ಮಂಗಳೂರು : ಕಾರ್ಕಳದ ಸುದೀಪ್ ರೈ ಅವರ ನಿಗೂಢ ಸಾವಿನ ಪ್ರಕರಣವು ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಮಗನ ಸಾವಿಗೆ ಆತನ ಪತ್ನಿಯೇ ನೇರ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಮಂಗಳವಾರ ಮಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಮೃತರ ತಂದೆ ಬಿ. ದಾಮೋದರ ನೆಲ್ಯಾಡಿ ಅವರು, ಪತ್ನಿ ನೀಡುತ್ತಿದ್ದ ನಿರಂತರ ಮಾನಸಿಕ ಕಿರುಕುಳ ಹಾಗೂ ಆಹಾರದಲ್ಲಿ ವಿಷ ಬೆರೆಸಿ ನೀಡಿದ್ದೇ ತನ್ನ ಮಗನ ಸಾವಿಗೆ ಪ್ರಮುಖ ಕಾರಣವಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಉನ್ನತ ಮಟ್ಟದ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಾರ್ಚ್ 17 ರಂದು ನೆಲ್ಯಾಡಿ ಪೇಟೆಯಲ್ಲಿ ಸುದೀಪ್ ಪತ್ನಿ ನಡೆಸಿದ ಗಲಾಟೆಯು ಈ ದುರಂತಕ್ಕೆ ನಾಂದಿ ಹಾಡಿತ್ತು ಎಂದು ಪೋಷಕರು ವಿವರಿಸಿದ್ದಾರೆ. ಅಂದು ಸುದೀಪ್ ಮತ್ತು ಪೋಷಕರಿಗೆ ಜೀವ ಬೆದರಿಕೆ ಹಾಕಿದ್ದ ಪತ್ನಿ, ಬಲವಂತವಾಗಿ ಸುದೀಪ್ನನ್ನು ಕರೆದೊಯ್ದು ಕೂಡಿ ಹಾಕಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದಾಳೆ ಎಂಬ ದೂರು ಕೇಳಿಬಂದಿದೆ. ಇದರ ಬೆನ್ನಲ್ಲೇ ಸುದೀಪ್ ಆರೋಗ್ಯ ಕ್ಷೀಣಿಸಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 29 ರಂದು ಕೊನೆಯುಸಿರೆಳೆದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ವೇಣುಗೋಪಾಲ್ ಎಂಬುವವರು, ಮೃತ ಸುದೀಪ್ ಪತ್ನಿಯಿಂದ ತಮಗೂ ಈ ಹಿಂದೆ ಅತಿಯಾದ ಮಾನಸಿಕ ಹಿಂಸೆ ಉಂಟಾಗಿತ್ತು ಎಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಕಳೆದ ವರ್ಷ ಅವಳೊಂದಿಗೆ ನಿಶ್ಚಯವಾಗಿದ್ದ ಮದುವೆ ಸಂಬಂಧ ಮುರಿದು ಬಿದ್ದಿದ್ದರೂ, ಅವಳ ಕಿರುಕುಳ ತಾಳಲಾರದೆ ತಾವು ಮುಂಬೈಗೆ ಓಡಿ ಹೋಗಬೇಕಾದ ಪರಿಸ್ಥಿತಿ ಬಂದಿತ್ತು. ಈಕೆಯ ಸ್ವಭಾವದಿಂದಾಗಿ ಸುದೀಪ್ ಜೀವ ಕಳೆದುಕೊಂಡಿದ್ದಾನೆ. ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಿಂದ ಹೊರಬರಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸುದೀಪ್ ರೈ ಅವರ ಸಾವು ಕೇವಲ ಆಕಸ್ಮಿಕವಲ್ಲ, ಇದೊಂದು ವ್ಯವಸ್ಥಿತ ಸಂಚು ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ತನಿಖಾಧಿಕಾರಿಗಳು ಪತ್ನಿಯ ನಡೆ ಹಾಗೂ ಸುದೀಪ್ ಸಾವು ಸಂಭವಿಸುವ ಮುನ್ನ ಆಸ್ಪತ್ರೆಗೆ ದಾಖಲಾದ ಸಂದರ್ಭದ ವೈದ್ಯಕೀಯ ವರದಿಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಸತ್ಯಾಸತ್ಯತೆ ಹೊರಬಂದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವವರೆಗೆ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಪೋಷಕರು ಈ ಸಂದರ್ಭದಲ್ಲಿ ಎಚ್ಚರಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









