ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣ,ಬೆಂಗಳೂರಿನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಏಳು ವಿಕೆಟುಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿರುವ ಟೀಮ್ ಇಂಡಿಯಾ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಕ್ಲೀನ್‌ಸ್ವೀಪ್‌ಗೈದಿದೆ.
ಆ ಮೂಲಕ ಟೆಸ್ಟ್‌ನ ಅಗ್ರಸ್ಥಾನಕ್ಕೆ ನಾವೇ ಅರ್ಹ ತಂಡ ಎಂಬುದನ್ನು ಮಹೇಂದ್ರ ಧೋನಿ ಬಳಗ ಮತ್ತೊಮ್ಮೆ ಸಾಬೀತುಪಡಿಸಿದಂತಾಗಿದೆ. ಇದರೊಂದಿಗೆ ಭಾರತದಲ್ಲಿ ಟೆಸ್ಟ್ ಜಯ ದಾಖಲಿಸುವ ಆಸೀಸ್ ನಾಯಕ ರಿಕಿ ಪಾಂಟಿಂಗ್ ಕನಸು ಕನಸಾಗಿಯೇ ಉಳಿಯುವಂತಾಗಿದೆ.
ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಗೆಲುವಿಗಾಗಿ 207 ರನ್ನುಗಳನ್ನು ಬೆನ್ನತ್ತಿದ ಭಾರತ ಅಂತಿಮ ದಿನದಾಟದಲ್ಲಿ 38 ಓವರುಗಳಲ್ಲಿ ಕೇವಲ ಮೂರು ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲುಪಿತು. ಆ ಮೂಲಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅತ್ಯಂತ ಹೆಚ್ಚು ರನ್ ಬೆನ್ನತ್ತುವ ಮೂಲಕ ಗೆಲುವು ದಾಖಲಿಸಿದ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.
ಚೊಚ್ಚಲ ಪಂದ್ಯದಲ್ಲಿಯೇ ಅರ್ಧಶತಕ ಬಾರಿಸುವ ಮೂಲಕ ತಮ್ಮ ದೀರ್ಘಕಾಲದ ಟೆಸ್ಟ್ ಕನಸಿಗೆ ಅಂತ್ಯ ಹಾಡಿರುವ ಚೇತೇಶ್ವರ ಪೂಜಾರ ಐದನೇ ದಿನದಾಟದ ಹೀರೊ ಆಗಿ ಮೆರೆದರು. ದೇಶಿಯ ದರ್ಜೆಯಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ‘ಭವಿಷ್ಯದ ದ್ರಾವಿಡ್’ ಎಂದೆನಿಸಿಕೊಂಡಿದ್ದ ಪೂಜಾರ ಭಡ್ತಿ ಪಡೆಯುವ ಮೂಲಕ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗಿಳಿದಿದ್ದರಲ್ಲದೆ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು. ಕೇವಲ 89 ಎಸೆತಗಳನ್ನು ಎದುರಿಸಿದ್ದ ಪೂಜಾರ ಏಳು ಬೌಂಡರಿ ನೆರವಿನಿಂದ 72 ರನ್ ಗಳಿಸಿದ್ದರು.
ದ್ವೀತಿಯ ವಿಕೆಟ್‌ಗೆ ಮುರಳಿ ವಿಜಯ್ ಜತೆ 72 ರನ್ನುಗಳ ಮಹತ್ವದ ಜತೆಯಾಟ ನೀಡಿದ ಪೂಜಾರ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಿದ್ದರು. ಚೊಚ್ಚಲ ಶತಕ ವೀರ ವಿಜಯ್ ಕೂಡಾ 37 ರನ್ ಗಳಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ನಿರೂಪಿಸಿದರು.
ಅದೇ ರೀತಿ ಮೊದಲ ಇನ್ನಿಂಗ್ಸ್‌ನ ದ್ವಿಶತಕ ವೀರ ಸಚಿನ್ ತೆಂಡೂಲ್ಕರ್ ದ್ವಿತೀಯ ಇನ್ನಿಂಗ್ಸ್‌ನಲ್ಲಿಯೂ ಅರ್ಧಶತಕ (53*) ಗಳಿಸುವ ಮೂಲಕ ತಂಡ ಗೆಲುವನ್ನು ಸುಲಭಗೊಳಿಸಿದರು. ಇದು ಟೆಸ್ಟ್‌ನಲ್ಲಿ ಸಚಿನ್ ಬ್ಯಾಟ್‌ನಿಂದ ದಾಖಲಾದ 58ನೇ ಅರ್ಧಶತಕವಾಗಿದೆ. ಕೊನೆಗೆ ಬಂದ ದ್ರಾವಿಡ್ ಕೂಡಾ 21 ರನ್ ಗಳಿಸಿ ಔಟಾಗದೆ ಉಳಿದರು.
ಇದಕ್ಕೂ ಮೊದಲು 205/7 ಎಂಬಲ್ಲಿದ್ದ ಕೊನೆಯ ದಿನದಾಟ ಮುಂದುವರಿಸಿದ ಆಸೀಸ್, ಜಹೀರ್ ಖಾನ್ ಮತ್ತು ಎಸ್. ಶ್ರೀಶಾಂತ್ ಪ್ರಭಾವಿ ದಾಳಿಗೆ ಕುಸಿತ ಕಂಡು 223 ರನ್ನುಗಳಿಗೆ ತನ್ನೆಲ್ಲಾ ವಿಕೆಟುಗಳನ್ನು ಕಳೆದುಕೊಂಡಿತ್ತು. ಆ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಮಹತ್ವದ 17 ರನ್ನುಗಳ ಮುನ್ನೆಡೆ ಪಡೆದುಕೊಂಡಿದ್ದ ಭಾರತದ ಗೆಲುವಿಗೆ 207 ರನ್ನುಗಳನ್ನು ನಿಗದಿಪಡಿಸಿತು.
ಮೊಹಾಲಿನಲ್ಲಿ ನಡೆದ ಮೊದಲ ಪಂದ್ಯವನ್ನು ಭಾರತ ಒಂದು ವಿಕೆಟ್‌ನಿಂದ ರೋಚಕವಾಗಿ ಗೆದ್ದುಕೊಂಡಿತ್ತು. ಇದೀಗ ಎರಡನೇ ಪಂದ್ಯವನ್ನು ಕೂಡಾ ವಶಪಡಿಸಿಕೊಳ್ಳುವ ಮೂಲಕ ಸರಣಿಯನ್ನು 2-0ರಿಂದ ವಶಪಡಿಸಿಕೊಂಡಿದೆ.
ಈ ಸೋಲಿನೊಂದಿಗೆ ವಿಶ್ವ ಕ್ರಿಕೆಟ್‌ನಲ್ಲಿ ಕಳೆದೊಂದು ದಶಕದಲ್ಲಿದ್ದ ಆಸೀಸ್ ಅಧಿಪತ್ಯವು ಕೊನೆಗೊಂಡಂತಾಗಿದೆ. ಅಲ್ಲದೆ ಇತಿಹಾಸದಲ್ಲೇ ಮೊದಲ ಬಾರಿಗೆ ಐಸಿಸಿ ಟೆಸ್ಟ್ ತಂಡ ರ‌್ಯಾಂಕಿಂಗ್‌ನಲ್ಲಿ ಆಸೀಸ್ ಐದನೇ ಸ್ಥಾನಕ್ಕೆ ಕುಸಿದಿದೆ.
Click this button or press Ctrl+G to toggle between Kannada and English