ಕಾಸರಗೋಡು : ಕುದ್ರೆಪ್ಪಾಡಿಯ ಗುಡ್ಡಪ್ರದೇಶದಲ್ಲಿ ಕಾರಿನೊಳಗೆ ಪತ್ತೆಯಾದ ಮೃತದೇಹಗಳು

12:07 PM, Wednesday, January 30th, 2013
Share
1 Star2 Stars3 Stars4 Stars5 Stars
(No Ratings Yet)
Loading...

Koodlu Mysterious deathಕಾಸರಗೋಡು : ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾಯಿಪ್ಪಾಡಿ-ಅನಂತಪುರ ರಸ್ತೆಯ ಕುದ್ರೆಪ್ಪಾಡಿಯ ಗುಡ್ಡಪ್ರದೇಶದಲ್ಲಿ ಆಲ್ಟೋ ಕಾರಿನೊಳಗೆ ಒಂದೇ ಕುಟುಂಬದ ನಾಲ್ವರ ಶವ ಮಂಗಳವಾರ ಬೆಳಗ್ಗೆ ಪತ್ತೆಯಾಗಿದೆ. ಮೃತರು ಕೂಡ್ಲು ಗೋಪಾಲಕೃಷ್ಣ ಹೈಸ್ಕೂಲ್‌ ಬಳಿಯ ನಿವಾಸಿ ಹಾಗೂ ಭೆಲ್‌ ನೌಕರ ಸೋನಿ ಕುಟ್ಟಿ (46), ಪತ್ನಿ ಕಾಸರಗೋಡು ಜನರಲ್‌ ಆಸ್ಪತ್ರೆಯ ದಾದಿ ತ್ರೇಸ್ಯಮ್ಮ (ಜೋಲಿ – 39) ಹಾಗೂ ಅವರ ಮಕ್ಕಳಾದ ಜೆರಿನ್‌ (12) ಮತ್ತು ಜ್ಯುವೆಲ್‌ (10).

ಕುದ್ರೆ ಪ್ಪಾಡಿಯ ನಿರ್ಜನ ಗುಡ್ಡಪ್ರದೇಶದಲ್ಲಿ ನಿಂತಿದ್ದ ಆಲ್ಟೋ ಕಾರಿನ ಬಗ್ಗೆ ಸಂಶಯಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರಿನ ಬಾಗಿಲನ್ನು ಒಡೆದು ಪರಿಶೀಲಿಸಿದಾಗ ನಾಲ್ಕು ಮೃತದೇಹಗಳು ಕಂಡುಬಂದವು. ಕಾರಿನ ಗಾಜು ಸಂಪೂರ್ಣವಾಗಿ ಮುಚ್ಚಿದ ಸ್ಥಿತಿಯಲ್ಲಿತ್ತು. ಗಾಜಿಗೆ ಕಪ್ಪು ಫಿಲ್ಮ್ ಅಳವಡಿಸಿದ್ದರಿಂದ ಒಳಗಿನ ದೃಶ್ಯ ಕಂಡುಬರುತ್ತಿರಲಿಲ್ಲ.

Koodlu Mysterious deathಸೋನಿಕುಟ್ಟಿ ಹಾಗೂ ಪತ್ನಿ ಚಾಲನಾ ಸೀಟಿನಲ್ಲಿದ್ದರೆ, ಮಕ್ಕಳಿಬ್ಬರ ಶವ ಹಿಂಬದಿಯ ಸೀಟಿನಲ್ಲಿದ್ದವು. ತ್ರೇಸ್ಸಮ್ಮಾ ಹಾಗೂ ಮಕ್ಕಳ ಶವದ ತಲೆ, ಕುತ್ತಿಗೆ , ಕೈ-ಕಾಲುಗಳಿಗೆ ಚೂರಿಯಿಂದ ಗಂಭೀರವಾಗಿ ಇರಿದಂತಹ ಗಾಯದ ಗುರುತುಗಳಿದ್ದವು. ಸೋನಿ ಕುಟ್ಟಿ ಮೃತದೇಹ ಬೆಂಕಿಯಿಂದ ಬೆಂದು ಸುಟ್ಟುಹೋದಂತಹ ಸ್ಥಿತಿಯಲ್ಲಿದ್ದು, ವಸ್ತ್ರಗಳು ಚಿಂದಿಯಾಗಿ ಹೋಗಿದ್ದವು. ಪತ್ನಿ ಹಾಗೂ ಮಕ್ಕಳನ್ನು ಮನೆಯಲ್ಲಿ ಹತ್ಯೆಗೈದ ಬಳಿಕ ಸೋನಿಕುಟ್ಟಿ ಮೂರು ಶವಗಳನ್ನು ಕಾರಿನಲ್ಲಿ ಹಾಕಿಕೊಂಡು ಬಂದು ನಿರ್ಜನ ಪ್ರದೇಶದಲ್ಲಿಟ್ಟು, ಕಾರಿನ ಗ್ಯಾಸನ್ನು ಆನ್ ಮಾಡಿ, ನಾಲ್ಕು ಗಾಜುಗಳನ್ನು ಲಾಕ್ ಮಾಡಿ ಸ್ಫೋಟ ಗೊಳಿಸುವ ಯತ್ನ ನಡೆಸಿದ್ದರೂ ಅದು ಸ್ಫೋಟವಾಗದೇ ಗ್ಯಾಸನ್ನೇ ನುಂಗಿ ಸೋನಿ ಕುಟ್ಟಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಅಲ್ಲದೆ

ತಾನು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದು, ಪತ್ನಿ, ಮಕ್ಕಳನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸೋನಿ ಕುಟ್ಟಿ ಪತ್ರವೊಂದನ್ನು ಬರೆದಿಟ್ಟಿದ್ದಾರೆ. ಮೃತದೇಹವನ್ನು ಹೆಚ್ಚಿನ ತನಿಖೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಒಟ್ಟಾರೆ ವೈದ್ಯಕೀಯ ಪರೀಕ್ಷೆಯ ನಂತರ ಇನ್ನಷ್ಟು ಮಾಹಿತಿಗಳು ಲಭ್ಯವಾಗಲಿದ್ದು, ಕುಂಬಳೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English