ಮಂಗಳೂರು : ಮಂಗಳೂರಿನ ಕೂಳೂರು ಸಮೀಪದ ರಾಯಿಕಟ್ಟೆ ಪ್ರದೇಶದಲ್ಲಿ ಹರಿಯುವ ಪಲ್ಗುಣಿ ನದಿಯನ್ನು ಸೇರುವ ಹಳ್ಳವೊಂದು ಸಂಪೂರ್ಣ ಕಲುಷಿತಗೊಂಡಿದ್ದು, ಪರಿಸರ ನಾಶದ ಭೀತಿ ಎದುರಾಗಿದೆ. ಕಳೆದ ಒಂದು ವಾರದಿಂದ ಈ ಭಾಗದ ಹಳ್ಳದಲ್ಲಿ ನೀರು ಕಪ್ಪು ಬಣ್ಣಕ್ಕೆ ತಿರುಗಿ ಕೊಳೆತು ನಾರುತ್ತಿದ್ದು, ಜಲಚರಗಳು ಉಸಿರುಗಟ್ಟಿ ಮೃತಪಡುತ್ತಿವೆ. ಸ್ಥಳದಲ್ಲಿ ನೂರಾರು ಮೀನುಗಳು ಸತ್ತು ತೇಲುತ್ತಿರುವುದು ಕಂಡುಬಂದಿದ್ದು, ಈ ಭಾಗದ ಪರಿಸರ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಜಿಲ್ಲಾಡಳಿತಕ್ಕೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ಇದ್ದರೂ ಯಾವುದೇ ತುರ್ತು ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಪರಿಸರ ಹೋರಾಟಗಾರ ಮುನೀರ್ ಕಾಟಿಪಳ್ಳ ಅವರು, ಈ ಭಾಗದ ಕೈಗಾರಿಕೆಗಳು ತಮ್ಮ ರಾಸಾಯನಿಕಯುಕ್ತ ಮಾಲಿನ್ಯಕಾರಕ ತ್ಯಾಜ್ಯವನ್ನು ಅಕ್ರಮವಾಗಿ ನದಿಗೆ ಸೇರುವ ಹಳ್ಳಗಳಿಗೆ ಹರಿಸುತ್ತಿರುವುದೇ ಈ ಅನಾಹುತಕ್ಕೆ ಮುಖ್ಯ ಕಾರಣ ಎಂದು ದೂರಿದ್ದಾರೆ. ಹಲವು ವರ್ಷಗಳಿಂದ ಕೈಗಾರಿಕೆಗಳು ನಿಯಮಗಳನ್ನು ಗಾಳಿಗೆ ತೂರಿ ನೇರವಾಗಿ ಹಳ್ಳಗಳಿಗೆ ವಿಷಕಾರಿ ನೀರನ್ನು ಬಿಡುತ್ತಿವೆ. ಈ ಹಿಂದೆಯೂ ಇಂತಹ ಕೃತ್ಯಗಳ ವಿರುದ್ಧ ಹಲವು ಬಾರಿ ಪ್ರತಿಭಟನೆಗಳನ್ನು ನಡೆಸಲಾಗಿದ್ದರೂ, ಅಧಿಕಾರಿಗಳ ಮೌನದಿಂದಾಗಿ ಕೈಗಾರಿಕಾ ಘಟಕಗಳ ಉದ್ಧಟತನ ಮುಂದುವರಿಯುತ್ತಿದೆ.
ಪ್ರಸ್ತುತ ಪರಿಸ್ಥಿತಿ ಮಿತಿ ಮೀರಿ ಹೋಗಿದ್ದು, ನದಿ ನೀರು ಬಳಸುವ ಜನಸಾಮಾನ್ಯರ ಆರೋಗ್ಯದ ಮೇಲೆ ಇದು ನೇರ ಪರಿಣಾಮ ಬೀರಲಿದೆ. ಸ್ಥಳೀಯ ಆಡಳಿತ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ನೀರಿನ ಮಾದರಿಯನ್ನು ಪರೀಕ್ಷಿಸಬೇಕು ಹಾಗೂ ಪರಿಸರವನ್ನು ಹಾಳುಗೆಡವುತ್ತಿರುವ ಘಟಕಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಗಿದೆ. ಇಲ್ಲವಾದಲ್ಲಿ ಈ ಭಾಗದ ಪರಿಸರ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









