ವಿಟ್ಲ : ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಬುಧವಾರ ರಥೋತ್ಸವದ ಅಂಗವಾಗಿ ಏರ್ಪಡಿಸಿದ ಧರ್ಮಸಭೆಯಲ್ಲಿ ಶ್ರೀ ಸಂಸ್ಥಾನದ ರಜತಮಹೋತ್ಸವಕ್ಕೆ ಶ್ರೀ ಗುರುದೇವಾನಂದ ಸ್ವಾಮೀಜಿ ಚಾಲನೆ ನೀಡಿದರು.
ಬಳಿಕ ಆಶೀರ್ವಚನ ವಿತ್ತ ಶ್ರೀ ಗುರುದೇವಾನಂದ ಸ್ವಾಮೀಜಿ ಯವರು ರಥ ಜೀವನಪಥವನ್ನು ತೋರುತ್ತದೆ. ದೇಹವನ್ನು ರಥವೆಂದು ಪರಿಗಣಿಸಿ, ಪಂಚೇಂದ್ರಿಯಗಳೆಂಬ ಅಶ್ವಗಳು, ಬುದ್ಧಿಯೆಂಬ ಸಾರಥಿ, ಮನಸ್ಸು ಎಂಬ ಹಗ್ಗದಲ್ಲಿ ಬೆಸೆದು ನಿಯಂತ್ರಿಸಿದಾಗ ರಥಿಕ ಅಂದರೆ ಅಂತರಂಗದಲ್ಲಿರುವ ಭಗವಂತ ಸ್ವರೂಪಿ ಆನಂದದಿಂದಿರುತ್ತಾನೆ ಎಂದು ನುಡಿದರು.
ಕ್ಷೇತ್ರದ ವತಿಯಿಂದ ತುಳು ಅಕಾಡೆಮಿ ಸಹಕಾರದಲ್ಲಿ ಮುಂದಿನ ದಿನಗಳಲ್ಲಿ ತುಳು ರಥ ಒಯಿಪುಗ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಆರ್ಥಿಕ ಸಹಾಯ ವಿತರಿಸಲಾಯಿತು.
ಸಾಧ್ವಿ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡಿದರು.
ಕರ್ನಾಟಕ ಹೈಕೋರ್ಟ್ ಎಡಿಶನಲ್ ಎಡ್ವಕೇಟ್ ಜನರಲ್ ನಟರಾಜ ಕೆ.ಎನ್. ಅವರು ಮಾತನಾಡಿ, ಮಕ್ಕಳಿಗೆ ಚಿಕ್ಕಂದಿನಲ್ಲೇ ಸಂಸ್ಕಾರ ಸಿಗಬೇಕು. ಒಡಿಯೂರು ಶ್ರೀಗಳು ನಡೆಸುತ್ತಿರುವ ಸಮಾಜದ ಅಭಿವೃದ್ಧಿಯ ಕಾರ್ಯ ಅಭೂತಪೂರ್ವವಾದುದು ಎಂದರು.
ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ ಅವರು ಆನಂದ ಹೆಗ್ಡೆ ಮುಂಬಯಿ ಅವರ ಹನುಮಾನ್ ಚಾಲೀಸಾದ 11ನೇ ಆವೃತ್ತಿಯನ್ನು ಬಿಡುಗಡೆಗೊಳಿಸಿ, ಮಾತನಾಡಿ ಸ್ವಾಮೀಜಿಯವರ ಶಿಕ್ಷಣ ಕ್ರಾಂತಿ, ಗ್ರಾಮಗಳ ಅಭಿವೃದ್ಧಿ, ಸಾಮಾಜಿಕ ಕಳಕಳಿ ಮಾದರಿಯಾಗಿದೆ ಎಂದರು.
ಅದ್ಯಪಾಡಿ ಶ್ರೀ ನೀಲಕಂಠ ಉಮಾಮಹೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಶೆಡ್ಡೆ ಮಂಜುನಾಥ ಭಂಡಾರಿ, ಥಾಣೆ ಉದ್ಯಮಿ ಮೋಹನ್ ಹೆಗ್ಡೆ, ಶ್ರೀ ಗುರುದೇವ ಸೇವಾ ಬಳಗದ ಪುಣೆ ಘಟಕದ ಅಧ್ಯಕ್ಷ ನಾರಾಯಣ ಶೆಟ್ಟಿ, ಮಾಜಿ ಅಧ್ಯಕ್ಷ ಆರ್.ಡಿ. ಸುವರ್ಣ, ಮಂಗಳೂರು ಘಟಕ ಅಧ್ಯಕ್ಷ ಜಯಂತ್ ಜೆ. ಕೋಟ್ಯಾನ್, ದಾವಣಗೆರೆಯ ಸಿದ್ಧರಾಮಯ್ಯ, ಒಡಿಯೂರು ಘಟಕಾಧ್ಯಕ್ಷ ಅಶೋಕ್ ಕುಮಾರ್ ಬಿಜೈ, ಬಿ. ವಾಮಯ್ಯ ಶೆಟ್ಟಿ ಮುಂಬಯಿ, ರೇವತಿ ವಿ. ಶೆಟ್ಟಿ, ಒಡಿಯೂರು ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಶೆಟ್ಟಿ, ಕಿಶೋರಿ ಎನ್. ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು. ಇದೇ ಸಂದರ್ಭ ಕರೋಪಾಡಿ ಗ್ರಾ.ಪಂ. ಅಧ್ಯಕ್ಷ ಅಬ್ದುಲ್‌ಜಲೀಲ್ ಕರೋಪಾಡಿ ಮತ್ತು ಕನ್ಯಾನ ಗ್ರಾ.ಪಂ. ಅಧ್ಯಕ್ಷ ಕೆ.ಪಿ. ರಘುರಾಮ ಶೆಟ್ಟಿ ಅವರನ್ನು ಮತ್ತು ದಾನಿಗಳನ್ನು ಸಮ್ಮಾನಿಸಿ, ಗೌರವಿಸಲಾಯಿತು.
ಒಡಿಯೂರು ಶ್ರೀ ಗುರುದೇವ ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಟಿ. ತಾರಾನಾಥ ಕೊಟ್ಟಾರಿ ಫರಂಗಿಪೇಟೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಮುಂಬಯಿ ಸಮಿತಿ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪೇಟೆಮನೆ, ರೇಣುಕಾ ಎಸ್. ರೈ ಸಹಕರಿಸಿದರು. ಮುಖ್ಯ ಕಾರ್ಯನಿರ್ವಾಹಕ ಜಗನ್ನಾಥ ರೈ ವಂದಿಸಿದರು.
ರಥೋತ್ಸವದ ಅಂಗವಾಗಿ ಬೆಳಿಗ್ಗೆ ಸತ್ಯನಾರಾಯಣ ಪೂಜೆ, ಸಂಜೆ ಸಾಂಸ್ಕ್ರುತಿಕ್ ಕಾರ್ಯಕ್ರಮಗಳು, ರಾತ್ರಿ 8 ರಿಂದ ರಥೋತ್ಸವ ಸುಡುಮದ್ದು ಪ್ರದರ್ಶನ ನಡೆಯಿತು.
Click this button or press Ctrl+G to toggle between Kannada and English