ಮಂಗಳೂರು : ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ನಡೆಸಿದ ಬಂದ್ ಯಶಸ್ವಿಯಾಗಿತ್ತು. ಯಾವುದೇ ಅಹಿತಕರ ಘಟನೆಗಳು ಸಂಭವಿಸದೆ ಶಾಂತಿಯುತವಾಗಿತ್ತು. ಬ್ಯಾಂಕ್ ಹಾಗೂ ಸರಕಾರಿ ಕಚೇರಿಗಳು ತೆರೆದಿತ್ತಾದರೂ ಕಡಿಮೆ ಹಾಜರಾತಿ ಕಂಡುಬಂದಿದೆ. ಶಾಲೆ ಕಾಲೇಜುಗಳಲ್ಲಿ ತರಗತಿಗಳು ನಡೆಯಲಿಲ್ಲ. ನಗರದಲ್ಲಿ ಕೆಲವೊಂದು ಅಂಗಡಿ, ಮುಂಗಟ್ಟುಗಳು ಎಂದಿನಂತೆ ತೆರೆದಿದ್ದು ವ್ಯಾಪಾರವಿಲ್ಲದೆ ಬಿಕೋ ಎನ್ನುತ್ತಿತ್ತು. ಕೆಲವು ಕಡೆಗಳಲ್ಲಿ ಮಾತ್ರ ಬೆರಳೆನಿಕೆಯಷ್ಟು ಅಂಗಡಿ, ಹೊಟೇಲ್, ಬಟ್ಟೆ ಅಂಗಡಿ, ವೈನ್ ಶಾಫ್, ಮೆಡಿಕಲ್ ಶಾಫ್, ಮತ್ತಿತರ ಸಣ್ಣಪುಟ್ಟ ಶಾಫ್‌ಗಳು ತೆರೆದಿದ್ದವು. ನಗರದ ಚಿತ್ರಮಂದಿರಗಳು ಸೇರಿದಂತೆ ಶಾಫಿಂಗ್ ಮಾಲ್‌ಗಳು ಮುಚ್ಚಿದ್ದವು. ದ್ವಿಚಕ್ರ ವಾಹನಗಳು ಹಾಗೂ ಖಾಸಗಿ ಕಾರುಗಳು ಓಡಾಟ ನಡೆಸಿದವು.
ಸಿಐಟಿಯು, ಬಿಎಂಎಸ್, ಎಐಟಿಯುಎಸಿ, ಇಂಟಕ್ ಮತ್ತು ಎಚ್‌ಎಂಎಸ್ ಸೇರಿದಂತೆ ಒಟ್ಟು ಹನ್ನೊಂದು ಕಾರ್ಮಿಕ ಸಂಘಟನೆಗಳು ಒಟ್ಟು ಸೇರಿ ನೀಡಿದ್ದ ಭಾರತ ಬಂದ್ ಕರೆ ನೀಡಿತ್ತು.
ಅಖೀಲ ಭಾರತ ಸಾರಿಗೆ ಕಾರ್ಮಿಕರ ಫೆಡರೇಶನ್ ಮುಷ್ಕರಕ್ಕೆ ಬೆಂಬಲ ಘೋಷಿಸಿರುವುದರಿಂದ ಜಿಲ್ಲೆಯ ಕೆಎಸ್‌ಆರ್‌ಟಿಸಿ ಬಸ್ಸುಗಳು ಹಾಗೂ ಖಾಸಗಿ ಬಸ್ಸುಗಳು, ಕಾಂಟ್ರಾಕ್ಟ್ ಕ್ಯಾರೇಜ್‌ಗಳು ಇಂದು ರಸ್ತೆಗೆ ಇಳಿಯಲಿಲ್ಲ. ಆದರೆ ಕೆಲವು ಆಟೋ ರಿಕ್ಷಾಗಳು ಎಂದಿನಂತೆ ರಸ್ತೆಗಳಿದಿದ್ದು ನಗರ ಹಾಗೂ ಪಟ್ಟಣಗಳ ಜನರಿಗೆ ಬಂದ್ ಬಿಸಿ ಅಷ್ಟಾಗಿ ತಟ್ಟಲಿಲ್ಲ. ಕಲ್ಯಾಣ ಮಂಟಪಗಳಲ್ಲಿ ಅತಿಥಿಗಳ ಸಂಖ್ಯೆ ಬಹು ವಿರಳವಾಗಿತ್ತು. ಹಳ್ಳಿಗಳಿಂದ ಪೇಟೆ ಪಟ್ಟಣಗಳಿಗೆ ಬರಬೇಕಿದ್ದ ಜನರಿಗೆ ಸಾರಿಗೆ ಬಸ್ಸುಗಳಿಲ್ಲದೆ ತೊಂದರೆಯಾಯಿತು.
ಬಂದ್ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಹಾಗೂ ಸರ್ವಿಸ್ ಬಸ್ ನಿಲ್ದಾಣಲ್ಲಿ ಕಾರ್ಮಿಕ ಸಂಘಟನೆಗಳ ಅಶ್ರಯದಲ್ಲಿ ಪ್ರತಿಭಟನಾ ಸಭೆ ನಡೆಯಿತು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸಿಪಿಐಎಂ ಮುಖಂಡ ಬಿ. ಮಾಧವ ಇದೀಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಯುಪಿಎ ಸರ್ಕಾರ ಅಗತ್ಯವಸ್ತುಗಳ ಬೆಲೆಯನ್ನು ದಿನೇ ದಿನೇ ಹೆಚ್ಚಿಸುತ್ತಿದ್ದು, ಇದರಿಂದ ಬಡ ಹಾಗೂ ಮದ್ಯಮ ವರ್ಗದ ಜನರು ತತ್ತರಿಸಿದ್ದಾರೆ. ಬೆಲೆ ಏರಿಕೆ ಕೇವಲ ಕಾರ್ಮಿಕ ವರ್ಗದ ಸಮಸ್ಯೆಯಾಗಿರದೆ ಎಲ್ಲ ವರ್ಗಗಳ ಸಮಸ್ಯೆಯಾಗಿದೆ. ಹಾಗಾಗಿ ಈ ಬಂದ್ ಯಶಸ್ವೀ ಪ್ರಾರಂಭ ಕಂಡಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬೇಡಿಕೆಗಳು : ಬಸ್ ನೌಕರರನ್ನು ಕಾರ್ಮಿಕ ಇಲಾಖೆಯಲ್ಲಿ ನೊಂದಾಯಿಸ ಬೇಕು * 8 ಗಂಟೆಗಳ ಕೆಲಸ ನಿಗದಿ. * ಬೋನಸ್, ಪ್ರಾವಿಡೆಂಟ್ ಫಂಡ್ ಮತ್ತು ಇಎಸ್‌ಐ ಸೌಲಭ್ಯ * ಅಪಘಾತಗಳ ಸಂದರ್ಭದಲ್ಲಿ ಚಾಲಕರನ್ನು ಬಂಧಿಸುವ ಕ್ರಮ ನಿಲ್ಲ ಬೇಕು * ಪೆಟ್ರೋಲ್, ಡೀಸಿಲ್ ಬೆಲೆ ಇಳಿಸ ಬೇಕು * ಬೆಲೆ ಏರಿಕೆ ನಿಯಂತ್ರಣ * ಚಾಲಕರು ಮತ್ತು ನಿರ್ವಾಹಕರಿಗೆ ಉಚಿತ ಮನೆ ನಿವೇಶನ ನೀಡ ಬೇಕು.
ರಿಕ್ಷಾ ಚಾಲಕರ ಬೇಡಿಕೆಗಳು: ಕಾರ್ಮಿಕರ ಭದ್ರತಾ ಮಂಡಳಿಯಲ್ಲಿ ಆಟೋ ಚಾಲಕರ ನೋಂದಣಿ ಮತ್ತು ಕಲ್ಯಾಣ ಯೋಜನೆಗಳ ಜಾರಿ * ಆಟೋ ಚಾಲನಾ ಪತ್ರಕ್ಕೆ ವಿದ್ಯಾರ್ಹತ ಕಡ್ಡಾಯ ಮಾಡಿರುವುದಕ್ಕೆ ವಿರೋಧ * 60 ವರ್ಷ ಪ್ರಾಯ ಮೇಲ್ಪಟ್ಟ ರಿಕ್ಷಾ ಚಾಲಕರಿಗೆ ಪಿಂಚಣಿ ಸೌಲಭ್ಯ * ರಿಕ್ಷಾ ವಿಮಾ ಪಾಲಿಸಿ ದರ ಕಡಿತ * ರಿಕ್ಷಾ ಚಾಲಕರಿಗೆ ಆರ್‌ಟಿಒ/ ಪೊಲೀಸ್ ಕಿರುಕುಳಕ್ಕೆ ತಡೆ.
ಬ್ಯಾಂಕ್ ಅಧಿಕಾರಿಗಳ/ ನೌಕರರ/ ಕೇಂದ್ರ ಕಾರ್ಮಿಕ ಸಂಘಟನೆಗಳ ಬೇಡಿಕೆಗಳು: ಬೆಲೆ ಏರಿಕೆಗೆ ನಿಯಂತ್ರಣ * ಉದ್ಯೋಗ ಸೃಷ್ಟಿಗೆ ಕ್ರಮ *ಕಾರ್ಮಿಕ ಕಾನೂನುಗಳ ಕಟ್ಟು ನಿಟ್ಟಿನ ಅನುಷ್ಠಾನ *ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ರಾಷ್ಟ್ರೀಯ ಸಾಮಾಜಿಕ ಭದ್ರತಾ ನಿಧಿ ಸ್ಥಾಪನೆ *ಕೇಂದ್ರ ಮತ್ತು ರಾಜ್ಯ ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಬಂಡವಾಳ ಹಿಂದಕ್ಕೆ ಪಡೆಯುವ ಕ್ರಮಕ್ಕೆ ತಡೆ * ಬ್ಯಾಂಕಿಂಗ್ ಸುಧಾರಣೆಗಳಿಗೆ ತಡೆ * ಹೊರ ಗುತ್ತಿಗೆ ಪದ್ಧತಿ ರದ್ದು * ಶೀಘ್ರ ವೇತನ ಪರಿಷ್ಕರಣೆ * ಅನುಕಂಪದ ಆಧಾರದಲ್ಲಿ ನೆಮಕಾತಿಯಂತಹ ಬಾಕಿ ಉಳಿದಿರುವ ಬೇಡಿಕೆಗಳ ಇತ್ಯರ್ಥ * ಗುತ್ತಿಗೆ ಆಧಾರದ ನೇಮಕಾತಿಯ ರದ್ದತಿ *ಕನಿಷ್ಟ ವೇತನ 10,000 ರೂ. ನಿಗದಿ * ಬೋನಸ್, ಪ್ರಾವಿಡೆಂಟ್ ಫಂಡ್ ಸೌಲಭ್ಯಕ್ಕಿರುವ ಮಿತಿಗಳ ರದ್ದತಿ * ಎಲ್ಲರಿಗೂ ಪಿಂಚಣಿ ಸೌಲಭ್ಯ.* ಕಾರ್ಮಿಕ ಸಂಘಟನೆಗಳನ್ನು 45 ದಿನಗಳಲ್ಲಿ ಕಡ್ಡಾಯವಾಗಿ ನೊಂದಾಯಿಸುವುದು.
Click this button or press Ctrl+G to toggle between Kannada and English