ಮಂಗಳೂರು : ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿ ಶಾಲೆ ಮತ್ತು ತರಬೇತಿ ಸಂಸ್ಥೆಯ ದಶಮಾನೋತ್ಸವ ಆಚರಣೆಯ ಹಿನ್ನಲೆಯಲ್ಲಿ ಶಕ್ತಿನಗರದ ನಾಲ್ಯಪದವು ಸರಕಾರಿ ಕುವೆಂಪು ಮಾದರಿ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಮೈದಾನದಲ್ಲಿ ಫೆಬ್ರವರಿ 22, 23ರಂದು ನಡೆಯಲಿರುವ ‘ಸಾನಿಧ್ಯ ಪನಾಮ ಕ್ರೀಡಾ ಮಹೋತ್ಸವ-2013’ ರಾಜ್ಯ ಮಟ್ಟದ ಕ್ರೀಡಾಕೂಟದ ಅಂಗವಾಗಿ ನಡೆದ ಕ್ರೀಡಾ ಜ್ಯೋತಿ ಮೆರವಣಿಗೆಗೆ ಗುರುವಾರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಚಾಲನೆ ನೀಡಿದರು.
ಈ ಮೆರವಣಿಗೆಯಲ್ಲಿ ವಿವಿಧ ಶಾಲೆಗಳ ವಿಶೇಷ ಮಕ್ಕಳು ವಿವಿಧ ರೀತಿಯ ವೇಷಭೂಷಣಗಳನ್ನು ತೊಟ್ಟು ಭಾಗವಹಿಸುವುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಮಾತನಾಡಿದ ಜನಾರ್ಧನ ಪೂಜಾರಿ, ವಿಶೇಷ ಮಕ್ಕಳನ್ನು ನೋಡಿಕೊಳ್ಳುವಂತಹ ಜವಾಬ್ದಾರಿ ಕೇವಲ ಕೆಲವು ಸಂಸ್ಥೆ ಅಥವಾ ಜನರ ಜವಾಬ್ದಾರಿಯಾಗಿರದೆ ಸಮಾಜದ ಪ್ರತಿಯೊನಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದರು.
ಭಿನ್ನ ಸಾಮರ್ಥ್ಯದ ಮಕ್ಕಳ ಕ್ರೀಡೆ ಮತ್ತು ಸಾಂಸ್ಕೃತಿಕ ಅಕಾಡೆಮಿಯ ಗೌರವಾಧ್ಯಕ್ಷ ರಾಕೇಶ್ ಮಲ್ಲಿ, ಕುದ್ರೋಳಿ ಶ್ರೀಗೋಕರ್ಣನಾಥೇಶ್ವರ ಕ್ಷೇತ್ರದ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಸಾನಿಧ್ಯದ ಆಡಳಿತಾಕಾರಿ ವಸಂತ್ ಕುಮಾರ್ ಶೆಟ್ಟಿ, ಮಹಾಬಲ ಮಾರ್ಲ, ವಸಂತ ಕುಮಾರ್ ಶೆಟ್ಟಿ, ದೇವದತ್ತ ರಾವ್, ಜಗದೀಶ್ ಶೆಟ್ಟಿ, ನಂದ ಕುಮಾರ್, ಪ್ರೊ.ರಾಧಾಕೃಷ್ಣ, ಸರಳಾ ಪುಟ್ಟಸ್ವಾಮಿ, ವರ್ಷಾ ಪ್ರಕಾಶ್, ಉಷಾ ವಿ. ಶೆಟ್ಟಿ ಉಪಸ್ಥಿತರಿದ್ದರು.
ಈ ಕ್ರೀಡಾಕೂಟವನ್ನು ಪನಾಮಾ ಉದ್ಯಮ ಸಂಸ್ಥೆ, ವಿಶೇಷ ಮಕ್ಕಳ ಸಾಂಸ್ಕ್ರತಿಕ ಹಾಗೂ ಕ್ರೀಡಾ ಸಂಸ್ಥೆ ಬೆಂಗಳೂರು ಹಾಗೂ ಮಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ಫೆಬ್ರವರಿ 22, 23ರಂದು ಕ್ರೀಡಾಕೂಟ ನಡೆಯಲಿದ್ದು, ಈ ಕ್ರೀಡಾಕೂಟ ದಲ್ಲಿ ರಾಜ್ಯಾದ್ಯಂತ 40 ವಿಶೇಷ ಶಾಲೆಗಳಿಂದ ಸುಮಾರು 700ಕ್ಕೂ ಅಧಿಕ ಭಿನ್ನ ಸಾಮರ್ಥ್ಯದ ಕ್ರೀಡಾಪಟುಗಳು ಪಾಲ್ಗೊಳ್ಳಲ್ಲಿದ್ದಾರೆ. ಹಾಗು ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳ ಪೈಕಿ 20 ಕ್ರೀಡಾಪಟುಗಳು ಮಾರ್ಚ್‌ನಲ್ಲಿ ಒರಿಸ್ಸಾದಲ್ಲಿ ನಡೆಯಲಿರುವ ರಾಷ್ಟ್ರೀಯ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ.
Click this button or press Ctrl+G to toggle between Kannada and English