ದಕ್ಷಿಣ ಕನ್ನಡ ಜಿಲ್ಲೆಯ ಕೈಗಾರಿಕಾ ವಲಯಗಳು ಸುರಕ್ಷಿತವೇ?

5:54 PM, Tuesday, January 29th, 2013
Share
1 Star2 Stars3 Stars4 Stars5 Stars
(No Ratings Yet)
Loading...

coastal industrial zonesಮಂಗಳೂರು : ಬೈಕಂಪಾಡಿಯ ಕೈಗಾರಿಕಾ ವಲಯದಲ್ಲಿರುವ ಪ್ರೈಮಸಿ ಇಂಡಸ್ಟ್ರೀಸ್ ನಲ್ಲಿ ಜನವರಿ 10ರ ತಡರಾತ್ರಿ ಸಂಭವಿಸಿದ ಬೆಂಕಿ ಅನಾಹುತ ಪ್ರಕರಣವನ್ನು ಗಮನಿಸುವಾಗ ದಕ್ಷಿಣ ಕನ್ನಡ ಜಿಲ್ಲೆಯ ಬೈಕಂಪಾಡಿ, ಎಯ್ಯಾಡಿ, ಮುಡಿಪು ಇತ್ಯಾದಿ ಕೈಗಾರಿಕಾ ವಲಯಗಳು ಅದೆಷ್ಟು ಸುರಕ್ಷಿತ ಎಂಬ ಪ್ರಶ್ನೆ ನಾಗರಿಕ ಸಮಾಜಕ್ಕೆ ಕಾಡುತ್ತಿದೆ.

ಯಾಕೆಂದರೆ, ಬೈಕಂಪಾಡಿಯ `ಪ್ರೈಮಸಿ’ಯಲ್ಲಿ ಮೊನ್ನೆ ಕಾಣಿಸಿಕೊಂಡದ್ದು ಅಂತಹ ಬೆಂಕಿ ದುರಂತ. ಮಂಗಳೂರು, ಮೂಡಬಿದಿರೆ, ಬಂಟ್ವಾಳ, ಪುತ್ತೂರು, ಉಡುಪಿ ಸಹಿತ 14 ಅಗ್ನಿಶಾಮಕ ದಳದ ವಾಹನಗಳು, ಎಂಸಿಎಫ್, ಎಂಆರ್ ಪಿಎಲ್, ಓಎನ್ ಜಿಸಿಯ 4 ಫೈರ್ ಫೈಟರ್ಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರೂ ಕೂಡ ಸಂಪೂರ್ಣ ಬೆಂಕಿ ನಂದಿಸಲು 12 ಗಂಟೆ ಬೇಕಾಯಿತು. ಒಂದು ವೇಳೆ ಇವಿಷ್ಟು ಅಗ್ನಿಶಾಮಕ ದಳಗಳು ಸಕಾಲಕ್ಕೆ ಸಿಗದೇ ಹೋಗಿದ್ದರೆ, ಬೈಕಂಪಾಡಿ ಮಾತ್ರವಲ್ಲ ಆಸುಪಾಸಿನ ನಾಲ್ಕೆದು ಹಳ್ಳಿಗಳು ಹೊತ್ತಿ ಉರಿಯುವುದರಲ್ಲಿ ಸಂಶಯವಿರಲಿಲ್ಲ.

ಸಾವಿರಾರು ಜನರು ಕೆಲಸ ಪಾಳಿ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸುವ ಸಂಸ್ಥೆಯಲ್ಲಿ ಸಂಭವಿಸಿದ ಬೆಂಕಿಯನ್ನು ನಂದಿಸಲು ದಿನವಿಡೀ ಒದ್ದಾಡುವ ಪರಿಸ್ಥಿತಿ ಆಡಳಿತ ಯಂತ್ರದ್ದಾಗಿದ್ದರೆ, ಕೈಗಾರಿಕಾ ವಲಯಗಳಲ್ಲಿ ಸಂಭವಿಸಬಹುದಾದ ಅಪಾಯದ ಪರಿಸ್ಥಿತಿಯನ್ನು ನಿಭಯಿಸುವಲ್ಲಿ ಸಮಾಜ ಎಷ್ಟು ಸಿದ್ಧಗೊಂಡಿದೆ ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ.

ಸರಕಾರ ಕೂಡ ಪೂರ್ವಾಪರವಿಲ್ಲದೆ ಆಯಾ ಪ್ರದೇಶದ ಧಾರಣಾ ಸಾಮಥ್ರ್ಯವನ್ನು ಅರಿಯದೆ ಸ್ಥಳೀಯರ ವಿರೋಧವಿದ್ದರೂ ಕೂಡ ಜನವಸತಿ ಸಮೀಪದಲ್ಲೇ ಕೈಗಾರಿಕೆಗಳಿಗೆ ಅನುಮತಿ ನೀಡುವುದು ವಿಪರ್ಯಾಸ.

ಕೈಗಾರಿಕೆಗಳನ್ನು ಸ್ಥಾಪಿಸಿ ಕೇವಲ ಲಾಭ ಗಳಿಸುವುದು ಮಾತ್ರ ಗುರಿಯಾಗಬಾರದು. ಅದರ ಜತೆ ತತ್ಕ್ಷಣಕ್ಕೆ ಎದುರಾಗುವ ಅಪಾಯವನ್ನು ಹೇಗೆ ನಿಭಯಿಬೇಕು ಎಂಬುದರ ಬಗ್ಗೆಯೂ ಸಿದ್ಧತೆ ಮಾಡಿಕೊಳ್ಳಬೇಕು. ಅದಕ್ಕೆ ಸಂಬಂಧಪಟ್ಟ ಇಲಾಖೆಗಳ ಸಹಿತ ಕೈಗಾರಿಕೋದ್ಯಮಿಗಳು ಕೂಡ ಹೊಣೆಗಾರರಾಗಿದ್ದಾರೆ.

ಪ್ರೈಮಸಿ ಇಂಡಸ್ಟ್ರೀಸ್ ನಲ್ಲಿ ಘಟಿಸಿದ ಬೆಂಕಿ ದುರಂತದಲ್ಲಿ ಸಾವು ಸಂಭವಿಸಿಲ್ಲ. ಆದರೆ ಬೆಂಕಿಯ ಕೆನ್ನಾಲಿಯಿಂದ ಪರಿಸರದಾದ್ಯಂತ ದಟ್ಟ ಹೊಗೆ ಹಲವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ.

ಪ್ರತೀ ದಿನ ಮೂರು ಪಾಳಿಯಲ್ಲಿ 1200ಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ. ರಾತ್ರಿಯ ಪಾಳಿಯಲ್ಲಂತೂ ಸುಮಾರು 400 ಮಂದಿ ಇಲ್ಲಿ ಕೆಲಸ ಮಾಡುತ್ತಾರೆ. ಆದರೆ, ಮೊನ್ನೆ ರಾತ್ರಿ ಅಲ್ಲಿ ಕೆಲಸಗಾರರು ಇಲ್ಲದಿದ್ದುದು ಪುಣ್ಯ ಎನ್ನಬಹುದು. ಒಂದು ವೇಳೆ ರಾತ್ರಿ ಪಾಳಿಯ ಅಷ್ಟು ಸಿಬ್ಬಂದಿಗಳು ಅಲ್ಲಿದ್ದಿದ್ದರೆ ಅಥವಾ ಬೆಂಕಿ ಸುತ್ತಮುತ್ತಲಿನ ಫ್ಯಾಕ್ಟರಿಗೆ ಹಬ್ಬಿದ್ದರೆ ಮುಂದೇನು ಎಂಬುದು ಊಹಿಸಲೂ ಅಸಾಧ್ಯ.

ಮೊನ್ನೆ ನಡೆದ ಘಟನೆ ಅಪಾಯದ ಮುನ್ಸೂಚನೆ ಮಾತ್ರ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಂಭೀರ ಚಿಂತನೆ ಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

ಕೈಗಾರಿಕಾ ವಲಯ ಅಂದ ಮೇಲೆ ಅದು ರಾಸಾಯನಿಕಗಳಿಂದ ಕೂಡಿದ ಪ್ರದೇಶ. ನಾನಾ ರೀತಿಯ ಉತ್ಪನ್ನಗಳಿಗೆ ಅಪಾಯಕಾರಿ ರಾಸಾಯನಿಕಗಳ ಅಗತ್ಯವಿರುತ್ತದೆ. ಹಾಗಾಗಿ ಬಹುತೇಕ ಹೆಚ್ಚಿನ ಕೈಗಾರಿಕೆಗಳು ರಾಸಾಯನಿಕ ಅಥವಾ ಬೆಂಕಿ ಹೊತ್ತಿಕೊಳ್ಳುವ ಪದಾರ್ಥಗಳನ್ನು ಅಪಾರ ಪ್ರಮಾಣದಲ್ಲಿ ಹೊಂದಿರುತ್ತವೆ. ಕೆಐಎಡಿಬಿ ಪ್ರಕಾರ 482 ಎಕರೆ ಪ್ರದೇಶದ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ 504 ವಿವಿಧ ರೀತಿಯ ಕೈಗಾರಿಕೆಗಳಿವೆ. ಆದರೆ ಅದರಲ್ಲಿ ಅದೆಷ್ಟು ಕೈಗಾರಿಕೆಗಳು ರಾಸಾಯನಿಕ, ಅಪಾಯಕಾರಿ ಎಂಬ ಮಾಹಿತಿ ಮಾತ್ರ ಕೆಐಎಡಿಬಿಯಲ್ಲಿ ಇಲ್ಲ. ಅವರ ಪ್ರಕಾರ ಕೈಗಾರಿಕೆಗಳಿಗೆ ಭೂಮಿ ನೀಡುವುದು ಮಾತ್ರ ಅವರ ಕೆಲಸ. ಇನ್ನು ಸುರಕ್ಷತೆ, ಇತರ ಮಾಹಿತಿಗಳಿಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಕೇಳಬೇಕು.

ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಹೇಳುವಂತೆ, ಬೆಂಕಿ ಅನಾಹುತ ಸಂಭವಿಸಿದ ಫ್ಯಾಕ್ಟರಿಯು ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಮಾಣ ಪತ್ರವನ್ನು ಹೊಂದಿದೆ. ಆದರೆ, ಸುರಕ್ಷತಾ ಕ್ರಮಗಳ ಜವಾಬ್ದಾರಿ ಕೈಗಾರಿಕಾ ಸುರಕ್ಷತಾ ಅಧೀಕ್ಷರದ್ದು.

*ಸಂಸ್ಥೆಯ ನಿರ್ಲಕ್ಷವೂ ಕಾರಣ : ಕೈಗಾರಿಕೆಯಲ್ಲಿ ಅಗ್ನಿ ಅನಾಹುತ ಪತ್ತೆ ವ್ಯವಸ್ಥೆ (ಫಯರ್ ಡಿಟಕ್ಷನ್ ಅಲರ್ಟ್) ಹೊಂದಿರಬೇಕು. ಆದರೆ ಮೊನ್ನೆಯ ಘಟನೆ ಸಂಭವಿಸಿದ ಇಂಡಸ್ಟ್ರಿಯಲ್ಲಿ ಆ ವ್ಯವಸ್ಥೆಯೇ ಇಲ್ಲ. ಹಾಗಾಗಿ ಇದು ಬೆಂಕಿ ವ್ಯಾಪಕವಾಗಿ ಹರಡಿದೆ ಎನ್ನಲಾಗಿದೆ.

ಪ್ರತಿಯೊಂದು ಕೈಗಾರಿಕಾ ಸಂಸ್ಥೆಗಳಲ್ಲೂ ಮುಂಜಾಗೃತಾ ಕ್ರಮವಾಗಿ ಬೆಂಕಿ ನಂದಿಸುವ ಉಪಕರಣ, ಬೆಂಕಿ ಅನಾಹುತವನ್ನು ಪತ್ತೆ ಹಚ್ಚಿ ಸೂಚನೆ ನೀಡುವ ಸಾಧನ ಇರಲೇಬೇಕು. ಅದು ಸೆಕ್ಯುರಿಟಿ ಕೊಠಡಿಗೂ ಸೂಚನೆ ನೀಡುವ ವ್ಯವಸ್ಥೆ ಹೊಂದಿರಬೇಕು. ಆದರೆ ಘಟನೆ ರಾತ್ರಿ ಆಗಿರುವುದರಿಂದ ಬೆಂಕಿ ಕಾಣಿಸಿಕೊಂಡಾಗ ಪತ್ತೆ ಹಚ್ಚಲಾಗಿಲ್ಲ. ಅಲ್ಲದೆ ಅಲರಾಂ ವ್ಯವಸ್ಥೆ ಸೆಕ್ಯುರಿಟಿ ರೂಂಗೆ ಕನೆಕ್ಟ್ ಆಗಿರಲಿಲ್ಲ. ಹಾಗಾಗಿ ಬೆಂಕಿ ಜಾಸ್ತಿಯಾದಾಗ ಗಮನಕ್ಕೆ ಬಂದರೂ ಏನೂ ಮಾಡಲು ಅಸಾಧ್ಯ ಎಂಬ ಮಾತು ಕೇಳಿ ಬರುತ್ತಿದೆ.

ನಿರ್ಧಿಷ್ಟ ಕಾರ್ಖಾನೆಗಳು ಅಗ್ನಿಶಾಮಕ ದಳದಿಂದ ಎನ್ಒಸಿ (ನಿರಪೇಕ್ಷಣಾ ಪತ್ರ) ಪಡೆದಿರಬೇಕು. ಈ ಸಂಸ್ಥೆ ಅದನ್ನೂ ಹೊಂದಿಲ್ಲ ಎನ್ನಲಾಗಿದೆ. ಬೆಂಕಿ ಸಂಭವಿಸಿದಾಗ ಅದರಿಂದ ಪಾರಾಗಲು ಕಾರ್ಮಿಕರಿಗೆ ಮುಂಜಾಗೃತಾ ಕ್ರಮಗಳ ಬಗ್ಗೆ ತರಬೇತಿಯನ್ನು ನೀಡಬೇಕಾಗುತ್ತದೆ. ಆದರೆ, ಪ್ರೈಮಸಿ ಸಂಸ್ಥೆಯ ಆ ತರಬೇತಿ ನೀಡಿದ ಬಗ್ಗೆ ಅನುಮಾನ ಕಾಡುತ್ತದೆ.

ಜಿಲ್ಲೆಯಲ್ಲಿ 10 ಕೈಗಾರಿಕೆಗಳು ಅಪಾಯಕಾರಿ ಎಂದು ಗುರುತಿಸಲಾಗಿದ್ದು, ಅವುಗಳಲ್ಲಿ ಒಂದು ಬೈಕಂಪಾಡಿ ಕೈಗಾರಿಕಾ ವಲಯದಲ್ಲಿದೆ. ಅಲ್ಲಿ ಮುಂಜಾಗೃತಾ ಕ್ರಮವಾಗಿ ಪ್ರಾತ್ಯಕ್ಷಿಕೆಯ ಮೂಲಕ ಅಪಾಯಗಳನ್ನು ಎದುರಿಸುವ ಬಗ್ಗೆ ಆರು ತಿಂಗಳಿಗೊಮ್ಮೆ ತರಬೇತಿ ನೀಡಲಾಗುತ್ತದೆ. ಜಿಲ್ಲಾ ಮಟ್ಟದ ತುರ್ತು ಪರಿಸ್ಥಿತಿ ನಿರ್ವಹಣಾ ಸಮಿತಿಯೂ ಈ ಅಪಾಯಕಾರಿ ಕೈಗಾರಿಕೆಗಳ ಬಗ್ಗೆ ನಿಗಾ ವಹಿಸುತ್ತಿರುತ್ತದೆ. ಕಂಪೆನಿಗಳು ಕೂಡಾ ಕಟ್ಟುನಿಟ್ಟಾಗಿ ಸುರಕ್ಷಾ ಕ್ರಮಗಳನ್ನು ಪಾಲಿಸಬೇಕು.

ಜಿಲ್ಲೆಯ ಸುಮಾರು 500ರಷ್ಟು ಕೈಗಾರಿಕೆಗಳಿಗೆ ಸುರಕ್ಷಾ ಮೇಲ್ವಿಚಾರಣೆಗೆ ಇರುವುದು ಒಬ್ಬ ಅಧಿಕಾರಿ ಮಾತ್ರ. ಹಾಗಾಗಿ ಅವರು ಎಲ್ಲಾ ಕೈಗಾರಿಕೆಗಳಲ್ಲಿ ನಿರಂತರ ಭೇಟಿ ನೀಡಿ ಪರಿಶೀಲಿಸುವುದು ಅಸಾಧ್ಯ. ಹಾಗಿದ್ದರೂ ಅತಿ ಅಪಾಯಕಾರಿ ಕೈಕಾರಿಕೆಗಳಿಗೆ ಆರು ತಿಂಗಳಿಗೊಮ್ಮೆ ಪರಿಶೀಲನೆ ನಡೆಸಿದರೆ ಸಂಭವನೀಯ ಅಪಾಯ ತಪ್ಪಿಸಬಹುದೋ ಏನೋ?.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English