ಮಂಗಳೂರು :ಮಾದಕ ದ್ರವ್ಯ ವಿರೋಧಿ ಅಭಿಯಾನದ ಅಂಗವಾಗಿ ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಮಂಗಳೂರು ನಗರ ಪೊಲೀಸ್ ಇಲಾಖೆಗಳ ಸಹಭಾಗಿತ್ವದಲ್ಲಿ ವಿದ್ಯಾರ್ಥಿ ಗಳು ಮಾದಕ ವ್ಯಸನಿ ಗಳಾಗುತ್ತಿರುವುದನ್ನು ತಪ್ಪಿಸುವ ಕುರಿತಂತೆ ನಗರದ ಎಲ್ಲಾ ಕಾಲೇಜುಗಳ ಮುಖ್ಯಸ್ಥರು ಹಾಗು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು.
ನಗರ ಪೊಲೀಸ್ ಕಮೀಷನರ್ ಮನೀಷ್ ಎ ಕರ್ಬೀಕರ್ ಮಾತನಾಡಿ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಹೆತ್ತವರು ಮಕ್ಕಳ ಎಲ್ಲಾ ಬೇಡಿಕೆಗಳನ್ನು ಪೂರೈಸುತ್ತಾರೆ ಆದರೆ ತಮ್ಮ ಮಕ್ಕಳು ಶಾಲಾ ಕಾಲೇಜುಗಳಲ್ಲಿ ಹಾಗು ಇತರೆಡೆಗಳಲ್ಲಿ ಹೇಗಿರುತ್ತಾರೆ ಎಂಬುದನ್ನು ಮಾತ್ರ ತಿಳಿದುಕೋಳ್ಳುವ ಪ್ರಯತ್ನ ಮಾಡುತ್ತಿಲ್ಲ. ಮಕ್ಕಳ ಎಲ್ಲಾ ಅಗತ್ಯತೆಗಳನ್ನು ಪೂರೈಕೆ ಮಾಡುವುದರಿಂದ ಕೆಲವೊಮ್ಮೆ ಮಕ್ಕಳು ಪರೋಕ್ಷವಾಗಿ ದುಶ್ಚಟಗಳತ್ತ ಆಕರ್ಷಿತರಾಗುವ ಸಂಭವವಿದೆ. ಆದ್ದರಿಂದ ಹೆತ್ತವರು ಮಕ್ಕಳ ಬಗ್ಗೆ ಸರಿಯಾಗಿ ಗಮನ ನೀಡಿ ಅವರ ವರ್ತನೆಯಲ್ಲಿ ವ್ಯತ್ಯಾಸ ಕಂಡುಬಂದಾಗ ಅದಕ್ಕೆ ಕಾರಣಗಳನ್ನು ತಿಳಿದು ಸೂಕ್ತ ಕ್ರಮ ಕೈಗೊಂಡಲ್ಲಿ ಮಕ್ಕಳನ್ನು ದುಶ್ಚಟಗಳಿಂದ ದೂರ ಇಡಬಹುದಾಗಿದೆ ಎಂದರು.
ಅಲ್ಲದೆ ಮಾದಕ ದ್ರವ್ಯ ಸೇವನೆಯಂತಹ ಪಿಡುಗನ್ನು ಸಮಾಜದಿಂದ ಒಮ್ಮಿಂದೊಮ್ಮೆಲೇ ದೂರ ಮಾಡಲು ಸಾಧ್ಯವಿಲ್ಲ ಅದನ್ನು ಹಂತಹಂತವಾಗಿ ನಿಯಂತ್ರಣಕ್ಕೆ ತಂದು ಆ ನಂತರ ಸಂಪೂರ್ಣವಾಗಿ ನಾಶಪಡುವಂತೆ ಮಾಡಬೇಕು. ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರು ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತಿದ್ದು ಆ ದೃಷ್ಟಿಯಿಂದ ಅವರಿಂದ ಸಲಹೆ ಸೂಚನೆಗಳನ್ನು ಪಡೆಯಲು ಪ್ರಥಮ ಹಂತವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಈ ಸಂದರ್ಭ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಡಾ. ರಮೀಲ ಶೇಖರ್ ಮಾತನಾಡಿ, ಶಾಲಾ ಕಾಲೇಜುಗಳ ಶಿಕ್ಷಕರು ತಮ್ಮ ವಿದ್ಯಾಸಂಸ್ಥೆಯಲ್ಲಿರುವ ಮಕ್ಕಳ ವರ್ತನೆಯಲ್ಲಿ ಬದಲಾವಣೆ ಕಂಡು ಬಂದಾಗ ಅಂತಹವರ ಬಗ್ಗೆ ವಿಶೇಷವಾಗಿ ಗಮನಹರಿಸಿ ಆ ಮಕ್ಕಳಿಗೆ ಯಾವುದೇ ರೀತಿಯಲ್ಲಿಯೂ ಹೆದರಿಸುವ ಮುಖಾಂತರ ಅಥವಾ ತಮಾಷೆ ಮಾಡುವ ಮೂಲಕ ಅವರನ್ನು ಸರಿಪಡಿಸಲು ಯತ್ನಿಸದೆ ಅವರನ್ನು ಕೂಡ ಇತರ ಮಕ್ಕಳಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡುವ ಮೂಲಕ ಹಾಗೂ ಸೂಕ್ತ ರೀತಿಯ ಚಿಕಿತ್ಸೆ ಮತ್ತು ಕೌನ್ಸಲಿಂಗ್ ಅನ್ನು ಪೋಷಕರೊಂದಿಗೆ ಸೇರಿ ಕೊಡಿಸುವುದರ ಮೂಲಕ ಅವರು ದುರಭ್ಯಾಸಗಳಿಂದ ದೂರವಾಗುವಂತೆ ಮಾಡಬೇಕು ಎಂದರು.
ಚರ್ಚೆಯಲ್ಲಿ ವಿವಿಧ ಕಾಲೇಜುಗಳ ಮುಖ್ಯಸ್ಥರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್.ಪ್ರಕಾಶ್, ಡಿಸಿಪಿಗಳಾದ ಮುತ್ತೂರಾಯ ಹಾಗೂ ಧರ್ಮಯ್ಯ ಮತ್ತು ಇತರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English
February 10th, 2013 at 20:07:50
As we have to save our children from this mapia. Every school college has to display information board, how to & where to complain regarding drugs.. (phone number and email id of concerned ) I think most of students knows the place where they get. if any one inform the place, police has to raid the place and stop this activities.