ಮಂಗಳೂರು : ಕದ್ರಿಯ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಕಚೇರಿಯಲ್ಲಿ ಶುಕ್ರವಾರ ಮಂಗಳೂರು ಮಹಾನಗರ ಪಾಲಿಕೆಯ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಮಂಗಳೂರು ಒಂದು. ಈ ನಗರವನ್ನು ಬೆಂಗಳೂರಿನಂತೆ ಸಿಲಿಕಾನ್ ಸಿಟಿಯಾಗಿ ಅಭಿವೃದ್ಧಿ ಪಡಿಸಲು ಕಾಂಗ್ರೆಸ್ ಬದ್ಧವಾಗಿದೆ. ಮನಪಾ ಚುನಾವಣೆಗೆ ಸಂಬಂಧಿಸಿದಂತೆ ನಗರದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ನಾಗರಿಕ ಸೌಲಭ್ಯವನ್ನು ಒದಗಿಸಲು ಕಾಂಗ್ರೆಸ್ ಹೆಚ್ಚಿನ ಆಧ್ಯತೆ ನೀಡಲಿದೆ ಎಂದರು. ಆಸ್ಕರ್ ಫೆರ್ನಾಂಡಿಸ್ ಘೋಷಣೆ ಮಾಡಿದ ಚುನಾವಣಾ ಪ್ರಣಾಳಿಕೆಯಲ್ಲಿ ತುಂಬೆ ಅಣೆಕಟ್ಟು ನಿರ್ಮಾಣ ಪೂರ್ಣ ಗೊಳಿಸುವುದು, ನಗರದ ರಸ್ತೆಗಳ ಅಭಿವೃದ್ಧಿ, ಆಧುನಿಕ ಮಾರುಕಟ್ಟೆ, ಕ್ರೀಡಾಂಗಣ ನಿರ್ಮಾಣ, ಅಂಬೇಡ್ಕರ್ ಭವನ ನಿರ್ಮಾಣ, ಮಂಗಳೂರು ನಗರಕ್ಕೆ ನರ್ಮ್ ಯೋಜನೆ ವಿಸ್ತರಣೆ, ಪ್ರವಾಸೋದ್ಯಮ ಮುಂತಾದ ಹಲವಾರು ಯೋಜನೆಗಳನ್ನು ಮುಂದಿಟ್ಟರು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಜರ್ನಾದನ ಪೂಜಾರಿ ಕಾಂಗ್ರೆಸ್ ಮನಪಾದಲ್ಲಿ ಅಧಿಕಾರಕ್ಕೆ ಜನರ ಮೇಲೆ ಹೆಚ್ಚಿನ ತೆರಿಗೆ ಭಾರವನ್ನುವಿಧಿಸಲು ಮುಂದಾಗುವುದಿಲ್ಲ. ಜನ ಸಾಮಾನ್ಯರ ನಡುವಿನ ಶಾಂತಿ, ಸೌಹಾರ್ದತೆಯನ್ನು ಕಾಪಾಡುವುದು ಕಾಂಗ್ರೆಸ್‌ನ ಮುಖ್ಯ ಧ್ಯೇಯವಾಗಿದೆ ಎಂದರು.
ಸಮಾರಂಭದಲ್ಲಿ ಮಾಜಿ ಸಚಿವ ಬಿ.ಎ.ಮೊಯ್ದಿನ್, ಮಾಜಿ ಸಂಸದ ಬಿ.ಇಬ್ರಾಹೀಂ, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಐವನ್ ಡಿ ಸೋಜ, ಬಿ.ಎ.ಮೊಯ್ದಿನ್ ಬಾವ, ಮಮತಾ ಗಟ್ಟಿ, ಮಾಜಿ ಸಂಸದ ವಿನಯ್ ಕುಮಾರ್ ಸೊರಕೆ, ಜೆ.ಆರ್.ಲೋಬೊ, ಬಲರಾಜ್ ರೈ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English