ಮಂಗಳೂರು : ಕೆಜೆಪಿಯನ್ನು ನಾವು ಎಷ್ಟೇ ಕಷ್ಟ ಪಟ್ಟು ಸಂಘಟಿಸಿದರೂ ಅದರ ಪೂರ್ಣ ಲಾಭ ಪಡೆಯಲಿರುವವರು ಶೋಭಾ ಕರಂದ್ಲಾಜೆ ನಾವು ಶ್ರಮಿಸಿ ಆಕೆಗೆ ಲಾಭ ಮಾಡಿಕೊಡುವುದಕ್ಕಿಂತ ಬಿಜೆಪಿಯಲ್ಲೇ ಇರುವುದು ಲೇಸು ಎಂಬ ನಿರ್ಧಾರಕ್ಕೆ ಬಿಜೆಪಿಯಲ್ಲಿರುವ ಯಡಿಯೂರಪ್ಪರ ಕಟ್ಟಾ ಬೆಂಬಲಿಗರು ಬಂದಿದ್ದಾರೆ.
ಯಡಿಯೂರಪ್ಪ ಮೊದಲಿನಿಂದಲೂ ಹೇಳಿಕೊಂಡು ಬಂದಂತೆ ಬಿಜೆಪಿಯಲ್ಲಿ ಅವರ ನಿಷ್ಠೆ, ಅಭಿಮಾನದ 40 ಶಾಸಕರು ಈಗಲೂ ಇದ್ದಾರೆ. ಯಡಿಯೂರಪ್ಪರ ಪರ ಪ್ರೀತಿ, ವಿಶ್ವಾಸವನ್ನು ಈಗಲೂ ಪ್ರಕಟಿಸುತ್ತಾರೆ. ಆದರೆ ತಮ್ಮ ಭವಿಷ್ಯವನ್ನು ನೆನೆದು ಕೆಜೆಪಿಯಿಂದ ದೂರ ಸರಿಯುತ್ತಿದ್ದಾರೆ ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿವೆ.
ಸೋಮಣ್ಣ, ಉಮೇಶ ಕತ್ತಿಯಂತಹ ನಾಯಕರು ಈಗಲೂ ಯಡಿಯೂರಪ್ಪರಿಗೆ ನಿಷ್ಠಾವಂತರೇ ಆಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವರೇಕೆ ಕೆಜೆಪಿಗೆ ಹೋಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರವಾಗಿ ಕಾಣುತ್ತಿರುವುದು ಶೋಭಾ ಕರಂದ್ಲಾಜೆ. ಯಡಿಯೂರಪ್ಪರಿಗೆ ತಾವೆಷ್ಟೇ ನಿಷ್ಠರಾಗಿದ್ದರೂ ಕೆಜೆಪಿಯಲ್ಲಿ ಭವಿಷ್ಯದ ನಿರ್ಣಾಯಕ ನಾಯಕಿಯಾಗುವುದು ಶೋಭಾ ಕರಂದ್ಲಾಜೆ ಮಾತ್ರ. ಯಡ್ಡಿ ಕಟ್ಟುವ ಸಾಮ್ರಾಜ್ಯಕ್ಕೆ ಆಕೆಯೇ ಉತ್ತರಾಧಿಕಾರಿ. ಇದು ಎಲ್ಲಿಯವರೆಗೆ ಎಂದರೆ ಕೆಜೆಪಿಗೆ ಅಧಿಕಾರ ದಕ್ಕುವ ಅವಕಾಶ ಆದರೆ ಯಡಿಯೂರಪ್ಪ ಶೋಭಾ ಕರಂದ್ಲಾಜೆಯನ್ನು ಮುಖ್ಯಮಂತ್ರಿ ಪಟ್ಟದಲ್ಲಿ ಕೊಡಿಸಲು ಹಿಂದೆಮುಂದೆ ನೋಡಲಾರರು ಎಂಬ ಅಭಿಪ್ರಾಯ ಬಹುತೇಕರಲ್ಲಿ ಇದೆ.
ಕೆಜೆಪಿಯಲ್ಲಿದ್ದವರಲ್ಲಿಯೇ ಇಂತಹ ಆತಂಕ ಕಾಡುತ್ತಿದೆ. ಇನ್ನು ಬಿಜೆಪಿಯಿಂದ ಬರುವುದಾದರೂ ಹೇಗೆ? ಚಿತ್ರ ನಟ ಮದನ್ ಮಲ್ಲು ಕೆಜೆಪಿ ತೊರೆದಿದ್ದಾಗಿದೆ. ಪಕ್ಷ ತೊರೆಯುವಾಗ ಅವರು ಹೇಳಿದ್ದೂ ಇದನ್ನೇ, ಯಡಿಯೂರಪ್ಪ ಸ್ಪಾರ್ಥ ಸಾಧನೆಗಾಗಿ ಕೆಜೆಪಿ ಕಟ್ಟುತ್ತಿದ್ದಾರೆ. ತಾನು ಮುಖ್ಯ ಮಂತ್ರಿಯಾಗಬೇಕು, ಇಲ್ಲವೇ ಶೋಭಾ ಕರಂದ್ಲಾಜೆಯನ್ನು ಮುಖ್ಯಮಂತ್ರಿ ಯನ್ನು ಮಾಡಬೇಕು ಎಂಬುದಾಗಿದೆ ಯಡಿಯೂರಪ್ಪರ ಅಭಿಲಾಶೆ ಎಂದು ಮದನ್ ಮಲ್ಲು ಆರೋಪಿಸಿದ್ದಾರೆ. ಇಂತಹದ್ದೇ ಆತಂಕವನ್ನು ಕೆಜೆಪಿಯಲ್ಲಿರುವ ಹಿರಿಯ ನಾಯಕರು ಮತ್ತು ಕೆಜೆಪಿಯ ಜೊತೆ ಗುರುತಿಸಿಕೊಳ್ಳುವವರು ಎಂದು ಹೆಸರಿಸಲಾದ ಬಿಜೆಪಿ ನಾಯಕರು ವ್ಯಕ್ತಪಡಿಸುತ್ತಿದ್ದಾರೆ. ನಾವು ಹಿರಿಯರು ನಾಳೆ ಶೋಭಾ ಕರಂದ್ಲಾಜೆಯ ಎದುರು ಕೈ ಚಾಚಿ ನಿಲ್ಲಬೇಕಾದ ಪರಿಸ್ಥಿತಿ ಬಂದರೆ ಸಹಿಸಿಕೊಳ್ಳಲು ಸಾಧ್ಯವೇ ಎಂದು ಯೋಚಿಸುತ್ತಿದ್ದಾರೆ. ಆದುದರಿಂದಲೇ ಕೆಜೆಪಿಯ ಗೋಪುರ ಗಟ್ಟಿ ಯಾಗುವುದರ ಬದಲು ಕುಸಿಯುವ ಸಂಕಷ್ಟ ಎದುರಿಸುತ್ತಿದೆ ಎಂದೆನಿಸದಿರದು.
ಇಂತಹ ಆತಂಕಕ್ಕೆ ಹಲವು ಕಾರಣಗಳೂ ಇವೆ.
ಕೆಜೆಪಿಯಲ್ಲಿ ಯಾರು ಇರಬೇಕು ಯಾರು ಇರಬಾರದು ಯಾರಿಗೆ ಅಧಿಕಾರ ಕೊಡಬೇಕು ಯಾರನ್ನು ದೂರ ಇಡಬೇಕು ಎಂದು ನಿರ್ಧರಿಸುತ್ತಿರುವುದೇ ಶೋಭಾ ಕರಂದ್ಲಾಜೆ. ಪಕ್ಷಕ್ಕೆ ಅಧಿಕೃತವಾಗಿ ಸೇರುವ ಮೊದಲೇ ಹೀಗಾದರೆ ಮುಂದೆ. ಅಂದು ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವ ಸಮಯ ಬಂದಾಗ ತನ್ನ ಉತ್ತರಾಧಿಕಾರಿಯಾಗಿ ಶೋಭಾರನ್ನೇ ಪ್ರತಿಬಿಂಬಿಸುವ ಪ್ರಯತ್ನ ಮಾಡಿದ್ದು ಗುಟ್ಟಿನ ವಿಷಯವೇನಲ್ಲ. ತಮ್ಮ ಸ್ಥಾನಮಾನ ಏನು ಎಂಬುದರ ಸ್ಪಷ್ಟತೆ ಇಲ್ಲದೆ ಕೆಜೆಪಿ ಸೇರಲು ಹಿಂದೇಟು ಹಾಕುತ್ತಿರುವವರೇ ಹಲವರಾದರೆ. ಸೇರಿದ್ದಕ್ಕೆ ಪಶ್ಚಾತ್ತಾಪ ಪಡುತ್ತಿರುವವರೂ ಕಡಿಮೆ ಏನಿಲ್ಲ.
Click this button or press Ctrl+G to toggle between Kannada and English