ಪ್ರದರ್ಶನ ನಡೆಯಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English