ಮಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಿಂದ ಉಡುಪಿ ಜಿಲ್ಲೆಯ ಮಲ್ಪೆ ತನಕ ಮಂಗಳವಾರ ಆಯೋಜಿಸಿದ ಪಾದಯಾತ್ರೆಗೆ ವೀರ ವನಿತೆ ರಾಣಿ ಅಬ್ಬಕ್ಕಳ ಪ್ರತಿಮೆಗೆ ಹಾರಾರ್ಪಣೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಬೆಳಗ್ಗೆ 9 ಕ್ಕೆ ಆರಂಭಗೊಳ್ಳಬೇಕಾಗಿದ್ದ ಪಾದಯಾತ್ರೆ ಮಧ್ಯಾಹ್ನ 12 ಗಂಟೆ ವೇಳೆಗೆ ಆರಂಭ ಗೊಂಡಿತು.
ಉಳ್ಳಾಲದಿಂದ ನಾಸಿಕ್ ಬ್ಯಾಂಡ್, ಕೀಲು ಕುದುರೆ, ಬ್ಯಾಂಡ್ ಸೆಟ್, ಹುಲಿ ವೇಷ ಸಹಿತ ಹೊರಟ ಪಾದಯಾತ್ರೆ ತೊಕ್ಕೊಟ್ಟಿನಲ್ಲಿ ಸಾರ್ವಜನಿಕ ಸಭೆ ನಡೆಸಿ ಬಳಿಕ ಅಲ್ಲಿಂದ ಕಲ್ಲಾಪು ಮೂಲಕ ಪಂಪ್‌ವೆಲ್ ವೃತ್ತಕ್ಕೆ ಆಗಮಿಸಿ, ಅಲ್ಲಿಂದ ಕಂಕನಾಡಿ ಮೂಲಕ ಬೆಂದೂರ್‌ವೆಲ್ ರಸ್ತೆಯಾಗಿ ನಂತೂರು ಹೆದ್ದಾರಿ ತಲುಪಿ, ಸಂಜೆ ಕೊಟ್ಟಾರ ಚೌಕಿಗೆ ಆಗಮಿಸಿ, ಬೃಹತ್ ಸಾರ್ವಜನಿಕ ಸಭೆ ನಡೆಸಲಾಯಿತು.
ಕೆಲವು ಮುಖಂಡರು ಅಲಂಕೃತ ಬಸ್ಸಿನಲ್ಲಿ ಕುಳಿತು ಪ್ರಯಾಣಿಸಿದರೆ, ಉಳಿದವರು ಬಿಸಿಲ ಬೇಗೆಯನ್ನು ಲೆಕ್ಕಿಸದೆ ಹುಮ್ಮಸ್ಸಿನಿಂದ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ದಾರಿಯುದ್ದಕ್ಕೂ ಫ್ಲೆಕ್ಸ್‌ಗಳು, ಬ್ಯಾನರ್, ಪತಾಕೆಗಳು ರಾರಾಜಿಸುತ್ತಿದ್ದವು.
ಕೇಂದ್ರ ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯ್ಲಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಜನಾರ್ದನ ಪೂಜಾರಿ, ಸಿ.ಎಂ.ಇಬ್ರಾಹಿಂ ಮುಖಂಡರಾದ ಎಸ್.ಆರ್.ಪಾಟೀಲ್, ಮೋಟಮ್ಮ, ಟಿ.ಬಿ.ಜಯಚಂದ್ರ, ವಿನಯ ಕುಮಾರ್ ಸೊರಕೆ, ಕುಮಾರ್ ಬಂಗಾರಪ್ಪ, ವೀರಣ್ಣ ಮತ್ತಿಕಟ್ಟಿ, ಬಿ.ಎಲ್.ಶಂಕರ್, ಸುದರ್ಶನ್, ಟಿ.ಜಾನ್, ಎಂ.ಎಂ.ನಾಣಯ್ಯ, ಯು.ಟಿ.ಖಾದರ್, ಎಂ.ಸಿ.ವೇಣುಗೋಪಾಲ್, ವಿ.ಮುನಿಯಪ್ಪ, ನಝೀರ್ ಅಹ್ಮದ್, ಎ.ಕೃಷ್ಣಪ್ಪ, ಬಿ.ಎ.ಮೊಹಿದಿನ್, ಮಂಜುಳಾ ನಾಯ್ಡು, ಗುಲ್ಜಾರ್ ಬಾನು ಮತ್ತಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English