ಮಂಗಳೂರು : ಬಡತನ ಮತ್ತಿತರ ಕಾರಣಗಳಿಂದ ಖಾಸಗಿಯಾಗಿ ಪಿಯುಸಿ ಪರೀಕ್ಷೆ ಬರೆದು ನರ್ಸಿಂಗ್ ಶಿಕ್ಷಣ ಪಡೆಯುವವರಿಗೆ ಕರ್ನಾಟಕ ನರ್ಸಿಂಗ್ ಕೌನ್ಸಿಲ್ ಶಾಕ್ ನೀಡಿದೆ.
ವಿದ್ಯಾರ್ಥಿಗಳು ಈಗಾಗಲೇ ಜನರಲ್ ನರ್ಸಿಂಗ್ ಅಂಡ್ ಮಿಡ್ವೆಫರಿ(ಜಿಎನ್ಎಂ) ಕೋರ್ಸ್ ಗೆ ದಾಖಲಾತಿ ಪಡೆದು, ಐದು ತಿಂಗಳು ಕಳೆದಿದ್ದರೂ, ಇದೀಗ ನಿಮಗೆ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ಇಲ್ಲ ಎಂದು ಸಾರಿದ್ದು, ಇದರಿಂದ ರಾಜ್ಯದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.
ನರ್ಸಿಂಗ್ ಕೌನ್ಸಿಲ್ನ ವೆಬ್ ಸೈಟ್ ಪ್ರಕಾರ ರಾಜ್ಯದಲ್ಲಿ 537 ಅಧಿಕೃತ ನೋಂದಾಯಿತ ನರ್ಸಿಂಗ್ ಶಿಕ್ಷಣ ಸಂಸ್ಥೆಗಳ ಪಟ್ಟಿ ಇದೆ. ಇಲ್ಲಿ ಸಾವಿರಾರು ಮಂದಿ ಕಲಿಯುತ್ತಿದ್ದಾರೆ. ಖಾಸಗಿಯಾಗಿ ಪರೀಕ್ಷೆ ಬರೆದು ಪಿಯುಸಿ ಮಂಡಳಿಯಿಂದ ಪ್ರಮಾಣಪತ್ರ ಪಡೆದ ಸಾವಿರಾರು ಅಭ್ಯರ್ಥಿಗಳು ಕೂಡ ಜಿಎಂಎನ್ ಕೋರ್ಸ್ ಗೆ ಸೇರಿದ್ದಾರೆ. ಪ್ರವೇಶ ಸಂದರ್ಭದಲ್ಲಿ ಚಕಾರ ಎತ್ತದ ಕೌನ್ಸಿಲ್, ಈಗ ಎಚ್ಚೆತ್ತುಕೊಂಡು ಖಾಸಗಿಯಾಗಿ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಜಿಎನ್ಎಂ ಕೋರ್ಸ್ ಗೆ ಅರ್ಹರಲ್ಲ ಎಂದು ಕಾಲೇಜುಗಳಿಗೆ ತಿಳಿಸಿದ್ದು, ದಾಖಲಾತಿ ನಿರಾಕರಿಸಿದೆ.
ಮಂಗಳೂರಿನ ಖಾಸಗಿ ನರ್ಸಿಂಗ್ ಕಾಲೇಜಿನ ಜಿಶಾ, ನಸೀಬಾ, ರೀತಾ, ಸ್ಟೆಫಿ, ಅನಿತಾ ಹಾಗೂ ಪ್ರಭಾವತಿ ಎಂಬ ಆರುವಿದ್ಯಾರ್ಥಿಗಳು ಹೀಗೆ ಅನರ್ಹತೆ ಪಡೆದುಕೊಂಡಿದ್ದಾರೆ. ಇವರೆಲ್ಲಾ ಮೂರೂವರೆ ವರ್ಷದ ಜಿಎನ್ಎಂ ಕೋರ್ಸ್ ಗಾಗಿ ಜುಲೈನಲ್ಲಿ ದಾಖಲಾತಿ ಪಡೆದಿದ್ದರು. ಸರಕಾರಿ ಕೋಟಾ ಪ್ರಕಾರವೇ ದಾಖಲಾತಿ ಪಡೆದ ಈ ವಿದ್ಯಾರ್ಥಿ ನಿಯನ್ನೂ ಅನರ್ಹಗೊಳಿಸಿರುವುದು ವಿಶೇಷ.
ಫೋಷಕರ ಆಕ್ರೋಶ: ಖಾಸಗಿಯಾಗಿ ಪರೀಕ್ಷೆ ಬರೆದು ಉತ್ತೀರ್ಣ ಆದವರಿಗೆ ಅರ್ಹತೆ ಇಲ್ಲ ಎಂದಾದರೆ, ಇಷ್ಟೆಲ್ಲಾ ದೂರಶಿಕ್ಷಣ, ಖಾಸಗಿ ಶಿಕ್ಷಣ ಸಂಸ್ಥೆಗಳು, ಅಂಚೆ ತೆರಪಿನ ಶಿಕ್ಷಣ ಸಂಸ್ಥೆಗಳು ಇರುವುದೇತಕ್ಕೆ? ಪದವಿ ಪೂರ್ವ ಶಿಕ್ಷಣ ಮಂಡಳಿ ಪ್ರಮಾಣ ಪತ್ರದಲ್ಲಿ ‘ಖಾಸಗಿ’ ಎಂದು ಮೊಹರು ಹಾಕಿ ಕೊಡುವುದು ಏಕೆ? ಈ ಕೋರ್ಸ್ ಗೆ ಅರ್ಹರಲ್ಲ ಎಂದು ಅರ್ಜಿ ಸಲ್ಲಿಸುವಾಗ ಯಾಕೆ ಹೇಳಿಲ್ಲ. ಸರಕಾರ ಮಕ್ಕಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ ಎಂದು ಎಂದು ವಿದ್ಯಾರ್ಥಿಗಳ ಹೆತ್ತವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳ್ತಂಗಡಿ, ಸುಳ್ಯ ತಾಲೂಕಿನ ಗ್ರಾಮೀಣ ಪ್ರದೇಶದ, ಕೇರಳದ ಕೊಟ್ಟಾಯಂ ಸೇರಿದಂತೆ ದೂರ ಪ್ರದೇಶದ ವಿದ್ಯಾರ್ಥಿನಿಯರು ಏಜೆಂಟರಿಗೆ ಹಣ ಕೊಟ್ಟು, ಕಾಲೇಜು ಶುಲ್ಕ ಪಾವತಿಸಿ, ದುಬಾರಿ ಹಾಸ್ಟೆಲ್ ಶುಲ್ಕ ಪಾವತಿಸಿ ನರ್ಸಿಂಗ್ ಕೋರ್ಸ್ ಪಡೆಯುತ್ತಿದ್ದು, ಸರಕಾರದ ಹೊಸ ನಿರ್ಧಾರದಿಂದ ಆತಂಕಿತರಾಗಿದ್ದಾರೆ.
ಸರಕಾರದ ಮಟ್ಟದಲ್ಲಿ ನಿರ್ಧಾರ ಕೆಗೊಳ್ಳುವವರ ಗೊಂದಲ ಹಾಗೂ ಅಸ್ಪಷ್ಟ ತೀರ್ಮಾನದಿಂದಾಗಿ ಈ ರೀತಿಯ ಸಮಸ್ಯೆ ಸಷ್ಟಿಯಾಗುತ್ತಿದೆ. ವಿದ್ಯಾರ್ಥಿನಿಯರು ಖಾಸಗಿಯಾಗಿ ಪಿಯುಸಿ ಉತ್ತೀರ್ಣರಾಗಿದ್ದರೂ ಪಿಯುಸಿ ಪ್ರಮಾಣ ಪತ್ರ ನೀಡಿರುವುದು ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿ. ಕೋರ್ಸ್ ನಿಂದ ತಿರಸ್ಕೃತಗೊಂಡಿರುವ ಬೆಳ್ತಂಗಡಿ ನೆರಿಯಾದ ನಸೀಬಾ ಸರಕಾರಿ ಕೋಟಾದಡಿ ಜಿಎನ್ಎಂ ಕೋರ್ಸ್ ಗೆ ದಾಖಲಾತಿ ಪಡೆದವರು. ಇವರ ಪಿಯುಸಿ ಸರ್ಟಿಫಿಕೇಟ್ ನಲ್ಲಿ ‘ಖಾಸಗಿ’ ಎಂದು ದಾಖಲಾಗಿತ್ತು. ಹಾಗಿರುವಾಗ ಆ ಸಂದರ್ಭದಲ್ಲಿಯೇ ಅರ್ಜಿಯನ್ನು ತಿರಸ್ಕರಿಸಬಹುದಾಗಿತ್ತು. ಕೋರ್ಸ್ ಆರಂಭಗೊಂಡು ಐದು ತಿಂಗಳ ಬಳಿಕ ತರಗತಿಗೆ ಹಾಜರಾದ ವಿದ್ಯಾರ್ಥಿನಿಯರಿಗೆ ಅರ್ಹತೆ ಇಲ್ಲ ಎಂಬ ನೆಪವೊಡ್ಡಿ ಅನ್ಯಾಯ ಮಾಡುವುದು ಸರಿಯಲ್ಲ ಎನ್ನುವುದು ನರ್ಸಿಂಗ್ ಕ್ಷೇತ್ರದಲ್ಲಿ ಪಳಗಿದವರ ಮಾತು.
ನರ್ಸಿಂಗ್ ಕೌನ್ಸಿಲ್ ಹೇಳಿದ ಪ್ರಕಾರ ನಮ್ಮ ಕಾಲೇಜಿನ 6 ವಿದ್ಯಾರ್ಥಿನಿಯರ ದಾಖಲಾತಿ ಅರ್ಜಿಗಳು ತಿರಸ್ಕೃತಗೊಂಡಿವೆ. ಖಾಸಗಿಯಾಗಿ ಪಿಯುಸಿ ಉತ್ತೀರ್ಣರಾದವರು ಎಂಬ ಕಾರಣಕ್ಕೆ ಅರ್ಜಿ ತಿರಸ್ಕೃತಗೊಂಡಿರುವುದಾಗಿ ತಿಳಿಸಿದ್ದಾರೆ. ಸರಕಾರಿ ಕೋಟಾದಡಿ ದಾಖಲಾತಿ ಪಡೆದಿರುವ ಒಬ್ಬ ವಿದ್ಯಾರ್ಥಿನಿ ಅರ್ಜಿಯೂ ತಿರಸ್ಕೃತಗೊಂಡಿದೆ ಎನ್ನುತ್ತಾರೆ ಮಂಗಳೂರಿನ ಲಕ್ಷ್ಮಿ ಮೆಮೋರಿಯಲ್ ಟ್ರಸ್ಟ್ ಪ್ರಿನ್ಸಿಪಾಲ್ ಡಾ.ಲಾರಿಸ್ಸಾ ಮಾರ್ತಾ ಸ್ಯಾಮ್ಸ್. ಟೋಟಲಿ ಒಂದು ನಿಯಮ ನರ್ಸಿಂಗ್ ವಿದ್ಯಾರ್ಥಿಗಳ ಭವಿಷ್ಯವಂತೂ ಕತ್ತಲೆಗೆ ದೂಡಿದೆ.
Click this button or press Ctrl+G to toggle between Kannada and English