ರಾಜ್ಯಪಾಲರು, ಕಾಂಗ್ರೆಸ್, ಜೆಡಿಎಸ್ ನಾಯಕರ ವರ್ತನೆಗೆ ದ.ಕ ಜಿಲ್ಲಾ ಬಿಜೆಪಿ ಖಂಡನೆ.

8:52 PM, Wednesday, October 13th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಬಿ.ಜೆಪಿಯ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿಮಂಗಳೂರು:  ಕಳೆದ ಒಂದು ವಾರದ ರಾಜ್ಯದ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದಾಗ ಈ ರಾಜ್ಯದಲ್ಲಿ ಜನಾದೇಶದೊಂದಿಗೆ ಜನಪರ ಆಡಳಿತ ನೀಡುವ  ಒಂದು ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರತಿಪಕ್ಷಗಳು ಯಾವ ರೀತಿ ಕಾರ್ಯೋನ್ಮುಖವಾಗಿದೆ ಎನ್ನುವುದರ ಜ್ವಲಂತ ಸಾಕ್ಷಿಯಾಗಿದೆ. ರಾಜ ಭವನವನ್ನು ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿರಿಸಿಕೊಂಡು ರಾಜ್ಯಪಾಲರನ್ನು ಪಕ್ಷದ ಏಜಂಟರಂತೆ ಉಪಯೋಗಿಸಿಕೊಂಡ ಕಾಂಗ್ರೆಸ್-ಜೆಡಿಎಸ್ನ ಕುತಂತ್ರ ಬಯಲಾಗಿದೆ ಎಂದು ಬಿ.ಜೆಪಿಯ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿಯವರು ಇಂದು ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಬಿ.ಜೆಪಿಯ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ
ಸರಕಾರದ ಭಾಗವಾಗಿ ಕಾರ್ಯನಿರ್ವಹಿಸಿದ ಸಚಿವರನ್ನು, ಶಾಸಕರನ್ನು ರೆಸಾರ್ಟ್ ಗಳಲ್ಲಿ ಭೇಟಿಮಾಡಿ ಅಮಿಷದ ಮೂಲಕ ಒತ್ತೆಯಾಳುಗಳನ್ನಾಗಿಸಿದ ಕುಮಾರಸ್ವಾಮಿಯವರ ಲಚ್ಚೆಗೇಡಿತನದ ಪ್ರತ್ಯಕ್ಷ ದರ್ಶನವಾಗಿದೆ. ಇವುಗಳಿಗೆಲ್ಲ ಪರೋಕ್ಷವಾಗಿ  ಬೆಂಬಲ ನೀಡಿದ ರಾಜ್ಯ ಕಾಂಗ್ರೆಸ್ನ ಪರಿಸ್ಥಿತಿ “ಮಾಡಿದ್ದುಣ್ಣೋ ಮಹರಾಯ” ಎನ್ನುವ ಸ್ಥಿತಿ ತಲುಪಿದೆ. ಕಾಂಗ್ರೆಸ್, ಜೆಡಿಎಸ್ ನ ಶಾಸಕರು ಕಳೆದ ಸೋಮವಾರ ಸೌಧದ ಬಾಗಿಲಿಗೆ ಒದ್ದು, ಮೇಜು ಹತ್ತಿ, ಬೊಬ್ಬಿರಿದು, ಅಬ್ಬರಿಸಿ, ಸಿಬ್ಬಂದಿಗಳಿಗೆ ದೈಹಿಕ ಹಲ್ಲೆ ನಡೆಸಿ ತಮ್ಮ ಪರಾಕ್ರಮ ಏನೆಂದು ತೋರಿಸಿಕೊಟ್ಟಿದ್ದಾರೆ. ವಿಧಾನ ಸೌಧದ ಒಳಗೆ ಮೌನದಿಂದ ಅಸೀನರಾಗಿದ್ದ ಬಿಜೆಪಿ ಶಾಸಕರನ್ನು ಕಾಲುಕೆರೆದು ಜಗಳಕ್ಕೆ ಬರುವಂತೆ ಪ್ರೇರೇಪಿಸಿದ್ದಾರೆ ಎಂದು ಕೊಟ್ಟಾರಿ ಹೇಳಿದರು.
ವಿಧಾನ ಸಭೆಯಲ್ಲಿ ಅಧಿಕೃತ ದಾಖಲಾದ ಶಾಸಕರ ಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳದ ರಾಜ್ಯಪಾಲರು ತನ್ನೆದುರು 120 ಶಾಸಕರು ಹಾಜರಾಗಿದ್ದಾರೆ ಎನ್ನುವ ಸುಳ್ಳು ಮಾಹಿತಿಯೊಂದಿಗೆ ರಾಷ್ಟ್ರ ಪತಿ ಆಡಳಿತಕ್ಕೆ ಶಿಫಾರಸು ಮಾಡಿರುವುದು ಖಂಡನೀಯ. ಪ್ರತೀಗಂಟೆಗೊಮ್ಮೆ ತಮ್ಮಹೇಳಿಕೆಗಳನ್ನು ಬದಲಿಸುತ್ತಾ ರಾಜ್ಯಪಾಲರು, ಕಾಂಗ್ರೆಸ್, ಜೆಡಿಎಸ್ ನಾಯಕರು “ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತ” ವರ ಸ್ಥಿತಿಯಲ್ಲಿದ್ದಾರೆ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇದ್ದರೆ ಇನ್ನಾದರೂ ಕಾಂಗ್ರೆಸ್, ಜೆಡಿಎಸ್ ನಾಯಕರು ತಮ್ಮ ತಪ್ಪನ್ನು ತಿದ್ದಿಕೊಂಡು ಈ ರಾಜ್ಯದ ಜನತೆಯ ಕ್ಷಮೆ ಕೇಳಿ ಪ್ರತಿಪಕ್ಷವಾಗಿ ತಮ್ಮ ಕೆಲಸ ನಿರ್ವಹಿಸಲು ಕಲಿತುಕೊಳ್ಳಲಿ ಎನ್ನುವ ಎಚ್ಚರಿಕೆಯನ್ನು ದ.ಕ ಜಿಲ್ಲಾ ಬಿಜೆಪಿ ನೀಡುತ್ತಿದೆ ಎಂದರು.
ಯಾವತ್ತೂ ಮಂತ್ರಿಯಾಗುವ ಕನಸನ್ನೂ ಕಾಣದ ಪಕ್ಷೇತರರು ಸರಕಾರಕ್ಕೆ ಬೆಂಬಲ ನೀಡಿ ಮಂತ್ರಿಯಾಗಿದ್ದು, “ಅಲ್ಪನಿಗೆ ಐಶ್ವರ್ಯ ಬಂದರೆ ಮಧ್ಯ ರಾತ್ರಿ ಕೊಡೆ ಹಿಡಿದಂತೆ” ಎಂಬಂತಾಗಿದೆ. ಇದ್ದದ್ದು ಸಾಲದು ಇನ್ನೂ ಬೇಕು ಎಂಬ ಆಸೆಯಿಂದಾಗಿ “ಅತಿ ಆಸೆ ಗತಿ ಗೇಡು” ಎಂಬ ಪರಿಸ್ಥಿತಿಗೆ ಪಕ್ಷೇತರರು ಸಿಲುಕಿದ್ದಾರೆ.
ನಾಳೆಯ ವಿಶ್ವಾಸ ಮತದಲ್ಲಿ ಬಿಜೆಪಿ ಬಹುಮತದಿಂದ ಗೆಲ್ಲುವ ಮೂಲಕ ಯೆಡಿಯೂರಪ್ಪ ನೇತೃತ್ವದ ಸರಕಾರ ಅವಧಿಪೂರ್ಣಗೊಳಿಸುವುದು ನಿಶ್ಚಿತ. ಎರಡು ವರ್ಷ ನಾಲ್ಕು ತಿಂಗಳು ಪೂರೈಸಿದ ಸರಕಾರ ಇನ್ನುಳಿದ ಮೂರು ವರ್ಷದ ಅವಧಿಯನ್ನೂ ಪೂರ್ತಿಗಳಿಸುವ ವಿಶ್ವಾಸ ಬಿಜೆಪಿಗಿದೆ ಎಂದು ಕೊಟ್ಟಾರಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ದ.ಕ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು, ನಿತಿನ್ ಕುಮಾರ್, ಜಗದೀಶ ಅಧಿಕಾರಿ, ಉಮಾನಾಥ, ಸತೀಶ್ ಕುಂಪಲ, ಶೈಲಜ ಕೆ.ಟಿ. ಭಟ್, ಶಕಿಲಾ ಕಾವ, ರಾಜೀವಿ ಹಾಗೂ ಪತ್ರಿಕಾ ವಕ್ತಾರ ರಾಜ್ ಗೋಪಾಲ ರೈ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English