ಮಂಗಳೂರು : ಗ್ರಾಮೀಣ ಪ್ರದೇಶದ ಮಕ್ಕಳ ಜ್ಞಾನರ್ಜಾನೆಯಾಗಲು ಹಾಗೂ ಜೀವನದಲ್ಲಿ ನೈತಿಕ ಶಕ್ತಿಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಹೆಗ್ಗಡೆಯವರು ಲಕ್ಷಾಂತರ ಪುಸ್ತಕಗಳನ್ನು ಮುದ್ರಿಸಿ ಸಮಾಜದಲ್ಲಿ ಬಹುದೊಡ್ಡ ಕಾರ್ಯ ಮಾಡಿದ್ದಾರೆ. ಇದರ ಉಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ರಾಜ್ಯಸಭಾ ಸದಸ್ಯೆ ಡಾ.ಬಿ.ಜಯಶ್ರೀ ಹೇಳಿದರು. ಅವರು ಸೋಮವಾರ ಶಾಂತಿವನ ಟ್ರಸ್ಟ್ ಧರ್ಮಸ್ಥಳ, ಶ್ರೀ ಧ.ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಧರ್ಮಸ್ಥಳ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಧರ್ಮಸ್ಥಳದ ಅಮೃತ ವರ್ಷಿಣಿ ಸಭಾ ಭವನದಲ್ಲಿ ನಡೆದ ಅರುಣೋದಯ ಹಾಗೂ ಕಿರಣೋದಯ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನಾಧರಿಸಿದ ವಿವಿಧ ಸ್ಪರ್ಧೆಗಳು ಮತ್ತು ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಲಕ್ಷಾಂತರ ಪುಸ್ತಕಗಳನ್ನು ಮುದ್ರಿಸಿ ಅದನ್ನು ಹಳ್ಳಿಗಳಿಗೆ ತಲುಪುವಂತೆ ಮಾಡಿ ಆ ಮೂಲಕ ಮಕ್ಕಳಲ್ಲಿ ನೈತಿಕ ಮೌಲ್ಯ ಬೆಳೆಸುವ ಹೆಗ್ಗಡೆಯವರ ಶ್ರಮ ಅವರ್ಣನೀಯ. ಇಂತಹ ದೊಡ್ಡ ಸಾಧನೆ ಬೇರೆಲ್ಲೂ ನಡೆದಿಲ್ಲ, ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಹೆತ್ತವರು ಬೆಳೆಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ಇಂದಿನ ಹೆತ್ತವರ ಆದ್ಯತೆಗಳು ಬದಲಾಗುತ್ತಿವೆ. ಮಕ್ಕಳು ಸಾತ್ವಿಕರಾಗಬೇಕು, ಸಚ್ಚಾರಿತ್ರ್ಯ ಹೊಂದಿರಬೇಕು, ದೇಶ, ಭಾಷೆ, ಸಾಹಿತ್ಯ ಪ್ರೇಮಿಗಳಾಗಬೇಕೆಂದು ಆಸೆ ಪಡುವವರು ವಿರಳವಾಗಿದ್ದಾರೆ. ಬದಲಿಗೆ ಉತ್ತಮ ಸಂಪಾದನೆ, ದೊಡ್ಡ ಉದ್ಯೋಗ ಸಿಗಬೇಕೆಂಬುದೇ ಕನಸಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಸರಕಾರ ಮಕ್ಕಳಿಗೆ ನೈತಿಕ ಮೌಲ್ಯಗಳ ಶಿಕ್ಷಣ ಬೋಧಿಸಿ ಎಂದು ಹೇಳದೇ ಕೇವಲ ಪಠ್ಯಕ್ರಮಕ್ಕೆ ಜೋತುಬಿದ್ದಿದೆ. ಮಕ್ಕಳು ತಮ್ಮ ಬೇಕು ಬೇಡಗಳನ್ನು ಗಟ್ಟಿಯಾಗಿ ತೀರ್ಮಾನಿಸಿ. ಓದುವ ನೆಪಕ್ಕಾಗಿ ಮಾತ್ರ ಪುಸ್ತಕದ ಸ್ಪರ್ಧೆ ಏರ್ಪಡಿಸಲಾಗಿದೆ. ಶಾಂತಿವನದ ಪುಸ್ತಕಗಳ ಪರಿಣಾಮ ಮಕ್ಕಳಲ್ಲಿ ಧನಾತ್ಮಕವಾಗಿ ಉಂಟಾಗಿದೆ ಎಂದರು.
ಶ್ರೀ ಧ. ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ನಿರ್ದೇಶಕ ಐ. ಶಶಿಕಾಂತ್, ಉಡುಪಿ ಯೋಗಶಿಕ್ಷಕ ಕುಮಾರ್, ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಮೂಡಿತ್ತಾಯ ಮೊದಲಾದವರು ಭಾಗವಹಿಸಿದ್ದರು.
Click this button or press Ctrl+G to toggle between Kannada and English