ಗ್ರಾಮೀಣ ಪ್ರದೇಶದ ಆಸ್ಪತ್ರೆಯ ದೊಡ್ಡ ಸಾಧನೆ ವಿಶ್ವಮಾನ್ಯವಾಗಿದೆ

9:39 PM, Sunday, January 26th, 2025
Share
1 Star2 Stars3 Stars4 Stars5 Stars
(No Ratings Yet)
Loading...

ಉಜಿರೆ: ಡಾ. ಮಹೇಶ್ ಕೆ. ಮತ್ತು ಡಾ. ಶತಾನಂದಪ್ರಸಾದ್ ರಾವ್ ನೇತೃತ್ವದಲ್ಲಿ ತಜ್ಞವೈದ್ಯರ ತಂಡ ಶಸ್ತ್ರಚಿಕಿತ್ಸೆಯ ಮೂಲಕ ಮಹಿಳೆಯೊಬ್ಬರ ಬೆನ್ನುಮೂಳೆಯಲ್ಲಿದ್ದ ಮೂರು ಸೆಂ. ಮೀ ಗಾತ್ರದ ಗೆಡ್ಡೆಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿ ರೋಗಿಗೆ ಶಾಶ್ವತ ಪರಿಹಾರ ನೀಡಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ವೈದ್ಯರ ತಂಡ ಮತ್ತು ಸಿಬ್ಬಂದಿಯನ್ನು ಗೌರವಿಸಿ ಅಭಿನಂದಿಸಿದರು.

ಅವರು ಭಾನುವಾರ ಉಜಿರೆಯಲ್ಲಿರುವ ಎಸ್.ಡಿ.ಎಮ್. ಆಸ್ಪತ್ರೆಯಲ್ಲಿ ವಿಶ್ವದಲ್ಲೇ ಮೊದಲ ಬಾರಿ ಬೆನ್ನುಮೂಳೆಯ ಗೆಡ್ಡೆಯನ್ನು ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದು ರೋಗಿಗೆ ಶಾಶ್ವತ ಪರಿಹಾರ ನೀಡಿದ ವೈದ್ಯರು ಮತ್ತು ತಂಡದವರನ್ನು ಗೌರವಿಸಿ ಅಭಿನಂದಿಸಿದರು.

ಯಾವುದೇ ಹೊಸ ಪ್ರಯೋಗ ಮತ್ತು ಶಸ್ತçಚಿಕಿತ್ಸೆ ಮಾಡುವಾಗ ಅನುಭವ ಹಾಗೂ ಪರಿಣತಿಯೊಂದಿಗೆ ಹೆಚ್ಚಿನ ಧೈರ್ಯ ಮತ್ತು ಆತ್ಮವಿಶ್ವಾಸವೂ ಬೇಕಾಗುತ್ತದೆ. ದೇವರ ಅನುಗ್ರಹದಿಂದ ಗ್ರಾಮೀಣ ಪ್ರದೇಶದ ಆಸ್ಪತ್ರೆಯಲ್ಲಿ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಶಸ್ತ್ರಚಿಕಿತ್ಸೆ ನಡೆಸಿದ ಬಗ್ಗೆ ಹೆಗ್ಗಡೆಯವರ ಸಂತಸ ವ್ಯಕ್ತಪಡಿಸಿದರು.

ಶಸ್ತ್ರಚಿಕಿತ್ಸೆಯ ವಿಧಾನವನ್ನು ವೀಡಿಯೊ ಪ್ರದರ್ಶನದ ಮೂಲಕ ವೈದ್ಯರು ವಿವರಿಸಿದರು.

ಪ್ರಕರಣದ ವಿವರ: ಶಿಶಿಲ ಗ್ರಾಮದ 65ವರ್ಷ ಪ್ರಾಯದ ಧರ್ಣಮ್ಮ ಎಂಬ ಮಹಿಳೆ ಬೆನ್ನುನೋವು ಪೀಡಿತರಾಗಿ ಚಿಕಿತ್ಸೆಗೆಂದು ಉಜಿರೆಯ ಎಸ್.ಡಿ.ಎಮ್. ಆಸ್ಪತ್ರೆಗೆ ಬಂದಿದ್ದರು. ಆಕೆಯನ್ನು ಪರೀಕ್ಷಿಸಿದಾಗ ಬೆನ್ನುಮೂಳೆಯಲ್ಲಿ ೩ ಸೆಂ. ಮೀ. ಗಾತ್ರದ ಗೆಡ್ಡೆ ಕಂಡುಬಂತು

ಸತತ ಆರು ಗಂಟೆಗಳ ಕಾಲ ಎಂಡೋಸ್ಕೋಪಿಕ್ ತಂತ್ರಜ್ಞಾನ ಬಳಸಿ ನಡೆಸಿದ ಶಸ್ತ್ರಚಿಕಿತ್ಸೆಯಲ್ಲಿ ಕೇವಲ ಒಂದು ಸೆಂ. ಮೀ. ಛೇದನದೊಂದಿಗೆ ಮೂರು ಸೆಂ. ಮೀ. ಗೆಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆಯಲಾಯಿತು. ಹೆಚ್ಚಿನ ರಕ್ತಸ್ರಾವವಾಗದಂತೆ ಹಾಗೂ ಇತರ ಅಂಗಾಂಗ ಗಳಿಗೆ ಹಾನಿಯಾಗದಂತೆ ನೋವು ರಹಿತ ಶಸ್ತ್ರಚಿಕಿತ್ಸೆ ಮೂಲಕ ಆಕೆ ಈಗ ಪೂರ್ಣ ಆರೋಗ್ಯವನ್ನು ಹೊಂದಿದ್ದಾರೆ.

ಹಿಂದೆ ಇಂತಹ ಶಸ್ತ್ರಚಿಕಿತ್ಸೆಯನ್ನು ತೆರೆದ ತಂತ್ರಜ್ಞಾನ ಬಳಸಿ ಮಾಡಲಾಗುತ್ತಿತ್ತು. ರೋಗಿಗೆ ರಕ್ತದ ನಷ್ಟ ಹಾಗೂ ಸ್ನಾಯುಗಳಿಗೆ ಹಾನಿಯಾಗುವ ಸಾಧ್ಯತೆ ಇತ್ತು ಎಂದು ವೈದ್ಯರು ತಿಳಿಸಿದ್ದಾರೆ.

ವೈದ್ಯರ ತಂಡ: ಡಾ. ಮಹೇಶ್ ಕೆ. ಮತ್ತು ಮೂಳೆ ಶಸ್ತ್ರಚಿಕಿತ್ಸಕರಾದ ಡಾ. ಶತಾನಂದಪ್ರಸಾದ್ ರಾವ್, ಅರೆವಳಿಕೆ ತಜ್ಞರಾದ ಉಜಿರೆಯ ಡಾ. ಚೈತ್ರಾ ಆರ್. – ಇವರ ತಂಡ ಯಶಸ್ವಿ ಶಸ್ತçಚಿಕಿತ್ಸೆ ನಡೆಸಿದರು. ಅರೆವಳಿಕೆ ತಂತ್ರಜ್ಞರಾದ ರಂಜಿತ್ ಮತ್ತು ಅಮಿತಾ, ದಾದಿಯರಾದ ಜ್ಯೋತಿ ಮತ್ತು ಶ್ವೇತಲ್ ಸಹಕರಿಸಿದರು. ಎಂ.ಆರ್.ಐ. ಸ್ಕಾö್ಯನಿಂಗ್ ಮೂಲಕ ಶಸ್ತçಚಿಕಿತ್ಸೆ ಯಶಸ್ವಿಯಾಗಿರುವುದಾಗಿ ತಿಳಿದುಬಂದಿದೆ. ಕೇವಲ ಒಂದು ಲಕ್ಷದ ಎರಡು ಸಾವಿರ ರೂ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಡೆಹರಾಡೂನ್‌ನಲ್ಲಿ ಇತ್ತೀಚೆಗೆ ನಡೆದ ಜಾಗತಿಕ ಬೆನ್ನುಮೂಳೆ ಶಸ್ತ್ರಚಿಕಿತ್ಸಕರ ಸಮಾವೇಶದಲ್ಲಿ ಉಜಿರೆಯ ಯಶಸ್ವಿ ಶಸ್ತ್ರಚಿಕಿತ್ಸೆ ಬಗ್ಗೆ ಪ್ರಸ್ತಾಪಿಸಿದಾಗ ವಿಶ್ವದಲ್ಲೇ ಇದು ಮೊದಲ ಯಶಸ್ವಿ ಎಂಡೋಸ್ಕೋಪಿಕ್ ಇಂಟ್ರಾಡ್ಯೂರಲ್ ಬೆನ್ನುಮೂಳೆಯ ಗೆಡ್ಡೆ ಹೊರತೆಗೆಯುವ ಯಶಸ್ವಿ ಶಸ್ತ್ರಚಿಕಿತ್ಸೆ ಎಂದು ಎಲ್ಲರೂ ಅಭಿನಂದಿಸಿದ್ದಾರೆ.

ಆಸ್ಪತ್ರೆಗೆ ಬೇಕಾದ ಹೊಸ ಎಂ.ಆರ್.ಐ. ಅಳವಡಿಸುವುದಾಗಿ ಹೆಗ್ಗಡೆಯವರ ಭರವಸೆ ನೀಡಿದರು.

ಹೇಮಾವತಿ ವೀ. ಹೆಗ್ಗಡೆಯವರು ಕೂಡಾ ವೈದ್ಯರ ಸೇವೆ, ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಿದರು.

ವೈದ್ಯಕೀಯ ಅಧೀಕ್ಷಕ ಡಾ. ದೇವೇಂದ್ರ ಕುಮಾರ್ ಮತ್ತು ಅರೆವಳಿಕೆ ತಜ್ಞರಾದ ಉಜಿರೆಯ ಡಾ. ಚೈತ್ರಾ ಆರ್. ಉಪಸ್ಥಿತರಿದ್ದರು.

ಶಸ್ತ್ರಚಿಕಿತ್ಸೆಯಿಂದ ಗುಣಮುಖರಾದ ಶಿಶಿಲದ ಧರ್ಣಮ್ಮ ಕೂಡಾ ಸಭೆಯಲ್ಲಿ ಉಪಸ್ಥಿತರಿದ್ದರು.

ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಜನಾರ್ದನ್ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸಿದ ಸಾರ್ವಜನಿಕ ಸಂಪರ್ಕಾಧಿಕಾರಿ ಚಿದಾನಂದ ಕೊನೆಯಲ್ಲಿ ಧನ್ಯವಾದವಿತ್ತರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English