ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ವತಿಯಿಂದ ಫೆಬ್ರವರಿ 24 ರಂದು ಬಾನುವಾರ ದೆಹಲಿಯಲ್ಲಿ ಬೃಹತ್ ‘ದೆಹಲಿ ತುಳು ಸಿರಿ’ ತುಳುವರ ಸಮ್ಮೇಳನವನ್ನು ಅಯೋಜಿಸಲಾಗಿದ್ದು. ಈ ಸಮ್ಮೆಳನದಲ್ಲಿ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಸಲುವಾಗಿ ಕೇಂದ್ರ ಸರಕಾರವನ್ನು ಒತ್ತಾಯಿಸಿ ಮನವಿ ಸಲ್ಲಿಸಲಾಗುವುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಶ್ರೀ ಉಮಾನಾಥ ಎ.ಕೋಟ್ಯಾನ್ ಅವರು ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಹಾಗೂ ಮಾನ್ಯತೆಗಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ತುಳುವರು ನಿರಂತರವಾಗಿ ಪ್ರಯತ್ನಿಸುತ್ತಾ ಬಂದಿದ್ದಾರೆ. ಇದೀಗ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ದೆಹಲಿಯ ತುಳು ಸಿರಿ ಸಂಸ್ಥೆಗಳ ಕೋರಿಕೆಯ ಮೇರೆಗೆ ತುಳುನಾಡಿನ ಜನಪ್ರತಿನಿಧಿಗಳಾದ ಶ್ರೀ ಆಸ್ಕರ್ ಫೆರ್ನಾಂಡೀಸ್, ಡಾ. ಎಂ. ವೀರಪ್ಪ ಮೊಯಿಲಿ, ಶ್ರೀ ಜಯಪ್ರಕಾಶ್ ಹೆಗ್ಡೆ ಮತ್ತು ಶ್ರೀ ನಳಿನ್ ಕುಮಾರ್ ಕಟೀಲ್ ಇವರ ಪೂರ್ಣ ಬೆಂಬಲದೊಂದಿಗೆ ಮತ್ತೊಮ್ಮೆ ಕೇಂದ್ರ ಸರಕಾರವನ್ನು ಒತ್ತಾಯಿಸಿ ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ, ಈ ಪ್ರಯುಕ್ತ ದೆಹಲಿಯಲ್ಲಿ ನಡೆಯಲಿರುವ “ತುಳು ಸಮ್ಮೇಳನದಲ್ಲಿ” ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ದೆಹಲಿಯ ತುಳು ಸಿರಿ ಹಾಗೂ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ ಬಂಟ್ವಾಳ ಇದರ ವತಿಯಿಂದ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಮಾನ್ಯ ಪ್ರಧಾನ ಮಂತ್ರಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದವರು ವಿವರಿಸಿದರು.
ಕೇಂದ್ರ ಸಚಿವರಾದ ಡಾ. ಎಂ ವೀರಪ್ಪ ಮೊಯಿಲಿವರು ದೆಹಲಿ ತುಳು ಸಿರಿ” ಜಾಗತಿಕ ಮಟ್ಟದ ಈ ಬೃಹತ್ ಸಮಾವೇಶದ ಉದ್ಘಾಟನೆಯನ್ನು ನೆರವೇರಿಸಲಿದ್ದು, ಅಂತಾರಾಷ್ಟ್ರೀಯ ಖ್ಯಾತಿಯ ತುಳು ವಿದ್ವಾಂಸರಾದ ಡಾ.ಬಿ.ಎ.ವಿವೇಕ ರೈ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು. ರಾಜ್ಯ ಸಭಾ ಸದಸ್ಯರಾದ ಶ್ರೀ ಆಸ್ಕರ್ ಫೆರ್ನಾಂಡೀಸ್ ಅವರು ಪ್ರಾಸ್ತಾವಿಕ ಭಾಷಣ ಮಾಡಲಿರುವರು. ಕೇಂದ್ರ ಸಚಿವರಾದ ಶ್ರೀ ಮಲ್ಲಿಖಾರ್ಜುನ ಖರ್ಗೆ, ಶ್ರೀ ಕೆ.ರೆಹಮಾನ್ ಖಾನ್, ಶ್ರೀ ಎಚ್. ಮುನಿಯಪ್ಪ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದ ಗೌಡ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.ದೆಹಲಿ ತುಳು ಸಿರಿ”ಯ ಸಂಚಾಲಕ ವಸಂತ ಶೆಟ್ಟಿ ಬೆಳ್ಳಾರೆ ದೇಹಲಿ ಸಮ್ಮೇಳನದ ಬಗ್ಗೆ ಪೂರಕ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ರಿಜಿಸ್ಟರ್ ಚಂದ್ರಹಾಸ ರೈ, ಅಕಾಡೆಮಿ ಸದಸ್ಯರಾದ ಶ್ರೀ ಜಗನ್ನಾಥ್ ಶೆಟ್ಟಿ ಬಾಳ, ಯಾದವ ಕರ್ಕೇರಾ, ಪದ್ಮನಾಭ ಬಟ್ ಎಕ್ಕಾರ್, ದಾಮೋಧರ ಬಂಗೇರಾ, ಶ್ರೀಮತಿ ಮಂಜುಳಾ ಶೆಟ್ಟಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English