ಮಂಗಳೂರು : ಆ ನಿರ್ದೇಶಕನ ಮೊದಲ ಸಿನಿಮಾವದು. ಚೊಚ್ಚಲ ಹೆರಿಗೆಯನ್ನು ನಿರೀಕ್ಷಿಸುತ್ತಿರುವ ಗರ್ಭಿಣಿಯ ಪ್ರಸವ ವೇದನೆಯ ಕಾಲವದು. ಬೆಂಗಳೂರಿನ ಕೆಂಪೇಗೌಡ ಸರ್ಕಲ್ ನಲ್ಲಿರುವ ಥಿಯೇಟರ್ ಒಳಗೆ ಅಳುಕುತ್ತಲೇ ಕಾಲಿಟ್ಟ ಆ ನಿರ್ದೇಶಕನ ದುಗುಡವನ್ನು ಯಾರೂ ಗುರುತಿಸಲಿಲ್ಲ. ಅಸಲಿಗೆ ಆತ ಒಬ್ಬ ನಿರ್ದೇಶಕನೆಂದೇ ಅಲ್ಲಿಯವರೆಗೆ ಗೊತ್ತಿರಲಿಲ್ಲ.
ಅದೊಂದು ಆರಂಭ ಅಷ್ಟೇ. ಆನಂತರ ಆ ನಿರ್ದೇಶಕನಿಗೆ ತನ್ನ ಸಿನಿಮಾಕ್ಕೆ ಪ್ರೇಕ್ಷಕರನ್ನು ಹುಡುಕುವುದು ಕಷ್ಟವಾಗಲಿಲ್ಲ. ಪ್ರೇಕ್ಷಕರೇ ಆ ನಿರ್ದೇಶಕನ ಸಿನಿಮಾವನ್ನು ಹುಡುಕಿಕೊಂಡು ಬಂದರು. ಆ ನಿರ್ದೇಶಕನೇ ಮಣಿರತ್ನಂ. ಮಣಿಯ ಚಿತ್ರಗಳು ಉಳಿದ ತಮಿಳು ಚಿತ್ರಗಳಿಗಿಂತಲೂ ಸ್ಪಷ್ಟವಾಗಿ ಪ್ರೇಕ್ಷಕರಿಗೆ ಅರ್ಥವಾಗತೊಡಗಿದವು. ಉತ್ತರ ಭಾರತದಲ್ಲೂ ಮಣಿಗೆ ಅಭಿಮಾನಿಗಳು ಸೃಷ್ಟಿಯಾದರು.
`ನನ್ನೆಲ್ಲಾ ಸಿನಿಮಾಗಳಲ್ಲೂ ಉತ್ತಮ ಅಂಶಗಳನ್ನು ನನಗೆ ಸಾಧ್ಯವಾದ ಮಟ್ಟಿಗೆ ಸೇರಿಸಿದ್ದೇನೆ’ ಹಾಗಂತ ಮಣಿ ಹೇಳಿ ಮತ್ತೆ ಕುರ್ಚಿ ಗೆ ಒರಗಿ ಕೂತರು. ಚೆನ್ನೈನ ಮಣಿಯ ಕಚೇರಿಯಲ್ಲಿ ನೆರಳು-ಬೆಳಕು ಹದವಾಗಿ ಬೆರೆತಿತ್ತು. ಮಣಿಯದ್ದೇ ಚಿತ್ರಗಳಲ್ಲಿ ಬರುವ ಸಂತಸ-ವಿಷಾದದ ಛಾಯೆಯಂತೆ. ಚಿನ್ನದ ಬಣ್ಣದ ಫ್ರೇಮ್ ನ ಕನ್ನಡಕ ಸಂಜೆಯ ಹರೆಯದ ಬಿಸಿಲಿಗೆ ಫಳ ಫಳ ಹೊಳೆಯುತಿತ್ತು. ಭಾರತೀಯ ಚಿತ್ರರಂಗದ ಪರ್ಫೆಕ್ಷನಿಸ್ಟ್ ನ ಮುಖದಲ್ಲಿ ಅದೇ ಸಂತೃಪ್ತ ಭಾವ. ಮನಸ್ಸಿನಲ್ಲಿ ಹುದುಗಿಸಿಟ್ಟ ಸೂಕ್ಷ್ಮ ಚಿತ್ರಣಗಳನ್ನು ಇನ್ನಷ್ಟು ಭಾವತರಂಗಗಳನ್ನು ಹರಿಯಬಿಡಲು ಮಣಿ ಸಿದ್ಧವಾಗಿದ್ದರು. 56ರ ಹರೆಯದ ಮಣಿಯ ಚಿತ್ರರಂಗದ ಕೆರಿಯರ್ ಗ್ರಾಫ್ 29ವರ್ಷಗಳದ್ದು. ಇಷ್ಟು ವರ್ಷಗಳಲ್ಲಿ ಮಣಿ ಸಿನಿಮಾ ನಿರ್ದೇಶಿಸಿದ್ದು ಬರೀ 22 ಚಿತ್ರಗಳನ್ನು! 23ನೇ ಚಿತ್ರ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಹೆಸರು `ಕಡಲ್’ ಭಾರತೀಯ ಚಿತ್ರರಂಗದ ಅದ್ಭುತ ಮಣಿಯ ಬಗ್ಗೆ ಮಾತನಾಡಲು ಕಡಲ್ ಒಂದು ನೆಪ ಅಷ್ಟೇ.
ಸಕಾಲಿಕ ಸಮಸ್ಯೆಗಳನ್ನು ಮಣಿಯಷ್ಟು ಎತ್ತಿಕೊಳ್ಳುವಷ್ಟು ಸುಲಭವಾಗಿ ಮತ್ಯಾರು ಎತ್ತಿಕೊಳ್ಳುವುದಿಲ್ಲ. `ರೋಜಾ’ ದಿಲ್ ಸೇ ಭಯೋತ್ಪಾದನೆಯ ಕುರಿತಾಗಿದ್ದರೆ `ಬಾಂಬೆ’ ಚಿತ್ರ ಹಿಂದೂ-ಮುಸ್ಲಿಮರ ನಡುವಿನ ಸಂಘರ್ಷದ ಎಳೆಯನ್ನು ಸೂಕ್ಷ್ಮವಾಗಿ ಬಿಂಬಿಸಿತ್ತು. 2002ರಲ್ಲಿ ಬಂದ ಕನ್ನತ್ತಿಲ್ ಮುತ್ತಮಿಟಲ್ ತಮಿಳು-ಶ್ರೀಲಂಕಾದ ವಿಷಯ ಒಳಗೊಂಡಿತ್ತು. ಐಶ್ವರ್ಯಾ ರೈಗೊಂಡು ಐಡೆಂಟಿಟೆ ತಂದು ಕೊಟ್ಟ `ಇರುವರ್’ ತಮಿಳುನಾಡಿನ ಇಬ್ಬರು ಮುಖ್ಯಮಂತ್ರಿಗಳ ನಡುವಿನ ಸಂಬಂಧವನ್ನು ಕಟ್ಟಿಕೊಟ್ಟ ಚಿತ್ರ.
ದೊಡ್ಡ ದೊಡ್ಡ ಸ್ಟಾರ್ ಗಳನ್ನು ಒಂದೇ ಸಿನಿಮಾದಲ್ಲಿ ಹಾಕುವುದು ಮಣಿಗಿದ್ದ ಖಯಾಲಿಗಳಲ್ಲಿ ಒಂದು. ಒಂದೇ ಸಿನಿಮಾಗಳಲ್ಲಿ ಇಷ್ಟೊಂದು ಸ್ಟಾರ್ ಗಳನ್ನು ಹಾಕುವುದು ನಿರ್ದೇಶಕನಿಗೆ ಬಹುದೊಡ್ಡ ರಿಸ್ಕ್. ಪ್ರತೀ ಸ್ಟಾರ್ ಗೂ ಅವನದ್ದೇ ಆದ ಇಮೇಜ್ ಇದೆ. ಹೀಗಿರುವಾಗ ಮಣಿ ಇಂಥ ರಿಸ್ಕ್ಗೆ ತಲೆಯೊಡ್ಡುತ್ತಾರೆ. `ನಾನ್ಯಾವತ್ತೂ ನಟರಿಗೆ ಹೀಗೇ ಮಾಡಿ ಎನ್ನುವುದಿಲ್ಲ. ಅವರೊಂದಿಗೆ ದೃಶ್ಯಗಳ ಬಗ್ಗೆ ಚರ್ಚಿಸುತ್ತೇನೆ. ಅವರ ಪಾತ್ರದ ಬಗ್ಗೆ ವಿವರಿಸುತ್ತೇನೆ. ಅಲ್ಲಿಗೆ ಮುಗೀತು. ಉಳಿದಂತೆ ನಟರೇ ಅದನ್ನು ಮಾಡುತ್ತಾರೆ’ ಎಲ್ಲೋ ಕಳೆದುಹೋಗಿದ್ದ ಬಾಂಬೆಯ ಹೀರೋ ಅರವಿಂದ ಸ್ವಾಮಿಯನ್ನು ಮತ್ತೆ ಹುಡುಕಿ ಕರೆತಂದು `ಕಡಲ್’ ನಲ್ಲಿ ಮೀಯಿಸಿದ್ದಾರೆ. ಕಾರ್ತಿಕ್ ಮಗ ಮತ್ತು ರಾಧಾಳ ಮಗಳನ್ನು ಜೊತೆ ಸೇರಿಸಿದ್ದಾರೆ. ಒಂದು ಕಾಲದಲ್ಲಿ ಈ ಜೋಡಿಯನ್ನು ತೆರೆ ಮೇಲೆ ತಂದವರು ಇದೇ ಮಣಿ. ತನ್ನ ಸುತ್ತಮುತ್ತಲಿನವರೊಂದಿಗೆ ಕೆಲಸ ಮಾಡುವಾಗ ಅವರ ಸಲಹೆಯನ್ನು ತೆಗೆದುಕೊಳ್ಳುವುದರಲ್ಲೂ ಮಣಿ ವಿಶಾಲಹೃದಯಿ. ಹಾಗಾಗಿಯೇ ಮಣಿ ಚಿತ್ರದಲ್ಲಿ ಸಾಮಾನ್ಯನ ಮೊರೆತ ಧ್ವನಿಸುತ್ತದೆ.
ಚಿತ್ರದಲ್ಲಿ ಪ್ರೀತಿ, ಪ್ರೇಮ ಸಂಬಂಧಗಳನ್ನು ಕಟ್ಟಿಕೊಡುವ ಮಣಿಗೆ ಎರಡು ವರ್ಷಗಳ ಹಿಂದೆ ಎರಡು ಹಾರ್ಟ್ ಅಟ್ಯಾಕ್ ಆಗಿದೆ. ಬದುಕನ್ನು ಬಂದ ಹಾಗೆ ಸ್ವೀಕರಿಸಿದ್ದೇನೆ. ಹಾರ್ಟ್ ಅಟ್ಯಾಕ್ ಆದ ನಂತರ ಲಾಂಗ್ ವಾಕ್ ಹೋಗುತ್ತಿದ್ದೇವೆ. ಎಕ್ಸರ್ಸೈಸ್ ಮಾಡುತ್ತಿದ್ದೇನೆ.ಹಾರ್ಟ್ ಅಟ್ಯಾಕ್ ಜಸ್ಟ್ ಆರೋಗ್ಯ ಸರಿಯಿಲ್ಲ ಎನ್ನುವುದರ ಸೂಚನೆಯಷ್ಟೇ. ಆದರೆ ನನಗೊಂದು ದೊಡ್ಡ ಆಸರೆ ಒಂದಿದೆ. ಅದು ಪತ್ನಿ ಸುಹಾಸಿನಿಯದ್ದು ಎನ್ನುವ ಮಣಿಯ ಮಾತು ಇಬ್ಬರ ನಡುವಿನ ಪ್ರೀತಿ ಗೊಂದು ರೂಪಕದಂತಿದೆ. ಥೇಟ್ ಮಣಿಯ ಸಿನಿಮಾದಲ್ಲಿ ಬರುವಂತೆ. ಸುಹಾಸಿನಿ ಎಷ್ಟು ದೊಡ್ಡ ಅದ್ಭುತ ನಟಿ ಎನ್ನುವುದು ಎಲ್ಲರಿಗೂ ಗೊತ್ತಿದೆ. ಈ ಇಬ್ಬರು ಪ್ರತಿಭಾವಂತರ ಕೂಸು ನಂದನ್ ಈಗ ಕಮ್ಯುನಿಸ್ಟ್ ಸಿದ್ಧಾಂತಗಳಿಗೆ ಆಕರ್ಷಿತವಾಗಿರುವ ಯುವಕ. ಆತ ನಮ್ಮಿಬ್ಬರ ಗ್ಲ್ಯಾಮರ್ ಲೋಕ ಬಿಟ್ಟು ತನ್ನದೇ ಲೋಕ ಕಂಡುಕೊಂಡಿದ್ದಾನೆ ಎನ್ನುವ ಮಣಿಗೆ `ಕಡಲ್’ ಚಿತ್ರದ ಬಳಿಕ ಮನೆಯಲ್ಲಿ ತುಂಬಿ ಹೋಗಿರುವ ಅಸಂಖ್ಯಾತ ಪುಸ್ತಕಗಳ ನಡುವೆ ಕರಗಿ ಹೋಗಲು ಮಣಿ ಕಾತರಿಸುತ್ತಿದ್ದಾರೆ.
Click this button or press Ctrl+G to toggle between Kannada and English