ಡಾ.ಚಂದ್ರಶೇಖರ ಕಂಬಾರ, ಎ.ಬಿ.ಸುಬ್ಬಯ್ಯ ಹಾಗು ಡಾ.ಕದ್ರಿ ಗೋಪಾಲನಾಥ್ ರಿಗೆ ಮಂಗಳೂರು ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್

5:33 PM, Thursday, February 21st, 2013
Share
1 Star2 Stars3 Stars4 Stars5 Stars
(No Ratings Yet)
Loading...

Mangalore University ಮಂಗಳೂರು : ಫೆಬ್ರವರಿ 23ರಂದು ನಡೆಯಲಿರುವ ಮಂಗಳೂರು ವಿಶ್ವವಿದ್ಯಾನಿಲಯದ 31ನೇ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಮೂರು ಮಂದಿ ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಲು ವಿಶ್ವವಿದ್ಯಾನಿಲಯವು ತೀರ್ಮಾನಿಸಿರುವುದಾಗಿ ಗುರುವಾರ ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವಿ ಉಪಕುಲಪತಿ ಪ್ರೊ.ಟಿ.ಸಿ.ಶಿವಶಂಕರಮೂರ್ತಿ ತಿಳಿಸಿದರು.

ಸಾಹಿತ್ಯದಲ್ಲಿನ ಸೇವೆಗಾಗಿ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಹಾಗೂ ನಾಟಕಕಾರ ಡಾ.ಚಂದ್ರಶೇಖರ ಕಂಬಾರ, ಕ್ರೀಡೆಯಲ್ಲಿನ ಸಾಧನೆಗಾಗಿ ಹಿರಿಯ ಹಾಕಿ ಪಟು ಕೊಡಗಿನ ಎ.ಬಿ.ಸುಬ್ಬಯ್ಯ, ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ ಹೆಸರಾಂತ ಸ್ಯಾಕ್ಸೊಫೋನ್ ವಾದಕ ಡಾ.ಕದ್ರಿ ಗೋಪಾಲನಾಥ್ ಅವರನ್ನು ಆಯ್ಕೆ ಮಾದಲಾಗಿದ್ದು, ಕುಲಾಧಿಪತಿಯವರಾದ ರಾಜ್ಯಪಾಲರಿಗೆ ಕಳುಹಿಸಿದ್ದು ಅವರು ಕೂಡ ಈ ಮೂವರಿಗೆ ಡಾಕ್ಟರೇಟ್ ನೀಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.

ಈ ಬಾರಿಯ ಘಟಿಕೋತ್ಸವದಲ್ಲಿ ವಿಶ್ವವಿದ್ಯಾನಿಲಯವು 84 ಮಂದಿಗೆ ಡಾಕ್ಟರೇಟ್ ಪದವಿ, 7 ಮಂದಿಗೆ ಎಂ.ಫಿಲ್ ಪದವಿ, 36 ಮಂದಿಗೆ ಚಿನ್ನದ ಪದಕ, 55 ಮಂದಿಗೆ ನಗದು ಬಹುಮಾನ ಹಾಗೂ ಒಟ್ಟು 60 ಮಂದಿಗೆ ರ್‍ಯಾಂಕ್ ನೀಡಲು ತೀರ್ಮಾನಿಸಿದೆ. ಮಂಗಳೂರ ವಿಶ್ವವಿದ್ಯಾನಿಲಯದಲ್ಲಿ 2011-2012 ರಲ್ಲಿ ಒಟ್ಟು 30,384 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 18,969 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಈ ಬಾರಿ ಚಿನ್ನದ ಪದಕ ನೀಡಲು ಒಟ್ಟಾರೆಯಾಗಿ 2,36,880 ರೂಪಾಯಿ ಖರ್ಚಾಗಿದ್ದು ಇದರಲ್ಲಿ ದಾನಿಗಳು ನೀಡಿದ ಹಣವು ಹೊರತು ಪಡಿಸಿ ಸುಮಾರು 43,607 ರೂಪಾಯಿಗಳ ಕೊರತೆ ಬಂದಿದ್ದು ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳನ್ನು ಚಿನ್ನದ ಪದಕದಿಂದ ವಂಚಿತರನ್ನಾಗಿ ಮಾಡದೆ ಆ ಹಣವನ್ನು ಸ್ವತಃ ಭರಿಸಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿವಿ ಕುಲಸಚಿವ ಪಿಎಸ್.ಯೆಡಪಡಿತ್ತಾಯ ಹಾಗೂ ಇತರರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English