ಮಂಗಳೂರು : ಏಕಕಾಲದಲ್ಲಿ ಎರಡು ಕೈಗಳಲ್ಲಿ ಬೇರೆ ಬೇರೆ ತಾಳಗಳನ್ನು ಹಾಕುತ್ತಾ, ಒಂದು ಕಣ್ಣಿನ ಹುಬ್ಬನ್ನು ಹಾರಿಸುತ್ತಾ (ರೇಚಿತ), 60 ಸಂವತ್ಸರಗಳ ಹೆಸರುಗಳನ್ನು ಹೇಳುತ್ತಾಳೆ ಈ ಪುಟಾಣಿ ಕಲಾವಿದೆ. 72 ಮೇಳಕರ್ತ ರಾಗಗಳ ಹೆಸರುಗಳನ್ನು, ರಾಗಚಕ್ರ, ಮೇಳ ಸಂಖ್ಯೆ ಮತ್ತು ಆರೋಹಣ – ಅವರೋಹಣ ಸ್ವರಗಳನ್ನು ನಿಖರವಾಗಿ ಹೇಳಬಲ್ಲಳೀಕೆ. 35 ತಾಳಗಳನ್ನು 5 ಗತಿಗಳಲ್ಲಿ ಪ್ರೇಕ್ಷಕರ ಪ್ರಶ್ನೆಗಳಿಗನುಗುಣವಾಗಿ ಪ್ರತ್ಯಕ್ಷೀಕರಿಸುತ್ತಾಳೀಕೆ. 60 ಸಂವತ್ಸರಗಳು, ನಕ್ಷತ್ರ. ಮಾಸ, ತಿಥಿಗಳ ಹೆಸರು ಹಾಗೂ ಭಗವದ್ಗೀತೆ, ನಾಟ್ಯಶಾಸ್ತ್ರ-ಅಭಿನಯ ದರ್ಪಣದ ಆಯ್ದ ಶ್ಲೋಕಗಳನ್ನು, ಸ್ತೋತ್ರ-ಸೂಕ್ತಗಳನ್ನು ನಿರರ್ಗಳವಾಗಿ ಹೇಳಬಲ್ಲ ಇವಳ ಬಾಲ ಪ್ರತಿಭೆಗೆ ತಲೆದೂಗದವರಿಲ್ಲ. ಮೈ ಕಂಟ್ರಿ ಎನ್ನುವ ವಿಷಯದ ಬಗ್ಗೆ ಈಕೆ ಮಾಡುವ ಇಂಗ್ಲಿಷ್ ಭಾಷಣವನ್ನು ಹಿರಿಯರೂ ಮೆಚ್ಚುತ್ತಾರೆ. ಕನ್ನಡ ಸಾಹಿತ್ಯ ಪರಂಪರೆಯ ನೂರ ಎಪ್ಪತ್ತೈದು ಪ್ರಾತಿನಿಧಿಕ ಹೆಸರುಗಳನ್ನು ನಿರರ್ಗಳವಾಗಿ ಹೇಳಬಲ್ಲ ವಿಶೇಷ ಜ್ಞಾಪಕ ಶಕ್ತಿ ಇವಳಿಗಿದೆ. 111 ದೈವಗಳ ಹೆಸರುಗಳನ್ನು ಪಟಪಟನೆ ಹೇಳಬಲ್ಲಳೀಕೆ. ದಾಸರ ಪದಗಳನ್ನು, ದೇಶಭಕ್ತಿಗೀತೆಗಳನ್ನು ಹಾಡುತ್ತಾಳೆ ಈ ಬಾಲೆ. ಇಷ್ಟೆಲ್ಲವನ್ನೂ ಇವಳು ನಡೆಸಿ ನೋಡುಗರನ್ನು ಅಚ್ಚರಿಯಲ್ಲಿ ಕೆಡವುವುದು ತನ್ನ ಮನೆಮನೆಗೆ ಭರತನಾಟ್ಯದ ನೃತ್ಯಗಳ ನಡು ನಡುವೆ ! ಈಕೆಯ ಹೆಸರು ಅಯನಾ ವಿ. ರಮಣ್.
ಮನೆಮನೆಗೆ ಭರತನಾಟ್ಯ . . . ಅನ್ನುವ ಪರಿಕಲ್ಪನೆಯೇ ಶಾಸ್ತ್ರೀಯ ನೃತ್ಯ ಕ್ಷೇತ್ರಕ್ಕೆ ಹೊಸದು. ಇದನ್ನು ಸಾಕಾರಗೊಳಿಸಿ, 100ಕ್ಕೂ ಮಿಕ್ಕಿ ಯಶಸ್ವಿ ಪ್ರದರ್ಶನಗಳನ್ನು ರಾಜ್ಯ, ಹೊರರಾಜ್ಯಗಳಲ್ಲಿ ನೀಡಿದ 10 ವರ್ಷದ ಬಾಲೆ ಅಯನಾ.ವಿ.ರಮಣ್. ಮಂಗಳೂರಿನ ರಂಗಭಾರತಿ ಸಂಸ್ಥೆ 2009ನೇ ವರ್ಷದ ಜನವರಿ ತಿಂಗಳಲ್ಲಿ ಆರಂಭಿಸಿದ ಈ ಸಂಗೀತ, ನೃತ್ಯ ಮತ್ತು ಸಂಸ್ಕೃತಿಗಳ ಜಾಗೃತಿ ಅಭಿಯಾನಕ್ಕೆ ಜೀವ ತುಂಬಿದ ಈ ಬಾಲ ಕಲಾವಿದೆ ಎಳೆಯ ವಯಸ್ಸಿನಲ್ಲಿಯೇ ಗರಿಷ್ಠ ಸಂಖ್ಯೆಯ ಏಕವ್ಯಕ್ತಿ ಪ್ರತಿಭಾ ಪ್ರದರ್ಶನಗಳ ಯಶಸ್ಸನ್ನು ಬುಟ್ಟಿಗೆ ಹಾಕಿಕೊಂಡಿದ್ದಾಳೆ. ಈ ಬಹುಮುಖ ಪ್ರತಿಭೆಯ ಸ್ಥೂಲ ಪರಿಚಯ ಇಲ್ಲಿದೆ.
ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ಭಾರತೀಯ ಕಲೆಗಳ ತರಬೇತಿ ಕೇಂದ್ರ ರಂಗಭಾರತಿಯ ನಿರ್ದೇಶಕ, ಕಲಾವಿದ, ಪತ್ರಕರ್ತ ಕೆ.ವಿ.ರಮಣ್-ಉಪನ್ಯಾಸಕಿ ಮುಕಾಂಬಿಕಾ ದಂಪತಿಯ ಪುತ್ರಿ ಅಯನಾ.ವಿ.ರಮಣ್.
ವಿದುಷಿ ಶ್ರೀಮತಿ ಗೀತಾಸರಳಾಯ ಮತ್ತು ವಿದುಷಿ ಶ್ರೀಮತಿ ರಶ್ಮೀ ಚಿದಾನಂದ್ ರಲ್ಲಿ ನೃತ್ಯಾಭ್ಯಾಸ ಮಾಡುತ್ತಿರುವ ಈಕೆ ಬೆಂಗಳೂರಿನ ವಿದ್ವಾನ್ ಸತ್ಯನಾರಾಯಣ ರಾಜು ಅವರಲ್ಲಿ ವಿಶೇಷ ನೃತ್ಯ ತರಬೇತಿ ಪಡೆಯುತಿದ್ದಾಳೆ. ಕರ್ನಾಟಕ ಶಾಸ್ತ್ರೀಯ ಸಂಗೀತ, ಭಾಷಣ, ಕಂಠಪಾಠ, ಪಠಣ, ನಾಟಕ, ಸುಗಮ ಸಂಗೀತ, ಜ್ಞಾಪಕ ಶಕ್ತಿ, ನಿರೂಪಣ, ಯಕ್ಷಗಾನ ಇತ್ಯಾದಿಗಳಲ್ಲಿ ತಂದೆಯೇ ಇವಳಿಗೆ ಗುರು. ವಿದ್ವಾನ್ ಎಂ ನಾರಾಯಣ್ ರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ವಿಶೇಷ ತರಬೇತಿ ಪಡೆಯುತ್ತಿರುವ ಈಕೆ ಜೈನಕಾಶಿ ಎಂದೇ ಹೆಸರಾದ ಮೂಡಬಿದ್ರೆಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದಾಳೆ. ಶ್ರೀ ಗಜಾನನ ಮರಾಠೆಯವರಲ್ಲಿ ಕೀಬೋರ್ಡ್ ಕಲಿಯುತ್ತಿದ್ದಾಳೆ. ಭರತನಾಟ್ಯ, ಸಂಗೀತ, ಛದ್ಮವೇಷ, ಭಾಷಣ, ಕಥನ, ಯಕ್ಷಗಾನ, ಕೀಬೋರ್ಡ್ ವಾದನ ಹೀಗೆ ಬಹುಮುಖವಾಗಿ ಅರಳಿಕೊಂಡಿದೆ ಈಕೆಯ ಪ್ರತಿಭೆ. ರಂಗಭಾರತಿ, ಮಂಗಳೂರು ಸಂಸ್ಥೆಯ ಮನೆಮನೆಗೆ ಭರತನಾಟ್ಯದ ಬಾಲ ಕಲಾವಿದೆಯಾಗಿ ನೃತ್ಯಕ್ಷೇತ್ರದ ಇತಿಹಾಸದಲ್ಲಿಯೇ ಮೊತ್ತಮೊದಲ ಬಾರಿಗೆ ನಡುಮನೆಗಳಲ್ಲಿ ಭರತನಾಟ್ಯದ ಸರಣಿ ಕಾರ್ಯಕ್ರಮ ನೀಡುತ್ತಿರುವ ಗರಿಮೆ ಅಯನಾ. ವಿ. ರಮಣ್ ಗಿದೆ.
ತನ್ನ ಮೂರನೆಯ ವಯಸ್ಸಿನಿಂದಲೇ ಬಣ್ಣ ಹಚ್ಚತೊಡಗಿದ ಅಯನಾ.ವಿ.ರಮಣ್ ನಿರಂತರ 4 ವರ್ಷಗಳ ಕಾಲ ರಾಜ್ಯಮಟ್ಟದ ಕೃಷ್ಣವೇಷ ಸ್ಪರ್ಧೆ ಗಳ ಬಹುಮಾನಿತೆ. ಛದ್ಮವೇಷ, ಇಂಗ್ಲೀಷ್ ಭಾಷಣ, ಸಂಗೀತ, ಕಥನ, ನೃತ್ಯ ಸ್ಪರ್ಧೆಗಳ ವಿಜೇತೆ. ಅಂತಾರಾಷ್ಟ್ರೀಯ ಖ್ಯಾತಿಯ ಕಥಕ್ ನೃತ್ಯ ಕಲಾವಿದ ಕೋಲ್ಕತ್ತದ ಪಂಡಿತ್ ಆಶಿಮ್ ಬಂಧು ಭಟ್ಟಾಚಾರ್ಯಜೀ ಅವರ ತಂಡದ ಜತೆ ಆಳ್ವಾಸ್ ವಿರಾಸತ್ ನಂತಹ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದ ವೇದಿಕೆಯಲ್ಲಿ ಅಭಿನಯಿಸುವ ಅವಕಾಶ ಪಡೆದು ‘ಸೈ’ ಎನಿಸಿಕೊಂಡಾಕೆ. ಸ್ವತಹ ಭಟ್ಟಾಚಾರ್ಯಜೀ ಅವರ ಮೆಚ್ಚುಗೆ ಗಳಿಸಿದಾಕೆ. ಅಪ್ರತಿಮ ಸಾಂಸ್ಕೃತಿಕ ಸಂಘಟಕ-ಕಲಾವಿದ ಡಾ. ಎಂ. ಮೋಹನ್ ಆಳ್ವರ ಮೋಹನ ಜಾದೂ ಎಂದೇ ಹೆಸರಾದ ಇಂದ್ರಜಾಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಡಾ. ಆಳ್ವರಿಂದಲೇ ಶಹಬ್ಬಾಸ್ಗಿರಿ ಪಡೆದಾಕೆ.
ವಿಶ್ವವಿಖ್ಯಾತ ಮೈಸೂರು ದಸರಾದ ವೇದಿಕೆಯಲ್ಲಿ ರಂಗಭಾರತಿ, ಮಂಗಳೂರು ಪ್ರಸ್ತುತಪಡಿಸಿದ ‘ದೇಶ ಧರ್ಮ’ ದೃಶ್ಯರೂಪಕದಲ್ಲಿ ಮಾಜಿ ಸಚಿವ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಬಿ. ನಾಗರಾಜ ಶೆಟ್ಟಿಯವರ ಜೊತೆ ಅಭಿನಯಿಸಿ ಪ್ರಶಂಸೆಗೆ ಪಾತ್ರಳಾದಾಕೆ. ತುಳುನಾಡಿನ ಪ್ರಾತಿನಿಧಿಕ ಪಾತ್ರಗಳಾದ ಕೋಟಿ-ಚೆನ್ನಯರ ಅಭಿನಯಕ್ಕಾಗಿ ತನ್ನ ಜತೆಪಾತ್ರಧಾರಿಯೊಂದಿಗೆ ಪ್ರಚಂಡ ಕರತಾಡನ ಗಿಟ್ಟಿಸಿಕೊಂಡಾಕೆ. ಬೆಂಗಳೂರಿನಲ್ಲಿ ನಡೆದ ಶಾಸ್ತ್ರೀಯ ನೃತ್ಯ ಪ್ರಕಾರಗಳ ರಾಜ್ಯ ಮಟ್ಟದ ಮಕ್ಕಳ ಉತ್ಸವ ಚಿನ್ನಕಲಾನಾದಂ-2011ರಲ್ಲಿ ವಿಶೇಷ ಅತಿಥಿಯಾಗಿ ಆಮಂತ್ರಿಸಲ್ಪಟ್ಟು ಪ್ರದರ್ಶನ ನೀಡಿದಾಕೆ.
ಕಾಸರಗೋಡಿನಲ್ಲಿ ನಡೆದ ಅಖಿಲಭಾರತ ಸಂಸ್ಕೃತಿ ಸಮ್ಮೇಳನದಲ್ಲಿ ಅಯನಾಳ ಮನೆಮನೆಗೆ ಭರತನಾಟ್ಯ ಕಾರ್ಯಕ್ರಮದಲ್ಲಿ ಹಂಚಲಾಗುವ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಸಂಗೀತ-ನೃತ್ಯ – ಸಂಸ್ಕೃತಿಗಳ ಕೆಲವು ಪ್ರಾಥಮಿಕ ಮಾಹಿತಿಗಳನ್ನು ಹೊಂದಿರುವ ಈ ಭಿತ್ತಿಪತ್ರಗಳನ್ನು ಎಲ್ಲಾ ಕಾರ್ಯಕ್ರಮಗಳಲ್ಲಿ ಆಸಕ್ತರಿಗೆ ಉಚಿತವಾಗಿ ಹಂಚಲಾಗುತ್ತದೆ. ಇದರ ಎಲ್ಲಾ ವಿವರಗಳನ್ನು ಸರಾಗವಾಗಿ ಹೇಳಬಲ್ಲ ಅಯನಾ.ವಿ.ರಮಣ್ ಳ ಪ್ರತಿಭೆಗೆ ಎಲ್ಲೆಡೆ ಚಪ್ಪಾಳೆಯ ಸುರಿಮಳೆಯಾಗುತ್ತಿದೆ.
ಮನೆಮನೆಗೆ ಭರತನಾಟ್ಯದ ಮೂಲಕ ಸಂಗೀತ, ನೃತ್ಯ, ಸಂಸ್ಕೃತಿಗಳ ಜಾಗೃತಿ ಅಭಿಯಾನ ನಡೆಸುತ್ತಿರುವ ಅಯನಾಳ ಸಾಧನೆಗೆ ಹಲವಾರು ಪ್ರಮಾಣ ಪತ್ರಗಳು ಸಂದಿವೆ. 2011ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಕನ್ನಡ ಮಕ್ಕಳ ಸಾಂಸ್ಕೃತಿಕ ಮಿಲನ-2011ರ ನಿಮಿತ್ತ ಮುಂಬೈ ಕರ್ನಾಟಕ ಸಂಘ ಮತ್ತು ಬೆಂಗಳೂರಿನ ಜ್ಞಾನ ಮಂದಾರ ಶೈಕ್ಷಣಿಕ ಟ್ರಸ್ ಟ್ಗಳ ನಾಟ್ಯಮಯೂರಿ ಬಿರುದು ಪಡೆದಿದ್ದಾಳೆ. ಗೋಕರ್ಣದಲ್ಲಿ ಶ್ರೀಮದ್ರಾಮಚಂದ್ರಾಪುರ ಮಠದ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಸಮ್ಮುಖದಲ್ಲಿ ನೃತ್ಯ ಪ್ರತಿಭಾ ಪ್ರದರ್ಶನ ನೀಡಿ ನವರತ್ನ ಖಚಿತ ಮಾಲೆಯನ್ನು ಆಶೀರ್ವಾದ ರೂಪದಲ್ಲಿ ಪಡೆದಿದ್ದಾಳೆ.
ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ| ಡಿ. ವಿರೇಂದ್ರ ಹೆಗ್ಗಡೆಯವರು ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಸಂಸ್ಥೆ ನಡೆಸಿದ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಸಮ್ಮಾನಿಸಿ ಆಶೀರ್ವದಿಸಿದ್ದಾರೆ. ವಿಶ್ವಕನ್ನಡ ಸಮ್ಮೇಳನದ ಜಿಲ್ಲಾ ತೇರಿನ ಯಾತ್ರೆಯಲ್ಲಿ ಮೂಡಬಿದ್ರೆಯ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರಿಂದ ಆಶೀರ್ವಾದ ಪೂರ್ವಕವಾಗಿ ವಿದೇಶೀ ಪೆನ್ನಿನ ಇನಾಮು ಪಡೆದಿದ್ದಾಳೆ.
ಸಂಸದರು, ಶಾಸಕರು, ಸುಪ್ರಸಿದ್ಧ ಕಲಾವಿದರು, ಸಮಾಜ ಮುಖ್ಯರು ಗೌರವಿಸಿದ್ದಾರೆ, ಮೆಚ್ಚಿದ್ದಾರೆ, ಹರಸಿದ್ದಾರೆ. ತನ್ನ ಶಾಲಾ ವಾರ್ಷಿ ಕೋತ್ಸವದಲ್ಲಿ ವಿಶೇಷ ಸಮ್ಮಾನದ ಮಾನ್ಯತೆ ಗಳಿಸಿಕೊಂಡಿದ್ದಾಳೆ. ಮೂಡಬಿದ್ರೆಯ ರೋಟರಿ ಸಂಸ್ಥೆಯ ಅಭಿನಂದನೆ ಸಂದಿದೆ. ಕಟೀಲಿನ ಶ್ರೀ ರಕ್ತೇಶ್ವರಿ ಸೇವಾ ನ್ಯಾಸ ಯಾನೆ ಟ್ರಸ್ ಟ್ನ ಚೊಚ್ಚಲ ಸಮ್ಮಾನ ಇವಳಿಗೆ ಒಲಿದು ಬಂದಿದೆ. ಬೆಂಗಳೂರಿನಲ್ಲಿ ಮನೆಮನೆಗೆ ಭರತನಾಟ್ಯದ ಚೊಚ್ಚಲ ಅಭಿಯಾನದ ಸಂದರ್ಭದಲ್ಲಿ ಬೆಂಗಳೂರು ಆಕಾಶವಾಣಿಯ ಬಹುಶ್ರುತ ಕಾಮನಬಿಲ್ಲು (ರೈನ್ಬೋ) ಕಾರ್ಯಕ್ರಮದ ಕಾಕಂಬಿಯಲ್ಲಿ ಒಂದು ಗಂಟೆಯ ನೇರಪ್ರಸಾರದ ಕಾರ್ಯಕ್ರಮದಲ್ಲಿ ತನ್ನ ತಂದೆಯ ಜೊತೆ ಭಾಗವಹಿಸಿದ ಗೌರವ ಪಡೆದಿದ್ದಾಳೆ. 2ನೇಯ ಅಖಿಲ ಕರ್ನಾಟಕ ಬೆಳದಿಂಗಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎರಡು ಕೈಗಳಲ್ಲಿ ಬೇರೆ ಬೇರೆ ತಾಳಗಳನ್ನು ಹಾಕುತ್ತಾ, ರಾಗಗಳ ಹೆಸರು, ಸಂವತ್ಸರಗಳ ಹೆಸರುಗಳನ್ನು ಹೇಳಿ ಅಚ್ಚರಿ ಮೂಡಿಸಿ ಕರ್ನಾಟಕ ಬಾಲಪ್ರತಿಭಾ ರತ್ನ ಸಮ್ಮಾನ ಸ್ವೀಕರಿಸಿದ್ದಾಳೆ. ಬೆಂಗಳೂರಿನ ಜ್ಞಾನ ಮಂದಾರ ಅಕಾಡೆಮಿ ಕೊಡಮಾಡುವ ಅರಳುಮಲ್ಲಿಗೆ ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದಾಳೆ.
ಜಿಲ್ಲಾಡಳಿತ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕರಾವಳಿ ಸಂಭ್ರಮ ಪುರಸ್ಕಾರ ಪಡೆದ ಏಕೈಕ ಕಲಾವಿದೆ ಅಯನಾ. ಕಾರ್ಕಳದ ಸುನಿನಾದ ಸಂಗೀತ ಕೇಂದ್ರ ನೀಡುವ ಸುನಿನಾದಶ್ರೀ ಪ್ರಶಸ್ತಿ ಸ್ವೀಕರಿಸಿದ್ದಾಳೆ. ಮನೆಮನೆಗೆ ಭರತನಾಟ್ಯದ 75ನೇಯ ಸಂಭ್ರಮವನ್ನು ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿಯ ಭೈರಾದೇವಿ ಮಂಟಪದಲ್ಲಿ ನೃತ್ಯ ಪ್ರತಿಭಾಮೃತವಾಗಿ ಆಚರಿಸಿ ಶ್ರೀ ಚಾರುಕೀತರ್ಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮಿಗಳಿಂದ ಸನ್ಮಾನಿತಳಾಗಿದ್ದಾಳೆ. ಸುಮಸೌರಭ ಪ್ರಶಸ್ತಿ ಇವಳನ್ನು ಅರಸಿ ಬಂದಿದೆ.
ಮಂಗಳೂರಿನ ಬಾಲಭಾರತಿ ಅಕಾಡೆಮಿ (ರಿ.), ಮಕ್ಕಳಕೂಟದ ಸ್ಥಾಪಕ ಉಪಾಧ್ಯಕ್ಷೆಯಾಗಿ ಕೆಲಸ ಮಾಡುವ ಮೂಲಕ ತನ್ನಂತೆಯೇ ಇತರ ಮಕ್ಕಳಿಗೂ ವೇದಿಕೆ ಕಲ್ಪಿಸುವಲ್ಲಿ ಕೈ ಜೋಡಿಸಿದ್ದಾಳೆ. ಇದಕ್ಕಾಗಿಯೇ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಕೃಷ್ಣ ಜೆ. ಪಾಲೆಮಾರ್ ಇವರಿಂದ ಅಭಿನಂದನಾ ಪತ್ರ -ಸನ್ಮಾನ ಸ್ವೀಕರಿಸಿದ್ದಾಳೆ. ಮಂಗಳೂರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯ ಉದ್ಘಾಟಕಿಯಾಗುವ ಮಾನ್ಯತೆ ಪಡೆದಿದ್ದಾಳೆ.
ರಂಗಭಾರತಿ ಸಂಸ್ಥೆ ನಡೆಸಿದ ಸಂಗೀತ ನೃತ್ಯ ಸಪ್ತಾಹ ಮತ್ತು ಕನ್ನಡ ಸಂಸ್ಕೃತಿ ಸಪ್ತಾಹಗಳಲ್ಲಿ ನಿರಂತರ 2 ವರ್ಷ ವಿವಿಧ ಅನಾಥಾಶ್ರಮ, ವೃದ್ಧಾಶ್ರಮ, ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳ ಕೇಂದ್ರ, ಜೈಲು ಮುಂತಾದ ಕಡೆಗಳಲ್ಲಿ ಉಚಿತವಾಗಿ ಕಾರ್ಯಕ್ರಮ ನೀಡಿದ್ದಾಳೆ. ವಿವಿಧ ಸಂಘ ಸಂಸ್ಥೆಗಳ ವೇದಿಕೆಗಳಲ್ಲಿಯೂ ಪ್ರತಿಭಾ ಪ್ರದರ್ಶನ ಮಾಡಿದ್ದಾಳೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಂಗೀತ ನೃತ್ಯ ಆಕಾಡೆಮಿ, ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿಗಳಿಂದ ತನ್ನ ಕಾರ್ಯಕ್ರಮ ಪ್ರಾಯೋಜಿಸಲ್ಪಡುವ ಮಾನ್ಯತೆ ಪಡೆದಿದ್ದಾಳೆ. ಬೆಂಗಳೂರಿನಲ್ಲಿ ನಡೆದ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಮೈಸೂರಿನ ರಾಮೋತ್ಸವದಲ್ಲಿ ತನ್ನ ತಂದೆಯ ಜೊತೆ ಸುಗಮ ಸಂಗೀತ ಹಾಡಿದ್ದಾಳೆ.
2010ನೇ ಸಾಲಿನ ಎಪ್ರಿಲ್ ತಿಂಗಳಲ್ಲಿ ಈ ಅದ್ಭುತ ಬಾಲಕಿ ತನ್ನ ತಂಡದೊಂದಿಗೆ ಬೆಂಗಳೂರಿಗೆ ತೆರಳಿ ಮನೆ, ವಠಾರ, ಮಂದಿರ, ಆಶ್ರಮ, ವಿದ್ಯಾರ್ಥಿನಿಲಯ, ನೃತ್ಯ ಕೇಂದ್ರಗಳಲ್ಲಿ ಮೂರನೇ ಬಾರಿ ನೃತ್ಯ-ಪ್ರತಿಭಾ ಪ್ರದರ್ಶನದ ಸರಣಿ ಕಾರ್ಯಕ್ರಮ ನೀಡಿದ್ದಾಳೆ.
ಪ್ರತಿಷ್ಠಿತ ಆಳ್ವಾಸ್ ನುಡಿಸಿರಿ 2010ರ ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಂಪರೆಯ 100 ಹೆಸರುಗಳನ್ನು ನಿರರ್ಗಳವಾಗಿ ಹೇಳಿ ಸರ್ವತ್ರ ಶಹಬ್ಬಾಸ್ಗಿರಿ ಪಡೆದಿದ್ದಾಳೆ. 2011ನೇ ಸಾಲಿನ ನುಡಿಸಿರಿಯಲ್ಲಿ ಈ ಹೆಸರುಗಳನ್ನು 151ಕ್ಕೆ ವಿಸ್ತರಿಸಿಕೊಂಡು ಮತ್ತೊಮ್ಮೆ ಮೆಚ್ಚುಗೆ ಗಿಟ್ಟಿಸಿದ್ದಾಳೆ. ಅಲ್ಲದೆ ಸಾಂಸ್ಕೃತಿಕ ವೇದಿಕೆಯಲ್ಲಿ ತನಿ ಭರತನಾಟ್ಯ ಮಾಡುವ ಅವಕಾಶ ಪಡೆದ ಅತ್ಯಂತ ಕಿರಿಯ ಕಲಾವಿದೆಯಾಗಿ ಗುರುತಿಸಲ್ಪಟ್ಟಿದ್ದಾಳೆ ಬಾಲ ಕಲಾವಿದೆ ಕು| ಅಯನಾ ವಿ. ರಮಣ್. 2012ನೇ ಸಾಲಿನ ಮೇ 19ರಿಂದ 26ರವರೆಗೆ ಮುಂಬೈ ಮಹಾನಗರದ ವಿವಿಧ ಪ್ರದೇಶಗಳಲ್ಲಿ ನೃತ್ಯ – ಪ್ರತಿಭಾ ಪ್ರದರ್ಶನ ಸಪ್ತಾಹ ನಡೆಸಿದ್ದಾಳೆ. ಸಪ್ಟೆಂಬರ್ 1ಮತ್ತು 2ರಂದು ಚೆನ್ನೈಯಲ್ಲಿ ಕಾರ್ಯಕ್ರಮ ನೀಡಿ ಪೇಜಾವರ ಮಠದ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಿಂದ, ಪದ್ಮಭೂಷಣ ಪ್ರೊ. ಡಾ. ಟಿ.ವಿ. ಗೋಪಾಲಕೃಷ್ಣನ್ ಚೆನ್ನೈ ಮತ್ತು ಪದ್ಮಶ್ರೀ ಡಾ. ಕದ್ರಿ ಗೋಪಾಲನಾಥ್ ಇವರಿಂದ ಶಹಭಾಸ್ಗಿರಿಯ ಆಶೀರ್ವಾದ ಪಡೆದಿದ್ದಾಳೆ. ಶಾಲಾ ಕಲಿಕೆಯಲ್ಲೂ ಮುಂದಿರುವ ಅಯನಾ ನಿರಂತರ ‘ಎ’ ಅಥವಾ ‘ಎ+’ ದರ್ಜೆ ಕಾಯ್ದುಕೊಂಡು, ತನ್ನ ಹೆತ್ತವರ ಪ್ರೋತ್ಸಾಹದೊಂದಿಗೆ ಮಹತ್ತರ ಸಾಧನೆಯ ಗುರಿಯನ್ನಿರಿಸಿಕೊಂಡು ಮುಂದುವರಿಸುತ್ತಿದ್ದಾಳೆ, ಮನೆಮನೆಗೆ ನೃತ್ಯದ ಪಯಣವನ್ನು.
Click this button or press Ctrl+G to toggle between Kannada and English