ಲಾಸ್ ಏಂಜಲಿಸ್ : ಈ ಬಾರಿಯ 85ನೇ ಅಕಾಡೆಮಿ ಆಸ್ಕರ್ ಪ್ರಶಸ್ತಿ ಭಾನುವಾರ ರಾತ್ರಿ ಘೋಷಣೆಯಾಗಿದ್ದು, ನಾವೆಯ ಭಾರತೀಯ ಯುವಕನ ಜೀವನ್‌ಮರಣ ಹೋರಾಟವನ್ನು ಚಿತ್ರಿಸುವ ಲೈಫ್ ಆಪ್ ಪೈ ಚಲನಚಿತ್ರ ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಮೂಲ ಸಂಗೀತ, ಅತ್ಯುತ್ತಮ ಛಾಯಾಗ್ರಹಣ ಹಾಗೂ ಅತ್ಯುತ್ತಮ ವಿಷುವಲ್ ಎಫೆಕ್ಟ್ ಸಹಿತ ನಾಲ್ಕು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರೆ, “ಅರ್ಗೋ” ಅತ್ಯುತ್ತಮ ಚಿತ್ರ ಪುರಸ್ಕಾರಕ್ಕೆ ಪಾತ್ರಗಿದೆ.
ಭಾರತದ ಕಥಾವಸ್ತುವನ್ನೊಳಗೊಂಡ ‘ಲೈಫ್ ಆಫ್ ಪೈ’ ಚಿತ್ರವನ್ನು ಆಂಗ್ ಲೀ ನಿರ್ದೇಶಿಸಿದ್ದು, ಭಾರತೀಯರಾದ ಸೂರಜ್ ಶರ್ಮಾ, ಇರ್ಫಾನ್ ಖಾನ್, ಟಬು ಮುಂತಾದವರು ನಟಿಸಿದ್ದಾರೆ.
ಲೈಫ್ ಆಫ್ ಪೈ ನಿರ್ದೇಶನಕ್ಕೆ ಆಂಗ್ ಲೀ ಅವರಿಗೆ ಶ್ರೇಷ್ಠ ನಿರ್ದೇಶಕ ಆಸ್ಕರ್ ಪ್ರಶಸ್ತಿ ದೊರಕಿದೆ. ಕ್ಲಾಡಿಯೋ ಮಿರಾಂಡಾ ಅವರಿಗೆ ಶ್ರೇಷ್ಠ ಸಿನೆಮಾಟೋಗ್ರಫಿ ಆಸ್ಕರ್ ಪ್ರಶಸ್ತಿ ಲಭಿಸಿದೆ. ಶ್ರೇಷ್ಠ ದೃಶ್ಯ ಪರಿಣಾಮಕ್ಕಾಗಿರುವ ಪ್ರಶಸ್ತಿ ವರ್ಗದಲ್ಲಿ ಜೋ ಲಿಟೇರಿ, ಎರಿಕ್ ಸೇನ್‌ಡನ್, ಡೇವಿಡ್ ಕ್ಲೇಟನ್ ಮತ್ತು ಆರ್ ಕ್ರಿಸ್ಟೋಫರ್ ಪುರಸ್ಕೃತರಾಗಿದ್ದಾರೆ.
ಲೈಫ್ ಆಫ್ ಪೈ ಸಂಗೀತ ನಿರ್ದೇಶಕ ಮೈಕೆಲ್ ಡ್ಯಾನಾ ಅವರು ಶ್ರೇಷ್ಠ ಮೂಲ ಸಂಗೀತ ವರ್ಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆ. ಡ್ಯಾನಾ ಅವರ ಪತ್ನಿ ಭಾರತೀಯ ಮೂಲದ ಅಪರ್ಣಾ ಡ್ಯಾನಾ. ಈ ಚಿತ್ರದಲ್ಲಿನ ಜನಪ್ರಿಯ ಜೋಗುಳ ಹಾಡನ್ನು ಮೈಕೆಲ್ ಅವರು ಹಾಡುಗಾರ್ತಿ ಬಾಂಬೆ ಜಯಶ್ರೀ ಅವರೊಂದಿಗೆ ಜಂಟಿಯಾಗಿ ಬರೆದಿದ್ದು ಜಯಶ್ರೀ ಅವರೇ ಆ ಹಾಡನ್ನು ಹಾಡಿದ್ದಾರೆ. ಜಯಶ್ರೀ ಅವರಿಗೆ ಆಸ್ಕರ್ ಬರುವುದೆಂಬ ನಿರೀಕ್ಷೆ ಮಾತ್ರ ಹುಸಿಯಾಗಿರುವುದು ನಿರಾಶೆಗೆ ಕಾರಣವಾಗಿದೆ.
ಇನ್ನುಳಿದಂತೆ ಲೆಸ್ ಮಿಸರೆಬಲ್ಸ್ ಚಿತ್ರವು 3 ಹಾಗೂ ‘ಲಿಂಕನ್’ ಚಿತ್ರ 2 ಪ್ರಶಸ್ತಿಗಳನ್ನು ಬಾಚಿಕೊಂಡಿವೆ.
Click this button or press Ctrl+G to toggle between Kannada and English