ಮಂಗಳೂರು : ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆಯೇ ಪ್ರಮುಖ ರಾಜಕೀಯ ಪಕ್ಷಗಳು ಬೇರೆ ಪಕ್ಷಗಳಲ್ಲಿನ ಕಾರ್ಯಕರ್ತರನ್ನು ತಮ್ಮತ್ತ ಸೇಳೆಯುವ ಕಡೆ ಗಮನಹರಿಸಿವೆ. ಅದರಲ್ಲೂ ಮುಖ್ಯವಾಗಿ ಜೆಡಿಎಸ್ ಈ ವಿಷಯದಲ್ಲಿ ಮುಂದಿದೆ. ನಗರದ ಜೆಡಿಎಸ್ ಮಂಗಳೂರು ದಕ್ಷಿಣ ವಿಧಾನಸಭಾ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮರಕಡ ವಾರ್ಡ್ ಸಂಖ್ಯೆ 14ರ ಬಿಜೆಪಿ ಕಾರ್ಯಕರ್ತರಾದ ಪ್ರವೀಣ್ ಶೆಟ್ಟಿ, ಸುರೇಶ್ ಶೆಟ್ಟಿ, ರಾಜೇಶ್ ಶೆಟ್ಟಿ ಇವರ ನಾಯಕತ್ವದಲ್ಲಿ ಹಲವಾರು ಕಾರ್ಯಕರ್ತರು ಜೆಡಿಎಸ್ ಗೆ ಸೇರ್ಪಡೆಗೊಂಡರು.
ಈ ಮೂಲಕ ನಗರದಲ್ಲಿ ಜೆಡಿಎಸ್ ಪಕ್ಷ ಬೇರೆ ಪಕ್ಷಗಳಿಗಿಂತ ಮುಂದಿದ್ದು, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯ ಹಲವು ಕಾರ್ಯಕರ್ತರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಎಲ್ಲಾ ಕಾರ್ಯಕರ್ತರನ್ನು ಪಕ್ಷದ ನಾಯಕ ಸದಾನಂದ ಶೆಟ್ಟಿ ಪಕ್ಷದ ದ್ವಜ ನೀಡಿ ಜೆಡಿಎಸ್ ಗೆ ಸೇರ್ಪಡೆಗೊಳಿಸಿದರು ಬಳಿಕ ನೆರೆದವರನ್ನು ಉದ್ದೇಶಿಸಿ ಮಾತನಾಡುತ್ತಾ, ಜೆಡಿಎಸ್ ಪಕ್ಷದ ಜನೋಪಯೋಗಿ ಕೆಲಸದಿಂದ ಪ್ರಭಾವಿತರಾದ ಬೇರೆ ಪಕ್ಷಗಳ ಹಲವಾರು ಕಾರ್ಯಕರ್ತರು ಇದೀಗ ಜೆಡಿಎಸ್ ನತ್ತ ಮುಖ ಮಾಡುತ್ತಿದ್ದು, ಜೆಡಿಎಸ್ ಪಾಲಿಕೆ ಚುನಾವಣೆಯಲ್ಲಿ ಖಂಡಿತವಾಗಿಯೂ ಸ್ಪಷ್ಟ ಬಹುಮತವನ್ನು ಪಡೆಯುತ್ತದೆ ಎಂಬ ನಂಬಿಕೆಯಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಂ.ಜಿ.ಹೆಗಡೆ, ಅಬೂಬಕ್ಕರ್ ನಾಟೆಕಲ್, ಶಶಿರಾಜ್ ಶೆಟ್ಟಿ ಕಾವೂರು, ಗಣೇಶ್ ಮಲ್ಲಿ ಹಾಗೂ ಇತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English