ಪುತ್ತೂರು: ಪುತ್ತೂರು-ಉಪ್ಪಿನಂಗಡಿ ರಸ್ತೆಯ ಪಡೀಲ್ ಸಮೀಪ ಶನಿವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಯುವಕನೋರ್ವ ದಾರುಣವಾಗಿ ಮೃತಪಟ್ಟಿದ್ದಾರೆ. ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರ ನಿವಾಸಿ ವಿಶ್ವನಾಥ ಪೂಜಾರಿ ಎಂಬವರ ಪುತ್ರ ಧನರಾಜ್ (23) ಮೃತಪಟ್ಟ ದುರ್ದೈವಿ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದ ಅವರು, ಜಾತ್ರಾ ಗದ್ದೆಯಲ್ಲಿ ಜ್ಯೂಸ್ ಅಂಗಡಿ ಇಟ್ಟುಕೊಂಡಿದ್ದರು. ಶುಕ್ರವಾರ ರಾತ್ರಿ ಗೆಳೆಯನ ಮನೆಯಲ್ಲಿ ತಂಗಿದ್ದ ಧನರಾಜ್, ಶನಿವಾರ ಬೆಳಿಗ್ಗೆ ಬಟ್ಟೆ ಬದಲಿಸಿ ಮರಳಿ ಸ್ಟಾಲ್ಗೆ ಹೋಗಲು ಮನೆಗೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಅಪಘಾತದ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಧನರಾಜ್ ಚಲಾಯಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಮೊದಲು ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ವಿದ್ಯುತ್ ಕಂಬಕ್ಕೆ ಅಪ್ಪಳಿಸಿ ಬಳಿಕ ಎದುರಿನಿಂದ ಬರುತ್ತಿದ್ದ ಮತ್ತೊಂದು ದ್ವಿಚಕ್ರ ವಾಹನದ ಮೇಲೆ ಹಾರಿದೆ. ತೀವ್ರ ಸ್ವರೂಪದ ಪೆಟ್ಟು ಬಿದ್ದ ಕಾರಣ ಧನರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಡಿಕ್ಕಿಯ ತೀವ್ರತೆಗೆ ಮತ್ತೊಂದು ಬೈಕಿನಲ್ಲಿದ್ದ ಇಬ್ಬರು ಸವಾರರು ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಮೃತ ಧನರಾಜ್ ಅವರು ವಿಶ್ವನಾಥ ಪೂಜಾರಿ ಅವರ ಇಬ್ಬರು ಪುತ್ರರ ಪೈಕಿ ಒಬ್ಬರಾಗಿದ್ದು, ಕುಟುಂಬದ ಆಧಾರಸ್ತಂಭವಾಗಿದ್ದ ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಜಾತ್ರೆಯ ಸಡಗರದಲ್ಲಿದ್ದ ಪುತ್ತೂರು ಭಾಗದಲ್ಲಿ ಈ ಸಾವಿನ ಸುದ್ದಿ ಕೇಳಿ ಶೋಕದ ಛಾಯೆ ಆವರಿಸಿದೆ. ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









