ಮಂಗಳೂರು : ರಾಜ್ಯ ಸರಕಾರ ಮತ್ತು ಎಲ್ಲ ಪಕ್ಷಗಳ ಕಸರತ್ತಿನ ಮಧ್ಯೆಯೂ ಸುಪ್ರೀಂ ಕೋರ್ಟ್ ನ ತೀರ್ಪಿನ ಹಿನ್ನಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಲೋಕಲ್ ಇಲೆಕ್ಷನ್ ಗೆ ದಿನಾಂಕ ನಿಗದಿಪಡಿಸಿದೆ. ಅದು ವಿವಿಧ ಪಕ್ಷಗಳ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳಿಗೆ ಇಂಜೆಕ್ಷನ್ ಚುಚ್ಚಿದಂತಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್, ಬಿಜೆಪಿ, ಜೆಡಿಎಸ್… ಹೀಗೆ ನಾನಾ ಪಕ್ಷಗಳಲ್ಲೂ ಆಕಾಂಕ್ಷಿಗಳ ಸಾಲು ಉದ್ದಕ್ಕೆ ಬೆಳೆದಿದೆ. ಜಿಲ್ಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ, ಬಂಟ್ವಾಳ, ಮೂಡಬಿದಿರೆ, ಉಳ್ಳಾಲ, ಪುತ್ತೂರು ಪುರಸಭೆ ಮತ್ತು ಬೆಳ್ತಂಗಡಿ ಹಾಗು ಸುಳ್ಯ ಪಟ್ಟಣ ಪಂಚಾಯತ್… ಹೀಗೆ 7 ನಗರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ. ಮೂಲ್ಕಿ ಪಣ್ಣಣ ಪಂಚಾಯತ್ನ ಅವಧಿ ಮುಂದಿನ ವರ್ಷ ಪೂರ್ತಿಗೊಳ್ಳಲಿದೆ. ಹಾಗಾಗಿ ಅಲ್ಲಿ ಈ ಬಾರಿ ಚುನಾವಣೆ ನಡೆಯುತ್ತಿಲ್ಲ.
ಜಿಲ್ಲೆಯ 7 ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ವಿವಿಧ ಪಕ್ಷಗಳ ಆಕಾಂಕ್ಷಿಗಳ ಸಂಖ್ಯೆಯಲ್ಲೂ ಹೆಚ್ಚಳವಿದೆ. ಕನಿಷ್ಠ ಒಂದು ವಾರ್ಡೀನಲ್ಲಿ ಬಹುತೇಕ ಎಲ್ಲ ಪಕ್ಷಗಳಲ್ಲೂ ಐದಾರು ಮಂದಿ ಆಕಾಂಕ್ಷಿಗಳಿದ್ದಾರೆ. ಟಿಕೆಟ್ ತಪ್ಪಿದ ಆಕಾಂಕ್ಷಿಗಳು ಮುಂದೆ ನಡೆಯುವ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ತಟಸ್ಥ ಅಥವಾ ಬಂಡಾಯವಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇದು ವಿಧಾನ ಸಭಾ ಚುನಾವಣಾ ಟಿಕೆಟ್ ಆಕಾಂಕ್ಷಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ. ಅಲ್ಲದೆ, ಈ ಚುನಾವಣೆಯ ಫಲಿತಾಂಶ ಕೂಡ ಶಾಸಕರಾಗಲು ಕನಸು ಕಂಡಿರುವ ನಾಯಕರಿಗೆ ಚಳಿ ಹುಟ್ಟಿಸಿದೆ.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ (ತಾಂತ್ರಿಕ ಕಾರಣದಿಂದ ಕಾಂಗ್ರೆಸ್ ನ ಗುಲ್ಜಾರ್ ಬಾನು ಕೊನೆಯ ಅವಧಿಯಲ್ಲಿ ಮೇಯರ್ ಆಗಿದ್ದಾರೆ) ಅಧಿಕಾರದಲ್ಲಿದೆ.ಮೂಡಬಿದಿರೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸಾಧಿಸಿದ್ದರೂ ಎರಡನೆ ಅವಧಿಯಲ್ಲಿ ಕಾಂಗ್ರೆಸ್ ಪಾಲಾಯಿತು. ಬಂಟ್ವಾಳದಲ್ಲಿ ಕಾಂಗ್ರೆಸ್ ಬಹುಮತವಿದ್ದರೂ ಕೂಡ ಬಿಜೆಪಿ ಅಧಿಕಾರದಲ್ಲಿದೆ. ಉಳ್ಳಾಲ ಪುರಸಭೆಯಲ್ಲಿ ಕಾಂಗ್ರೆಸ್ ಆಡಳಿತವುದೆ. ಪುತ್ತೂರು ಮತ್ತು ಸುಳ್ಯದಲ್ಲೂ ಬಿಜೆಪಿ ಅಧಿಕಾರದಲ್ಲಿದೆ. ಈ ಹಿಂದೆ ಯಾವ ಪಕ್ಷ ಅಧಿಕಾರದಲ್ಲಿದ್ದರೂ ಕೂಡ ಅದು ಮರುಕಳಿಸಲಿದೆ ಎಂದು ಹೇಳಲಿಕ್ಕಾಗದು. ಯಾಕೆಂದರೆ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯು ರಾಜ್ಯ ವಿಧಾನ ಸಭಾ ಚುನಾವಣೆಗೆ ನಡೆಯುವ ಸೆಮಿಫೈನಲ್ ಎನ್ನಬಹುದು.
ಈ ಬಾರಿಯ ಚುನಾವಣೆಯಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ ಮಹಿಳೆಯರಿಗೆ ಶೇ.50 ಮೀಸಲಾತಿ ಕಲ್ಪಿಸಲಾಗಿದೆ. ಹಾಗಾಗಿ 7 ಸ್ಥಳೀಯಾಡಳಿತ ಸಂಸ್ಥೆಗಳಲ್ಲೂ ಕೂಡ ಪ್ರಮುಖರು ಸ್ಪರ್ಧಿಯಿಂದ ಅವಕಾಶ ವಂಚಿತರಾಗಲಿದ್ದಾರೆ. ಆಸುಪಾಸಿನ ವಾರ್ಡ್ ನತ್ತ ಕಣ್ಣು ಹಾಯಿಸಲಾಗದಂತಹ ವಾತಾವರಣ ಸೃಷ್ಟಿಯಾಗಿದೆ.
ಕಳೆದ ಹಲವು ವರ್ಷದಿಂದ ಮಂಗಳೂರು ಮಹಾನಗರ ಪಾಲಿಕೆಯನ್ನು ಪ್ರತಿನಿಧಿಸಿದ್ದ ಪ್ರಮುಖರು ತಮಗಿದು ಕೊನೆಯ ಅವಕಾಶ
ಎಂಬರ್ಥದಲ್ಲಿ ಮಾತನಾಡಿದ್ದಾರೆ. ಉಳಿದಂತೆ ಇತರ ಪುರಸಭೆ, ಪಟ್ಟಣ ಪಂಚಾಯತ್ ನ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಅಲ್ಲೂ ಕೂಡ ಪ್ರಮುಖರು ಮೀಸಲಾತಿಯ ಹೊಡೆತಕ್ಕೆ ಸಿಲುಕಿದ್ದಾರೆ.
ಅಂದಹಾಗೆ, 7 ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ 189 ಸ್ಥಾನಗಳ ಪೈಕಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 85 ಸ್ಥಾನ ಪಡೆದಿದ್ದರೆ, ಜೆಡಿಎಸ್ 10, ಸಿಪಿಎಂ 4, ಮುಸ್ಲಿಂ ಲೀಗ್ 2, ಪಕ್ಷೇತರರು ಮೂರು ಸ್ಥಾನ ಪಡೆದಿದ್ದಾರೆ. ಮಾ.7ರಂದು ನಡೆಯುವ ಚುನಾವಣೆಯಲ್ಲಿ ಈ ಲೆಕ್ಕಾಚಾರ ತಿರುಗುಬಾಣವಾಗುವ ಸಾಧ್ಯತೆಯಿದೆ.
ಕಳೆದ ಸಾಲಿನ ವಿವಿಧ ಚುನಾಯಿತ ಸಂಸ್ಥೆಗಳಲ್ಲಿ ಪಕ್ಷಗಳ ಬಲಾಬಲ ಹೀಗಿವೆ
ಮಂಗಳೂರು ಮಹಾನಗರ ಪಾಲಿಕೆ : ಒಟ್ಟು ಸ್ಥಾನ 60. ಕಾಂಗ್ರೆಸ್ 21, ಬಿಜೆಪಿ 35, ಜೆಡಿಎಸ್1, ಸಿಪಿಎಂ 1, ಪಕ್ಷೇತರ 2.
ಬಂಟ್ವಾಳ ಪುರಸಭೆ : ಒಟ್ಟು ಸ್ಥಾನ 23. ಕಾಂಗ್ರೆಸ್ 11, ಬಿಜೆಪಿ 10, ಮುಸ್ಲಿಂ ಲೀಗ್ 2.
ಮೂಡುಬಿದಿರೆ ಪುರಸಭೆ : ಒಟ್ಟು ಸ್ಥಾನ 23. ಕಾಂಗ್ರೆಸ್ 11, ಬಿಜೆಪಿ 4, ಜೆಡಿಎಸ್ 7, ಸಿಪಿಎಂ 1.
ಉಳ್ಳಾಲ ಪುರಸಭೆ : ಒಟ್ಟು ಸ್ಥಾನ 27. ಕಾಂಗ್ರೆಸ್ 17, ಬಿಜೆಪಿ 6, ಜೆಡಿಎಸ್ 1, ಸಿಪಿಎಂ 2, ಪಕ್ಷೇತರ 1.
ಪುತ್ತೂರು ಪುರಸಭೆ : ಒಟ್ಟು ಸ್ಥಾನ 27. ಕಾಂಗ್ರೆಸ್ 12, ಬಿಜೆಪಿ 15.
ಬೆಳ್ತಂಗಡಿ ಪಟ್ಟಣ ಪಂಚಾಯತ್ : ಒಟ್ಟು ಸ್ಥಾನ 11. ಕಾಂಗ್ರೆಸ್ 7, ಬಿಜೆಪಿ 4.
ಸುಳ್ಯ ಪಟ್ಟಣ ಪಂಚಾಯತ್ : ಒಟ್ಟು ಸ್ಥಾನ 18. ಕಾಂಗ್ರೆಸ್ 6, ಬಿಜೆಪಿ 11. ಜೆಡಿಎಸ್ 1.
Click this button or press Ctrl+G to toggle between Kannada and English