ಮಂಗಳೂರು : ಮಾಜಿ ಸಂಸದ ವಿನಯ ಕುಮಾರ್ ಸೊರಕೆ ಮತ್ತೊಮ್ಮೆ ಸಂಸದರಾಗುವ ಆಸೆ ಹೊತ್ತಿದ್ದಾರೆ. ವಿನಯ ಕುಮಾರ್ ಸೊರಕೆಯವರನ್ನು ವಿಧಾನ ಸಭೆಯ ಚುನಾವಣೆಯ ಅಭ್ಯರ್ಥಿಯಾಗಿಸುವ ಪ್ರಯತ್ನಗಳು ವಿಫಲವಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವ ಉದ್ದೇಶದಿಂದ ಕಾಂಗ್ರೆಸ್ ನ ಹಿರಿಯ ನಾಯಕರು ವಿಧಾನಸಭೆಗೆ ವಿನಯ ಕುಮಾರ್ ಸೊರಕೆ ಹೆಸರನ್ನು ತೇಲಿ ಬಿಟ್ಟಿದ್ದರು. ಪುತ್ತೂರು ಮೂಲದವರಾದ ಸೊರಕೆ ಪುತ್ತೂರು ವಿಧಾನಸಭಾ ಕ್ಷೇತ್ರದಿಂದಲೇ ಕಣಕ್ಕಿಳಿಯಲಿದ್ದಾರೆ ಎಂಬುದು ಒಂದು ಕಡೆ ಚರ್ಚೆಯಲ್ಲಿರುವಾಗಲೇ, ಸೊರಕೆಯ ಹೆಸರು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದತ್ತಲೂ ಹೊರಳಿತ್ತು. ಪುತ್ತೂರಿನಲ್ಲಿ ಸೊರಕೆಗಿಂತ ಸೂಕ್ತರಿಲ್ಲ ಎನ್ನುತ್ತಿರುವಾಗಲೇ, ಬೆಳ್ತಂಗಡಿ ಯಲ್ಲಿ ಪ್ರಭಾವಿತ ಬಿಲ್ಲವ ಅಭ್ಯರ್ಥಿಯಾಗಿ ಸೊರಕೆ ಹೆಸರು ತೇಲಿ ಬಿಡಲಾಗಿತ್ತು. ಆದರೆ ಇದೆಲ್ಲವನ್ನೂ ಮೀರಿ ಸೊರಕೆ ಲೋಕಸಭೆ ಟಿಕೆಟ್ ಗಾಗಿ ಈಗಿನಿಂದಲೇ ನಡೆಸುತ್ತಿರುವ ಹೋರಾಟದ ಸುಳಿವು ನೀಡಿ ದ್ದಾರೆ. ಬೆಳ್ತಂಗಡಿ ವಿಧಾನ ಸಭೆ ಕ್ಷೇತ್ರದಲ್ಲಿ ಹರೀಶ್ ಕುಮಾರ್ ಈಗ ಆತಂಕ ರಹಿತರಾಗಿದ್ದಾರೆ. ಪುತ್ತೂರು ಕ್ಷೇತ್ರದಲ್ಲಿ ಒಕ್ಕಲಿಗರಿಗೆ ಅವಕಾಶ ಒದಗಿಸಲು ಯೋಚಿಸಲಾಗುತ್ತಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಳಿನಿ ಲೋಕಪ್ಪ ಗೌಡರಿಗೆ ಟಿಕೆಟ್ ಕೊಡದೆ ಕಾಂಗ್ರೆಸ್ ಪುತ್ತೂರಿನಲ್ಲಿ ಗೆಲುವಿನ ಅವಕಾಶ ತಪ್ಪಿಸಿಕೊಂಡಿತು ಎಂದು ಕಾಂಗ್ರೆಸ್ ಕಾರ್ಯಕರ್ತರು ಈಗಲೂ ನೆನೆಯುತ್ತಾರೆ. ಇದರ ಪರಿಣಾಮ ಸುಳ್ಯದಲ್ಲೂ ಬೀರಿದ್ದರಿಂದ ಸಮರ್ಥ ಅಭ್ಯರ್ಥಿ ಡಾ.ರಘು ಕೂಡ ಒಕ್ಕಲಿಗರ ಮುನಿಸಿಗೆ ಈಡಾಗಬೇಕಾಯಿತು ಎಂದು ಹೇಳುವವರು ಈ ಬಾರಿ ಪುತ್ತೂರಿನಲ್ಲಿ ಭರತ್ ಮುಂಡೋಡಿಯ ಹೆಸರು ಹೇಳುತ್ತಿದ್ದಾರೆ.
ವಿನಯಕುಮಾರ್ ಸೊರಕೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ದ.ಕ. ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ ಎಂಬುದು ಅವರದೇ ಆಪ್ತವಲಯದ ವಿಶ್ವಾಸ ಮಾತು. ಜನಾರ್ದನ ಪೂಜಾರಿಯ ಪ್ರಭಾವವನ್ನೂ ಮೀರಿ ಸೊರಕೆ ಟಿಕೆಟ್ ಗಿಟ್ಟಿಸುವರೇ ಎಂಬುದಕ್ಕೆ ಸಿಗುವ ಉತ್ತರ ಜನಾರ್ದನ ಪೂಜಾರಿಯವರಿಗೆ ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸುತ್ತಾರೆ ಎಂಬುದಾಗಿದೆ.
ನಾಲ್ಕು ಬಾರಿ ಸೋತಿರುವ ಜನಾರ್ದನ ಪೂಜಾರಿಯವರಿಗೆ ಮತ್ತೆ ಸ್ಪರ್ಧಿಸಲು ಅವಕಾಶ ನೀಡಿದರೆ ಕಾರ್ಯಕರ್ತರ ವಲಯದಲ್ಲಿ ತಪ್ಪು ಅಭಿಪ್ರಾಯ ಮೂಡಿಸಿದಂತಾಗುತ್ತದೆ. ಆದುದರಿಂದ ಅವರ ಗೌರವಕ್ಕೆ ತಕ್ಕುದಾಗಿ ರಾಜ್ಯಸಭೆಗೆ ನೇಮಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಎರಡು ಬಾರಿ ಕೆಪಿಸಿಸಿ ಅಧ್ಯಕ್ಷರಾಗಿ ಹೆಡ್ ಮಾಸ್ಟರ್ಗಿರಿ ತೋರಿಸಿರುವ ಜನಾರ್ದನ ಪೂಜಾರಿಯವರಿಗೆ ಎರಡು ಬಾರಿ ರಾಜ್ಯಸಭೆಗೂ ಆಯ್ಕೆ ಮಾಡಿ ಕಳುಹಿಸಲಾಗಿದೆ. ಈಗ ಮತ್ತೆ ಕೇಂದ್ರದಲ್ಲಿ ರಾಜಕೀಯ ಮಾಡುವ ಅಭಿಲಾಷೆ ಹೊಂದಿರುವ ಜನಾರ್ದನ ಪೂಜಾರಿ ದ.ಕ. ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಅಣಿಯಾಗುವ ಪೂರ್ವ ಸಿದ್ದತೆ ನಡೆಸಿದ್ದಾರೆ. ಸತತ ಸೋಲು ಕೂಡ ಜನಾರ್ದನ ಪೂಜಾರಿಯನ್ನು ದೃತಿಗೆಡಿಸಿಲ್ಲ. ಅವರು ಎಂದಿನ ಉತ್ಸಾಹದಲ್ಲಿಯೇ ಟಿಕೆಟ್ ಗಾಗಿ ಹೋರಾಡುತ್ತಿದ್ದಾರೆ. ಮಂಗಳೂರಿಗೆ ಸೋನಿಯಾ ಗಾಂಧಿಯನ್ನು ಕರೆದುಕೊಂಡು ಬಂದಿದ್ದರ ಹಿಂದಿನ ಉದ್ದೇಶವೂ ಟಿಕೆಟ್ ಗಿಟ್ಟಿಸುವುದೇ ಆಗಿತ್ತು. ಮಾತ್ರವಲ್ಲ ತನ್ನ ಶಕ್ತಿ ಎಷ್ಟು ಎಂಬುದನ್ನು ವಿರೋಧಿ ಬಳಗಕ್ಕೆ ತೋರಿಸಿದ್ದರು ಪೂಜಾರಿ. ಆದರೆ ವಿನಯ ಕುಮಾರ್ ಸೊರಕೆಯ ಬಳಗದಿಂದ ಬೇರೆಯದೇ ಮಾತುಗಳು ಕೇಳಿಬರುತ್ತಿವೆ.
Click this button or press Ctrl+G to toggle between Kannada and English