ಸಮವಸ್ತ್ರಕ್ಕಾಗಿ ಪರದಾಡುವ ಪೊಲೀಸರು!

6:18 PM, Tuesday, January 29th, 2013
Share
1 Star2 Stars3 Stars4 Stars5 Stars
(No Ratings Yet)
Loading...

Indian policeಮಂಗಳೂರು : ಪೊಲೀಸರು ಲಾಠಿಚಾರ್ಜ್ ಮಾಡಿದರು… ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದರು… ಪೊಲೀಸರು ಲಂಚ ಕೇಳಿದರು… ಪೊಲೀಸರು ದರ್ಪದಿಂದ ವರ್ತಿಸಿದರು… ಪೊಲೀಸರು ಹಲ್ಲೆ ಮಾಡಿದರು… ಪೊಲೀಸರು ದೌರ್ಜನ್ಯ ಎಸಗಿದರು…

ಹೀಗೆ ಸಾಗುತ್ತದೆ, ಪೊಲೀಸರ ಮೇಲಿನ ಆರೋಪ. ಕೆಲವು ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಹೀಗೆಲ್ಲ ವರ್ತಿಸಿದರೆ ಇನ್ನು ಕೆಲವರಿಗೆ ಜಾತಿ, ಧರ್ಮದ ಅಮಲು ತಗಲಿರುವುದು ಸುಳ್ಳಲ್ಲ. ಹಾಗಂತ ಎಲ್ಲ ಪೊಲೀಸರನ್ನು ಒಂದೆ ತಕ್ಕಡಿಯಲ್ಲಿ ತೂಗುವುದು ಕೂಡ ಸಮಂಜಸವಲ್ಲ.

ಸರಕಾರದ ನೂರಾರು ಇಲಾಖೆಗಳ ಪೈಕಿ ಜನರು ಹೆದರುವುದು ಪೊಲೀಸ್ ಇಲಾಖೆಗೆ ಮಾತ್ರ. ಅದಕ್ಕೆ ಅವರು ಧರಿಸುವ ಸಮವಸ್ತ್ರ ಮತ್ತು ಅವರ ಕೈಯಲ್ಲಿರುವ ಲಾಠಿ, ರೈಫಲ್ ಕಾರಣ ಎಂದರೂ ತಪ್ಪಲ್ಲ. ಆದರೆ ಪೊಲೀಸರ ಬದುಕು ಎಷ್ಟೊಂದು ಜರ್ಜರಿತಗೊಂಡಿದೆ ಎಂಬುದಕ್ಕೆ ಅವರನ್ನು ಬಲ್ಲವರಿಗೆ ಮಾತ್ರ ತಿಳಿದ ವಿಚಾರ. ಆದರೆ, ಅದನ್ನು ಎಲ್ಲೂ ಬಹಿರಂಗಪಡಿಸಲಾಗದ ಸಂಕಷ್ಟದಲ್ಲಿ ಪೊಲೀಸರಿದ್ದಾರೆ.

ಕಳೆದ 2-3 ವರ್ಷದಿಂದ ರಾಜ್ಯದ ಬಹುತೇಕ ಜಿಲ್ಲೆಯ ಪೊಲೀಸರಿಗೆ ಸಮವಸ್ತ್ರ, ಶೂ, ಬೆಲ್ಟ್ ಪೂರೈಕೆಯಾಗಿಲ್ಲ. ಹಳೆಯ ಸಮವಸ್ತ್ರವನ್ನೇ ಧರಿಸಿ `ಸೇವೆ’ ಸಲ್ಲಿಸುವುದು ಅನಿವಾರ್ಯವಾಗಿದೆ. ಆದರೆ, ಇದನ್ನು ಪೊಲೀಸರು ಯಾರಲ್ಲೂ ಹೇಳಿಕೊಂಡು ತಿರುಗಾಡಲು ಸಾಧ್ಯವಿಲ್ಲ. ಯಾಕೆಂದರೆ, ಒಬ್ಬ ಪೊಲೀಸ್ ಗೆ ಸಮಾಜದಲ್ಲಿ ಗೌರವ ಸಿಗುವುದು ಆತ ಧರಿಸಿದ ಸಮವಸ್ತ್ರದಿಂದ. ಅದೇ ಸಮವಸ್ತ್ರ ಸರಕಾರದಿಂದ ಪೂರೈಕೆಯಾಗಿಲ್ಲ ಎಂದರೆ ಅದು ಪೊಲೀಸರಿಗೆ ಮಾಡಿದ ಅವಮಾನ ಎಂದರೂ ತಪ್ಪಾಗಲಾರದು.

ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಿಂದ ಪ್ರತೀ ವರ್ಷ ಆಯಾ ಜಿಲ್ಲಾ ಪೊಲೀಸ್ ಮತ್ತು ಕಮಿಷನರೇಟ್ ಕಚೇರಿಗೆ ಪೊಲೀಸ್ ಕಾನ್ ಸ್ಟೇಬಲ್ ನಿಂದ ಹಿಡಿದು ಸಬ್ ಇನ್ಸ್ಪೆಕ್ಟರ್ 2 ಜತೆ ಸಮವಸ್ತ್ರ, ಶೂ, ಸಾಕ್ಸ್, ಬೆಲ್ಟ್, ಕ್ಯಾಪ್, ವಿಝಿಲ್, ಸರಬರಾಜು ಆಗಬೇಕು. ಆದರೆ 2009ರಿಂದ ಇದ್ಯಾವುದೂ ಪೂರೈಕೆಯಾಗಿಲ್ಲ. ಹಾಗಾಗಿ ಪೊಲೀಸರು ಮಾಸಿದ ಸಮವಸ್ತ್ರವನ್ನೇ ಧರಿಸಿ ಕೆಲಸ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಪ್ರತೀ ವರ್ಷ ಎರಡು ಜತೆ ಖಾಕಿ ಪ್ಯಾಂಟ್ ಮತ್ತು ಅಂಗಿ (ಸಂಚಾರಿ ಪೊಲೀಸರಿಗೆ ಬಿಳಿ ಅಂಗಿ)ಯ ಬಟ್ಟೆ ಮತ್ತು ಒಂದು ಜತೆ ಪ್ಯಾಂಟ್-ಅಂಗಿಯ ಹೊಲಿಗೆಗೆ 90 ರೂಪಾಯಿಯಂತೆ ಎರಡು ಜತೆ ಪ್ಯಾಂಟ್-ಅಂಗಿ ಹೊಲಿಯಲು 180 ರೂಪಾಯಿ ನೀಡಲಾಗುತ್ತದೆ. ಆದರೆ ಈಗ ಗ್ರಾಮಾಂತರ ಪ್ರದೇಶದಲ್ಲೂ ಕೂಡ 1 ಪ್ಯಾಂಟ್ ಮತ್ತು 1 ಅಂಗಿ ಹೊಲಿದರೆ 400 ರೂಪಾಯಿ ಕೊಡಬೇಕಾಗುತ್ತದೆ. ಅದಲ್ಲದೆ, ಬೆಲ್ಟ್-ಶೂ ಕೂಡ ಧರಿಸಲು ಯೋಗ್ಯವಾಗಿಲ್ಲ. ಸಮವಸ್ತ್ರ ಕೂಡ ಕೂಡ ಕಳಪೆ ಗುಣಮಟ್ಟದ್ದಾಗಿದೆ.

ಹೆಚ್ಚಿನ ಪೊಲೀಸರು ಈ ಸಮವಸ್ತ್ರವನ್ನು ಪಡಕೊಳ್ಳಲು ಹಿಂಜರಿಯುತ್ತಾರೆ. ಪಡಕೊಂಡರೂ ಬೇರೆಯವರಿಗೆ ಕೊಟ್ಟು ಸ್ವತ: ತಾವೇ ಅಂಗಡಿಯಿಂದ ಖಾಕಿ ಬಟ್ಟೆ ಬರೆ ಖರೀದಿಸಿ ತಮ್ಮಿಷ್ಟದ ದರ್ಜಿ ಬಳಿ ಹೊಲಿಯಲು ಕೊಡುತ್ತಾರೆ.

ಗಣ್ಯ ವ್ಯಕ್ತಿಗಳ ಆಗಮನ ಸಂದರ್ಭ ಅಥವಾ ಪೆರೇಡ್ ವೇಳೆ ಸಮವಸ್ತ್ರ ಧರಿಸುವುದು ಕಡ್ಡಾಯ. ಕಳೆದ ಮೂರು ವರ್ಷದಿಂದ ಸಮವಸ್ತ್ರ ಬಾರದ ಕಾರಣ ಪೊಲೀಸರು ಅದೇ ಮಾಸಿದ ಸಮವಸ್ತ್ರ ಧರಿಸಿ ಸೇವೆ ಸಲ್ಲಿಸಬೇಕಾಗುತ್ತದೆ. ಇಂದು ಪೊಲೀಸ್ ಇಲಾಖೆಗೆ ಯುವ ಸಮೂಹ ಸೇರ್ಪಡೆಗೊಳ್ಳುತ್ತಿದ್ದು, ಸಮವಸ್ತ್ರದ ಬಗ್ಗೆ ಇಲಾಖೆಯ ಕಾರ್ಯವೈಖರಿ ಮತ್ತು ನಿರ್ಲಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಮಾಸಿದ ಸಮವಸ್ತ್ರ ಧರಿಸಿ ಸೇವೆ ಸಲ್ಲಿಸುವಾಗ ಸಹಜವಾಗಿ ಕೀಳರಿಮೆಗೊಳಗಾಗುತ್ತಿದ್ದಾರೆ.

ಸಮವಸ್ತ್ರದ ಕಥೆ ಹೀಗಾದರೆ, ಪೂರೈಕೆಯಾಗುವ ಶೂ, ಸಾಕ್ಸ್, ಕ್ಯಾಪ್ ಗಳ ಗಾತ್ರ ಕೂಡ ಪೊಲೀಸರಿಗೆ ತಾಳೆಯಾಗುತ್ತಿಲ್ಲ. ಇಲಾಖೆ ನೀಡಿದ ಶೂವನ್ನು ಎರಡ್ಮೂರು ತಿಂಗಳು ಧರಿಸಿದ ಬಳಿಕ ಮತ್ತೆ ಬಳಕೆ ಮಾಡುವಂತಹ ಸ್ಥಿತಿಯಿಲ್ಲ.

ಸಂಚಾರಿ ವಿಭಾಗದ ಪೊಲೀಸರು ದಿನದ 10-12 ಗಂಟೆ ರಸ್ತೆಯಲ್ಲೇ ಕಾಲ ಕಳೆಯಬೇಕಾಗುತ್ತದೆ. ಇದರಿಂದ ಬಿಸಿಲ ಧಗೆಗೆ ಇವರ ಬಟ್ಟೆಬರೆ ಮಾಸುವುದು ಸಹಜ. ಆದರೆ, ಈ ಪೊಲೀಸರು ಕೂಡ ಮಾಸಿದ ಸಮವಸ್ತ್ರಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.

*ಟಿ.ಎ./ಡಿ.ಎ.: ಪೊಲೀಸ್ ಇಲಾಖೆ ನೀಡುವ ಟಿ.ಎ./ಡಿ.ಎ. ಕರಾರುವಕ್ಕಾಗಿಲ್ಲ. ಪ್ರಸಕ್ತ ದಿನವೊಂದಕ್ಕೆ ಸೇವಾವಧಿಯ ಅನುಸಾರು 90, 120, 135 ರೂ. ನೀಡಲಾಗುತ್ತದೆ. ಕಮಿಷನರೇಟ್ ವ್ಯಾಪ್ತಿಯೊಳಗೆ ತಿರುಗಾಡುವ ಪೊಲೀಸರಿಗೆ ಟಿ.ಎ. ಸೌಲಭ್ಯವಿಲ್ಲ. ಅಂದರೆ, ಮಂಗಳೂರಿನಿಂದ ಮೂಡಬಿದ್ರೆ ಅಥವಾ ಕೊಣಾಜೆಗೆ ಒಬ್ಬ ಪೊಲೀಸ್ ಹೋಗುವುದಿದ್ದರೂ ಆತನಿಗೆ ಟಿ.ಎ.ವ್ಯವಸ್ಥೆಯಿಲ್ಲ. ಜಿಲ್ಲಾ ವ್ಯಾಪ್ತಿಯಲ್ಲಿ ಟಿ.ಎ. ಪಡೆಯಲು ಕನಿಷ್ಠ 15 ಕಿ.ಮೀ. ಹೊರಗೆ ಕ್ರಮಿಸಬೇಕು. ಅದರೊಳಗೆ ಓಡಾಡಿದರೂ ಟಿ.ಎ. ಸೌಲಭ್ಯವಿಲ್ಲ.

ಇವೆಲ್ಲದರ ಮಧ್ಯೆ ಕಿರಿಯರ ಮೇಲೆ ಹಿರಿಯ ಪೊಲೀಸರು `ಒತ್ತಡ’ ಹಾಕುವುದು ಸರ್ವ ಸಾಮಾನ್ಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆ `ದ.ಕ.ಜಿಲ್ಲಾ ಪೊಲೀಸ್ ಯೂನಿಯನ್’ ಅಸ್ತಿತ್ವದಲ್ಲಿತ್ತು. ಆದರೆ, ಅದೀಗ ನಿಷ್ಕ್ರಿಯವಾಗಿದೆ. ಸಂಘ ಕಟ್ಟಿ ತಮ್ಮ ಹಕ್ಕುಗಳಿಗೆ ಹೋರಾಡುವ ಅವಕಾಶ ಪೊಲೀಸರಿಗೆ ಇದ್ದರೂ ಹಿರಿಯ ಅಧಿಕಾರಿಗಳು `ಹೋರಾಟ’ಕ್ಕೆ ಆಸ್ಪದ ನೀಡುವುದಿಲ್ಲ. ಒಂದು ವೇಳೆ ಪೊಲೀಸರ ಒತ್ತಾಸೆಯ ಮೇಲೆ ಯೂನಿಯನ್ ಸ್ಥಾಪಿಸಿದರೂ ಅದರ ಅಧ್ಯಕ್ಷ ಸ್ಥಾನವನ್ನು ಹಿರಿಯ ಅಧಿಕಾರಿಗಳು ಅಲಂಕರಿಸುತ್ತಾರೆ.ಹಾಗಾಗಿ ಹೆಚ್ಚಿನ ಪೊಲೀಸರಿಗೆ ತಮ್ಮ ಅಳಲನ್ನು ಅಲ್ಲೂ ತೋಡಿಕೊಳ್ಳಲು ಸಾಧ್ಯವಿಲ್ಲವಾಗಿದೆ.

ಇಲಾಖೆಯ ಒಟ್ಟು ಕಾರ್ಯವೈಖರಿ ಬಗ್ಗೆ ಪ್ರತಿಕ್ರಿಯೆ ನೀಡಿದ ಪೊಲೀಸ್ ಕಾನ್ಸ್ಟೇಬಲ್ವೊಬ್ಬರು `ಸರಕಾರದ ಬಹುತೇಕ ಇಲಾಖೆಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರವಿದೆ. ಆದರೆ, ಇಲ್ಲಿ ಅದಕ್ಕೆ ಅವಕಾಶವಿಲ್ಲ. ಪ್ರತೀ ದಿನ ಜೀತದಾಳುಗಳಂತೆ ಬದುಕಬೇಕು. ಯೂನಿಯನ್ ಕಟ್ಟಲು ಮನಸ್ಸು ಮಾಡಿದರೂ ಅದನ್ನು ಬೆಳೆಸಲು ಬಿಡುವುದಿಲ್ಲ. ಅತ್ತ ಸರಿಯಾದ ಸಮವಸ್ತ್ರ ನೀಡುತ್ತಿಲ್ಲ. ಇತ್ತ ತಿಂಗಳ ವೇತನ ಕೂಡ ಕಡಿಮೆ ಮಟ್ಟದಲ್ಲಿದೆ. ಹೆಚ್ಚಿನ ಪೊಲೀಸರು ವಸತಿ, ಆಹಾರದ ಸಮಸ್ಯೆ ಎದುರಿಸುತ್ತಾರೆ. ಜತೆಗೆ ಮಾನಸಿಕ ಒತ್ತಡಕ್ಕೂ ಒಳಗಾಗುತ್ತಾರೆ. ಇದರಿಂದ ಲಂಚಕ್ಕೆ ಕೈ ಒಡ್ಡುವುದು, ದುರ್ಬಲರ ಮೇಲೆ ದೌರ್ಜನ್ಯ ಎಸಗುವ ಸ್ವಭವ ರೂಢಿ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಇವುಗಳಿಗೆ ಕಡಿವಾಣ ಹಾಕಬೇಕಿದ್ದರೆ, ಪೊಲೀಸ್ ಇಲಾಖೆಯ ಮೇಲಿನ ರಾಜಕೀಯ ಒತ್ತಡ ನಿಲ್ಲಿಸಬೇಕು, ಬೇಕಾಬಿಟ್ಟಿ ವರ್ಗಾವಣೆ ನಿಲ್ಲಿಸಬೇಕು. ದುಡಿಮೆಗೆ ತಕ್ಕ ವೇತನ ಮತ್ತಿತರ ಸೌಲಭ್ಯ ಹೆಚ್ಚಿಸಬೇಕು’ಎಂದು ಅಭಿಪ್ರಾಯಪಡುತ್ತಾರೆ.

ಹಿಂದಿನ ದಿನಗಳಿಗೆ ಹೋಲಿಸಿದರೆ ಈಗ ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಸುಧಾರಿಸಿದೆ. ಹಿಂದೆ ನಮಗೆ ಸಿಗುತ್ತಿದ್ದ ಸಮವಸ್ತ್ರ ಧರಿಸಲು ಯೋಗ್ಯವಾಗುತ್ತಿರಲಿಲ್ಲ. ನಾಲ್ಕು ಬಾರಿ ಒಗೆದರೆ ಮತ್ತೆ ಧರಿಸುವಂತಿಲ್ಲ. ವಿದ್ಯಾವಂತ ಯುವಕರೇ ಇಲಾಖೆಗೆ ಸೇರ್ಪಡೆಗೊಳ್ಳುತ್ತಿರುವ ಕಾರಣ ಹಿರಿಯ ಅಧಿಕಾರಿಗಳು ಅವರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ನಿವೃತ್ತ ಸಬ್ ಇನ್ಸ್ಪೆಕ್ಟರ್ ವೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಪೊಲೀಸರು ಕಳೆದ ಮೂರು ವರ್ಷದಿಂದ ಸಮವಸ್ತ್ರವಿಲ್ಲದೆ ಮಾಸಿದ ಸಮವಸ್ತ್ರವನ್ನು ಧರಿಸುವಂತಾಗಿದೆ. ಹಾಗಾಗಿ ಹೊಸ ವರ್ಷದ ಸಂಭ್ರಮದಲ್ಲಾದರೂ ಸಮವಸ್ತ್ರ ಪೂರೈಕೆಯಾದರೆ, ಪೊಲೀಸರ ಮುಖದಲ್ಲೂ ಹರ್ಷ ಮೂಡೀತೋ ಏನೋ?.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English