ಮಂಗಳೂರಿನ ಇತಿಹಾಸದಲ್ಲೇ ಧ್ರುವತಾರೆಯಾಗಿ ಖ್ಯಾತಿ ಗಳಿಸಿರುವ ಶ್ರೀ ಮಂಗಳಾದೇವಿ ದೇವಸ್ಥಾನ ಇದೀಗ ನವಿರಾಗಿ ಅಲಂಕರಿಸಿಕೊಂಡು ನಗರಕ್ಕೆ ಶೋಭೆ ತಂದಿದೆ. ಜಾತ್ರಾ ಮಹೋತ್ಸವದ ಸಂಭ್ರಮದಿಂದ ಕಂಗೊಳಿಸುತ್ತಿರುವ ಶ್ರೀ ಮಂಗಳಾದೇವಿ ದೇವಸ್ಥಾನ ಸಾವಿರಾರು ಭಕ್ತರನ್ನು ತನ್ನೆಡೆಗೆ ಬರಮಾಡಿಕೊಳ್ಳುತ್ತಿದೆ.
ಇಂದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರನ್ನು ಪರಮ ಪವಿತ್ರ ಭಕ್ತಿಭಾವದಿಂದ ಪರಸ್ಪರ ಬಂಧಿಸಿರುವ ದೇವಸ್ಥಾನದ ಪೌರಾಣಿಕ ಹಿನ್ನೆಲೆ ನಿಜಕ್ಕೂ ರೋಮಾಂಚನಗೊಳಿಸುವಂತಾಗಿದೆ. ಒಂದು ಬಾರಿ, ಸಪ್ತ ಋಷಿಗಳು ಶ್ರೀ ಹರಿಯ ದರ್ಶನ ಪಡೆಯಲೆಂದು ವೈಕುಂಠಕ್ಕೆ ಬಂದಿದ್ದಾಗ, ವೈಕುಂಠದ ದ್ವಾರಪಾಲಕರಾದ ಜಯ-ವಿಜಯರು ಸಪ್ತಋಷಿಗಳನ್ನು ಒಳಹೋಗಲು ಬಿಡದೆ, ಅಡ್ಡಿ ಪಡಿಸಿದಾಗ, ಕ್ರುದ್ಧರಾದ ಋಷಿಗಳು ಜಯ-ವಿಜಯರನ್ನು ಭೂಲೋಕದಲ್ಲಿ ಹುಟ್ಟುವಂತೆ ಶಪಿಸಿದರು.
ಋಷಿಗಳ ಶಾಪದಿಂದ ಜಯ-ವಿಜಯರು ಭೂಲೋಕದಲ್ಲಿ ಹಿರಣ್ಯಾಕ್ಷ-ಹಿರಣ್ಯ ಕಶಿಪು ಎನ್ನುವ ರಾಕ್ಷಸರಾಗಿ ಹುಟ್ಟಿ ಬಂದು, ಋಷಿ ಮುನಿಗಳನ್ನು ಪೀಡಿಸುತ್ತಾ, ಅವರ ಯಜ್ಞಯಾಗಾದಿಗಳನ್ನು ಭಂಗಗೊಳಿಸುತ್ತಾ, ಸ್ವರ್ಗಕ್ಕೂ ಕಿಚ್ಚು ಹಚ್ಚಿ, ಶ್ರೀ ಹರಿಯ ಕಡು ವಿರೋಧಿಗಳಾಗಿ ನಿಂತರು. ಆಗ ಶ್ರೀ ಹರಿಯು ಹಿರಣ್ಯಾಕ್ಷನನ್ನು ವರಾಹಾವತಾರಿಯಾಗಿ, ಹಿರಣ್ಯಕಶಿಪು ವನ್ನು ನರಸಿಂಹಾವತಾರಿಯಾಗಿಯೂ ನಿಗ್ರಹಿಸಿ, ಭೂಲೋಕದಲ್ಲಿ ದುಷ್ಟನಿಗ್ರಹ, ಶಿಷ್ಟರ ರಕ್ಷಣೆ ಎನ್ನುವ ತನ್ನ ನೀತಿಯನ್ನು ಮತ್ತೊಮ್ಮೆ ಅನುಷ್ಟಾನಗೊಳಿಸಿದಾಗ, ಹಿರಣ್ಯಾಕ್ಷನ ಮಗಳಾದ ವಿಖಾಸಿನಿಯಲ್ಲಿ ದ್ವೇಷದ ಛಾಯೆ ಮೂಡತೊಡಗಿತು. ತನ್ನದೇ ಸೈನ್ಯವನ್ನು ಸಜ್ಜುಗೊಳಿಸಿ, ಭೋಗಲಾಲಸೆಯಲ್ಲಿ ಮೈಮರೆತ್ತಿದ್ದ ದೇವೇಂದ್ರನ ಮೇಲೆ ಗಹಗಹಿಸಿ ನಕ್ಕ ದೇವೇಂದ್ರನ ವಜ್ರಾಯುಧ ಆಕೆಯ ದಂಡಿನೆದುರು ನಿಲ್ಲದಾಯಿತು. ಅಸುರೀ ಶಕ್ತಿಯೆದುರು ಸೋಲುಂಡ ದೇವಗಣ, ಓಡಿ ಹೋಗಲು ರಾಕ್ಷಸ ಸೇನೆಯು ಸ್ವರ್ಗ ಸಾಮ್ರಾಜ್ಯ ವನ್ನು ಆಕ್ರಮಿಸಿ, ಮೆರೆಯತೊಡಗಿತು. ದೇವತೆಗಳು ಅಸಹಾಯಕರಾಗಿ ಕೈ ಚೆಲ್ಲಿ ಕುಳಿತಾಗ, ಯಕ್ಷರಾಜನು ದಾನವರ ಮೇಲೆ ಯುದ್ಧ ಸಾರಿ, ತನ್ನ ಪರಾಕ್ರಮವನ್ನು ತೋರಿಸಿದನು. ಆತನ ಪರಾಕ್ರಮದೆದುರು ದಾನವ ಸೇನೆ ನಿಲ್ಲಲಾರದೇ ಹೋಯಿತು.
ತನ್ನ ಸೇನೆ ಸೋತ ಸುದ್ದಿಯನ್ನು ಕೇಳಿದ ವಿಖಾಸಿನಿ ಕೋಪದಿಂದ ಕುದಿಯತೊಡಗಿದಳು. ದೇವತೆಗಳನ್ನೂ, ದೇವತೆಗಳ ರಕ್ಷಕನಾಗಿದ್ದು, ತನ್ನ ತಂದೆಯನ್ನು ಕೊಂದ ಮಹಾವಿಷ್ಣುವನ್ನೂ ನಿಗ್ರಹಿಸಬೇಕು ಎನ್ನುವ ಛಲ ಅವಳಲ್ಲಿ ಬೆಳೆಯಿತು. ಆದರೆ ಆ ಸಾಮಥ್ರ್ಯವಿಲ್ಲದೆ ಬ್ರಹ್ಮನ ಮೊರೆ ಹೋದಳು. ತನ್ನ ಉಗ್ರ ತಪಸ್ಸಿಗೆ ಬ್ರಹ್ಮ ಪ್ರತ್ಯಕ್ಷನಾದಾಗ ಆಕೆ ತನ್ನನ್ನು ತಾನು ಅಗ್ನಿಗೆ ಸಮರ್ಪಿಸುವುದಾಗಿ ನಿಶ್ಚಯಿಸಿ, ಅಗ್ನಿಕುಂಡವೊಂದನ್ನು ನಿರ್ಮಿಸಿ, ಹಾರಲು ಸಿದ್ಧವಾದಾಗ ಬ್ರಹ್ಮ ಪ್ರತ್ಯಕ್ಷನಾಗಿ ಆಕೆಯ ಮನದಿಚ್ಚೆಯೇನೆಂದು ವಿಚಾರಿಸಿದನು. ವಿಖಾಸಿನಿಯು ಸಂತಸದಿಂದ, ತನಗೆ ಶ್ರೀ ಹರಿಯನ್ನು ಕೊಲ್ಲುವ ಮಗಬೇಕೆಂದೂ, ಆ ಮಗನನ್ನು ತಾನು ಶಿವನ ಕೊಡುವಿಕೆಯಿಂದ ಪಡೆಯಬೇಕೆಂದೂ ವರ ಯಾಚಿಸಿದಳು. ಆಗ ಬ್ರಹ್ಮನು “ತ್ರಿ ಮೂರ್ತಿಗಳಾದ ನಮ್ಮನ್ನು ಯಾರೂ ನಿಗ್ರಹಿಸುವುದು ಸಾಧ್ಯವಿಲ್ಲವಾದರೂ ನಿನಗೆ ಶಿವನಿಂದ ಅಜೇಯನಾದ ಪುತ್ರನೋರ್ವ ಜನಿಸಲಿ” ಎಂದು ವರವಿತ್ತು ಅದೃಶ್ಯ ನಾಗುವನು.
ತನಗೆ ದೊರೆತ ವರದಿಂದ ಉಬ್ಬಿಹೋದ ವಿಖಾಸಿನಿಯು, ಶಿವನ ಸಂಗವನ್ನು ಪಡೆಯವ ಸಲುವಾಗಿ, ಶಿವನ ಅರ್ಧಾಂಗಿಯಾದ ಉಮೆಯ ರೂಪ ಧರಿಸಿ, ಕೈಲಾಸದ ತಪ್ಪಲಲ್ಲಿ ಶಿವಲಿಂಗವನ್ನು ಸೃಷ್ಟಿಸಿ ಧ್ಯಾನಮಗ್ನಳಾಗುವಳು. ಧ್ಯಾನಭಂಗವಾದ ಶಿವನು ಕೈಲಾಸದ ತಪ್ಪಲಿನತ್ತ ಬರುತ್ತಿರಲು, ತನ್ನದೇ ಉಪಾಸವೆಯಲ್ಲಿ ತೊಡಗಿದ್ದ ವಿಖಾಸಿನಿಯನ್ನು ಉಮೆಯೆಂದು ತಿಳಿದು, ಭ್ರಮೆಗೊಳಗಾಗಿ ಆಕೆಯೊಡನೆ ಅನುರಕ್ತನಾದನು, ಹೀಗೆ ಬ್ರಹ್ಮನ ವರ ಫಲಿಸಲಾರಂಭಿಸಿತು.
ತನ್ನಲ್ಲಿ ಬೆಳೆಯುತ್ತಿರುವ ಗರ್ಭದ ಬಗ್ಗೆ ಅತೀವ ಗರ್ವ ಪಟ್ಟುಕೊಂಡ ವಿಖಾಸಿನಿ, ಶ್ರೀ ಹರಿಯ ನಿಗ್ರಹ ತನ್ನ ಮಗನಿಂದ ಸಾಧ್ಯವಾಗುವ ದಿನ ದೂರವಿಲ್ಲ. ಆದರೂ ದೇವತೆಗಳು ತಮ್ಮ ಮಾಯಾ ಶಕ್ತಿಯಿಂದ ತನ್ನ ಗರ್ಭಕ್ಕೇನಾದರೂ ಹಾನಿ ತಂದರೆ ಎನ್ನುವ ಚಿಂತೆಯಿಂದ, ಶೋಣಿತಾಪುರಕ್ಕೆ ಬಂದು, ತನ್ನ ದಾನವ ಬಳಗವನ್ನು ಕೂಡಿಕೊಂಡಳು, ಅವರಲ್ಲಿ ತನ್ನ ಚಿಂತೆಯನ್ನು ಅರುಹಿದಾಗ, ಅವರ ಸಲಹೆಯಂತೆ ಆಕೆ, ಭೂದೇವಿಯನ್ನು ಪ್ರಾರ್ಥಿಸಿ, ಭೂಮಿಯನ್ನು ಬಗೆದು, ತನ್ನ ಗರ್ಭವನ್ನು ಬಚ್ಚಿಟ್ಟಳು.
ಒಂಭತ್ತು ತಿಂಗಳು ತುಂಬುತ್ತಿದ್ದಂತೆ ಗರ್ಭವು ಭೂಮಿಯನ್ನು ಸೀಳಿಕೊಂಡು ಮೇಲೆ ಬಂದು ರಾಕ್ಷಸಾಕಾರವನ್ನು ತಾಳಿತು. ಹೀಗೆ ಮೇಲೆದ್ದು ಬಂದ ರಾಕ್ಷಸನು ಅತೀವ ಹಸಿವೆಯಿಂದ ಕಂಗೆಟ್ಟು, ಹಸಿವು ನೀಗಿಸುವ ದಾರಿಯನ್ನು ಹುಡುಕುತ್ತಾ ಹೊರಟು ವಿಖಾಸಿನಿಯನ್ನು ಸಂಧಿಸಲು, ಆಕೆ ಆತನ ಹಸಿವನ್ನು ನೀಗಿಸುವಳು. ಆ ರಾಕ್ಷಸನು ತನ್ನ ಹುಟ್ಟಿನ ಕುರಿತು ವಿಚಾರಿಸಿದಾಗ, ವಿಖಾಸಿನಿಯು ಆತನ ಹುಟ್ಟಿನ ಹಿನ್ನೆಲೆಯನ್ನು ತಿಳಿಸುವಳು. ಆತನಿಗೆ “ಅಂಡಾಸುರ” ಎಂದು ನಾಮಕರಣ ಮಾಡಿ, ತನ್ನ ತಂದೆಯಾದ ಹಿರಣ್ಯಾಕ್ಷನನ್ನು ಕೊಂದ ಶ್ರೀ ಹರಿಯ ಬಗ್ಗೆಯೂ, ದೇವತೆಗಳಿಂದ ತನಗಾದ ತೊಂದರೆಯನ್ನೂ ವಿವರಿಸಿದಳು.
ತಾಯಿಯ ನೋವಿಗೆ ಸ್ಪಂದಿಸುತ್ತಾ ಅಂಡಾಸುರನು ತಾನು ದೇವತೆಗಳ ಸೊಕ್ಕು ಅಡಗಿಸುವುದಾಗಿ ಅಭಯ ನೀಡುವನು. ಅದರಂತೆಯೇ ಸ್ವರ್ಗಕ್ಕೆ ಲಗ್ಗೆಯಿಟ್ಟು, ದೇವೇಂದ್ರನನ್ನು ಸೋಲಿಸಿ, ಅಹಂಕಾರದಿಂದ ಬೀಗುತ್ತಾ, ಶ್ರೀ ಹರಿಯನ್ನು ಅರಸುತ್ತಾ ಹೊರಡುವನು.
ಅಂಡಾಸುರನಿಂದ ಸೋಲುಂಡ ದೇವತೆಗಳು ಬ್ರಹ್ಮ, ಶಿವನ ಸಮೇತವಾಗಿ ಮಹಾವಿಷ್ಣುವಿನ ಮೊರೆ ಹೋಗುವರು. ವಿಷ್ಣುವಿನ ಸಲಹೆಯಂತೆ ದೇವತೆಗಳೆಲ್ಲರೂ ಕೂಡಿಕೊಂಡು, ಮಹಾಮಾತೆ ಆದಿಶಕ್ತಿಯನ್ನು ಪ್ರಾರ್ಥಿಸಿಸುವರು. ಮಂಗಳ ಸ್ವರೂಪಿಣಿಯಾದ ಮಹಾಮಾತೆಯು ತೇಜೋಮಯವಾಗಿ ಕಂಗೊಳಿಸಿ ಪ್ರತ್ಯಕ್ಷಳಾದಳು. ದೇವತೆಗಳೆಲ್ಲರೂ ತಮಗೊದಗಿದ ದುಃಸ್ಥಿತಿಯನ್ನು ಮಹಾಮಾತೆಯಲ್ಲಿ ಅರುಹಲು ಮಹಾಮಾತೆಯಾದ ಶ್ರೀ ಮಂಗಳೆಯು ಶಿವಶಕ್ತಿ ಸ್ವರೂಪಳಾಗಿ, ಸಿಂಹವಾಹಿನಿಯಗಿ, ಅಂಡಾಸುರನನ್ನು ವಧಿಸುವಳು.
ಮುಂದೆ ತ್ರೇತಾಯುಗದಲ್ಲಿ ಹರಿಯು ಭಾರ್ಗವರಾಮವಾಗಿ ಅವತರಿಸಿದನು. ಭುಜದಲ್ಲಿ ಕೊಡಲಿಯನ್ನು ಧರಿಸುತ್ತಿದ್ದುದರಿಂದ ಆತನನ್ನು “ಪರಶುರಾಮ” ಎಂದು ಕರೆಯಲಾಗುತ್ತಿತ್ತು. ಭರತಖಂಡದಲ್ಲಿ 21 ಬಾರಿ ಸಂಚರಿಸಿ, ಸೊಕ್ಕಿದ ಕ್ಷತ್ರಿಯರನ್ನು ಸಂಹರಿಸಿ, ಆ ಕ್ಷತ್ರಿಯರ ರಾಜ್ಯವನ್ನು ಮಹಾಮುನಿಗಳಾದ ಕಶ್ಯಪರಿಗೆ ದಾನ ಮಾಡುವನು, ಸಹ್ಯಾದ್ರಿಯ ತಪ್ಪಲಲ್ಲಿ ಶಿವನನ್ನು ಕುರಿತು ತಪಸ್ಸು ಮಾಡಲು ಶಿವನು ಪ್ರತ್ಯಕ್ಷನಾದಾಗ, ಮುಂದೆ ತಪಸ್ಸನ್ನಾಚರಿಸಲು ಉತ್ತಮ ಸ್ಥಳ ನೀಡುವಂತೆ ಪ್ರಾರ್ಥಿಸಿಸುವನು. ಶಿವನು ಸಮುದ್ರ ರಾಜನನ್ನು ಪ್ರಾರ್ಥಿಸುವಂತೆ ಅಭಯ ನೀಡುವನು. ಅಂತೆಯೇ ಭಾರ್ಗವನು ಸಮುದ್ರ ರಾಜನನ್ನು ಪ್ರಾರ್ಥಿಸಿ, ತನಗೆ ಸ್ಥಳದಾನ ನೀಡಬೇಕೆಂದು ಯಾಚಿಸಿದಾಗ, ಸಮುದ್ರರಾಜನು ಭಾರ್ಗವನು ಕೊಡಲಿ ಎಸೆದ ಪ್ರದೇಶದವರೆಗೂ ಹಿಂದೆ ಸರಿದು, ಸ್ಥಳದಾನ ನೀಡುವನು.
ಆ ಪ್ರದೇಶ “ಪರಶುರಾಮ ಸೃಷ್ಟಿ” ಎಂದು ಕರೆಯಲ್ಪಟ್ಟಿತು. ದಾನವಾಗಿ ನೀಡಲ್ಪಟ್ಟ ಪ್ರದೇಶದಲ್ಲಿ ಪರಶುರಾಮನು ತನ್ನ ತಪಸ್ಸಿಗೆ ಸೂಕ್ತವೆನಿಸುವ ಸ್ಥಳವನ್ನು ಆರಿಸಿ, ಅಲ್ಲಿ ಶ್ರೀ ಮಾತೆ ಮಂಗಳಾಂಬಿಕೆಯನ್ನು ಕುರಿತು ತಪಸ್ಸನ್ನಾಚರಿಸುವನು. ಯೋಗ ಸಿದ್ಧರೂಢವಾಗಿ ತಪಸ್ಸನ್ನಾಚರಿಸಿದ ಭಾರ್ಗವನ ತಪಸ್ಸಿಗೆ ಮೆಚ್ಚಿ ಶ್ರೀ ಮಂಗಳಾದೇವಿಯು ಪ್ರತ್ಯಕ್ಷಳಾಗುವಳು. ತಾನು ಅಂಡಾಸುರನನ್ನು ವಧಿಸಿದ ಸ್ಥಳದಲ್ಲಿ ಶಿವಶಕ್ತಿ ಸ್ವರೂಪವಾದ ಲಿಂಗಾಕಾರದ ಬಿಂಬವು ಕಾಣಸಿಗುವುದು. ಆ ಲಿಂಗಕ್ಕೆ ಒಂದು ಆಲಯ ನಿರ್ಮಿಸಿ, ತನ್ನನ್ನು ಧಾರಾ ಪಾತ್ರೆಯನ್ನಿಟ್ಟು ಪ್ರತಿಷ್ಠಾಪಿಸಲು, ಯೋಗ್ಯ ಬ್ರಾಹ್ಮಣರನ್ನು ನೇಮಿಸಲು ಹಾಗೂ ಪರಶುರಾಮನು ಬದರಿಕಾಶ್ರಮಕ್ಕೆ ಹೋಗಿ ನೆಲೆ ನಿಲ್ಲಲು ಸೂಚಿಸಿ, ಭಾರ್ಗವನನ್ನು ಆಶೀರ್ವದಿಸಿ ದೇವಿಯು ಅಂತರ್ದಾನಳಾಗುವಳು.
ಭಾರ್ಗವ ಶ್ರೀ ದೇವಿಯ ಆದೇಶದಂತೆ ಶಿವಶಕ್ತಿ ಸ್ವರೂಪದ ಬಿಂಬ ರೂಪಕ್ಕೆ ಭವ್ಯವಾದ ಮಂದಿರವೊಂದನ್ನು ನಿರ್ಮಿಸಿ, ನಿಷ್ಠಾವಂತ ಬ್ರಾಹ್ಮಣರನ್ನು ನಿತ್ಯಪೂಜೆಗೆ ನಿಯಮಿಸಿ, ತಾನು ಬದರೀಕಾಶ್ರಮಕ್ಕೆ ತೆರಳುವನು.
ಮುಂದೆ 10ನೇ ಶತಮಾನದಲ್ಲಿ ಈ ತುಳುನಾಡನ್ನು ಆಳುವ ವಂಶದ ಅರಸರಲ್ಲಿ ಅತ್ಯಂತ ಪ್ರಸಿದ್ಧನಾದ ಕುಂದವರ್ಮ, ಮಂಗಳಾಪುರವನ್ನು ರಾಜಧಾನಿಯಾಗಿ ಮಾಡಿಕೊಂಡು ಆಳುತ್ತಿದ್ದ ಕಾಳದಲ್ಲಿ ಉತ್ತರ ನೇಪಾಳದಿಂದ ಮಚ್ಚೇಂದ್ರನಾಥ ಹಾಗೂ ಗೋರಕನಾಥರೆಂಬ ಯೋಗಿದ್ಯಯರು ತಮ್ಮ ಶೀಷ್ಯ ಸಮೇಥರಾಗಿ ಮಂಗಳಾಪುರಕ್ಕೆ ಕಾಲಿರಿಸಿದರು. ವಿಷಯ ತಿಳಿದ ಕುಂದವರ್ಮನು ಹರ್ಷಚಿತ್ತನಾಗಿ ಯೋಗಿಗಳೀರ್ವರನ್ನು ಕಾಣಲು ಬಂದನು. ಯೋಗಿಗಳೀರ್ವರೂ ಇದು ಶ್ರೀ ಮಂಗಳಾದೇವಿಯ ಪಾವನ ಕ್ಷೇತ್ರ, ಶ್ರೀ ಮಂಗಳಾದೇವಿಗೆ ಮಂದಿರವನ್ನು ಕಟ್ಟಿ ಪೂಜಿಸುತ್ತಿದ್ದ ಕ್ಷೇತ್ರ ಎಂದು ಈ ತುಳುನಾಡಿನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ತಮ್ಮ ಪಂಥದ ಪ್ರಚಾರಕ್ಕೆ ಅನುವು ಮಾಡಿಕೊಡಬೇಕೆಂದು ವಿನಂತಿಸಿಕೊಂಡರು. ಕುಂದವರ್ಮನು ಶ್ರೀ ಮಂಗಳಾದೇವಿಯ ವೃತ್ತಾಂತವನ್ನು ತನಗೆ ತಿಳಿಸುವಂತೆ ಯೋಗೀದ್ವಯರಲ್ಲಿ ವಿನಂತಿಸಲು, ಯೋಗೀದ್ವಯರು, ಶ್ರೀ ಮಂಗಳಾದೇವಿಯಿಂದ ಅಂಡಾಸುರನು ವಧಿಸಲ್ಪಟ್ಟ ಪ್ರದೇಶ ಸಮುದ್ರದಿಂದ ಅವರಿಸಿಕೊಂಡಿದ್ದು, ಮುಂದೆ ಪರಶುರಾಮರಿಂದಾಗಿ, “ಪರಖಣರಾಮ ಸೃಷ್ಟಿ” ಎಂದು ಖ್ಯಾತಿ ಪಡೆದ ಬಗ್ಗೆ ತಿಳಿಸಿದರು. ಇಲ್ಲೇ ಸನಿಹದಲ್ಲಿ ಪರಶುರಾಮರು ಶ್ರೀ ಮಂಗಳಾದೇವಿಯ ಲಿಂಗರೂಪದ ಬಿಂಬವನ್ನು ಪ್ರತಿಷ್ಠಾಪಿಸಿ ಸುಂದರವಾದ ಮಂದಿರವನ್ನು ಕಟ್ಟಿಸಿದರು. ಆದರೆ ಆ ಮಂದಿರವು ಭಗ್ನಗೊಂಡು, ಅದರ ಮೇಲೆ ದಿಬ್ಬವೊಂದು ಎದ್ದು ನಿಂತಿದೆ. ಅದರ ಅಡಿಯಲ್ಲಿ ಶಿವಶಕ್ತಿ ಪ್ರಭಾದ ಲಿಂಗರೂಪದ ಬಿಂಬವೂ, ಧಾರಾಪಾತ್ರೆಯೂ ಇದೆ ಎಂದು ವಿವರಿಸಿ, ಕುಂದವರ್ಮನನ್ನು ಆ ಪ್ರದೇಶಕ್ಕೆ ಕೊಂಡೊಯ್ದು, ಶ್ರೀ ಮಂಗಳಾದೇವಿಗೆ ಮಂದಿರವನ್ನು ನಿಮರ್ಿಸಲು ಹೇಳಿ ಹರಸುವರು, ಅಂತೆಯೇ ಕುಂದವರ್ಮನು, ಶ್ರೀ ಮಂಗಳಾದೇವಿಗೆ ಮಂದಿರ ನಿರ್ಮಿಸಿ, ಲಿಂಗರೂಪದ ಬಿಂಬವನ್ನು ಪನರ್ ಪ್ರತಿಷ್ಠಾಪಿಸಿ, ಅದರ ಮೇಲೆ ಧಾರಪಾತ್ರೆಯನ್ನಿಡುವನು. ಈ ಕಾರ್ಯಕ್ರಮದಲ್ಲಿ ಯೋಗಿದ್ವಯರು ಉಪಸ್ಥಿತರಿದ್ದು, ಶ್ರೀ ಮಂಗಳಾದೇವಿಗೆ ಪಟ್ಟೆ ವಸ್ತ್ರವನ್ನು ಆರ್ಪಿಸಿ ಪೂಜಿಸಿದರು. ಅದರ ಕುರುಹಿಗೆ ಇಂದಿಗೂ ಕದ್ರಿ ಮಠದ ಯೋಗಿರಾಜರು ಕದ್ರಿ ಉತ್ಸವದ ಮೊದಲ ದಿನ ಶ್ರೀ ಮಂಗಳಾದೇವಿ ದೇವಸ್ಥಾನಕ್ಕೆ ಬಂದು ಶ್ರೀ ದೇವಿಗೆ ಪೀತಾಂಬರ ಆರ್ಪಿಸಿ ಪೂಜೆ ಒಪ್ಪಿಸುವ ಕ್ರಮ ನಡೆದುಕೊಂಡು ಬಂದಿದೆ.
ಪಶ್ಚಿಮ ಸಮುದ್ರ ತೀರದಲ್ಲಿರುವ ತುಳು ರಾಜ್ಯವನ್ನು ಆಳುತ್ತಿದ್ದ ಬಂಗರಾಜನಿಗೆ ಒಂದು ಬಾರಿ ಬೆಳಗಿನ ಜಾವದಲ್ಲಿ, ಸ್ವಪ್ನದಲ್ಲಿ ಶ್ರೀ ಮಂಗಳಾದೇವಿಯು ಕಾಣಿಸಿಕೊಂಡು, ತನ್ನ ಮಂದಿರವು ಶಿಥಿಲಾವಸ್ಥೆಯಲ್ಲಿದ್ದು, ಅದನ್ನು ಪುನರ್ ನಿರ್ಮಿಸಿ, ತನ್ನ ಬಿಂಬರೂಪದ ಲಿಂಗವನ್ನು ಪುನರ್ ಪ್ರತಿಷ್ಠಾಪಿಸಿ, ಧಾರಾ ಪಾತ್ರಯನ್ನಿಡಲು ಹೇಳಿ ಮಾಯವಾದಳು. ತನ್ನ ಸ್ವಪ್ನದ ಬಗ್ಗೆ ಭಾರದ್ವಾಜ ಮುನಿಗಳಲ್ಲಿ ಹೇಳಿಕೊಂಡ ಬಂಗರಾಜನು ಅವರ ಅಜ್ಞಾನುಸಾರ ಮಂದಿರ ನಿರ್ಮಿಸಿ, ಬಿಂಬವನ್ನು ಪುನರ್ ಪ್ರತಿಷ್ಠಾಪಿಸುವನು.
ಹೀಗೆ ಶ್ರೀ ಮಂಗಳಾದೇವಿ ದೇವಸ್ಥಾನವು ಅತ್ಯಂತ ಪುರಾತನ ಇತಿಹಾಸವನ್ನು ಹೊಂದಿದ್ದು, ತುಳುನಾಡಿನ ಸಂಸ್ಕೃತಿ, ಸೊಬಗನ್ನು ಹೊತ್ತು ತಂದಿದೆ. ರಾಜರುಗಳ ಆಳ್ವಿಕೆಯ ಕಾಲದಲ್ಲಿ ಪ್ರಮುಖ ಯುದ್ಧಭೂಮಿಯಾಗಿರುವ ಈ ಪ್ರದೇಶವು ಅನೇಕ ರಾಜರುಗಳ ಆಳ್ವಿಕೆಯನ್ನು ಕಂಡಿದೆ, ಯುದ್ದಗಳನ್ನು ಕಂಡಿದೆ. ಪ್ರಮುಖ ಯುದ್ಧಭೂಮಿಯಾಗಿರುವ ಕಾರಣದಿಂದಲೇ ಶ್ರೀ ಮಂಗಳಾದೇವಿ ದೇವಸ್ಥಾನವು ಆಗಾಗ ಧ್ವಂಸಗೊಳ್ಳತ್ತಾ, ಪುನರ್ ನಿರ್ಮಾಣಗೊಳ್ಳುತ್ತಾ ಬಂದಿದೆ. ಐದು ವರುಷಕೊಮ್ಮೆ ದೇವಸ್ಥಾನದ ಆಡಳಿತವು ವರ್ಗಾವಣೆಯಾಗುವಂತೆ ನಿಯಮಿಸಲ್ಪಟ್ಟಿತು.
ಈ ದೇವಸ್ಥಾವು ದೆಹಲಿಯ ಪ್ರಾಚ್ಯ ವಸ್ತುಸಂಶೋಧನ ಇಲಾಖೆಯ ಮೇಲ್ವಿಚಾರಣೆಗೊಳಪಟ್ಟಿದೆ. ಇಲ್ಲಿನ ವಿಶೇಷವೆಂದರೆ ಪುರಾತನ ಕಾಲದ ಬಿಂಬರೂಪದ ಲಿಂಗ. ಇದರಲ್ಲಿ ಆಕೃತಿಯು ಸ್ತ್ರೀ ರೂಪವನ್ನು ಹೋಲುತ್ತಿದ್ದು, ಶಿವಶಕ್ತಿ ರೂಪದ ಲಿಂಗವೆಂದು ಆರಾಧಿಸಲ್ಪಡುತ್ತಿದೆ. ಲಿಂಗದ ಮೇಲ್ಬಾಗದಲ್ಲಿ ಧಾರಾಪಾತ್ರೆ ಇರುವುದು ಇಲ್ಲಿನ ಮತ್ತೊಂದು ವಿಶೇಷ. ಯಾವುದೇ ದೇವಸ್ಥಾನಗಳಲ್ಲೂ ಶಿವನ ಲಿಂಗದ ಮೇಲೆ ಧಾರಾಪಾತ್ರೆ ಇಡುವುದು ಕ್ರಮವಾದರೆ ಇಲ್ಲಿ ದೇವಿಯ ಬಿಂಬದ ಮೇಲೆ ಧಾರಾಪಾತ್ರೆ ಇರುವುದು ಪೌರಾಣಿಕ ಹಿನ್ನೆಲೆಗೆ ಪುಷ್ಟಿ ನೀಡುತ್ತದೆ. ಗರ್ಭಗುಡಿಯು ಪೂರ್ವಕ್ಕೆ ಮುಖಮಾಡಿದ್ದು, ಬಲಕ್ಕೆ ವಿಘ್ನೇಶ್ವರನ ಗುಡಿಯಿದೆ. ರಕ್ತೇಶ್ವರಿ, ನಂದಿಕೋಣ, ಗುಳಿಗ ಈ ಕ್ಷೇತ್ರದ ಮೂರು ಆರಾಧ್ಯ ದೈವಗಳಾಗಿವೆ. ರಕ್ತೇಶ್ವರಿ ದೇವಿಯ ಶಕ್ತಿಯಾಗಿದ್ದರೆ, ನಂದಿಕೋಣ, ಗುಳಿಗ, ಇವು ಈಶ್ವರನ ಶಕ್ತಿ ದೈವಗಳು. ವರ್ಷಂಪ್ರತಿ ಈ ದೈವಗಳಿಗೆ ನೇಮೋತ್ಸವವು ಜರುಗುವುವು. ದೇವಸ್ಥಾನದಲ್ಲಿ ತ್ರಿಸಂಧ್ಯೆಗಳಲ್ಲಿಯೂ ವಿವಿಧ ರೀತಿಯ ಪೂಜೆಗಳು ನಡೆಯುತ್ತಿದ್ದು, ಶ್ರಾವಣ ಮಾಸದಲ್ಲಿ ಪ್ರತೀ ದಿನ ಮಧ್ಯಾಹ್ನ ಶ್ರೀ ಮಂಗಳಾದೇವಿಗೆ ಪಂಚಾಮೃತ ಅಭಿಷೇಕವಿದೆ. ಧನುರ್ಮಾಸದಲ್ಲಿ ಪ್ರತೀದಿನ ಸುರ್ಯೋದಯದ ಮೊದಲೇ ಪೂಜೆ ನಡೆಯುವುದು. ಪಂಚವರ್ಷಗಳ ಸಂದರ್ಭದಲ್ಲಿ ಆಯಾಯ ಹಬ್ಬಗಳಿಗನುಸಾರವಾಗಿ ವಿಶೇಷ ಪೂಜೆಗಳು ಜರಗುವುವು. ಕಾರ್ತಿಕ ಮಾಸದ ಬಹುಳ ನವಮಿ ದಿನ ಲಕ್ಷ ದೀಪೋತ್ಸವವು, ವಸಂತ ಮಾಸದಲ್ಲಿ ವಸಂತ ಪೂಜೆ, ಸೌರಮಾನ ಯುಗಾದಿಯ ದಿನ ವಿಷು ಕಣಿ ಪೂಜೆ ಇವು ಇಲ್ಲಿನ ಪೂಜಾ ವಿಶೇಷಗಳು.
ಇಲ್ಲಿಯ ಇನ್ನೊಂದು ವೈಶಿಷ್ಟ್ಯವೆಂದರೆ, ಯಾವ ಕನ್ಯೆಗೆ ಕಂಕಣ ಬಲ ಕೂಡಿ ಬರುವುದಿಲ್ಲವೋ, ಆಕೆ ವೃತದಲ್ಲಿದ್ದು, ಶ್ರೀ ದೇವಿಯ ಸನ್ನಿಧಿಯಲ್ಲಿ “ಸ್ವಯಂವರ ಪಾರ್ವತಿ” ವೃತವನ್ನಾಚರಿಸಿದರೆ, ಆಕೆಗೆ ಯೋಗ್ಯ ವರನು ಲಭಿಸಿ, ಸಂಸಾರ ಸುಖಕರವಾಗುವುದು. ಈ ಸ್ವಯಂವರ ಪೂಜೆಯು ರಾತ್ರಿ ಮಹಾಪೂಜೆಯಂದು ದಿನಂಪ್ರತಿ ನಡೆಯಲಿರುವುದು. ಅಲ್ಲದೆ ಈ ಕ್ಷೇತ್ರದಲ್ಲಿ ವಿವಾಹವಾದರೆ, ಅವರ ಜೀವನ ಸುಖಮಯವಾಗುವುದೆನ್ನುವ ಪ್ರತೀತಿಯೂ ಇದೆ.
ಮಂಗಳೂರಿಗೆ “ಮಂಗಳೂರು” ಎಂದು ಶ್ರೀ ಮಂಗಳಾದೇವಿ ದೇವಸ್ಥಾನ ಇರುವುದರಿಂದಲೇ ನಾಮಕರಣವಾಯಿತು ಎನ್ನುವ ಪ್ರತೀತಿಯೂ ಇದೆ. ಈ ಪ್ರಮುಖ ದೇವಾಲಯವು ಇಲ್ಲಿನ ಸಂಸ್ಕೃತಿಯ ಸೊಬಗನ್ನು ದಕ್ಷಿಣ ಕನ್ನಡದಾದ್ಯಂತ ಪಸರಿಸಿದೆ. ಇಲ್ಲಿನ ಮಾತೆ ಶ್ರೀ ಮಂಗಳಾದೇವಿಯು ತನ್ನನ್ನು ತ್ರಿಕರ್ಣಪೂರಕ ಆರಾಧಿಸಿದ ಭಕ್ತರ ಕೂಗಿಗೆ ಸದಾ ಸ್ಪಂದಿಸುತ್ತಾ, ಎಲ್ಲರ ಆರಾಧ್ಯ ದೇವರಾಗಿ ಮಂಗಳೂರಿನ ಪ್ರತಿಷ್ಠೆ ಹೆಚ್ಚಿಸಿದ್ದಾಳೆ.
ಶ್ರೀ ಮಂಗಳಾದೇವಿ ದೇವಸ್ಥಾನವು ನವರಾತ್ರಿ ಉತ್ಸವಕ್ಕೆ ತನ್ನದೇ ಆದ ವಿಧಿವಿಧಾನಗಳಿಂದ ಪ್ರಸಿದ್ದಿ ಪಡೆದಿದೆ. ಪ್ರತೀ ವರ್ಷವೂ ಸಹಸ್ರಾರು ಸಂಖ್ಯೆಯ ಜನಸ್ತೋಮದಿಂದ ಮೆರೆಯುವ ಈ ದೇವಸ್ಥನದಲ್ಲಿ ಅಶ್ವಿಜ ಮಾಸ ಶುದ್ಧ ಪ್ರತಿಪದೆಯಿಂದ ನವಮಿಯವರೆಗೆ ನವರಾತ್ರಿ ಉತ್ಸವ ಜರುಗಿದರೆ, ವಿಜಯದಶಮಿಯಂದು ರಥೋತ್ಸವವೂ, ಮರುದಿನ ಅವಭೃತವೂ ಜರುಗುವುವು. ಉತ್ಸವ ಆರಂಭವು ಕೊಪ್ಪರಿಗೆ ಏರಿಸುವುದರಿಂದ ಆರಂಭವಾದರೆ, ನವರಾತ್ರಿಯ ಒಂಭತ್ತು ದಿನಗಳಲ್ಲಿಯೂ ದೇವಿಯನ್ನು ನವ ವಿಧಗಳಲ್ಲಿ ಅಲಂಕರಿಸಿ, ಕಲ್ಪೋಕ್ತ ಪೂಜೆಗಳು ನಡೆಯುವುದು. ಮಹಾನವಮಿಯ ದಿನ ಚಂಡಿಕಾ ಹೋಮ, ರಂಗಪೂಜೆ ಹಾಗೂ ಸಣ್ಣ ರಥೋತ್ಸವವು ಜರಗುವುದು.
ವಿಜಯದಶಮಿಯ ದಿನ ಪ್ರಾತಃಕಾಲ ತೆನೆ ತರುವ ಉತ್ಸವವಿದೆ. ಈ ತೆನೆಗಳನ್ನು ದೇವಿಯ ಸನ್ನಿಧಿಯಲ್ಲಿರಿಸಿ, ಪೂಜೆ ಮಡಿ, ಭಕ್ತರೆಲ್ಲರೂ ತಮ್ಮ ಮನೆ ತುಂಬಿಸಿಕೊಳ್ಳುವ ಕ್ರಮವಿದೆ. ಈ ದಿನ ಚಿಕ್ಕಮಕ್ಕಳಿಗೆ ಶ್ರೀ ದೇವಿಯ ಸನ್ನಿಧಿಯಲ್ಲಿ ವಿದ್ಯಾರಂಬ ಮಾಡುವ ಪದ್ದತಿಯೂ ಇದೆ. ಈ ದಿನ ಜರಗುವ ರಥೋತ್ಸವದಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡು ರಥವನ್ನು ಶಮೀಕಟ್ಟೆಯವರೆಗೆ ಎಳೆದು ತರುವರು. ಇಲ್ಲಿ ವಿಶೇಷ ಪೂಜೆಗಳಿವೆ. ಹಿಂದೆ ಶಮೀಕಟ್ಟೆಯಲ್ಲಿ ಆಯುಧಗಳನ್ನಿರಿಸಿ ಪೂಜಿಸುವ ಕ್ರಮವಿತ್ತು. ಅಲ್ಲದೆ ರಥದ ಮುಂದೆ ಸರಕಾರಿ ಸೈನಿಕರು ಆಯುಧಗಳನ್ನು ಹಿಡಿದುಕೊಂಡು ಪಥ ಸಂಚಲನ ಮಾಡುವ ಕ್ರಮವಿತ್ತು.
ವಿಜಯದಶಮಿಯ ಮರುದಿನ ಸಾಯಂಕಾಲ ಉತ್ಸವ ಮೂತರ್ಿಯನ್ನು ಸಣ್ಣ ರಥದಲ್ಲಿರಿಸಿಕೊಂಡು, ನೇತ್ರಾವತಿ, ಫಲ್ಗುಣಿ ನದಿಗಳ ಸಂಗಮ ಸ್ಥಳ (ಉಪ್ಪಿನಕೋಟೆ) ಯಲ್ಲಿ ಅವಭೃತ ಸ್ನಾನವಾಗಿ ಹಿಂದಿರುಗಿ ಬಂದು ನಂತರ ಮಹಾಪೂಜೆ ನಡೆಯುವುದು. ಅನ್ನ ಸಂತರ್ಪಣೆಯೂ ಇದ್ದು, ಶ್ರೀ ಮಂಗಳಾದೇವಿ ದೇವಸ್ಥಾನದ ಉತ್ಸವವು ಪ್ರತೀ ವರ್ಷವೂ ವಿಜೃಂಭಣೆಯಿಂದ, ವಿವಿಧ ಆಚರಣೆಗಳೊಂದಿಗೆ ನಡೆಯುವುದು.
ಇಲ್ಲಿನ ವೈಶೀಷ್ಟ್ಯವೆಂದರೆ ಕುಂಭಮಾಸ ಹುಣ್ಣಿಮೆಯಂದು ಧ್ವಜ ಏರಿಸಿ 5 ದಿನ ಜಾತ್ರೆ ಜರಗುವುದು. ಮರುದಿನ ಪರಿವಾರ ದೈವಗಳ ನೇಮೋತ್ಸವ ಸೇವೆ ಜರಗುವುದು.
ಪ್ರಸಕ್ತ ವರ್ಷದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಶ್ರೀ ಪಿ. ರಮಾನಾಥ ಹೆಗ್ಡೆ, ಬೋರ್ಡ್ ಟ್ರಸ್ಟಿಗಳಾಗಿ ಶ್ರೀ ಬಿ. ರಾಮ ನಾಯಕ್ ಕೋಟೆಕಾರ್, ಪ್ರೇಮಲತ ಎಸ್. ಕುಮಾರ್ ಹಾಗೂ ಅನುವಂಶಿಕ ಟ್ರಸ್ಟಿಗಳಾಗಿ ಶ್ರೀ ಎಂ. ಗಣೇಶ್, ಶ್ರೀ ಜೆ. ರಘುರಾಮ ಉಪಾಧ್ಯಾಯ ಇರುತ್ತಾರೆ. ಪ್ರಸ್ತುತ ಅರ್ಚಕರಾದ ಶ್ರೀ ಪದ್ಮನಾಭ ಐತಾಳ ಇವರ ಸರದಿ ನೇತೃತ್ವದಲ್ಲಿ ಈ ದೇವಸ್ಥಾದ ಪೂಜೆಯು ಮುನ್ನಡೆಯುತ್ತಿದೆ.
Click this button or press Ctrl+G to toggle between Kannada and English
January 14th, 2011 at 21:22:05
very good article on mangaladevi which i visit everytime
when i am in mangalore.